Site icon Vistara News

Karnataka Politics : ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಫಿಕ್ಸ್;‌ 4 ಕ್ಷೇತ್ರ ದಳ ಪಾಲು ಎಂದ ಬಿಎಸ್‌ವೈ

BS Yediyurappa and HD Devegowda for BJP and JDS alliance

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಬಿಜೆಪಿ ರಾಜಕೀಯ ರಣತಂತ್ರವನ್ನು ಹೆಣೆಯಲು ಪ್ರಾರಂಭಿಸಿದೆ. ಶತಾಯಗತಾಯ ರಾಜ್ಯದಲ್ಲಿ ಈಗಿರುವ ಸ್ಥಾನಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಂತ್ರಗಾರಿಕೆಯನ್ನು ಹೆಣೆಯುತ್ತಿದೆ. ಅಲ್ಲದೆ, ಇದರ ಭಾಗವಾಗಿ ಜೆಡಿಎಸ್‌ ಜತೆಗಿನ ಮೈತ್ರಿ ಬಗ್ಗೆ ಈ ಮೊದಲು ಮಾತುಕತೆ ಸಹ ನಡೆದಿತ್ತು. ಖುದ್ದು‌ ಕೇಂದ್ರ ಸಚಿವ ಅಮಿತ್ ಶಾ (Union Minister Amit Shah) ಅವರು ಮೈತ್ರಿ ಸೂತ್ರವನ್ನು ಹೆಣೆದಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ – ಜೆಡಿಎಸ್‌ ಮೈತ್ರಿ (BJP-JDS alliance) ಬಹುತೇಕ ಫಿಕ್ಸ್‌ ಆಗಿದೆ. ರಾಜ್ಯದಲ್ಲಿ ಒಟ್ಟು ನಾಲ್ಕು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಬಿಜೆಪಿ ಸಿದ್ಧವಾಗಿದೆ. ಇದನ್ನು ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ (Former CM BS Yediyurappa) ಅವರು ಘೋಷಿಸಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ (Karnataka Politics) ಹೊಸ ಸಂಚಲನ ಸೃಷ್ಟಿಯಾಗಿದೆ.

ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಸ್ಪರ್ಧೆ ಮಾಡುವ ಬಗ್ಗೆ ಮೈತ್ರಿ ಲೆಕ್ಕಾಚಾರ ಶುರುವಾಗಿದೆ. ಮೈತ್ರಿ ಆಗುವುದು ಪಕ್ಕಾ ಎಂಬ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Darshan Thoogudeepa: ಕಿಡ್ನಿ ಫೇಲ್ಯೂರ್‌ ಆದ ಅಭಿಮಾನಿಗೆ ನೆರವಾದ ʻಯಜಮಾನʼ ದರ್ಶನ್‌! ವಿಡಿಯೊ ವೈರಲ್‌!

ಏಕೆ ಈ ಮೈತ್ರಿ ನಿರ್ಧಾರ?

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರದಲ್ಲಿ 25 + 1 ಕ್ಷೇತ್ರವನ್ನು ಗೆದ್ದುಕೊಂಡಿತ್ತು. ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಸೀಟು ಬಿಜೆಪಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಯು ಈ ಬಾರಿ ತನ್ನ ಕ್ಷೇತ್ರವನ್ನು ಕಳೆದುಕೊಳ್ಳಲು ತಯಾರಿಲ್ಲ. ಶತಾಯಗತಾಯ ಗೆಲ್ಲಲೇ ಬೇಕು ಎಂಬ ನಿಟ್ಟಿನಲ್ಲಿ ಹಲವು ತಿಂಗಳ ಹಿಂದೆಯೇ ಜೆಡಿಎಸ್‌ ಜತೆ ಮಾತುಕತೆ ನಡೆಸುತ್ತಿತ್ತು. ಕ್ಷೇತ್ರ ಹಂಚಿಕೆ ಬಗ್ಗೆ ಇದ್ದ ಗೊಂದಲ ಈಗ ಪರಿಹಾರವಾಗಿದೆ. ಒಟ್ಟು ನಾಲ್ಕು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ತೀರ್ಮಾನಕ್ಕೆ ಬಿಜೆಪಿ ಬಂದಿದೆ. ಈ ಮೂಲಕ ಎಲ್ಲ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲು ಬಿಜೆಪಿ ಲೆಕ್ಕಾಚಾರವನ್ನು ಹೆಣೆದಿದೆ.

ಸುಮಲತಾ ನಡೆ ಏನು?

ಈಗ ಬಿಜೆಪಿ – ಜೆಡಿಎಸ್‌ ಮೈತ್ರಿ ಸುದ್ದಿ ಹೊರಬಿದ್ದಂತೆ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಷ್‌ ಅವರಿಗೆ ಇಕ್ಕಟ್ಟು ತಂದೊಡ್ಡಿದೆ. ಈ ಬಗ್ಗೆ ಮೊದಲೇ ಸುಳಿವು ಹೊಂದಿದ್ದ ಅವರು ಬೆಂಗಳೂರು ಉತ್ತರ ಕ್ಷೇತ್ರದತ್ತ ಒಲವು ಹೊಂದಿದ್ದಾರೆ ಎಂದು ಹೇಳಲಾಗಿದೆ. ಆದರೆ, ಬಿಜೆಪಿಯ ವರಿಷ್ಠರು ಸುಮಲತಾ ಅವರಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್‌ ನೀಡಲಿದ್ದಾರೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಒಂದು ವೇಳೆ ಅವರ ಮನವೊಲಿಸುವಲ್ಲಿ ಬಿಜೆಪಿ ವಿಫಲವಾದರೆ ಅವರ ಮುಂದಿನ ನಡೆ ಏನು? ಎಂಬುದು ಸದ್ಯದ ಕುತೂಹಲವಾಗಿದೆ.

ಹಾಸನದಲ್ಲಿ ಪ್ರೀತಂ ಗೌಡಗೆ ನಿರಾಸೆ!

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಹಾಸನದ ಮಾಜಿಸ ಶಾಸಕ ಪ್ರೀತಂಗೌಡ ಅವರು ಈ ಕ್ಷೇತ್ರದ ಲೋಕಸಭಾ ಕ್ಷೇತ್ರದ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದರು. ಈ ಸಂಬಂಧ ಈಗಾಗಲೇ ಕ್ಷೇತ್ರದಲ್ಲಿ ಓಡಾಟವನ್ನೂ ನಡೆಸಿದ್ದರು. ಆದರೆ, ಈಗ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ತೀರ್ಮಾನ ಮಾಡಿದ್ದರಿಂದ ಅವರ ಬೆಂಬಲ ಜೆಡಿಎಸ್‌ಗೆ ಯಾವ ರೀತಿ ಇರಲಿದೆ ಎಂಬುದು ಮುಖ್ಯವಾಗಿದೆ.

ಕೋಲಾರದಲ್ಲಿ ಹಾಲಿ ಸಂಸದ ಮುನಿಸ್ವಾಮಿ ಕಥೆ?

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಮುನಿಸ್ವಾಮಿ ಅವರು ಕಳೆದ ಬಾರಿ ಗೆದ್ದಿದ್ದರು. ಈಗ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಅವರಿಗೆ ಏನು ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ? ಅವರ ಮನವೊಲಿಕೆ ಹೇಗೆ? ಅವರ ಬೆಂಬಲಿಗರು ಇದನ್ನು ಒಪ್ಪಿಕೊಳ್ಳುತ್ತಾರಾ? ಎಂಬ ಪ್ರಶ್ನೆ ಮೂಡಿದೆ.

ಬೆಂಗಳೂರು ಗ್ರಾಮಾಂತರ ಬಿಟ್ಟು ಕೊಡಲು ಕಾರಣ ಏನು?

ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‌ನಿಂದ ಡಿ.ಕೆ. ಸುರೇಶ್‌ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ, ಇದು ಕಾಂಗ್ರೆಸ್‌ ಭದ್ರಕೋಟೆ ಎಂಬಂತೆ ಇದೆ. ಆದರೆ, ಇಲ್ಲಿ ಜೆಡಿಎಸ್‌ ಸಂಘಟನೆ ಪ್ರಬಲವಾಗಿದೆ. ಬಿಜೆಪಿ ಆ ಮಟ್ಟಿಗೆ ಇಲ್ಲಿ ಪ್ರಭಾವವನ್ನು ಹೊಂದಿಲ್ಲ. ಹೀಗಾಗಿ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟು ಜಯಗಳಿಸಿದರೆ ಮೈತ್ರಿ ಅಭ್ಯರ್ಥಿಯ ಗೆಲುವು ಆದಂತೆ ಆಗುತ್ತದೆ. ಇದು ರಾಜಕೀಯ ಲಾಭವನ್ನು ತಂದುಕೊಡುತ್ತದೆ ಎಂದು ಬಿಜೆಪಿ ಚಿಂತನೆಯಲ್ಲಿದೆ.

ಜೆಡಿಎಸ್‌ ಈ ನಿರ್ಣಯ ಯಾಕೆ?

ಇನ್ನು ಜೆಡಿಎಸ್‌ಗೆ ಸಹ ಮೈತ್ರಿ ಅನಿವಾರ್ಯವಾಗಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆಗೆ ಕೈಜೋಡಿಸಿತ್ತು. ಆಗ, ಕಾಂಗ್ರೆಸ್‌ನ ಒಳ ಹೊಡೆತದಿಂದ ಕೇವಲ ಹಾಸನದಲ್ಲಿ ಒಂದು ಕಡೆ ಮಾತ್ರ ಗೆದ್ದುಕೊಂಡಿತ್ತು. ಅಲ್ಲದೆ, ಈ ಬಾರಿ ಗ್ಯಾರಂಟಿ ಯೋಜನೆಗಳ ಹೊಡೆತದಿಂದ ತಪ್ಪಿಸಿಕೊಳ್ಳಬೇಕಾದರೆ ಮೈತ್ರಿ ಅನಿವಾರ್ಯ. ಈ ಕಾರಣಕ್ಕಾಗಿ ಜೆಡಿಎಸ್‌ ಈ ಲೆಕ್ಕಾಚಾರವನ್ನು ಮಾಡಿಕೊಂಡಿದೆ.

ಸಿ.ಪಿ. ಯೋಗೇಶ್ವರ್‌ ಸಂತಸ

ಡಿ.ಕೆ. ಶಿವಕುಮಾರ್‌, ಡಿ.ಕೆ. ಸುರೇಶ್‌ ದೌರ್ಜನ್ಯ ಹೆಚ್ಚಾಗುತ್ತಿದೆ. ರಾಜೀವ್‌ ಗಾಂಧಿ ಹೆಲ್ತ್‌ ಯೂನಿವರ್ಸಿಟಿಯನ್ನು ಯಾವುದೇ ಕಾರಣ ಕೊಡದೆ ಕನಕಪುರಕ್ಕೆ ಸ್ಥಳಾಂತರ ಮಾಡುತ್ತಿದ್ದಾರೆ. ಹೀಗಾಗಿ ಪಕ್ಷಾತೀತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಇನ್ನು ಮೈತ್ರಿಗೆ ಸಂಬಂಧಪಟ್ಟಂತೆ ವರಿಷ್ಠರು ನಿರ್ಧಾರ ಮಾಡುತ್ತಾರೆ. ಹೊಂದಾಣಿಕೆ ಮಾಡಿಕೊಳ್ಳುವುದು ಖುಷಿಯ ವಿಚಾರ ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದರು.

ಕಾಂಗ್ರೆಸ್‌ಗೆ ಹೆಚ್ಚಿನ ಬಲ ಬರುತ್ತದೆ: ಎಂ.ಬಿ. ಪಾಟೀಲ್‌

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಎಂ.ಬಿ. ಪಾಟೀಲ್‌, ಬಿಜೆಪಿ – ಜೆಡಿಎಸ್‌ ಮೈತ್ರಿಯಿಂದ ಕಾಂಗ್ರೆಸ್‌ಗೆ ಲಾಭವಾಗುತ್ತದೆ. ಇದರಿಂದ ನಮ್ಮ ಕಾರ್ಯಕರ್ತರಿಗೆ ಮತ್ತಷ್ಟು ಬಲ ಬರುತ್ತದೆ. ಹಾಗಾಗಿ ಲೋಕಸಭೆಯಲ್ಲಿ ನಾವು ಹೆಚ್ಚಿನ ಸೀಟು ಗೆಲ್ಲಲು ಅನುಕೂಲ ಆಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Operation Hasta : ಬಿಜೆಪಿಯ ಮತ್ತೊಂದು ವಿಕೆಟ್‌ ಪತನ; ಕಾಂಗ್ರೆಸ್ ಸೇರಿದ ಮಾಜಿ ಶಾಸಕ ಸುಕುಮಾರ್ ಶೆಟ್ಟಿ

ಬಿಎಸ್‌ವೈ ಹೇಳಿದ್ದೇನು?

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸಂತೋಷ ತಂದಿದೆ. ಜೆಡಿಎಸ್‌ಗೆ ನಾಲ್ಕು ಸೀಟ್ ಕೊಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಒಪ್ಪಿಕೊಂಡಿದ್ದಾರೆ. ಮೈತ್ರಿಯಿಂದ ನಮಗೆ ಶಕ್ತಿ ಬಂದಿದೆ. 25ಕ್ಕೂ ಹೆಚ್ಚು ಸೀಟ್ ಗೆಲ್ಲಲು ನಮಗೆ ಸಹಾಯ ಆಗುತ್ತದೆ ಎಂದು ಹೇಳಿದ್ದಾರೆ.

Exit mobile version