ಬೆಂಗಳೂರು: ಈಗಾಗಲೆ 8 ಸಚಿವರು ಪ್ರಮಾಣವಚನ ಸ್ವೀಕರಿಸಿರುವ ಕಾಂಗ್ರೆಸ್ ಸರ್ಕಾರ ಮೊದಲ ಬಾರಿಗೆ ಸಂಪುಟ ವಿಸ್ತರಣೆಗೆ ಕೈಹಾಕಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನವದೆಹಲಿಗೆ ಪ್ರಯಾಣಿಸಿದ್ದಾರೆ.
ತಮ್ಮ ತಮ್ಮ ಬೆಂಬಲಿಗರ ಹೆಸರುಗಳನ್ನು ಹಿಡಿದು ದೆಹಲಿಗೆ ಹೊರಟಿರುವ ಇಬ್ಬರೂ ನಾಯಕರ ಪಟ್ಟಿಯಲ್ಲಿ ಮಾಜಿ ಸಿಎಂ ಹಾಗೂ ಚುನಾವಣೆಗೆ ಮುನ್ನ ಕಾಂಗ್ರೆಸ್‌ಗೆ ಆಗಮಿಸಿದ ಜಗದೀಶ್ ಶೆಟ್ಟರ್ ಹೆಸರು ಇಲ್ಲ ಎನ್ನುವುದು ಈಗ ಚರ್ಚೆಯ ವಿಷಯವಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ಭೈರತಿ ಸುರೇಶ್, ಆರ್. ವಿ. ದೇಶಪಾಂಡೆ, ಎಚ್. ಸಿ. ಮಹದೇವಪ್ಪ, ದಿನೇಶ್ ಗುಂಡೂರಾವ್, ಬಸವರಾಜ ರಾಯರಡ್ಡಿ, ಎಂ. ಕೃಷ್ಣಪ್ಪ, ಕೆ.ಎನ್. ರಾಜಣ್ಣ, ಶಿವರಾಜ್ ತಂಗಡಗಿ, ಸಂತೋಷ ಲಾಡ್, ಎಚ್.ಕೆ. ಪಾಟೀಲ್, ಟಿ.ಬಿ. ಜಯಚಂದ್ರ, ಕೃಷ್ಣಭರೇಗೌಡ ಅವರ ಹೆಸರುಗಳನ್ನು ಪಟ್ಟಿ ಮಾಡಿಕೊಂಡಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಎನ್.ಎ. ಹ್ಯಾರಿಸ್, ತನ್ವೀರ್ ಸೇಠ್, ಮಧು ಬಂಗಾರಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಕುಣಿಗಲ್ ರಂಗನಾಥ್, ಬಾಲಕೃಷ್ಣ, ಚಲುವರಾಯಸ್ವಾಮಿ ಸೇರಿದಂತೆ ಇನ್ನೂ ಕೆಲವರು ಹೆಸರುಗಳನ್ನು ಪಟ್ಟಿಯಲ್ಲಿ ನಮೂದಿಸಿಕೊಂಡಿದ್ದಾರೆ ಎನ್ನಲಾಗಿದೆ.
ಹಿರಿಯರನ್ನು ಕಡೆಗಣಿಸಬಾರದು, ಎಲ್ಲಾ ಸಮುದಾಯಗಳ ಪ್ರಾತಿನಿಧ್ಯ ಸಂಪುಟದಲ್ಲಿರಬೇಕು, ಜಿಲ್ಲಾವಾರು ಪ್ರಾತಿನಿಧ್ಯ ಕೊಡಬೇಕು ಎಂದು ತಮ್ಮ ಬೆಂಬಲಿಗರ ಪರ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡಲಿದ್ದಾರೆ. ಪಕ್ಷಕ್ಕಾಗಿ ದುಡಿದವರನ್ನು ಸಚಿವರನ್ನಾಗಿ ಮಾಡಬೇಕು, ಭಾರತ್ ಜೋಡೋ, ಮೇಕೆದಾಟು ಸೇರಿದಂತೆ ಪಕ್ಷದ ಕಾರ್ಯಕ್ರಮಗಳನ್ನು ಯಶಸ್ವಿ ಮಾಡಿದವರಿಗೆ ಆಧ್ಯತೆ ಕೊಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಾದ ಮಂಡಿಸಲಿದ್ದಾರೆ.
ತಮ್ಮ ಬೆಂಬಲಿಗರು ಸಚಿವರಾಗಬೇಕು ಎನ್ನುವುದು ಒಂದೆಡೆಯಾದರೆ ಎದುರಾಳೀ ಬಣದ ಕೆಲವರು ಸಚಿವರಾಗಬಾರದು ಎಂದು ಎರಡೂ ಬಣ ಒತ್ತಾಯ ಮಾಡುತ್ತಿರುವುದು ಹೈಕಮಾಂಡ್ ಗೆ ತಲೆ ನೋವು ಉಂಟು ಮಾಡಿದೆ. ಇವರಿಬ್ಬರ ಒತ್ತಡದ ನಡುವೆ ಜಿಲ್ಲಾವಾರು ಪ್ರಾತಿನಿಧ್ಯ ಹೇಗೆ ನಿಭಾಯಿಸಬೇಕು? ಮುಸ್ಲಿಂ ಕೋಟಾಗಳೆಲ್ಲವನ್ನೂ ಗಣನೆಗೆ ತೆಗೆದುಕೊಳ್ಳಬೇಕಿದೆ.
ಶೆಟ್ಟರ್‌ಗೆ ಸಚಿವಸ್ಥಾನ?
ಇಬ್ಬರೂ ನಾಯಕರು ತಂತಮ್ಮ ಬೆಂಬಲಿಗೆ ಪಟ್ಟಿ ಹಿಡಿದು ದೆಹಲಿಗೆ ಹೊರಟಿದ್ದು, ಇಬ್ಬರ ಪಟ್ಟಿಯಲ್ಲೂ ಮಾಜಿ ಸಿಎಂ ಜಗದೀಶ ಶೆಟ್ಟರ್ ಇಲ್ಲ ಎನ್ನಲಾಗಿದೆ. ತಮ್ಮ ಬೆಂಬಲಿಗರನ್ನು ಸೇರಿಸಿದರೆ ಸಾಕು ಎನ್ನುತ್ತಿರುವ ನಾಯಕರು ಶೆಟ್ಟರ್ ಹೆಸರನ್ನು ಸೇರಿಸಿ ತಮ್ಮ ಕಡೆಯ ಒಂದು ಕೋಟಾವನ್ನು ಕಳೆದುಕೊಳ್ಳುವುದೇಕೆ ಎಂಬ ಚಿಂತೆಯಲ್ಲಿವೆ ಎನ್ನಲಾಗಿದೆ.
ಚುನಾವಣೆಗೆ ಮುನ್ನ ಬಿಜೆಪಿಯಿಂದ ಬೇಸರಿಸಿಕೊಂಡು ಕಾಂಗ್ರೆಸ್‌ಗೆ ಆಗಮಿಸಿದ ಜಗದೀಶ ಶೆಟ್ಟರ್ ಅವರು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ವಿರುದ್ಧ ಸೋಲುಂಡಿದ್ದರು. ಸ್ವತಃ ಶೆಟ್ಟರ್ ಸೋತರಾದರೂ ಬಿಜೆಪಿಯಲ್ಲಿ ಅವರಿಗೆ ಅವಮಾನವಾಗಿದ್ದರಿಂದ ಒಟ್ಟಾರೆ ಲಿಂಗಾಯತ ಸಮುದಾಯದಲ್ಲಿ ಬೇಸರವಾಗಿ ಅನೇಕ ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯತ ಮತದಾರರು ಕಾಂಗ್ರೆಸ್ ಕಡೆಗೆ ವಾಲಿದ್ದಾರೆ ಎನ್ನಲಾಗಿದೆ. ತಾವು ಲಿಂಗಾಯತರಿಗೆ ಗೌರವ ನೀಡುತ್ತೇವೆ ಎನ್ನುವುದನ್ನು ಶೆಟ್ಟರ್ ಅವರಿಗೆ ಸಚಿವ ಸ್ಥಾನ ನೀಡುವುದರ ಮೂಲಕ ಸಾಬೀತುಪಡಿಸಲಾಗುತ್ತದೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ. ಈ ಮೂಲಕ ಮುಂದಿನ ಚುನಾವಣೆಗಳಲ್ಲೂ ಲಿಂಗಾಯತ ಮತಗಳು ತಮ್ಮಲ್ಲೇ ಉಳಿಯಬೇಕು ಎಂಬ ನಿರೀಕ್ಷೆಯಿದೆ. ಶೆಟ್ಟರ್ ಈಗ ಶಾಸಕರಲ್ಲದಿದ್ದರೂ, ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲು ಅವಕಾಶ ಇರುವುದರಿಂದ ಸಚಿವರಾಗಿ ಮಾಡಲಾಗುತ್ತದೆ ಎಂಬ ಮಾತಿದೆ.
ನಾಯಕರ ಪಟ್ಟಿಯಲ್ಲಿ ಲಕ್ಷ್ಮಣ ಸವದಿ ಹೆಸರೂ ಇಲ್ಲ ಎಂಬ ಚರ್ಚೆ ನಡೆಯುತ್ತಿದೆ. ಇದೀಗ ಇಬ್ಬರ ಪಟ್ಟಿಯಲ್ಲಿಯೂ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಹೆಸರು ಇಲ್ಲದಿದ್ದರರೆ ಹೈಕಮಾಂಡ್ ತಾನೇ ಹೆಸರು ಸೇರಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಫೇಸ್‌ಬುಕ್‌ನಲ್ಲೇ ಘೋಷಣೆ !
ಅಧಿಕೃತ ಘೋಷಣೆ ಮುನ್ನವೇ ನೂತನ ಸಚಿವರ ಹೆಸರು ಬಹಿರಂಗವಾಯಿತೇ ಎಂಬ ಪ್ರಶ್ನೆಗಳೆದ್ದಿವೆ. ತಮ್ಮನ್ನು ಭೇಟಿಯಾಗಲು ಬಂದ ಶಾಸಕರ ಕುರಿತು ಫೇಸ್‌ಬುಕ್ ಪೋಸ್ಟ್ ಹಾಕಿರುವ ಡಿ.ಕೆ. ಶಿವಕುಮಾರ್, ನೂತನ ಸಚಿವರು ಎಂದು ಸಂಬೋಧಿಸಿದ್ದಾರೆ.
ಸಚಿವ ಸಂಪುಟದ ನೂತನ ಸಚಿವರಾದ ಈಶ್ವರ್ ಖಂಡ್ರೆ, ಶೃಂಗೇರಿ ಶಾಸಕರಾದ ಶ್ರೀ ಟಿ. ಡಿ. ರಾಜೇಗೌಡ, ಚಿತ್ತಾಪುರ ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ, ಜೇವರ್ಗಿ ಶಾಸಕರಾದ ಡಾ.ಅಜಯ್ ಸಿಂಗ್ ರವರು ಇಂದು ನನ್ನನ್ನು ನನ್ನ ನಿವಾಸದಲ್ಲಿ ಭೇಟಿ ಮಾಡಿ, ಶುಭ ಹಾರೈಸಿದರು ಎಂದು ಪೋಸ್ಟ್ ಮಾಡಲಾಗಿದೆ. ಈ ಪಟ್ಟಿಯಲ್ಲಿ ಪ್ರಿಯಾಂಕ್ ಖರ್ಗೆ ಮಾತ್ರ ಸದ್ಯ ಸಚಿವರಾಗಿದ್ದಾರೆ. ಉಳಿದವರಿಗೂ ಸಚಿವ ಸ್ಥಾನ ಸಿಗುವುದೇ ಎಂಬ ಚರ್ಚೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ.