ಬೆಂಗಳೂರು: ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿ ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟುಮಾಡಿದ್ದ ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಇದೀಗ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಸಿಡಿದೆದ್ದಿದೆ. ಸರ್ಕಾರ ರಚನೆಯಾಗಿ ಒಂದೂವರೆ ತಿಂಗಳಾದರೂ ಗುತ್ತಿಗೆದಾರರ ಬಿಲ್ ಪಾವತಿ ಮಾಡುತ್ತಿಲ್ಲ ಎಂದಿರುವ ಸಂಘ, ಈ ಕುರಿತು ನಿರ್ಧಾರ ಕೈಗೊಳ್ಳಲು ಜುಲೈ 15ರ ಗಡುವು ನೀಡಿದೆ.(Karnataka Politics)
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಸೋಸಿಯೇಷನ್ ಅಧ್ಯಕ್ಷ ಡಿ. ಕೆಂಪಣ್ಣ, ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ. ಸರ್ಕಾರದ ಎಲ್ಲಾ ಇಲಾಖೆಗಳು, ನಿಗಮಗಳು, ಮಂಡಳಿ, ಪ್ರಾಧಿಕಾರಗಳ ಕಾಮಗಾರಿಗಳ ಬಿಲ್ಲುಗಳನ್ನು ತಡೆಹಿಡಿಯಲಾಗಿತ್ತು. ರಾಜ್ಯ ಗುತ್ತಿಗೆದಾರರ ಸಂಘ. ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆದಷ್ಟೂ ತ್ವರಿತವಾಗಿ ಬಿಲ್ ಮೊತ್ತವನ್ನು ಬಿಡುಗಡೆ ಮಾಡುವಂತೆ ಒತ್ತಾಯಪಡಿಸಿತ್ತು.
ಅದರಂತೆ ಸಂಘದ ಮನವಿಯನ್ನು ಪುರಸ್ಕರಿಸಿ ಬಿಲ್ಲುಗಳನ್ನು ಬಿಡುಗಡೆ ಮಾಡಲು ದಿನಾಂಕ 28-06-2023 ರಂದು ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಆದರೆ ಈ ಆದೇಶ ಹೊರಡಿಸಿ ಒಂದು ವಾರ ಕಳೆದರೂ ಹಣ ಬಿಡುಗಡೆ ಮಾಡುತ್ತಿಲ್ಲ. ಒಂದೂವರೆ ತಿಂಗಳಿಂದ ಹಣ ಬಿಡುಗಡೆ ಮಾಡದೆ ಇರುವುದರಿಂದ ಗುತ್ತಿಗೆದಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಕಣ್ಣೊರೆಸುವ ತಂತ್ರವನ್ನು ಕೈ ಬಿಟ್ಟು ಆದಷ್ಟೂ ಬೇಗನೆ ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕು.
ಒಂದು ವೇಳೆ ಜುಲೈ 15ರೊಳಗೆ ಹಣ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ. ಹಣ ಬಿಡುಗಡೆ ವಿಳಂಬ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ. ಅಧಿಕಾರಿಗಳು ತಮಗೆ ಯಾವುದೇ ಮಾಹಿತಿ ಬಂದಿರುವುದಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದೂವರೆ ತಿಂಗಳಾದರೂ ಬಿಲ್ ಪಾವತಿಯಾಗದೆ. ಗುತ್ತಿಗೆದಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ಇದನ್ನೂ ಓದಿ: Karnataka Politics: ಕಾಂಗ್ರೆಸ್ ಭ್ರಷ್ಟಾಚಾರವನ್ನೂ ನಾನೇ ಎಕ್ಸ್‌ಪೋಸ್ ಮಾಡ್ತೀನಿ ಎಂದ ಕಾಂಟ್ರ್ಯಾಕ್ಟರ್ ಕೆಂಪಣ್ಣ
ಬಿಲ್ಲುಗಳ ನೈಜತೆಯನ್ನು ಪರಿಶೀಲಿಸಿ. ನಿಯಮಾನುಸಾರವೇ ಖಾತ್ರಿಪಡಿಸಿಕೊಂಡು ಸಂಬಂಧಪಟ್ಟ ಇಲಾಖಾ ಸಚಿವರ ಅನುಮೋದನೆ ಪಡೆದು ಹಣ ಬಿಡುಗಡೆ ಮಾಡಲು ಗುತ್ತಿಗೆದಾರರ ಅಭ್ಯಂತರ ಇರುವುದಿಲ್ಲ. ಹೀಗೆ ಗುತ್ತಿಗೆದಾರರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಹಣವನ್ನು ನೀಡದೆ ಸತಾಯಿಸುವುದು ಜನಪರ ಕಾಳಜಿಯುಳ್ಳ ಸರ್ಕಾರದ ಲಕ್ಷಣವಾಗಿರುವುದಿಲ್ಲ. ಸರ್ಕಾರ ಕೂಡಲೇ ಮತ್ತೊಮ್ಮೆ ಸುತ್ತೋಲೆ ಅಥವಾ ಸೂಚನೆ ಮೂಲಕ ಹಣ ಬಿಡುಗಡೆ ಮಾಡಲು ಸೂಚನೆ ನೀಡಬೇಕೆಂದು ಕೋರುತ್ತೇವೆ. ಒಂದು ವೇಳೆ ಜುಲೈ 15ರೊಳಗೆ ಹಣ ಬಿಡುಗಡೆ ಮಾಡಲು ವಿಫಲವಾದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದೆ.
ಬಿಜೆಪಿ ಸರ್ಕಾರದ ವಿರುದ್ಧ ಅಸೋಸಿಯೇಷನ್ ಮಾಡಿದ ಭ್ರಷ್ಟಾಚಾರ ಆರೋಪವನ್ನು ಕಾಂಗ್ರೆಸ್ ಚುನಾವಣಾ ರಾಜಕೀಯದಲ್ಲಿ ಯಶಸ್ವಿಯಾಗಿ ಬಳಕೆ ಮಾಡಿಕೊಂಡಿತ್ತು. 40% ಸರ್ಕಾರ, ಪೇ ಸಿಎಂ ಮುಂತಾದ ಅಭಿಯಾನಗಳನ್ನು ನಡೆಸುವ ಮೂಲಕ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.