Site icon Vistara News

Karnataka Elections : ಕುಮಟಳ್ಳಿಗೆ ಟಿಕೆಟ್‌ ಕೊಡದಿದ್ರೆ ನಾನೂ ಸ್ಪರ್ಧೆ ಮಾಡಲ್ಲ; ರಮೇಶ್‌ ಜಾರಕಿಹೊಳಿ ಹೊಸ ವರಸೆ

ramesh Jarakiholi savadi kumatlli

#image_title

ವಿಜಯಪುರ: ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದಿಂದ ಮಹೇಶ್‌ ಕುಮಟಳ್ಳಿ ಅವರಿಗೆ ಟಿಕೆಟ್‌ ನೀಡದಿದ್ದರೆ (Karnataka Elections) ನಾನೂ ಗೋಕಾಕ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ; ಹೀಗೊಂದು ಹೇಳಿಕೆಯನ್ನು ನೀಡಿದ್ದಾರೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ

ವಿಜಯಪುರದಲ್ಲಿ ನಡೆಯುತ್ತಿರುವ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ರಮೇಶ್‌ ಜಾರಕಿಹೊಳಿ ಅವರು ಈ ಬಾರಿ ಟಿಕೆಟ್‌ ಕೊಡಲೇಬೇಕೆಂದು ಪಟ್ಟು ಹಿಡಿಯುವ ಸಂದೇಶ ರವಾನಿಸಿದರು. ಅಥಣಿ ಕ್ಷೇತ್ರದಿಂದ ಈ ಬಾರಿ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್‌ ನೀಡಲಾಗುತ್ತದೆ ಎಂಬ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಮೇಶ್‌ ಜಾರಕಿಹೊಳಿ ಅವರ ಹೇಳಿಕೆ ಮಹತ್ವ ಪಡೆದಿದೆ.

2018ರ ಚುನಾವಣೆಯಲ್ಲಿ‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮಹೇಶ್‌ ಕುಮಟಳ್ಳಿ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದ ಲಕ್ಷ್ಮಣ ಸವದಿ ಅವರನ್ನು ಸೋಲಿಸಿದ್ದರು. 2019ರಲ್ಲಿ ಅವರು ಬಿಜೆಪಿಗೆ ಜಿಗಿದು ಚುನಾವಣೆ ಎದುರಿಸಬೇಕಾಗಿ ಬಂದಾಗ ಲಕ್ಷ್ಮಣ ಸವದಿ ತಮ್ಮ ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ತಕರಾರು ಎತ್ತಿದ್ದರು. ಆಗ ಅವರನ್ನು ಮೇಲ್ಮನೆ ಸದಸ್ಯರಾಗಿ ಮಾಡಿ ಮಂತ್ರಿ ಸ್ಥಾನ ನೀಡಿ ಸಮಾಧಾನ ಮಾಡಲಾಗಿತ್ತು. ಬಳಿಕ ನಡೆದ ಚುನಾವಣೆಯಲ್ಲಿ ಗೆದ್ದಿದ್ದರು ಮಹೇಶ್‌ ಕುಮಟಳ್ಳಿ.

ಆದರೆ, ಚುನಾವಣಾ ರಾಜಕೀಯದಿಂದ ದೀರ್ಘ ಕಾಲ ದೂರ ಉಳಿಯಲು ಒಪ್ಪದ ಲಕ್ಷ್ಮಣ ಸವದಿ ಈ ಬಾರಿ ತಮಗೇ ಟಿಕೆಟ್‌ ಎಂದು ಹಠ ಹಿಡಿದಿದ್ದಾರೆ. ಬಿಜೆಪಿಯ ಆಂತರಿಕ ವಲಯದಲ್ಲಿ ಅವರಿಗೇ ಟಿಕೆಟ್‌ ಕೊಡುವ ಅಭಿಪ್ರಾಯವಿದೆ. ಹಾಗಿದ್ದರೆ ಮಹೇಶ್‌ ಕುಮಟಳ್ಳಿ ಕಥೆ ಏನು ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ರಮೇಶ್‌ ಜಾರಕಿಹೊಳಿ ಈಗ ಹೋರಾಟಕ್ಕೆ ಇಳಿದಂತೆ ಕಾಣುತ್ತಿದೆ. ಇದೀಗ ಆರಂಭವಾಗಿರುವ ರಮೇಶ್‌ ಜಾರಕಿಹೊಳಿ ಹೋರಾಟ ಎಲ್ಲಿಗೆ ತಲುಪುತ್ತದೆ ಎಂದು ಕಾದು ನೋಡಬೇಕಾಗಿದೆ.

ಸಚಿವ ಸ್ಥಾನ ಬೇಕೆಂದೇನಿಲ್ಲ

ಕೆಎಸ್ ಈಶ್ವರಪ್ಪ ಹಾಗೂ ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರೂ ಈಡೇರಿಸಿಲ್ಲ ಎಂಬ ವಿಚಾರವನ್ನು ಪ್ರಸ್ತಾಪಿಸಿದಾಗ, ʻʻಈ ಹಿಂದೆ ಸಚಿವ ಸ್ಥಾನ ತ್ಯಾಗ ಮಾಡಿ ಬಿಜೆಪಿ ಸೇರಿದ್ದೇನೆ ಸ್ವಾಮಿ, ಹೀಗಾಗಿ ಇಲ್ಲಿ ಸಚಿವ ಸ್ಥಾನ ಬೇಕೇ ಬೇಕು ಅಂತೇನಿಲ್ಲ. ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತಕ್ಕಾಗಿ ಬಂದಿದ್ದೇನೆʼʼ ಎಂದು ಹೇಳಿಕೊಂಡರು ಜಾರಕಿಹೊಳಿ.

ಬೆಳಗಾವಿಯಲ್ಲಿ ಶಿವಾಜಿ ಮೂರ್ತಿಯನ್ನು ಎರಡು ಬಾರಿ ಉದ್ಘಾಟನೆ ಮಾಡಿದ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ʻʻಈ ಕುರಿತು ನೀವು ಕಾಂಗ್ರೆಸ್ ನಾಯಕರನ್ನು ಕೇಳಬೇಕು. ನಾನು ಶಿಷ್ಟಾಚಾರದ ಪ್ರಕಾರ ಸಿಎಂ ಅವರನ್ನು ಕರೆದುಕೊಂಡು ಕಾರ್ಯಕ್ರಮ ಮಾಡಿದ್ದೇನೆ. ಆ ಕಾರ್ಯಕ್ರಮವನ್ನು ನಾನು ಕಾನೂನುಬದ್ಧವಾಗಿ ಮಾಡಿದ್ದೇನೆ. ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಶಿವಾಜಿ ಮೂರ್ತಿಯ ಉದ್ಘಾಟನೆ ಕಾರ್ಯಕ್ರಮ ಮಾಡಿದ್ದೇವೆʼʼ ಎಂದು ಹೇಳಿದರು.

ಬೆಳಗಾವಿಯಲ್ಲಿ ಬಿಜೆಪಿಗೆ ಇನ್ನಷ್ಟು ಸೀಟು

ʻʻಮುಂಬರುವ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಈಗಿರುವುದಕ್ಕಿಂತಲೂಹೆಚ್ಚಿನ ಸ್ಥಾನ ಗಳಿಸುತ್ತೇವೆ. ಹಾಲಿ ಇರುವ ಹದಿಮೂರು ಬಿಜೆಪಿ ಸ್ಥಾನಗಳ ಹೊರತುಪಡಿಸಿ ಇನ್ನೂ ಹೆಚ್ಚಿನ ಸ್ಥಾನ ಗಳಿಸುತ್ತೇವೆʼʼ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಸಚಿವ ನಾರಾಯಣ ಗೌಡ ಅವರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿಯ ಬಗ್ಗೆ ಪ್ರಸ್ತಾಪಿಸಿದಾಗ, ನಾರಾಯಣ ಗೌಡ ಅವರು ಪಕ್ಷ ಬಿಟ್ಟು ಹೋಗುವುದಾಗಿ ಹೇಳಿಲ್ಲ. ನಾನು ಅವರೊಂದಿಗೆ ಈ ಕುರಿತು ಮಾತನಾಡುವೆ. ಹಡಗು ಮುಳುಗುವಾಗ ಅಲ್ಲಿ ಹೋಗುವುದು ಒಳ್ಳೆಯದಲ್ಲ ಎಂದು ಸಲಹೆ ನೀಡುತ್ತೇನೆ.
ಬಿಜೆಪಿಯನ್ನು ದೊಡ್ಡ ಮಟ್ಟದಲ್ಲಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೊಗಳುವಾಗ ಮುಳುಗು ಪಕ್ಷವನ್ನ ಸೇರುವ ಹುಂಬತನ ಮಾಡಬಾರದೆಂದು ಹೇಳುತ್ತೇನೆʼʼ ಎಂದರು ರಮೇಶ್ ಜಾರಕಿಹೊಳಿ.

ಇದನ್ನೇ ಓದಿ : Karnataka Election 2023: ಬೆಳಗಾವಿ ಬಿಜೆಪಿಯಲ್ಲಿಲ್ಲ ಹೊಂದಾಣಿಕೆ; ಶಶಿಕಲಾ ಜೊಲ್ಲೆ ವರ್ಸಸ್‌ ರಮೇಶ್ ಜಾರಕಿಹೊಳಿ

Exit mobile version