ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Election 2023) ರಕ್ತದ ಕಥೆಗಳು ಕೇಳಿಬರುತ್ತಿವೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ ಮೊದಲ ಕಥೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮುಂದುವರಿಸಿದ್ದಾರೆ.
ಶೆಟ್ಟರ್ ಸೋಲಿಸುತ್ತೇನೆ ಎಂದ ಬಿಎಸ್ ಯಡಿಯೂರಪ್ಪ
ಬಿಜೆಪಿ ಬಿಟ್ಟು ಕಾಂಗ್ರೆಸ್ ಪಾಳಯ ಸೇರಿಕೊಂಡ ಜಗದೀಶ್ ಶೆಟ್ಟರ್ ಅವರನ್ನು ಶತಾಯಗತಾಯ ಸೋಲಿಸಲೇಬೇಕು ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಸಂತೋಷ್ ಅವರಿಂದ ರಣವೀಳ್ಯವನ್ನು ಪಡೆದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಗಳವಾರ ರಾತ್ರಿಯೇ ಹುಬ್ಬಳ್ಳಿಗೆ ಧಾವಿಸಿ ಕಾರ್ಯಾಚರಣೆ ಶುರು ಮಾಡಿದ್ದರು. ಹುಬ್ಬಳ್ಳಿ ಭಾಗದ ಲಿಂಗಾಯತ ಮುಖಂಡರನ್ನು ಕರೆಸಿಕೊಂಡು ನೆತ್ತರ ಬರಹದ ಕಥೆ ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಜಗದೀಶ್ ಶೆಟ್ಟರ್ ಅವರನ್ನು ಗೆಲ್ಲಲು ಬಿಡುವುದಿಲ್ಲ ಎನ್ನುವ ಭೀಷ್ಮ ಪ್ರತಿಜ್ಞೆ ಮಾಡಿದ ಅವರು, ಈ ವಿಚಾರವನ್ನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಸವಾಲು ಹಾಕಿದ್ದರು. ಬಿಜೆಪಿ ಜಗದೀಶ್ ಶೆಟ್ಟರ್ ನಿರ್ಗಮನ ಮತ್ತು ಲಿಂಗಾಯತ ಮತಗಳಲ್ಲಿ ಆಗಬಹುದಾದ ಸಂಚಲನದಿಂದ ಆತಂಕ ಅನುಭವಿಸುತ್ತಿರುವುದರ ಸೂಚನೆ ಈ ಹೇಳಿಕೆ ಎಂದು ವ್ಯಾಖ್ಯಾನಿಸಲಾಗಿದೆ. ಆದರೆ, ಕಾಂಗ್ರೆಸ್ ಲಿಂಗಾಯತರನ್ನು ದಾರಿ ತಪ್ಪಿಸುತ್ತಿರುವ ಹಿನ್ನೆಲೆಯಲ್ಲಿ ಮತಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಬಿಎಸ್‌ವೈ ಅವರ ಬಾಯಲ್ಲಿ ಇಷ್ಟು ಸವಾಲಿನ ಮಾತು ಆಡಿಸಿದೆ ಎನ್ನುವುದು ಮತ್ತೊಂದು ವಿಶ್ಲೇಷಣೆ.
150 ಸ್ಥಾನ ಗೆಲ್ಲುವ ಡಿಕೆ ಶಿವಕುಮಾರ್ ಸವಾಲಿನ ರಕ್ತ ಬರಹ
ಅತ್ತ ಹುಬ್ಬಳ್ಳಿಯಲ್ಲಿ ಬಿಎಸ್‌ವೈ ಅವರು ಜಗದೀಶ್ ಶೆಟ್ಟರ್ ಅವರನ್ನು ಸೋಲಿಸುವುದಾಗಿ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಬಿಎಸ್‌ವೈ ಹೇಳಿದರೆ ಇತ್ತ ಮೈಸೂರಿನಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ 150 ಸ್ಥಾನ ಗೆಲ್ಲುತ್ತದೆ, ಬಿಜೆಪಿ 40 ಸ್ಥಾನಕ್ಕೆ ನಿಲ್ಲುತ್ತದೆ ಎಂದು ರಕ್ತದಲ್ಲಿ ಬರೆದುಕೊಡುವ ಮಾತನಾಡಿದ್ದಾರೆ.
ʻʻಯಡಿಯೂರಪ್ಪ ಅವರು ಪಕ್ಷ ಬಿಟ್ಟ ಯಾರೋ ನಾಲ್ಕು ಜನರನ್ನು ಸೋಲಿಸಲು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದಾರೆ. ಯಾರನ್ನೋ ಸೋಲಿಸುವುದೇ ನಿಮ್ಮ ಗುರಿಯೇ? ಬಿಜೆಪಿಯಿಂದ ಯಾರಿಗೆ ಅನುಕೂಲ ಆಗಿದೆ? ರೈತರು, ವರ್ತಕರು, ಯುವಕರಿಗೆ ಮೋಸ ಮಾಡಿದೆ. ಆದ್ದರಿಂದ 15 ದಿನದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತೆ. ಇದನ್ನು ನನ್ನ ರಕ್ತದಲ್ಲಿ ಬರೆದು ಕೊಡುತ್ತೇನೆʼʼ ಎಂದು ಹೇಳಿದ್ದಾರೆ.
ಯಾವುದರಲ್ಲಿ ಬರೆದರೇನು? ಜನ ಮತ ಹಾಕಬೇಕಲ್ಲ ಎಂದ ಕುಮಾರಸ್ವಾಮಿ
ಬಿ.ಎಸ್. ಯಡಿಯೂರಪ್ಪ ಮತ್ತು ಡಿ.ಕೆ. ಶಿವಕುಮಾರ್ ಅವರ ರಕ್ತದ ಸವಾಲಿಗೆ ತಣ್ಣಗಿನ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಅವರು, ನೀವು ರಕ್ತದಲ್ಲಿ ಬರೆದುಕೊಟ್ಟರೂ, ಯಾವುದರಲ್ಲಿ ಬರೆದರೆ ಏನು ಪ್ರಯೋಜನ? ಜನ ಮತ ಹಾಕಬೇಕಲ್ಲ ಎಂದು ಗೇಲಿ ಮಾಡಿದ್ದಾರೆ.
ʻʻ150 ಸ್ಥಾನ ಕಾಂಗ್ರೆಸ್ ಗೆ ಬರುತ್ತೆ ಎಂದು ರಕ್ತದಲ್ಲಿ ಬರೆದುಕೊಡ್ತೀನಿʼʼ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ ʻʻಡಿ.ಕೆ ಶಿವಕುಮಾರ್ ರಕ್ತದಲ್ಲಿ ಬರೆದು ಕೊಡೋದು ಬೇಡ. ಪಾಪ ಡಿಕೆಶಿ ಅವರಿಗೆ ರಕ್ತದ ಕೊರತೆ ಆಗುತ್ತದೆʼ ಎಂದರು.
ʻಯಡಿಯೂರಪ್ಪ ನೋಡಿದ್ರೆ ಶೆಟ್ಟರನ್ನು ಸೋಲಿಸ್ತೀವಿ ಎಂದು ರಕ್ತದಲ್ಲಿ ಬರೆದು ಕೊಡ್ತೀನಿ ಅಂತಾರೆ. ಯಾವ ನಾಯಕರು ರಕ್ತದ ಕೊರತೆ ಮಾಡಿಕೊಳ್ಳೋದು ಬೇಡ. ನೀವು ರಕ್ತದ ಕೊರತೆ ಮಾಡಿಕೊಳ್ಳೋದು ಬೇಡ. ರಕ್ತದಲ್ಲಿ ಬರೆದು ಕೊಡೋದು ಬೇಡ. ನೀವು ಹೇಳೋದು, ರಕ್ತದಲ್ಲಿ ಬರೆದು ಕೊಡೋದು ಮುಖ್ಯ ಅಲ್ಲ. ಜನರು ಮತ ಹಾಕುವುದು ಮುಖ್ಯʼʼ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ : Karnataka Election : ಯಾವ ಕಾರಣಕ್ಕೂ ಶೆಟ್ಟರ್ ಅವರನ್ನು ಗೆಲ್ಲಲು ಬಿಡಲ್ಲ; ಬಿಎಸ್‌ವೈ ಭೀಷ್ಮ ಪ್ರತಿಜ್ಞೆ