ಬೆಂಗಳೂರು: ನಿನ್ನೆ ಬೆಂಗಳೂರಿನಲ್ಲಿ ಕನ್ನಡ ನಾಮಫಲಕಗಳಿಗೆ (Kannada Name plates) ಆಗ್ರಹಿಸಿ ನಡೆಸಲಾದ ಚಳವಳಿಗೆ (Karave Protest) ಸಂಬಂಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ (Karnataka Rakshana Vedike) ಅಧ್ಯಕ್ಷ ನಾರಾಯಣ ಗೌಡರನ್ನು (Narayana Gowda) ಬಂಧಿಸಲಾಗಿದ್ದು, ಜನವರಿ 10ರವರೆಗೆ ನ್ಯಾಯಾಂಗ ಬಂಧನಕ್ಕೆ (judicial custody) ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಕರವೇ ನಾರಾಯಣ ಗೌಡ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ. ಹೆದ್ದಾರಿ ತಡೆ, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, (IPC 353) ರಡಿ ಪ್ರಕರಣವನ್ನು ನಾರಾಯಣ ಗೌಡ ಸೇರಿ ಸಂಘಟನೆಯ ಇನ್ನಿತರ ಕಾರ್ಯಕರ್ತರ ಮೇಲೆ ದಾಖಲು ಮಾಡಿಕೊಳ್ಳಲಾಗಿದೆ.
ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ ಆರೋಪ ದಾಖಲಾಗಿದೆ. ನಾರಾಯಣ ಗೌಡ ಸೇರಿ 6 ಮಂದಿ ವಿರುದ್ದ ಪಿಎಸ್ ಐ ಲಿತೀನ್ ದೂರಿನನ್ವಯ ಚಿಕ್ಕಜಾಲ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದ್ದು, ನ್ಯಾಷನಲ್ ಹೈವೆ ಅಥಾರಿಟಿ ಆ್ಯಕ್ಟ್ IPC 283, 188, 427, 341 ,188 283ರಡಿ ಎಫ್ಐಆರ್ ಮಾಡಲಾಗಿದೆ. ನಾರಾಯಣ ಗೌಡ A1, ಜಗದೀಶ್ A2, ಸುರೇಶ್ A3, ಬಿ.ಕೆ.ನಾರಾಯಣ ಸ್ವಾಮಿ A4, ಬಿ.ಟಿ .ಅನಿಲ್ ಕುಮಾರ್ A5, ಅಂಬರೀಶ್ A6 ಆಗಿದ್ದಾರೆ.
ಹೋರಾಟ ನಡೆಸಿದ ನಾರಾಯಣ ಗೌಡ ಹಾಗೂ ಸಂಗಡಿಗರನ್ನು ನಿನ್ನೆ ಪೊಲೀಸ್ ವಶಕ್ಕೆ ಪಡೆಯಲಾಗಿತ್ತು. ಇಂದು ನಸುಕಿನ ಜಾವ ನಾರಾಯಣ ಗೌಡ ಸೇರಿದಂತೆ 29 ಮಂದಿಯನ್ನು ದೇವನಹಳ್ಳಿಯಲ್ಲಿರುವ ನಿವಾಸಕ್ಕೆ ಹಾಜರುಪಡಿಸಲಾಯಿತು. 14 ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಆದೇಶ ಹೊರಡಿಸಿದರು.
ನಾರಾಯಣ ಗೌಡ ಹಾಗೂ ಸಂಗಡಿಗರನ್ನು ಭಾರಿ ಬಿಗಿ ಭದ್ರತೆ ನಡುವೆ ಪೊಲೀಸರು ಕೊಂಡೊಯ್ದಿದ್ದಾರೆ. ಇದಕ್ಕೂ ಮುನ್ನ ಎಲ್ಲರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಮೆಡಿಕಲ್ ಟೆಸ್ಟ್‌ಗೆ ಕರೆದೊಯ್ಯುವಾಗ ಕರವೇ ಕಾರ್ಯಕರ್ತರು ಬಸ್ ತಡೆದು ಬಸ್‌ಗೆ ಕಲ್ಲು ತೂರಾಟ ನಡೆಸಿದರು. ಬಸ್ಸಿಗೆ ಕಲ್ಲು ತೂರುವಾಗ ಪೊಲೀಸರೊಬ್ಬರಿಗೆ ಕಲ್ಲೇಟು ಬಿದ್ದು ಗಾಯವಾಗಿದೆ.
ಇಂದು ಕರವೇ ಪ್ರತಿಭಟನೆ
ಬಂಧನವನ್ನು ಪ್ರತಿಭಟಿಸಿ ಎಲ್ಲಾ ಸಚಿವರ ನಿವಾಸಗಳ ಮುಂದೆ ಪ್ರತಿಭಟನೆ ನಡೆಸುವಂತೆ ಕರವೇ ಅಧ್ಯಕ್ಷ ನಾರಾಯಣ ಗೌಡ ನೀಡಿದ್ದಾರೆ. ʼಕನ್ನಡಪರ ಹೋರಾಟ ನಡೆಸಿದ್ದಕ್ಕಾಗಿ ಬೆಳಗ್ಗೆಯಿಂದ ವಶಕ್ಕೆ ಪಡೆದು ಕೂಡಹಾಕಿದ್ದು, ಊಟ ನೀಡಿಲ್ಲ, ನನ್ನ ಮೆಡಿಸಿನ್ ನೀಡಿಲ್ಲ. ನನ್ನ ಮೊಬೈಲ್ ಕಸಿದು ನೊವುಂಟು ಮಾಡಿದ್ದಾರೆ. ನಮ್ಮ ಮೇಲೆ ದಬ್ಬಾಳಿಕೆ ಮಾಡಿ ಕಾರ್ಯಕರ್ತರನ್ನು ಬಂಧಿಸಿದ್ದಾರೆʼ ಎಂದು ಆರೋಪಿಸಿದ್ದಾರೆ.
ʼಸಿದ್ದರಾಮಯ್ಯನವರೇ. ನಿಮ್ಮ ಸರ್ಕಾರ ಚುನಾವಣೆಯಲ್ಲಿ ನಮ್ಮನ್ನು ಬಳಸಿಕೊಂಡಿತ್ತು. ನನ್ನ ಆರೋಗ್ಯ ಹದಗೆಟ್ಟಿದೆ, ನಾನು ಸತ್ತರೂ ಚಿಂತೆ ಇಲ್ಲ. ನಾಳೆ ಕನ್ನಡಿಗರು ಬೀದಿ ಬೀದಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ನಮಗೆ ಗುಂಡಿಟ್ಟರೂ ಚಿಂತೆ ಇಲ್ಲ, ನಾವು ಜಗ್ಗುವುದಿಲ್ಲ ಎಂದುʼ ನಾರಾಯಣ ಗೌಡ ಕಿಡಿ ಕಾರಿದ್ದಾರೆ.
ಬಂಧಿತ ಕರವೇ ಕಾರ್ಯಕರ್ತರಲ್ಲಿ ಒಬ್ಬ ಅಸ್ವಸ್ಥನಾಗಿದ್ದಾನೆ. ಸೂರಿ ಎಂಬಾತನ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಪೊಲೀಸರ ವಶದಲ್ಲಿದ್ದ ವೇಳೆ ಬಸ್‌ನಲ್ಲಿ ಪ್ರಜ್ಞೆ ಕಳೆದುಕೊಂಡಿದ್ದಾನೆ. ಕೂಡಲೇ ಆತನನ್ನು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ: Karave Protest: ಕನ್ನಡ ನಿರ್ಲಕ್ಷ್ಯಕ್ಕೆ ಸಿಡಿದೆದ್ದ ಕರವೇ; ಇಂಗ್ಲಿಷ್ ನಾಮಫಲಕಗಳ ಧ್ವಂಸ