ಬೆಂಗಳೂರು: ರೈಲ್ವೆ ಮಾರ್ಗ, ರಸ್ತೆ ಸಾರಿಗೆ ಸೇರಿ ಮೂರು ವಿಚಾರಗಳಲ್ಲಿ ಕರ್ನಾಟಕ ಸರ್ಕಾರವನ್ನು ಮನವೊಲಿಸಲು ಬಂದಿದ್ದ ನೆರೆ ರಾಜ್ಯ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಎಲ್ಲ ಮೂರು ಪ್ರಸ್ತಾವನೆಗಳನ್ನೂ ಕರ್ನಾಟಕ ಸರ್ಕಾರ ತಿರಸ್ಕರಿಸಿದೆ.
ಇತ್ತೀಚೆಗೆ ತಿರುವನಂತಪುರದಲ್ಲಿ ದಕ್ಷಿಣ ರಾಜ್ಯಗಳ ಸಭೆಯಲ್ಲಿ ಭಾಗವಹಿಸಿದ್ದಾಗ, ಕೇರಳ ಹಾಗೂ ಕರ್ನಾಟಕದ ಗಡಿ ಪ್ರದೇಶದ ಕೆಲವು ವಿಷಯಗಳ ಕುರಿತು ಚರ್ಚೆ ನಡೆಸಲು ಕೋರಿದ್ದರು. ಅದರಂತೆ ಭಾನುವಾರ ಬೆಳಗ್ಗೆ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು.
ಸಭೆಯ ನಂತರ ಮಾಧ್ಯಮಗಳಿಗೆ ಸಿಎಂ ಬೊಮ್ಮಾಯಿ ಈ ಕುರಿತು ಮಾಹಿತಿ ನೀಡಿದರು. ಕೇರಳ ಹಾಗೂ ಕರ್ನಾಟಕ ನೆರೆ ರಾಜ್ಯಗಳು, ಸಾಂಸ್ಕೃತಿಕವಾಗಿಯೂ ಅನೇಕ ಹೊಂದಾಣಿಕೆಗಳಿವೆ. ಕೆಲವು ವಿಚಾರಗಳ ಕುರಿತು ದ್ವಿಪಕ್ಷೀಯ ಮಾತುಕತೆಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಬಂದಿದ್ದರು. ಮೊದಲಿಗೆ, ಕಾಂಞಂಗಾಡ್- ಪಣತ್ತೂರು ಹಾಗೂ ಕಾಣಿಯೂರು ರೈಲ್ವೆ ಮಾರ್ಗದ ಕುರಿತು ಪ್ರಸ್ತಾವನೆ ಮಾಡಿದರು.
ಇದನ್ನೂ ಓದಿ | KK Shailaja | ಏಷ್ಯಾದ ನೊಬೆಲ್ ಮ್ಯಾಗ್ಸೆಸೆ ಪ್ರಶಸ್ತಿ ತಿರಸ್ಕರಿಸಿದ ಕೇರಳ ಮಾಜಿ ಸಚಿವೆ ಕೆ.ಕೆ.ಶೈಲಜಾ, ಕಾರಣ ಏನು?
ಕಾಂಞಂಗಾಡ್ ಕೇರಳದಲ್ಲಿದ್ದು, ಕಾಣಿಯೂರು ಕರ್ನಾಟಕದಲ್ಲಿದೆ. ಒಟ್ಟು ರೈಲ್ವೆ ಮಾರ್ಗದಲ್ಲಿ 45 ಕಿ.ಮೀ.ನಷ್ಟು ಕೇರಳದಲ್ಲಿ ಹಾಗೂ 35 ಕಿ.ಮೀ. ಕರ್ನಾಟಕದಲ್ಲಿ ಹಾದುಹೋಗುತ್ತದೆ. ಈಗಾಗಲೆ ಈ ಮಾರ್ಗವನ್ನು ರೈಲ್ವೆ ಇಲಾಖೆ ತಿರಸ್ಕರಿಸಿದೆ. ಆದರೆ, ಎರಡೂ ರಾಜ್ಯಗಳು ಒಪ್ಪಿಗೆ ನೀಡಿದರೆ ಪರಿಶೀಲನೆ ನಡೆಸಬಹುದು ಎಂದು ತಿಳಿಸಿದೆ. ಇದಕ್ಕಾಗಿ ನಮ್ಮ ಜತೆ ಮಾತುಕತೆಗೆ ಬಂದಿದ್ದರು.
ಮೊದಲನೆಯದಾಗಿ, ಈ ಯೋಜನೆಯಿಂದ ಕರ್ನಾಟಕದ ಜನರಿಗೆ ಪ್ರಯೋಜನ ಆಗುವುದಿಲ್ಲ. ಎರಡನೆಯದಾಗಿ ಈ ಮಾರ್ಗವು ಸುಳ್ಯ-ಸುಬ್ರಹ್ಮಣ್ಯದಂತಹ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಹಾದುಹೋಗುತ್ತದೆ. ಕರ್ನಾಟಕಕ್ಕೆ ಆಗುವ ಲಾಭದ ಜತೆಗೆ ಪರಿಸರ ವಿಚಾರವನ್ನೂ ಗಣನೆಗೆ ತೆಗೆದುಕೊಂಡು, ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದೇವೆ ಎಂದರು.
ಎರಡನೆಯದಾಗಿ, ಅನೇಕ ವರ್ಷಗಳಿಂದ ಚರ್ಚೆ ನಡೆಯುತ್ತಿರುವ ತಲಸ್ಸೇರಿ-ಮೈಸೂರು ರೈಲ್ವೆ ಲೈನ್ ಕುರಿತು ಪ್ರಸ್ತಾಪಿಸಿದರು. ಈ ಮಾರ್ಗವು ಪರಿಸರ ಸೂಕ್ಷ್ಮ ಪ್ರದೇಶವಾದ ಬಂಡೀಪುರ- ನಾಗರಹೊಳೆ ಮಾರ್ಗದಲ್ಲಿ ಹಾದುಹೋಗುತ್ತದೆ. ಈ ಭಾಗದಲ್ಲಿ ಹುಲಿ ಸಂರಕ್ಷಿತ ಪ್ರದೇಶ, ಆನೆ ಕಾರಿಡಾರ್ ಸಹ ಇವೆ. ಇದರಲ್ಲಿ ಹೊಸ ಅಲೈನ್‌ಮೆಂಟ್ ಮಾಡೋಣ ಎಂದು ವಿಜಯನ್ ಅವರು ಪ್ರಸ್ತಾಪ ಇಟ್ಟರು, ಅದನ್ನೂ ತಿರಸ್ಕರಿಸಿದ್ದೇವೆ. ಅಂಡರ್‌ಗ್ರೌಂಡ್ ರೈಲ್ವೆ ಮಾರ್ಗ ಮಾಡೋಣ ಎಂದು ತಿಳಿಸಿದರು. ಆದರೆ ಅದರಿಂದಲೂ ಸಾಕಷ್ಟು ಭೂಮಿ ಹೋಗುತ್ತದೆ, ಅಂಡರ್‌ಗ್ರೌಂಡ್ ಮಾಡಿದರೂ ಮೇಲ್ಭಾಗದಲ್ಲಿ ಪರಿಸರಕ್ಕೆ ಧಕ್ಕೆ ಆಗುತ್ತದೆ. ಹಾಗಾಗಿ ಈ ಪ್ರಸ್ತಾವನೆಯನ್ನೂ ತರಸ್ಕರಿಸಿದ್ದೇವೆ ಎಂದರು.
ಮೂರನೆಯದಾಗಿ, ಗುಂಡ್ಲುಪೇಟೆ ಮಾರ್ಗವಾಗಿ ರಾಷ್ಟ್ರೀಯ ಅರಣ್ಯ ಪ್ರದೇಶದಲ್ಲಿ ರಾತ್ರಿ ಹೊತ್ತಿನಲ್ಲಿ ಎರಡು ಬಸ್‌ಗಳಿಗೆ ಅನುಮತಿ ನೀಡಲಾಗಿದೆ. ಇದನ್ನು ನಾಲ್ಕು ಬಸ್‌ಗೆ ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದರು. ಈ ಪ್ರಸ್ತಾವನೆಯನ್ನೂ ತಿರಸ್ಕರಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ರಾಷ್ಟ್ರೀಯ ಹೆದ್ದಾರಿ 73ರಲ್ಲಿ ರಾಷ್ಟ್ರೀಯ ಹೆದ್ದಾರಿಯವರು ಹೊಸ ಯೋಜನೆ ರೂಪಿಸುತ್ತಿದ್ದಾರೆ, ಇದು ಪರಿಸರ ಪ್ರದೇಶದಲ್ಲಿ ಬರುವುದಿಲ್ಲ, ಈ ಕುರಿತು ಗಮನಹರಿಸುವಂತೆ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿಯವರು ಏನು ಮಾಡುತ್ತಿದ್ದಾರೆ ಗೊತ್ತಿಲ್ಲ, ಅವರು ಪ್ರಸ್ತಾವನೆ ಸಲ್ಲಿಸಿದ ನಂತರ ಪರಿಶೀಲನೆ ಮಾಡುತ್ತೇನ ಎಂದು ತಿಳಿಸಿರುವುದಾಗಿ ಸಿಎಂ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ | ವಯಾನಾಡ್‌ನಲ್ಲಿರುವ ರಾಹುಲ್ ಗಾಂಧಿ ಕಚೇರಿ ಧ್ವಂಸ; ಸಿಬ್ಬಂದಿ ಮೇಲೆ ಹಲ್ಲೆ, ವಸ್ತುಗಳೆಲ್ಲ ಚೆಲ್ಲಾಪಿಲ್ಲಿ