Site icon Vistara News

‘ಕರ್ನಾಟಕ ಸಾರ್ವಭೌಮ’ ಹೇಳಿಕೆ: ಕಾಂಗ್ರೆಸ್ ಮಾನ್ಯತೆ ರದ್ದು ಕೋರಿ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

Sonia Gandhi

Congress will not attend Ram Mandir inauguration, calls it BJP-RSS event

ನವದೆಹಲಿ/ಬೆಂಗಳೂರು: ಭಾರತದ ಅಖಂಡತೆಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ಮಾತನಾಡಿರುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರ ವಿರುದ್ಧ ಭಾರತೀಯ ಜನತಾ ಪಾರ್ಟಿ(BJP) ದಿಲ್ಲಿ ಮತ್ತು ಬೆಂಗಳೂರಲ್ಲಿ ಚುನಾವಣಾ ಆಯೋಗಕ್ಕೆ (Election Commission) ದೂರು ನೀಡಿದೆ. ಅಲ್ಲದೇ, ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಮಾನ್ಯತೆಯನ್ನು ರದ್ದು ಮಾಡಬೇಕೆಂದು ಆಗ್ರಹಿಸಿದೆ(Karnataka Election 2023).

ಕೇಂದ್ರ ಸಚಿವ ಭೂಪೇಂದ್ರ ಯಾದವ್ ನೇತೃತ್ವದ ನಿಯೋಗವು ದಿಲ್ಲಿಯ ಚುನಾವಣಾ ಆಯೋಗದ ಕೇಂದ್ರ ಕಚೇರಿಗೆ ಆಗಮಿಸಿ, ಸೋನಿಯಾ ಗಾಂಧಿ ಅವರು ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ದೂರು ಸಲ್ಲಿಸಿದರು.

ಸೋನಿಯಾ ಗಾಂಧಿ ಮಾತುಗಳನ್ನು ಉಲ್ಲೇಖಿಸಿದ ಕಾಂಗ್ರೆಸ್ ಟ್ವೀಟ್

ಸೋನಿಯಾ ಗಾಂಧಿ ಅವರ ಸಾರ್ವಭೌಮತೆ ಪದ ಉಲ್ಲೇಖಿಸಿ ಟ್ವೀಟ್ ಮಾಡಿರುವ ವಿಚಾರಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ದೇಶದ ಅಖಂಡತೆಗೆ ಬಳಸುವ ಪದವನ್ನು ಕಾಂಗ್ರೆಸ್ ಉದ್ದೇಶ ಪೂರ್ವವಾಗಿ ಟ್ವೀಟ್ ಮಾಡಿದೆ. ಇದು ಭಾರತದ ಅಖಂಡತೆ ದಕ್ಕೆ ಬರಲಿದೆ. ಚುನಾವಣಾ ಆಯೋಗಕ್ಕೆ 40% ಭ್ರಷ್ಟಾಚಾರ ಕುರಿತು ದೂರು ನೀಡಿದ್ದರೂ ಈತನಕ ಯಾವುದೇ ಉತ್ತರ ನೀಡಿಲ್ಲ ಎಂದು ಭೂಪೇಂದ್ರ ಯಾದವ್ ಅವರು ಹೇಳಿದ್ದಾರೆ.

ಬೆಂಗಳೂರಲ್ಲೂ ದೂರು ದಾಖಲು

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ, ಚುನಾವಣಾ ಆಯೋಗಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ದೂರು ನೀಡಿದ್ದಾರೆ.

ನಾವು ಎಲೆಕ್ಷನ್ ಕಮೀಷನ್‌ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದ್ದೇವೆ. ಕರ್ನಾಟಕದಾದ್ಯಂತ ಸಾರ್ವಭೌಮತ್ವದ ವಿರುದ್ಧ ಮಾತಾಡಿದ್ದಾರೆ. ನಾವು ದೇಶದ ಏಕತೆ ಅಂತ ಮಾತಾಡ್ತೀವಿ. ಜವಾಹರ್ ಲಾಲ್ ನೆಹರು ವಿವಿಯಲ್ಲಿ ತುಕ್ಡೇ ತುಕ್ಡೇ ಗ್ಯಾಂಗ್ ದೇಶ ವಿಭಜನೆಯ ಬಗ್ಗೆ ಮಾತನಾಡುತ್ತದೆ. ಅದೇ ಭಾಷೆಯನ್ನು ಸೋನಿಯಾ ಗಾಂಧಿ ಅವರು ಕರ್ನಾಟಕದಲ್ಲೂ ಬಳಸಿದ್ದಾರೆಂದು ಶೋಭಾ ಕರಂದ್ಲಾಜೆ ಅವರು ಆರೋಪಿಸಿದರು.

ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಅಂತ ನಾವೆಲ್ಲಾ ಬಾಳ್ತಿದ್ದೀವಿ. ಯಾವ ದೇಶ ಒಗ್ಗಟ್ಟಾಗಿ ಇರಬೇಕು ಅಂತ ಸಾರ್ವಭೌಮತ್ವದ ಬಗ್ಗೆ ಜನರಲ್ ತಿಮ್ಮಯ್ಯ ಮಾತನಾಡಿದ್ರು. ಅಂಥ ಸೌರ್ವಭೌಮತ್ವವನ್ನು ಒಡೆಯುವ ಬಗ್ಗೆ ಕೆಲಸವನ್ನು ಸೋನಿಯಾ ಗಾಂಧಿ ಅವರು ಮಾಡುತ್ತಿದ್ದಾರೆ. ಈ ಹಿಂದೆ ರೀತಿ ಮಾತನಾಡಿ, ಕಾಶ್ಮೀರವನ್ನು ದೂರು ಮಾಡಿದಿರಿ. ಕಾಶ್ಮೀರ ಭಾರತದಿಂದ ದೂರ ಉಳಿಯಿತು. ಕಾಶ್ಮೀರದಲ್ಲಿ ಬೇರೆಯ ಧ್ವಜ ಇತ್ತು. ಮೊನ್ನೆ 370 ತಂದ ಬಳಿಕ ಕಾಶ್ಮೀರ ಭಾರತದ ಭಾಗ ಆಯ್ತು. ಸೋನಿಯಾ ಅವರ ನಿರ್ಧಾರ ಏನು ಅಂತ ತಕ್ಷಣ ಹೇಳಬೇಕು ಎಂದು ಶೋಭಾ ಕರಂದ್ಲಾಜೆ ಅವರು ಹೇಳಿದರು.

ಸೋನಿಯಾ ಗಾಂಧಿ ಅವರು ಹೇಳಿದ್ದೇನು?

ಶನಿವಾರ ಹುಬ್ಬಳ್ಳಿಯಲ್ಲಿ ಭಾಷಣ ಮಾಡಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು, ಕರ್ನಾಟಕದ ಪ್ರತಿಷ್ಠೆ, ಸಾರ್ವಭೌಮತ್ವ ಅಥವಾ ಸಮಗ್ರತೆಗೆ ಯಾರಾದರೂ ಬೆದರಿಕೆಯೊಡ್ಡಲು ಕಾಂಗ್ರೆಸ್ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈ ಭಾಷಣದ ತುಣಕನ್ನು ಕಾಂಗ್ರೆಸ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಷೇರ್ ಮಾಡಿತ್ತು. ಅದೇ ಟ್ವೀಟ್ ಉಲ್ಲೇಖಿಸಿ ಈಗ ಬಿಜೆಪಿಯು ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದೆ. ಅಲ್ಲದೇ ಭಾನುವಾರ ಮೈಸೂರಿನಲ್ಲಿ ನಂಜನಗೂಡಿನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯವನ್ನು ಪ್ರಸ್ತಾಪಿಸಿ, ಆಕ್ರೋಶಭರಿತರಾಗಿ ಮಾತನಾಡಿದ್ದರು.

ಇದನ್ನೂ ಓದಿ: Karnataka Election: ಲೂಟಿ ಸರ್ಕಾರ ಬಿಡಿ, ಕಾಂಗ್ರೆಸ್‌ಗೆ ಮತ ಕೊಡಿ; ಹುಬ್ಬಳ್ಳಿಯಲ್ಲಿ ಸೋನಿಯಾ ಗಾಂಧಿ ಕರೆ

ಕರ್ನಾಟಕದಲ್ಲಿ ಮಾತ್ರವಲ್ಲ, ನಾನು ಇಡೀ ದೇಶಕ್ಕೆ ಈ ಮಾತನ್ನು ಬಹಳ ನೋವಿನಿಂದ ಹೇಳಲು ಇಚ್ಛಿಸುತ್ತೇನೆ. ನಿನ್ನೆ ಕರ್ನಾಟಕಕ್ಕೆ ಬಂದ ಕಾಂಗ್ರೆಸ್‌ನ ಶಾಹಿ ಪರಿವಾರವು ಕರ್ನಾಟಕದ ಸಾರ್ವಭೌಮತ್ವವನ್ನು ಕಾಪಾಡುತ್ತೇನೆ ಹೇಳಿದೆ. ಇದರ ಅರ್ಥ ಏನು ಗೊತ್ತಾ..? ಯಾವಾಗ ದೇಶ ಸ್ವತಂತ್ರವಾಗುತ್ತದೋ ಆಗ ಆ ದೇಶವನ್ನು ಸಾರ್ವಭೌಮರಾಷ್ಟ್ರ ಎಂದು ಕರೆಯುತ್ತಾರೆ. ಈಗ ಕಾಂಗ್ರೆಸ್ ಹೇಳುತ್ತಿರುವ ಮಾತಿನ ಅರ್ಥ ಏನೆಂದರೆ, ಭಾರತದಿಂದ ಕರ್ನಾಟಕವು ಪ್ರತ್ಯೇಕವಾಗಿದೆ ಎಂದು ನರೇಂದ್ರ ಮೋದಿ ಅವರು ಹೇಳಿದರು.

Exit mobile version