ಬೆಂಗಳೂರು: ಇಂದಿನಿಂದ ಹತ್ತು ದಿನಗಳ ಕಾಲ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು, ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸಲು ಪ್ರತಿಪಕ್ಷಗಳು ಸಿದ್ಧತೆ ಮಾಡಿಕೊಂಡಿವೆ. ಪ್ರತಿಪಕ್ಷಗಳ ದಾಳಿ ಎದುರಿಸಲು ಸರ್ಕಾರವೂ ತಯಾರಾಗುತ್ತಿದೆ.
ಬೆಳಿಗ್ಗೆ ಹನ್ನೊಂದು ಗಂಟೆಗೆ ವಿಧಾನಸಭಾ ಕಲಾಪ ಆರಂಭವಾಗಲಿದೆ. ಮೊದಲಿಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಸಲ್ಲಲಿದೆ. ನಾಲ್ಕು ದಿನಗಳ ಹಿಂದೆ ತೀರಿಕೊಂಡ ಸಚಿವ ಉಮೇಶ್ ಕತ್ತಿ, ಮಾಜಿ ಸಚಿವ ರಘುಪತಿ, ಪತ್ರಕರ್ತ ಗುರುಲಿಂಗಸ್ವಾಮಿ ಅವರಿಗೆ ಸಂತಾಪ ಸಲ್ಲಿಕೆಯಾಘಲಿದ್ದು, ಸಂತಾಪ ಸೂಚನೆ ಪ್ರಸ್ತಾವನೆ ಮೇಲೆ ಮೂರು ಪಕ್ಷಗಳ ಶಾಸಕರು ಮಾತನಾಡಲಿದ್ದಾರೆ. ಬಳಿಕ ಸದನ ನಾಳೆಗೆ ಮುಂದೂಡಿಕೆಯಾಗಲಿದೆ.
ನಾಳೆಯಿಂದ ಆರಂಭವಾಗಲಿದೆ ರಿಯಲ್ ಕದನ
ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಸಿದ್ಧವಾಗಿದ್ದು, ಅದರ ಬುಟ್ಟಿಯಲ್ಲಿ ಸಾಕಷ್ಟು ಹಾವುಗಳು ಈ ಬಾರಿ ಇವೆ. ರಾಜ್ಯದಲ್ಲಿ ಅತಿವೃಷ್ಟಿಯಿಂದ ಆದ ಬೆಳೆ ಹಾನಿ, ಬೆಂಗಳೂರಿನಲ್ಲಿ ಮಳೆಯಿಂದ ಆದ ಅವಾಂತರ, ಬೆಂಗಳೂರು ಮೈಸೂರು ಹೆದ್ದಾರಿ ಕಳಪೆ ಕಾಮಗಾರಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವಿಫಲ, ಸರ್ಕಾರದ ಸಚಿವರ ವಿರುದ್ಧ 40% ಕಮಿಷನ್ ಆರೋಪ, ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನೇಮಕಾತಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆದ ಹಗರಣಗಳ ಬಗ್ಗೆ ಪ್ರಸ್ತಾಪ ಮಾಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಸಿದ್ಧವಾಗಿವೆ.
ಸದನದ ಹೊರಗೂ PSI ಅಕ್ರಮದ ಫೈಟ್?
ಸದನದ ಹೊರಗೆ PSI ಅಕ್ರಮಕ್ಕೆ ಟ್ವಿಸ್ಟ್ ಕೊಡಲು ಕಾಂಗ್ರೆಸ್ ಸಿದ್ಧವಾಗಿದ್ದು, ಬಿಜೆಪಿ ಶಾಸಕ ಹಣ ಪಡೆದಿರುವ ವಿಡಿಯೋ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಶಾಸಕ ಬಸವರಾಜ ದಡೇಸೂಗೂರು ಆಡಿಯೋ ಬಹಿರಂಗವಾಗಿತ್ತು. ಇದೀಗ ದಡೇಸೂಗೂರು ಹಣ ಕಲೆಕ್ಟ್ ಮಾಡಿದ್ದಾರೆ ಎನ್ನಲಾದ ವಿಡಿಯೋವನ್ನು ಇಂದು 12.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಕರೆದಿರುವ ಸುದ್ದಿಗೋಷ್ಟಿಯಲ್ಲಿ ಬಿಡುಗಡೆ ಸಾಧ್ಯತೆ ಇದೆ ಎನ್ನಲಾಗಿದೆ. ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ ಸುದ್ದಿಗೋಷ್ಟಿ ಕರೆದಿದ್ದಾರೆ.
ಆಡಳಿತ ಪಕ್ಷ ಸಿದ್ಧತೆ
ಕಾಂಗ್ರೆಸ್ ಅಸ್ತ್ರಗಳಿಗೆ ಪ್ರತ್ಯಸ್ತ್ರವನ್ನೂ ಸರ್ಕಾರ ಸಿದ್ಧ ಮಾಡಿಕೊಂಡಿದೆ. ಸಿದ್ದರಾಮಯ್ಯ ಕಾಲದಲ್ಲಿ ನಡೆದ ಹಗರಣಗಳು, ಅರ್ಕಾವತಿ ರಿಡೂ ಪ್ರಕರಣ, 903 ಎಕರೆ ಜಮೀನಿನಲ್ಲಿ 500ಕ್ಕೂ ಹೆಚ್ಚು ಎಕರೆ ಜಮೀನು ರಿಡೂ ಹೆಸರಲ್ಲಿ ಕೈಬಿಟ್ಟಿದ್ದು, ಸೋಲಾರ್ ಪ್ರಕರಣದಲ್ಲಿ ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೇವಲ ಕೆಲ ಸೆಕೆಂಡ್‌ಗಳು ಮಾತ್ರ ಸಮಯ ಕೊಟ್ಟಿದ್ದು, ಕಲ್ಲಿದ್ದಲು ಖರೀದಿಯಲ್ಲಿ ಗೋಲ್‌ಮಾಲ್, ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆದ ಹಾಸಿಗೆ ದಿಂಬು ಪ್ರಕರಣ ಹಾಗು ಸಿದ್ದರಾಮಯ್ಯ ಕಾಲದಲ್ಲಿ ನಡೆದ ಹಿಂದು ಸಂಘಟನೆಗಳ ಕಾರ್ಯಕರ್ತರ ಕೊಲೆ ಪ್ರಕರಣಗಳನ್ನು ಸದನದಲ್ಲಿ ಪ್ರಸ್ತಾಪ ಮಾಡಿ ಕಾಂಗ್ರೆಸ್‌ಗೆ ತಿರುಗೇಟು ಕೊಡಲು ಆಡಳಿತ ಪಕ್ಷ ಸಿದ್ಧತೆ ನಡೆಸಿದೆ.
ಇದನ್ನೂ ಓದಿ | ಸೋಮವಾರದಿಂದ 10 ದಿನ ಮಳೆಗಾಲದ ಅಧಿವೇಶನ: ಆರೋಪ-ಪ್ರತ್ಯಾರೋಪ ಮಳೆಗೆ ವೇದಿಕೆ ಸಿದ್ಧ
ಕಾರ್ಯಕಲಾಪ ಸಮಿತಿ ಸಭೆ
ಇಂದು ಮಧ್ಯಾಹ್ನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಸದನ ಕಾರ್ಯಕಲಾಪಗಳ ಸಮಿತಿ ಸಭೆ ಕರೆಯಲಾಗಿದ್ದು, ಈ ಅಧಿವೇಶನದಲ್ಲಿ ಚರ್ಚೆ ಮಾಡಬೇಕಾದ ವಿಚಾರಗಳ ಬಗ್ಗೆ ಸಭೆಯಲ್ಲಿ ಸ್ಪೀಕರ್‌ಗೆ ಮಾಹಿತಿ ನೀಡಲಿದ್ದಾರೆ. ಸದನದ ಸಮಯ ವ್ಯರ್ಥವಾಗದಂತೆ ಸುಗಮ ಕಲಾಪ ನಡೆಸಲು ಸಹಕಾರ ಕೊಡುವಂತೆ ಸ್ಪೀಕರ್ ಸಲಹೆ ನೀಡಲಿದ್ದು, ಸದನದಲ್ಲಿ ಪ್ರಸ್ತಾಪ ಮಾಡಲಿರುವ ತಿದ್ದುಪಡಿ ವಿಧೇಯಕಗಳ ಬಗ್ಗೆಯೂ ಮಾಹಿತಿ ಪಡೆಯಲಿದ್ದಾರೆ.
ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಗೋವಿಂದ್ ಕಾರಜೋಳ, ಮಾಧುಸ್ವಾಮಿ, ಆರ್ ಆಶೋಕ್, ಕೋಟ ಶ್ರೀನಿವಾಸ ಪೂಜಾರಿ, ಸತೀಶ್ ರೆಡ್ಡಿ, ಪ್ರತಿಪಕ್ಷ ಮುಖಂಡರಾದ ಸಿದ್ದರಾಮಯ್ಯ, ದೇಶಪಾಂಡೆ, ಡಿ.ಕೆ ಶಿವಕುಮಾರ್, ಬಿ.ಕೆ ಹರಿಪ್ರಸಾದ್, ಪರಮೇಶ್ವರ್, ಅಜೇಯ್ ಸಿಂಗ್, ಎಚ್.ಡಿ ಕುಮಾರಸ್ವಾಮಿ, ರೇವಣ್ಣ, ಬಂಡೆಪ್ಪ ಕಾಶಂಪುರ ಉಪಸ್ಥಿತರಿರಲಿದ್ದಾರೆ.
ಇದನ್ನೂ ಓದಿ | ವಿಸ್ತಾರ TOP 10 NEWS | ಅಧಿವೇಶನಕ್ಕೆ ಕ್ಷಣಗಣನೆಯಿಂದ ರಾಮಮಂದಿರಕ್ಕೆ ಕರ್ನಾಟಕದ ಶಿಖರದವರೆಗಿನ ಪ್ರಮುಖ ಸುದ್ದಿಗಳಿವು