ಬೆಂಗಳೂರು: ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಅಂದರೆ (ಮಾ. 28 – ಏಪ್ರಿಲ್ 1) ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆ ಗುಡುಗು – ಮಿಂಚುಗಳ ಸಹಿತ ಸಾಧಾರಣದಿಂದ ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ. ಆದರೆ, ಬೆಂಗಳೂರು ಮಾತ್ರ ಸೆಕೆಯಲ್ಲಿ ಮತ್ತಷ್ಟು ಬೇಯಲಿದೆ ಎಂದು ಅಂದಾಜಿಸಲಾಗಿದೆ. ಕಾರಣ, ಏಪ್ರಿಲ್ 2ರವರೆಗೆ ಗರಿಷ್ಠ ಉಷ್ಣಾಂಶವು 36 – 37 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Karnataka Weather Forecast) ಉಲ್ಲೇಖಿಸಿದೆ. ಇನ್ನು ರಾಜ್ಯದ ಹಲವು ನದಿಗಳಲ್ಲಿ ನೀರು ಬತ್ತಿರುವ ದೃಶ್ಯಗಳನ್ನು ನೆಟ್ಟಿಗರು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವ ಮೂಲಕ ಬರದ ಭೀಕರತೆಯ ದರ್ಶನ ಮಾಡಿಸಿದ್ದಾರೆ. ಹೀಗಾಗಿ ಕಾವೇರಿ ಕೊಳ್ಳ ಸೇರಿದಂತೆ ನದಿ ಒಡಲು ಇರುವ ಕಡೆಗಳಲ್ಲಿ ಉತ್ತಮ ಮಳೆಯಾಗಬಹುದು ಎಂಬ ನಿರೀಕ್ಷೆಯನ್ನು ಹೊಂದಲಾಗಿದೆ.
ಇದರ ಜತೆಗೆ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶವು 2 – 3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಉತ್ತರ ಒಳನಾಡಲ್ಲಿ ಹೀಟ್ ವೇವ್!
ಮುಂದಿನ ಮೂರು ದಿನಗಳ ಕಾಲ ಅಂದರೆ, ಮಾರ್ಚ್ 28ರಿಂದ 30ರವರೆಗೆ ಉತ್ತರ ಒಳನಾಡಿನ ಕೆಲವು ಕಡೆ ಹೀಟ್ ವೇವ್ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಬಿಸಿಲಿನ ಬೇಗೆಯ ಜತೆಗೆ ಬಿಸಿ ಗಾಳಿಯನ್ನೂ ಜನರು ತಡೆದುಕೊಳ್ಳಬೇಕಿದೆ.
ಹಾಟ್ ಬೆಂಗಳೂರು
ಬೆಂಗಳೂರಲ್ಲಿ ಬಿಸಿಲಿನ ತೀವ್ರತೆ ಇರಲಿದ್ದು, ಸೆಕೆಯು ಕಾಡಲಿದೆ. ಇಲ್ಲಿ ಗರಿಷ್ಠ ತಾಪಮಾನದಲ್ಲಿ ಏರಿಕೆಯಾಗಲಿದ್ದು, ಹಾಲಿ 35 ಡಿಗ್ರಿ ಸೆಲ್ಸಿಯಸ್ ಇರುವ ಗರಿಷ್ಠ ಉಷ್ಣಾಂಶವು ಮುಂದಿನ ನಾಲ್ಕೈದು ದಿನ 36 – 37 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹೇಳಲಾಗಿದೆ. ಕನಿಷ್ಠ ಉಷ್ಣಾಂಶವು 21 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ಹೇಳಿದೆ.
ಶಿವಮೊಗ್ಗ, ದಾವಣಗೆರೆಯಲ್ಲಿ ಗುಡುಗಿನೊಂದಿಗೆ ಮಳೆ
ದಕ್ಷಿಣ ಒಳನಾಡಿನ ಶಿವಮೊಗ್ಗ, ದಾವಣಗೆರೆ ಸೇರಿ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಉಳಿದೆಡೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಆಗಾಗ ಮಳೆಯಾಗಬಹುದು ಎಂದು ಹೇಳಲಾಗಿದೆ.
ಉತ್ತರ ಕರ್ನಾಟಕದಲ್ಲಿ ಕೆಲವು ಕಡೆ ಅಲ್ಪ ಮಳೆ
ಉತ್ತರ ಒಳನಾಡಿನ ಹಾವೇರಿ, ಧಾರವಾಡ ಮತ್ತು ಬೆಳಗಾವಿಯಲ್ಲಿ ಚದುರಿದಂತೆ ಅಲ್ಪ ಪ್ರಮಾಣದ ಮಳೆಯಾಗುವ ಸಂಭವ ಇದೆ. ಗದಗ, ಕೊಪ್ಪಳ, ಬಾಗಲಕೋಟೆ, ವಿಜಯನಗರ ಮತ್ತು ವಿಜಯಪುರದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ.
ಕರಾವಳಿ – ಮಲೆನಾಡಲ್ಲಿ ಸಾಧಾರಣ ಮಳೆ
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ. ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆಯನ್ನು ಹೊಂದಲಾಗಿದೆ.
ಇದನ್ನೂ ಓದಿ: Summer Skincare: ಬೇಸಿಗೆಯಲ್ಲಿ ನಿಮ್ಮ ಚರ್ಮ ಕಪ್ಪಾಗದಂತೆ ತಡೆಯಲು ಹೀಗೆ ಮಾಡಿ
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 35 ಡಿ.ಸೆ – 21 ಡಿ.ಸೆ
ಮಂಗಳೂರು: 35 ಡಿ.ಸೆ – 25 ಡಿ.ಸೆ
ಚಿತ್ರದುರ್ಗ: 37 ಡಿ.ಸೆ – 23 ಡಿ.ಸೆ
ಗದಗ: 38 ಡಿ.ಸೆ – 22 ಡಿ.ಸೆ
ಹೊನ್ನಾವರ: 34 ಡಿ.ಸೆ- 24 ಡಿ.ಸೆ
ಕಲಬುರಗಿ: 41 ಡಿ.ಸೆ – 26 ಡಿ.ಸೆ
ಬೆಳಗಾವಿ: 37 ಡಿ.ಸೆ – 21 ಡಿ.ಸೆ
ಕಾರವಾರ: 35 ಡಿ.ಸೆ – 25 ಡಿ.ಸೆ
ದುಬಾರೆಯ ಪರಿಸ್ಥಿತಿ ಹೇಗಿದೆ ನೋಡಿ!
River Kaveri in Dubare. pic.twitter.com/Cid0KhrggQ
— Kodagu Connect (@KodaguConnect) March 27, 2024
ಕಾವೇರಿ ನದಿಯಲ್ಲೂ ನೀರಿಲ್ಲ
ಮಳೆ ಇಲ್ಲದೆ ಕರ್ನಾಟಕದ ಬಹುತೇಕ ನದಿಗಳು ಬತ್ತುವ ಹಂತವನ್ನು ತಲುಪಿವೆ. ನೀರಿಲ್ಲದೆ ನದಿ ಮಾರ್ಗಗಳು ಒಣಗಿ ಹೋಗಿವೆ. ಖಾಲಿ ರಸ್ತೆಯಂತಾಗಿವೆ. ಕಾವೇರಿ ನದಿ ತೀರದ ಪ್ರದೇಶದಲ್ಲಿರುವ ದುಬಾರೆ ಪರಿಸ್ಥಿತಿ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಕೊಡಗು ಕನೆಕ್ಟ್ ಎಂಬ ಖಾತೆಯಲ್ಲಿ ಫೋಟೊಗಳನ್ನು ಪೋಸ್ಟ್ ಮಾಡಲಾಗಿದೆ. ಇದು ನೀರಿನ ಕೊರತೆಯ ತೀವ್ರತೆಯನ್ನು ಎತ್ತಿ ತೋರಿಸುತ್ತದೆ.