ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಳೆ ಶುರುವಾಗಲು ಸಮಯ ಇದೆ. ಅಷ್ಟರೊಳಗೆ ಹಲವು ಕಡೆ ಗುಡುಗು ಸಹಿತ ಮಳೆಯಾಗುವ (Rain News) ಲಕ್ಷಣಗಳು ಗೋಚರಿಸಿವೆ. ಗುರುವಾರ ಮತ್ತು ಶುಕ್ರವಾರ ದಕ್ಷಿಣ ಒಳನಾಡಿನ ಕೆಲವು ಕಡೆ ಸಾಧಾರಣದಿಂದ ಭರ್ಜರಿ ಮಳೆಯಾಗುವ ಮುನ್ಸೂಚನೆಯನ್ನು (Karnataka Weather Forecast) ರಾಜ್ಯ ಹವಾಮಾನ ಇಲಾಖೆ ನೀಡಿದೆ. ಹಾಗಾಗಿ ಮಲೆನಾಡಿನಲ್ಲಿ ಹೆಚ್ಚಿನ ಮಳೆಯನ್ನು ನಿರೀಕ್ಷಿಸಬಹುದಾಗಿದೆ.
ಇನ್ನು ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಆದರೆ, ಬೆಂಗಳೂರಿನಲ್ಲಿ ಸೆಕೆಯದ್ದೇ ಪಾರುಪತ್ಯ ಎನ್ನುವಂತಾಗಿದೆ. ಗರಿಷ್ಠ ಉಷ್ಣಾಂಶದಲ್ಲಿ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ.
ಶಿವಮೊಗ್ಗ, ದಾವಣಗೆರೆಯಲ್ಲಿ ಗುಡುಗಿನೊಂದಿಗೆ ಮಳೆ
ದಕ್ಷಿಣ ಒಳನಾಡಿನ ಶಿವಮೊಗ್ಗ, ದಾವಣಗೆರೆ ಸೇರಿ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಉಳಿದೆಡೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಆಗಾಗ ಮಳೆಯಾಗಬಹುದು ಎಂದು ಹೇಳಲಾಗಿದೆ.
ಉತ್ತರ ಕರ್ನಾಟಕದಲ್ಲಿ ಕೆಲವು ಕಡೆ ಅಲ್ಪ ಮಳೆ
ಉತ್ತರ ಒಳನಾಡಿನ ಹಾವೇರಿ, ಧಾರವಾಡ ಮತ್ತು ಬೆಳಗಾವಿಯಲ್ಲಿ ಚದುರಿದಂತೆ ಅಲ್ಪ ಪ್ರಮಾಣದ ಮಳೆಯಾಗುವ ಸಂಭವ ಇದೆ. ಗದಗ, ಕೊಪ್ಪಳ, ಬಾಗಲಕೋಟೆ, ವಿಜಯನಗರ ಮತ್ತು ವಿಜಯಪುರದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ.
ಕರಾವಳಿ – ಮಲೆನಾಡಲ್ಲಿ ಸಾಧಾರಣ ಮಳೆ
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ. ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆಯನ್ನು ಹೊಂದಲಾಗಿದೆ.
ಹಾಟ್ ಬೆಂಗಳೂರು
ಬೆಂಗಳೂರಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಬಿಸಿಯ ವಾತಾವರಣ ಇಲ್ಲಿರಲಿದೆ. ಬೀಸುವ ಗಾಳಿಯೂ ಮೈ ತಾಕಿದಾಗ ಬಿಸಿಯಾಗಿ ಕಿರಿ ಕಿರಿ ಉಂಟು ಮಾಡುವಂತಿದೆ. ಇಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕನಿಷ್ಠ ತಾಪಮಾನವು 21 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ಹೇಳಿದೆ.
ಇದನ್ನೂ ಓದಿ: Summer Skincare: ಬೇಸಿಗೆಯಲ್ಲಿ ನಿಮ್ಮ ಚರ್ಮ ಕಪ್ಪಾಗದಂತೆ ತಡೆಯಲು ಹೀಗೆ ಮಾಡಿ
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 35 ಡಿ.ಸೆ – 21 ಡಿ.ಸೆ
ಮಂಗಳೂರು: 35 ಡಿ.ಸೆ – 24 ಡಿ.ಸೆ
ಚಿತ್ರದುರ್ಗ: 37 ಡಿ.ಸೆ – 22 ಡಿ.ಸೆ
ಗದಗ: 38 ಡಿ.ಸೆ – 22 ಡಿ.ಸೆ
ಹೊನ್ನಾವರ: 34 ಡಿ.ಸೆ- 24 ಡಿ.ಸೆ
ಕಲಬುರಗಿ: 40 ಡಿ.ಸೆ – 26 ಡಿ.ಸೆ
ಬೆಳಗಾವಿ: 39 ಡಿ.ಸೆ – 21 ಡಿ.ಸೆ
ಕಾರವಾರ: 35 ಡಿ.ಸೆ – 25 ಡಿ.ಸೆ
ದುಬಾರೆಯ ಪರಿಸ್ಥಿತಿ ಹೇಗಿದೆ ನೋಡಿ!
River Kaveri in Dubare. pic.twitter.com/Cid0KhrggQ
— Kodagu Connect (@KodaguConnect) March 27, 2024
ಕಾವೇರಿ ನದಿಯಲ್ಲೂ ನೀರಿಲ್ಲ
ಮಳೆ ಇಲ್ಲದೆ ಕರ್ನಾಟಕದ ಬಹುತೇಕ ನದಿಗಳು ಬತ್ತುವ ಹಂತವನ್ನು ತಲುಪಿವೆ. ನೀರಿಲ್ಲದೆ ನದಿ ಮಾರ್ಗಗಳು ಒಣಗಿ ಹೋಗಿವೆ. ಖಾಲಿ ರಸ್ತೆಯಂತಾಗಿವೆ. ಕಾವೇರಿ ನದಿ ತೀರದ ಪ್ರದೇಶದಲ್ಲಿರುವ ದುಬಾರೆ ಪರಿಸ್ಥಿತಿ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಕೊಡಗು ಕನೆಕ್ಟ್ ಎಂಬ ಖಾತೆಯಲ್ಲಿ ಫೋಟೊಗಳನ್ನು ಪೋಸ್ಟ್ ಮಾಡಲಾಗಿದೆ. ಇದು ನೀರಿನ ಕೊರತೆಯ ತೀವ್ರತೆಯನ್ನು ಎತ್ತಿ ತೋರಿಸುತ್ತದೆ.