ಬೆಂಗಳೂರು: ರಾಜ್ಯದಲ್ಲಿ ಇನ್ನೆರಡು ದಿನ (ಬುಧವಾರ ಮತ್ತು ಗುರುವಾರ) ಗರಿಷ್ಠ ತಾಪಮಾನದಲ್ಲಿ ಬದಲಾವಣೆ ಆಗಲಿದ್ದು, ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದರ ನೇರ ಹೊಡೆತ ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಿಗೆ ಬೀಳಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Karnataka Weather Forecast) ಹೇಳಿದೆ.
ಕರ್ನಾಟಕದಾದ್ಯಂತ ಬಹುತೇಕ ಸೆಕೆಯ ವಾತಾವರಣವೇ ಇರಲಿದ್ದು, ಬೇಸಿಗೆಯ ಫೀಲ್ ಕೊಡಲಿದೆ. ಹೀಗಾಗಿ ಹೆಚ್ಚಿನವರು ಈಗಾಗಲೇ ಎಳನೀರು ಸಹಿತ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಹಣ್ಣುಗಳನ್ನು ಹೆಚ್ಚಾಗಿ ತಿನ್ನಲು ಶುರು ಮಾಡಿದ್ದಾರೆ. ಜತೆಗೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸುವ ಮೂಲಕ ಡಿಹೈಡ್ರೇಶನ್ (ನಿರ್ಜಲೀಕರಣ) ಆಗುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಹಲವು ಕಡೆ ಬಿಸಿಲು ಹಾಗೂ ಸೆಕೆಯಿಂದಾಗಿ ಬಾಯಾರಿಕೆ ಹೆಚ್ಚಾಗಿ ಆಗುತ್ತಿದೆ. ಇನ್ನು ಮಧ್ಯಾಹ್ನವಾದರೆ ಸಾಕು ಬಿಸಿಲಿನ ಝಳ ಮೈಯನ್ನು ಬೆವರಿಸಿಬಿಟ್ಟಿರುತ್ತದೆ. ಈಗಿನ ವಾತಾವರಣದ ಬಗ್ಗೆ ಹೇಳುವುದಾದರೆ ದಕ್ಷಿಣ ಹಾಗೂ ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಕನಿಷ್ಠ ಹಾಗೂ ಗರಿಷ್ಠ ತಾಪಮಾನವು 2-3 ಡಿ.ಸೆ ಏರಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ಹೇಳಿದೆ.
ಉತ್ತರ ಒಳನಾಡಲ್ಲಿ ಬಿಸಿಲಿಗೆ ಜನ ತತ್ತರ
ಉತ್ತರ ಒಳನಾಡಿನಲ್ಲಿ ಬೇಸಿಗೆಗೆ ಮುನ್ನವೇ ಬಿಸಿಲು ತೀವ್ರತೆ ಪಡೆದುಕೊಂಡಿರುವುದರಿಂದ ಜನರು ಹೈರಾಣಾಗಿದ್ದಾರೆ. ಈಗಲೇ ಹೀಗೆ, ಇನ್ನು ಮುಂದೆ ಹೇಗೋ? ಎಂಬ ಪ್ರಶ್ನಾರ್ಥಕ ಚಿಹ್ನೆಯನ್ನು ಇಟ್ಟುಕೊಂಡು ವಾತಾವರಣಕ್ಕೆ ಹಿಡಿಶಾಪ ಹಾಕಿ ಕುಳಿತಿದ್ದಾರೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಉಷ್ಣಾಂಶವು ಸಾಮಾನ್ಯಕ್ಕಿಂತ ಒಂದೆರಡು ಡಿಗ್ರಿ ಸೆಲ್ಸಿಯಸ್ ಹೆಚ್ಚಿರಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ ಸೇರಿದಂತೆ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿಯಲ್ಲಿ ಕೊತ ಕೊತ
ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸ್ಥಿತಿ ಇದ್ಯಾವುದಕ್ಕೂ ಹೊರತಾಗಿಲ್ಲ. ಇಲ್ಲಿಯೂ ಸಹ ಭಾರಿ ಬಿಸಿಲು ಇದೆ. ಹೀಗಾಗಿ ಸಂಜೆ ವೇಳೆಗೆ ಹೆಚ್ಚಿನ ಮಂದಿ ಬೀಚ್‌ಗೆ ಹೋಗಲು ಇಷ್ಟಪಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಸೆಕೆ ಇಲ್ಲಿ ನೆಲೆಯೂರಿಬಿಟ್ಟಿದೆ. ಈ ಕರಾವಳಿಯ ಜಿಲ್ಲೆಗಳ ಕೆಲವೆಡೆ ಕನಿಷ್ಠ ಹಾಗೂ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನಲ್ಲೂ ಬಿಸಿಲಿನದ್ದೇ ಮೇಲುಗೈ
ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ ಮತ್ತು ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗದಲ್ಲಿ ವಾತಾವರಣ ತಿಳಿಯಾಗಿರಲಿದ್ದು, ನಿರ್ಮಲವಾಗಿ ಕಾಣಲಿದೆ. ಕನಿಷ್ಠ ಮತ್ತು ಗರಿಷ್ಠ ಉಷ್ಣಾಂಶಗಳಲ್ಲಿ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹಾಟ್ ಬೆಂಗಳೂರು
ಗಾರ್ಡನ್ ಸಿಟಿ ಬೆಂಗಳೂರು ಈಗ ಸನ್ ಸಿಟಿಯಾಗಿ ಮಾರ್ಪಟ್ಟಿದೆ. ಬೆಂಗಳೂರಿನ ಕೆಲವು ಕಡೆ ಮುಂಜಾನೆ ಮಂಜು ಮುಸುಕಿದ ವಾತಾವರಣ ಇದ್ದರೂ ಬಿಸಿಲಿನ ಪ್ರಭಾವ ಹೆಚ್ಚಾಗಿ ಇರಲಿದೆ. ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಗರಿಷ್ಠ ಉಷ್ಣಾಂಶವು 30 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ ಹೇಳಿದೆ.
ಇದನ್ನೂ ಓದಿ: ಇನ್ನೂ HSRP Number Plate ಹಾಕಿಸಿಲ್ವಾ? ಇರೋದು ಮೂರೇ ದಿನ! ಮೊಬೈಲ್‌ನಲ್ಲಿ ಹೀಗೆ ಬುಕ್ ಮಾಡಿ
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 32 ಡಿ.ಸೆ -17 ಡಿ.ಸೆ
ಮಂಗಳೂರು: 35 ಡಿ.ಸೆ – 22 ಡಿ.ಸೆ
ಚಿತ್ರದುರ್ಗ: 33 ಡಿ.ಸೆ – 18 ಡಿ.ಸೆ
ಗದಗ: 34 ಡಿ.ಸೆ – 17 ಡಿ.ಸೆ
ಹೊನ್ನಾವರ: 33 ಡಿ.ಸೆ- 21 ಡಿ.ಸೆ
ಕಲಬುರಗಿ: 36 ಡಿ.ಸೆ – 22 ಡಿ.ಸೆ
ಬೆಳಗಾವಿ: 34 ಡಿ.ಸೆ – 16 ಡಿ.ಸೆ
ಕಾರವಾರ: 35 ಡಿ.ಸೆ – 22 ಡಿ.ಸೆ