Site icon Vistara News

Karnataka Weather: ಕೆಂಡವಾಗಲಿದೆ ಉತ್ತರ ಕರ್ನಾಟಕ; 40 ಡಿಗ್ರಿ ಸೆಲ್ಸಿಯಸ್‌ ದಾಟಲಿದೆ ತಾಪಮಾನ!

Karnataka Weather Temperature likely to cross 40 degrees Celsius in North Karnataka

ಬೆಂಗಳೂರು: ರಾಜ್ಯಾದ್ಯಂತ ಇನ್ನೆರಡು ದಿನ (ಗುರುವಾರ ಮತ್ತು ಶುಕ್ರವಾರ) ಬಿಸಿಲು ಹೆಚ್ಚಿರಲಿದೆ. ಅಲ್ಲದೆ, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಕೆಂಡವಾಗಿ ಕಾಡಲಿದೆ. ಈಗಿರುವ ತಾಪಮಾನಕ್ಕಿಂತ ಕನಿಷ್ಠ 2-3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಳವಾಗಬಹುದು ಎಂದು ಹವಾಮಾನ ಇಲಾಖೆ (Karnataka Weather Forecast) ತನ್ನ ಮುನ್ಸೂಚನಾ ವರದಿಯಲ್ಲಿ ಹೇಳಿದೆ. ಅಲ್ಲದೆ, ಅಲ್ಲಿನ ಕೆಲವು ಜಿಲ್ಲೆಗಳ ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿಗೆ ಆಗಲಿದೆ ಎಂದು ಅಂದಾಜಿಸಲಾಗಿದೆ.

40 ಡಿಗ್ರಿ ಸೆಲ್ಸಿಯಸ್‌ ಮುಟ್ಟಲಿರುವ ಜಿಲ್ಲೆಗಳು ಇವು!

ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುರುವಾರ ಮತ್ತು ಶುಕ್ರವಾರ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ ಹಾಗೂ ಹಾವೇರಿ, ಕಲಬುರಗಿ ಸೇರಿದಂತೆ ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಗರಿಷ್ಠ ಉಷ್ಣಾಂಶವು 40 ಡಿ.ಸೆ ಗಡಿದಾಟಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಬೆಂಗಳೂರಲ್ಲಿ ಇನ್ನೊಂದು ವಾರ 35 ಡಿಗ್ರಿ ಸೆಲ್ಸಿಯಸ್‌!

ಮುಂದಿನ ಒಂದು ವಾರಗಳ ಕಾಲ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶವು 35 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಅಥವಾ ಅದಕ್ಕಿಂತ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಕನಿಷ್ಠ ಉಷ್ಣಾಂಶವೂ 23 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಂದರೆ, ಸೆಕೆಯ ಪ್ರಮಾಣ ಮತ್ತಷ್ಟು ತೀವ್ರವಾಗಲಿದೆ.

ದಕ್ಷಿಣ ಒಳನಾಡಿನಲ್ಲಿ ಬಿಸಿಲು ತೀವ್ರ

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಹಾಗೂ ವಿಜಯನಗರ, ಚಾಮರಾಜನಗರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಬಹುತೇಕ ಕಡೆ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗಲಿದೆ.

ಇದನ್ನೂ ಓದಿ: Heat stroke: ಹೀಟ್‌ಸ್ಟ್ರೋಕ್‌ನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ!

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 35 ಡಿ.ಸೆ – 22 ಡಿ.ಸೆ
ಮಂಗಳೂರು: 35 ಡಿ.ಸೆ – 24 ಡಿ.ಸೆ
ಚಿತ್ರದುರ್ಗ: 36 ಡಿ.ಸೆ – 23 ಡಿ.ಸೆ
ಗದಗ: 37 ಡಿ.ಸೆ – 22 ಡಿ.ಸೆ
ಹೊನ್ನಾವರ: 34 ಡಿ.ಸೆ- 23 ಡಿ.ಸೆ
ಕಲಬುರಗಿ: 39 ಡಿ.ಸೆ – 26 ಡಿ.ಸೆ
ಬೆಳಗಾವಿ: 36 ಡಿ.ಸೆ – 22 ಡಿ.ಸೆ
ಕಾರವಾರ: 35 ಡಿ.ಸೆ – 23 ಡಿ.ಸೆ

Exit mobile version