Site icon Vistara News

Yoga Day 2022 | ಯೋಗ ದಿನ ನಡೆದ ಕರ್ನಾಟಕದ 5 ಪಾರಂಪರಿಕ ತಾಣಗಳು

modi mysuru yoga

ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನದ (Yoga Day 2022) ನಿಮಿತ್ತ ದೇಶ ಹಾಗೂ ವಿದೇಶಗಳಲ್ಲೂ ಕಾರ್ಯಕ್ರಮಗಳು ಆಯೋಜನೆಯಾಗಿವೆ. ಇವುಗಳಲ್ಲಿ ಕೆಲವು ಸರ್ಕಾರದ ವತಿಯಿಂದ ನಡೆದರೆ ಬಹಳಷ್ಟು ಖಾಸಗಿ ಸಂಘ ಸಂಸ್ಥೆಗಳೂ ಆಯೋಜಿಸಿವೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ೭೫ನೇ ವರ್ಷಾಚರಣೆ ಸಲುವಾಗಿ ದೇಶದ ೭೫ ಪಾರಂಪರಿಕ ತಾಣಗಳನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿತ್ತು.

೮ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಕೇಂದ್ರ ಸರ್ಕಾರ ಆಯ್ಕೆ ಮಾಡಿದ್ದ ಈ ೭೫ ಪಾರಂಪರಿಕ ತಾಣಗಳಲ್ಲಿ ಕರ್ನಾಟಕದ ಐದು ಸ್ಥಳಗಳು ಸೇರಿದ್ದವು. ಈ ಐದು ಸ್ಥಳಗಳಲ್ಲೂ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಉಪಸ್ಥಿತರಿದ್ದು ಯೋಗ ದಿನದಲ್ಲಿ ಭಾಗವಹಿಸಿದರು.

1. ಅರಮನೆ ನಗರಿ ಮೈಸೂರು

ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಕಾರ್ಯಕ್ರಮವೇ ಯೋಗ ದಿನದ ಪ್ರಮುಖ ಕಾರ್ಯಕ್ರಮವಾಗಿರುತ್ತದೆ. ಅದರಂತೆ ಈ ವರ್ಷ ಅರಮನೆ ನಗರ ಮೈಸೂರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಮೈಸೂರು ಅರಮನೆ ಆವರಣದಲ್ಲೆ ನಡೆದ ಕಾರ್ಯಕ್ರಮದಲ್ಲಿ ಸುಮಾರು ೧೫ ಸಾವಿರ ಯೋಗ ಪ್ರಿಯರು ಪ್ರಧಾನಿಯವರ ಜತೆಗೆ ಸಾಮೂಹಿಕ ಯೋಗಾಸನ ನಡೆಸಿದರು. ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೊಟ್‌, ಕೇಂದ್ರ ಆಯುಷ್‌ ಸಚಿವ ಸರ್ವಾನಂದ ಸೋನೊವಾಲ್‌, ಮೈಸೂರು ರಾಜಮನೆತನದ ಪ್ರಮೋದಾ ದೇವಿ ಒಡೆಯರ್‌, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಉಪಸ್ಥಿತರಿದ್ದರು.

ಯೋಗದಿಂದ ಮನಸ್ಸು, ಬುದ್ಧಿ, ದೇಹ ಒಂದಾಗುತ್ತದೆ ಎನ್ನುವಂತೆಯೇ ಯೋಗದಿಂದ ವಿಶ್ವವೇ ಒಂದಾಗಬಹುದು. ಯೋಗವನ್ನು ಒಂದು ಕೆಲಸ, ಜೀವನದ ಒಂದು ಭಾಗ ಎಂದುಕೊಳ್ಳುವ ಬದಲಿಗೆ ಯೋಗವೇ ಜೀವನ ಮಾರ್ಗವಾಗಬೇಕು.

-ನರೇಂದ್ರ ಮೋದಿ, ಪ್ರಧಾನಿ

ಮೈಸೂರಿನ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌

2. ವಿಜಯನಗರ ರಾಜಧಾನಿಯಲ್ಲಿ ಯೋಗ

ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ನೇತೃತ್ವದಲ್ಲಿ 8ನೇ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಐತಿಹಾಸಿಕ ಹಂಪಿಯಲ್ಲಿ ಆಯೋಜಿಸಲಾಗಿತ್ತು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು‌. ಐತಿಹಾಸಿಕ ಸ್ಮಾರಕ ಮಧ್ಯೆ ಯೋಗ ಕಾರ್ಯಕ್ರಮ ಜನಮನ ಸೆಳೆಯಿತು. ಯೋಗಕ್ಕೆ ಆಗಮಿಸಿದ್ದ ಸುಮಾರು ಐದು ಸಾವಿರ ಜನರಿಗೆ ಯೋಗ ಮಾಡಲು ಹಂಪಿಯ ಬಸವಣ್ಣ ಮಂಟಪದಿಂದ ಬಿಷ್ಟಪ್ಪಯ್ಯ ಗೋಪುರದವರೆಗೆ ವ್ಯವಸ್ಥೆ ಮಾಡಲಾಗಿತ್ತು. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ , ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಭಾಗವಹಿಸಿದ್ದರು.

ಪ್ರಾಣಾಯಾಮ, ಯೋಗಾಸನದಿಂದ ದೇಹ, ಮನಸ್ಸಿನ ಆರೋಗ್ಯ ವೃದ್ಧಿ ಸಾಧ್ಯ. ಜಗತ್ತಿನ ಬಹುತೇಕ ಭಾಗದಲ್ಲಿ ಇಂದು ಹಗಲು ಹೆಚ್ಚಾಗಿರುತ್ತದೆ, ಹೀಗಾಗಿ ಯೋಗ ದಿನಾಚರಣೆ ಇಂದೇ ಮಾಡಬೇಕು ಎಂದು ಘೋಷಣೆ ಮಾಡಿದ್ದಾರೆ. ಯೋಗವನ್ನು ನಿತ್ಯ ಜೀವನದ ಭಾಗವನ್ನಾಗಿ ಮಾಡಿಕೊಳ್ಳೋಣ. -ಪ್ರಲ್ಹಾದ ಜೋಶಿ, ಕೇಂದ್ರ ಸಚಿವ

ಹಂಪಿಯಲ್ಲಿ ಆಯೋಜಿಸಿರುವ ಯೋಗ ದಿನದ ಕಾರ್ಯಕ್ರಮ

3. ಪಟ್ಟದಕಲ್ಲಿನಲ್ಲಿ ಸಂಭ್ರಮ

ಬಾಗಲಕೋಟೆ ಜಿಲ್ಲೆ ಬಾದಾಮಿ ತಾ‌ಲಾಕಿನ ಐತಿಹಾಸಿಕ ಪಟ್ಟದಕಲ್ಲು ಗ್ರಾಮದಲ್ಲಿ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ವಿಶ್ವ ಪಾರಂಪರಿಕ ತಾಣದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ, ಡಿಸಿ ಪಿ. ಸುನಿಲ್ ಕುಮಾರ ಸೇರಿದಂತೆ ಗಣ್ಯರು ಭಾಗಿಯಾಗಿದ್ದರು.

ಭಾರತೀಯ ಯೋಗವನ್ನು ಪ್ರಧಾನಿ ಮೋದಿ ಇಡೀ ವಿಶ್ವಕ್ಕೆ ಪರಿಚಯಿಸಿದ್ದಾರೆ. ಇವತ್ತು ಇಡೀ ಜಗತ್ತಿನಲ್ಲಿ ಯೋಗ ದಿನಾಚರಣೆ ಸಂಭ್ರಮದಲ್ಲಿದೆ. ಯೋಗ ಕೇವಲ ಒಂದು ದಿನಕ್ಕೆ ಸೀಮಿತ ಆಗಬಾರದು. ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗ ಆಗಬೇಕು.
– ರಾಜೀವ್‌ ಚಂದ್ರಶೇಖರ್‌

ಪಟ್ಟದಕಲ್ಲಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

4. ಹೊಯ್ಸಳ ರಾಜಧಾನಿಯಲ್ಲಿ ಯೋಗ

ಹಾಸನ ಜಿಲ್ಲೆಯ ಹಳೆಬೀಡಿನ ಹೋಯ್ಸಳೇಶ್ವರ ದೇವಾಲಯದ ಆವರಣದಲ್ಲಿ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಬೇಲೂರು ಶಾಸಕ ಲಿಂಗೇಶ್, ಡಿಸಿ ಆರ್. ಗಿರೀಶ್, ಸ್ಥಳೀಯ ಮುಖಂಡರು, ಶಾಲಾ ಮಕ್ಕಳು, ಸ್ವಾಮೀಜಿಗಳು, ವಿವಿಧ ಯೋಗ ಶಿಕ್ಷಣ ಸಂಸ್ಥೆಯ ಯೋಗ ಪಟುಗಳು, ಜಿಲ್ಲಾಡಳಿತ ಮತ್ತು ಅಧಿಕಾರಿಗಳು ಭಾಗಿಯಾಗಿದ್ದರು.

ಯೋಗ ಎನ್ನುವುದು ತತ್ವಜ್ಞಾನ, ಪ್ರಜ್ಞೆ ಹಾಗೂ ವಿಜ್ಞಾನದ ಸಮ್ಮಿಲನ. ಭಾರತದ ಪ್ರಾಚೀನ ಸಭ್ಯತೆಯನ್ನು ಆಚರಿಸಲು ಇಂದು ಇಡೀ ವಿಶ್ವ ಒಂದಾಗಿರುವುದು ಯೋಗದ ಮಹತ್ವವನ್ನು ತೋರಿಸುತ್ತಿದೆ.
– ಶೋಭಾ ಕರಂದ್ಲಾಜೆ

ಹಳೇಬೀಡಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

5. ಗೋಲ್‌ಗುಂಬಜ್‌ನಲ್ಲಿ ಹಿಜಾಬ್‌ ಧರಿಸಿ ಯೋಗ

ವಿಶ್ವವಿಖ್ಯಾತ ಗೋಲ್‌ಗುಂಬಜ್‌ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅರಣ್ಯ ಮತ್ತು ಆಹಾರ, ನಾಗರಿಕ ಸರಬರಾಜು ಸಚಿವ ಉಮೇಶ ವಿ. ಕತ್ತಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಶಾಸಕ ದೇವಾನಂದ ಚವ್ಹಾಣ್, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಎಸ್.ಪಾಟೀಲ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ ಉಪಸ್ಥಿತರಿದ್ದರು.

ಯೋಗ ಮಾಡಲು ಇತರರಿಗೆ ಪ್ರೇರೇಪಿಸೋಣ. ಇಡೀ ಸಮಾಜವನ್ನು ಒಂದೇ ಸೂತ್ರದಡಿ ತರುವ ಪ್ರಯತ್ನದಡಿ ಯೋಗ ದಿನಾಚರಣೆಗೆ ವಿಶೇಷ ಆದ್ಯತೆ ನೀಡಿದ್ದು, ಹಲವು ಧರ್ಮಿಯರು ಹಲವು ಭಾಷಿಕರನ್ನು ಒಳಗೊಂಡ ಭಾರತ ದೇಶದಲ್ಲಿ ಎಲ್ಲರನ್ನು ಒಗ್ಗೂಡಿಸಲು ಯೋಗದಲ್ಲಿ ಮಾತ್ರ ಅಂತಹ ಶಕ್ತಿ ಇದೆ.
– ಭಗವಂತ ಖೂಬಾ, ಕೇಂದ್ರ ಸಚಿವ

ಗೋಳಗುಮ್ಮಟ ಬಳಿ ವಿದ್ಯಾರ್ಥಿನಿಯರು ಯೋಗಾಸನ ಮಾಡಿದರು

ಇದನ್ನೂ ಓದಿ | Yoga Day 2022 | ಯೋಗ ಸುಸ್ಥಿರ ಬದುಕಿಗೆ ದಾರಿ ಎಂದ ವಿಶ್ವಸಂಸ್ಥೆ

Exit mobile version