ವಿಧಾನಪರಿಷತ್: ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಜಾರಿ ಮಾಡಿ, ನಂತರ ದೇಶಾದ್ಯಂತ ಪ್ರತಿಭಟನೆ ನಂತರ ವಾಪಸ್ ಪಡೆದಿದ್ದರೂ ಕರ್ನಾಟಕದಲ್ಲಿ ಹಿಂಪಡೆಯುವ ಯಾವುದೇ ನಿರ್ಧಾರ ಮಾಡಿಲ್ಲ ಎಂದು ರಾಜ್ಯ ಸರ್ಕಾರ ತೀರ್ಮಾನ ಪ್ರಕಟಿಸಿದೆ.
ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಎಂ. ನಾಗರಾಜ್ ಅವರ ಪ್ರಶ್ನೆ ಕುರಿತು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಉತ್ತರ ನೀಡಿದರು.
ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಕಾಯ್ದೆ ವಾಪಸ್ ಪಡೆಯಲು ಒತ್ತಾಯ ಬಂದಿತ್ತು. ಕೇಂದ್ರ ಸರ್ಕಾರ ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡಿದೆ, ನೀವೂ ಹಿಂಪಡೆಯಿರಿ ಎಂಬ ಒತ್ತಾಯವಿತ್ತು. ಆದರೆ ಹಿಂಪಡೆಯುವುದಿಲ್ಲ ಎಂದರು.
ಇದು ಡಬಲ್ ಸರ್ಕಾರದ ಕಾರ್ಯವೈಖರಿಯೇ ಎಂದು ನಾಗರಾಜ್ ಟೀಕಿಸಿದರು. ಇದು ಸ್ಪೀಡ್ ಇಂಜಿನ್ ಎಂದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ನಾಗರಾಜ್ ಅವರಿಗೆ ಟಿವಿಯಲ್ಲಿ ಡಿಬೇಟ್ ಮಾಡಲು ಹೇಳಿ. ಇದನ್ನೂ ಟಿವಿ ಎಂದುಕೊಂಡಿದ್ದಾರೆ ಎಂದು ಸಭಾಪತಿಯವರತ್ತ ಹೇಳಿದರು.
ಸಹಕಾರ ಸಹಕಾರ ಸಚಿವರು ಉತ್ತರ ಕೊಡಲು ಸಮರ್ಥರಾಗಿದ್ದಾರೆ, ಉಳಿದ ಸಚಿವರು ಏಕೆ ಮಾತನಾಡುತ್ತೀರಾ? ಎಂದು ನಾಗರಾಜ್ ಹೇಳಿದ ನಂತರ ಸೋಮಶೇಖರ್ ಮಾತು ಮುಂದುವರಿಸಿದರು.
ಕಾಯ್ದೆಗಳನ್ನು ಜಾರಿ ಮಾಡಲು ಎರಡು ತಿದ್ದುಪಡಿ ತಂದಿದ್ದೇವೆ. ರೈತರು ಬೆಳೆದ ಬೆಳೆಯನ್ನು ಎಂಪಿಎಂಸಿಯಲ್ಲಿ ಮಾರಾಟ ಮಾಡಬೇಕಿತ್ತು. ಅದನ್ನು ಬಿಟ್ಟು ಬೇರೆ ಕಡೆ ಮಾರಾಟ ಮಾಡಿದರೆ ದಂಡ ಬೀಳುತ್ತಿತ್ತು. ಈಗ ತಿದ್ದುಪಡಿ ನಂತರ, ರೈತರ ಬೆಳೆದ ಬೆಳೆಯನ್ನು ಎಲ್ಲಾದರೂ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಕೊಟ್ಟಿದ್ದೇವೆ.
ದೆಹಲಿಯಲ್ಲಿ ಹಿಂಪಡೆದಿದ್ದಾರೆ ಎಂದರೆ ಅದು ಬೇರೆ ವಿಚಾರ. ಕರ್ನಾಟಕದ ಇತಿಹಾಸದಲ್ಲಿ ಕಾಯ್ದೆಯನ್ನು ಹಿಂಪಡೆದ ಉದಾಹರಣೆ ಇಲ್ಲ. ಆದ್ದರಿಂದ ಕಾಯ್ದೆಗಳನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ | ಎಪಿಎಂಸಿ ಕಾಯ್ದೆ ವಿರುದ್ಧ ಹೋರಾಟ ನಡೆಸಬೇಕಿದೆ: ಶಾಸಕ ಪ್ರಿಯಾಂಕ್ ಖರ್ಗೆ