Site icon Vistara News

Karwar Election Results: ಕಾರವಾರದಲ್ಲಿ ಮತ್ತೆ ಸತೀಶ್‌ ಸೈಲ್‌ ಪಾರುಪತ್ಯ; ಸ್ವಲ್ಪದರಲ್ಲೇ ರೂಪಾಲಿ ಸೋಲು!

Karawar assembly Election results winner Satish sail

ಕಾರವಾರ: ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ (Karwar Election Results) ಹೊರಬಿದ್ದಿದ್ದು, ಕಾಂಗ್ರೆಸ್‌ ಪಕ್ಷದ ಸತೀಶ್‌ ಸೈಲ್‌ ಅವರು ಜಯಗಳಿಸಿದ್ದಾರೆ. ಈ ಬಾರಿ ಇಬ್ಬರು ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರಿಂದ ಒಂದು ರೀತಿಯ ಕುತೂಹಲ ಮೂಡಿತ್ತು. ಈ ಮೂಲಕ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಿ ನಡೆದಿದ್ದರೂ ಅಂತಿಮವಾಗಿ ಸತೀಶ್‌ ಸೈಲ್‌ ಅವರಿಗೆ ವಿಜಯ ಮಾಲೆ ಒಲಿದಿದೆ. ಆದರೆ, ಪ್ರತಿಸ್ಪರ್ಧಿ ಬಿಜೆಪಿಯ ರೂಪಾಲಿ ನಾಯ್ಕ ಅವರು ಕೇವಲ 2,138 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

ಜಯಗಳಿಸಿದ ಸತೀಶ್‌ ಶೈಲ್‌

ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಶಾಸಕ ಸತೀಶ್ ಸೈಲ್ ಅವರು ಕಳೆದ ಬಾರಿ ತಾವು ಮಾಡಿದ್ದ ಅಭಿವೃದ್ಧಿ ಕಾರ್ಯಗಳು ಹಾಗೂ ಈ ಬಾರಿ ಘೋಷಣೆ ಮಾಡಿರುವ ಗ್ಯಾರಂಟಿಯನ್ನು ಮುಂದಿಟ್ಟು ಮತ ಯಾಚನೆ ಮಾಡಿದ್ದರು. ಮತದಾರ ಅಂತಿಮವಾಗಿ ಇವರ ಮೇಲೆ ಒಲವು ತೋರಿ ಜಯದ ಮಾಲೆಯನ್ನು ಹಾಕಿದ್ದಾರೆ. ಸತೀಶ್‌ ಸೈಲ್‌ಗೆ 77,445 ಮತಗಳು ಬಂದಿವೆ.

ಪೈಪೋಟಿ ನೀಡಿ ಸೋತ ರೂಪಾಲಿ ನಾಯ್ಕ

ಹಾಲಿ ಶಾಸಕಿ ರೂಪಾಲಿ ನಾಯ್ಕ ಅವರು ಈ ಬಾರಿ ಅಭಿವೃದ್ಧಿ ಹಾಗೂ ಡಬಲ್‌ ಎಂಜಿನ್‌ ಸರ್ಕಾರಗಳ ಉಪಯೋಗವನ್ನು ಮುಂದಿಟ್ಟು ಚುನಾವಣೆಯನ್ನು ಎದುರಿಸಿದ್ದರು. ಅಲ್ಲದೆ, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದ ಅವರು ಕಾರ್ಯಕರ್ತರಿಗೆ ಸ್ಪಂದಿಸುತ್ತಿದ್ದರು. ಈ ಮೂಲಕ ತಮ್ಮ ಗೆಲುವಿನ ಹಾದಿ ಸುಗಮವಾಗುತ್ತದೆ ಎಂದೇ ಭಾವಿಸಿದ್ದರು. ಈ ನಡುವೆ ಅಂಕೋಲಾಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹ ಬಂದು ಬಹಿರಂಗ ಸಮಾವೇಶ ನಡೆಸಿದ್ದರು. ಇಷ್ಟಾದರೂ ಮತದಾರ ಕಾಂಗ್ರೆಸ್‌ಗೆ ಜೈ ಅಂದಿದ್ದಾನೆ. ರೂಪಾಲಿ ನಾಯ್ಕ ಅವರು 75307 ಮತಗಳನ್ನು ಪಡೆದುಕೊಂಡಿದ್ದಾರೆ.

ಮತ ಒಡೆದ ಚೈತ್ರಾ ಕೊಠಾರಕರ್

ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿದ್ದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಚೈತ್ರಾ ಕೊಠಾರಕರ್ ಅಚ್ಚರಿ ಎನ್ನುವಂತೆ ಕೊನೇ ಕ್ಷಣದಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದರು. ಅವರು ಬೆಂಬಲಿಗರ ಸಹಿತ ಜೆಡಿಎಸ್‌ನ ಸಾಂಪ್ರದಾಯಿಕ ಮತಗಳನ್ನು ಪಡೆದುಕೊಂಡಿದ್ದಾರೆ. ರೂಪಾಲಿ ನಾಯ್ಕ ಅವರ ಹಿನ್ನಡೆಗೆ ಇದೂ ಒಂದು ಕಾರಣವಾಗಿದೆ.

ಕಳೆದ ಚುನಾವಣೆಯಲ್ಲೇನಾಗಿತ್ತು?

ಕಳೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ರೂಪಾಲಿ ನಾಯ್ಕ ಅವರು ಶಾಸಕರಾಗಿದ್ದ ಸತೀಶ್ ಸೈಲ್‌ರನ್ನು ಹಿಂದಿಕ್ಕಿ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಆನಂದ್ ಅಸ್ನೋಟಿಕರ್‌ರನ್ನು ಮಣಿಸಿದ್ದರು. 14 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.

ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

ಕಳೆದ ಬಾರಿಯ ಫಲಿತಾಂಶ ಏನು?
ರೂಪಾಲಿ ನಾಯ್ಕ (ಬಿಜೆಪಿ): 60,339 | ಆನಂದ್ ಅಸ್ನೋಟಿಕರ್ (ಜೆಡಿಎಸ್): 46,275 | ಗೆಲುವಿನ ಅಂತರ: 14,064

ಈ ಬಾರಿಯ ಚುನಾವಣಾ ಫಲಿತಾಂಶ
ಸತೀಶ್‌ ಸೈಲ್‌ (ಕಾಂಗ್ರೆಸ್‌): 77,445 ರೂಪಾಲಿ ನಾಯ್ಕ (ಬಿಜೆಪಿ): 75307 | ಗೆಲುವಿನ‌ ಅಂತರ: 2,138 ಮತಗಳು

ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version