ಬೆಂಗಳೂರು: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಕ್ಕು ಪತ್ರದಲ್ಲಿ ಫೋರ್ಜರಿ (Forgery Case) ಮಾಡಲಾಗಿದೆ ಎಂದು ಹೆಬ್ಬಾಳ ಶಾಸಕ ಬೈರತಿ ಸುರೇಶ್ ಮೇಲೆ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ನಾನು ಶಾಸಕನಾಗಿದ್ದಾಗ ವಸತಿಯ ಹಕ್ಕು ಪತ್ರ ಬಂದಿತ್ತು. ಆದರೆ, ಈ ಪತ್ರಕ್ಕೆ ಈಗ ಬೈರತಿ ಸುರೇಶ್ ತಮ್ಮ ಫೋಟೊ ಹಾಕಿ ಫೋರ್ಜರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ವೀರಪ್ಪ ಮೊಯ್ಲಿ ಅವರು ಇಂತಹ ಕೆಲಸ ಮಾಡುತ್ತಿದ್ದರು, ಈಗ ಬೈರತಿ ಸುರೇಶ್ ಮಾಡುತ್ತಿದ್ದಾರೆ. ಇವರು ಶಾಸಕರಾಗಿ ನಾಲ್ಕು ವರ್ಷ ಕಳೆದಿದ್ದು, ಸಾಧನೆ ಶೂನ್ಯವಾಗಿದೆ. ಪ್ರತಿಯೊಂದು ಕಾಮಗಾರಿಯಲ್ಲಿಯೂ ಭ್ರಷ್ಟಾಚಾರ ನಡೆದಿದೆ. 650 ಕೋಟಿ ರೂ. ಮೌಲ್ಯದ ಕಾಮಗಾರಿಯಲ್ಲಿ ಕೇವಲ ಶೇ. 40ರಷ್ಟೇ ಕೆಲಸ ಆಗಿದೆ. ರಾಧಾಕೃಷ್ಣ ವಾರ್ಡ್‌ನಲ್ಲಿ 50 ಲಕ್ಷ ರೂ. ಬಿಲ್ ಆಗಿದೆ. ಆದರೆ, ಆಗಿರುವ ಕೆಲಸ ಇನ್ನೂ ಶೇ. 40ರಷ್ಟು ಎಂಬುದು ಗಮನಾರ್ಹ. ಈ ಬಗ್ಗೆ ಎಸಿಬಿ ಇಂದ ತನಿಖೆ ಆಗಬೇಕು ಹಾಗೂ ಕಮಿಷನರ್ ನಿಗಾ ವಹಿಸಬೇಕು ಎಂದು ಮಾಜಿ ಸಚಿವರು ಒತ್ತಾಯಿಸಿದರು. ಅಲ್ಲದೆ, ಫೋರ್ಜರಿ ಮಾಡಿದ ಶಾಸಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಬೇಕು ಎಂದು ಕಟ್ಟಾ ಆಗ್ರಹಿಸಿದರು.
ಜಾಮೀನಿನ ಮೇಲೆ ಇದ್ದೇನೆ, ಏನಿವಾಗ..?
ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ್ದ ಶಾಸಕ ಭೈರತಿ ಸುರೇಶ್ ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗೆ ೧೫ ಪ್ರಶ್ನೆಗಳನ್ನು ಮುಂದಿಟ್ಟಿದ್ದು, ಕಟ್ಟಾ ವಿರುದ್ಧದ ಪ್ರಕರಣಗಳು ಏನಾದವು ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಟ್ಟಾ, “ಹೌದು ನಾನೀಗ ಜಾಮೀನಿನ ಮೇಲೆ ಇದ್ದೇನೆ, ಏನಿವಾಗ..?” ಎಂದು ಮರು ಪ್ರಶ್ನೆ ಹಾಕಿದ್ದಾರೆ.
ಇದನ್ನೂ ಓದಿ: 52 ನಿಗಮ, ಮಂಡಳಿಗಳ ನೇಮಕ ರದ್ದು: ಬಿಜೆಪಿ ಕಾರ್ಯಕರ್ತರಿಗೆ ಅವಕಾಶ?