ನವ ದೆಹಲಿ: ಆಪರೇಷನ್ ಕಮಲದಿಂದಾಗಿ ಜೆಡಿಎಸ್ ತೊರೆದು ಬಿಜೆಪಿ ಸೇರಿ ರೇಷ್ಮೆ, ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವರಾಗಿರುವ ಕೆ.ಆರ್. ಪೇಟೆ ಕ್ಷೇತ್ರದ ಶಾಸಕ ಕೆ.ಸಿ. ನಾರಾಯಣ ಗೌಡ (KC Narayana Gowda) ಈ ವಿಧಾನಸಭಾ ಚುನಾವಣೆಯಲ್ಲಿ (Karnataka Elections) ಪಕ್ಷ ತೊರೆಯುವ ವದಂತಿ ಇರುವ ಬೆನ್ನಲ್ಲೇ ಅವರೀಗ ಗುರುವಾರ (ಮಾ. 23) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ನವ ದೆಹಲಿಯ ಅವರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಬುಧವಾರವಷ್ಟೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS yediyurappa) ಅವರನ್ನು ಭೇಟಿಯಾಗಿದ್ದರು. ಯುಗಾದಿ ಹಬ್ಬಕ್ಕೆ ಶುಭಾಶಯ ಕೋರುವ ನೆಪದಲ್ಲಿ ಬಿಎಸ್‌ವೈ ಅವರನ್ನು ಭೇಟಿಯಾಗಿ ಕೆಲವು ಹೊತ್ತು ಚರ್ಚೆ ನಡೆಸಿದ್ದರು. ಈಗ ಅಮಿತ್ ಶಾ ಅವರನ್ನು ಭೇಟಿ ಮಾಡುವ ಮೂಲಕ ಬಿಜೆಪಿಯಲ್ಲೇ ಉಳಿಯುವ ಸಂದೇಶವನ್ನು ರವಾನೆ ಮಾಡಿದ್ದಾರೆ.
ಅಮಿತ್ ಶಾ ಸೂಚನೆಗೆ ಮೇರೆಗೆ ನಾರಾಯಣಗೌಡ ದೆಹಲಿಗೆ ತೆರಳಿದ್ದು, ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಶಾ ಜತೆ ಕೆಲ ಕಾಲ ಚರ್ಚೆ ನಡೆಸಿದ್ದು, ಪಕ್ಷದಲ್ಲಿ ತಮಗಿದ್ದ ಅಸಮಾಧಾನವನ್ನು ತೋಡಿಕೊಂಡಿದ್ದಾರೆನ್ನಲಾಗಿದೆ.
ಇದನ್ನೂ ಓದಿ: Shravanabelagola Swameeji : ಚಂದ್ರಗಿರಿಯ ತಪ್ಪಲಲ್ಲಿ ಪಂಚಭೂತಗಳಲ್ಲಿ ಲೀನವಾಯಿತು ಬೆಳಗೊಳದ ಮಹಾಬೆಳಕು
ಹಳೇ ಮೈಸೂರಲ್ಲಿ ಪಕ್ಷ ಸಂಘಟಿಸಿ
ಪಕ್ಷದಲ್ಲೇ ಇದ್ದುಕೊಂಡು ಮಂಡ್ಯ ಭಾಗದಲ್ಲಿ ಪಕ್ಷ ಸಂಘಟಿಸುವಂತೆ ಅಮಿತ್ ಶಾ ಇದೇ ವೇಳೆ ಸೂಚನೆ ನೀಡಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ನೆಲೆ ಸಿಗುತ್ತಿದೆ. ಇಂತಹ ಹೊತ್ತಿನಲ್ಲಿ ಪಕ್ಷ ಬಿಡುವ ಬಗ್ಗೆ ಚರ್ಚೆ ಮಾಡಬೇಡಿ. ಇದರಿಂದ ಪಕ್ಷಕ್ಕೆ ಮುಜುಗರ ಮತ್ತು ಹಿನ್ನಡೆಯಾಗುತ್ತದೆ. ನೀವು ಪಕ್ಷದಲ್ಲಿದ್ದು ಸಂಘಟನೆಗೆ ಹೆಚ್ಚು ಒತ್ತು ಕೊಡಿ ಎಂದು ಅಮಿತ್ ಶಾ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಯಡಿಯೂರಪ್ಪ ಭೇಟಿಯಾಗಿದ್ದ ಕೆ.ಸಿ. ನಾರಾಯಣ ಗೌಡ
ಕೆ.ಸಿ. ನಾರಾಯಣ ಗೌಡ ಅವರು ಬುಧವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬುಧವಾರ ಭೇಟಿಯಾಗಿ ಯುಗಾದಿ ಹಬ್ಬಕ್ಕೆ ಶುಭಾಶಯ ಕೋರಿದ್ದರು. ಈ ವೇಲೆ ಕೆಲವು ಹೊತ್ತು ಚರ್ಚೆ ನಡೆಸಿದ್ದರು.
ಮಂಡ್ಯದ ಕೆ.ಆರ್. ಪೇಟೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಚಿವ ಕೆ.ಸಿ. ನಾರಾಯಣ ಗೌಡ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಭಾರಿ ಕುತೂಹಲವನ್ನು ಸೃಷ್ಟಿಸಿತ್ತು. ಅದರಲ್ಲೂ ಬಿ.ವೈ. ವಿಜಯೇಂದ್ರ ಅವರ ಉಪಸ್ಥಿತಿಯಲ್ಲಿ ಭೇಟಿ ನಡೆದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಬಳಿಕ ನಾರಾಯಣ ಗೌಡ ಅವರು ಪಕ್ಷದಲ್ಲೇ ಉಳಿಯುವಂತೆ ಬೇಕಿರುವ ಸಹಕಾರ ನೀಡುವುದಾಗಿ ಬಿಎಸ್‌ವೈ ಭರವಸೆ ನೀಡಿದ್ದಾರೆನ್ನಲಾಗಿದೆ. ಅಲ್ಲದೆ, ಈ ಬಗ್ಗೆ ಸ್ವತಃ ಯಡಿಯೂರಪ್ಪ ಗುರುವಾರ (ಮಾ. 23) ಪ್ರತಿಕ್ರಿಯೆ ನೀಡಿದ್ದು, ನಾರಾಯಣ ಗೌಡ ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Bank FD vs KVP : ಬ್ಯಾಂಕ್ ಠೇವಣಿ, ಕಿಸಾನ್ ವಿಕಾಸ್ ಪತ್ರದಲ್ಲಿ ನಿಮ್ಮ ಹಣ ಡಬಲ್ ಆಗಲು ಎಷ್ಟು ವರ್ಷ ಬೇಕು?
ಬೊಮ್ಮಾಯಿ ಸೇರಿ ಹಲವು ನಾಯಕರ ವಿರುದ್ಧ ಗೌಡರ ಮುನಿಸು
ಕೆ.ಸಿ. ನಾರಾಯಣ ಗೌಡ ಅವರು ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಹಲವು ನಾಯಕರ ಮುನಿಸಿಕೊಂಡಿದ್ದರು. ಆಪರೇಷನ್ ಕಮಲದಲ್ಲಿ ಬಿಜೆಪಿಗೆ ಬಂದು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಅವರಿಗೆ ಈ ಬಾರಿ ಮತ್ತೆ ಕಮಲ ಪಕ್ಷದಿಂದ ನಿಂತು ಗೆಲುವು ಸಾಧಿಸುವುದು ಕಷ್ಟ ಎಂದು ಅನಿಸಿತ್ತು ಎಂದು ಹೇಳಲಾಗಿದೆ. ಇದಕ್ಕಾಗಿ ಅವರು ಕಾಂಗ್ರೆಸ್ ಪಕ್ಷದ ಕಡೆಗೆ ಒಲವು ತೋರಿದ್ದರು. ಆರ್. ಅಶೋಕ್ ಅವರ ನೇಮಕವನ್ನು ಹಿಂದೆ ಪಡೆದುಕೊಂಡು ತಮ್ಮನ್ನು ಮಂಡ್ಯ ಜಿಲ್ಲೆಯ ಉಸ್ತುವಾರಿ ಮಾಡಿದಾಗಲೂ ಅವರು ಸಿಟ್ಟು ತೋಡಿಕೊಂಡಿದ್ದರು.
ಕೆ.ಸಿ. ನಾರಾಯಣ ಗೌಡ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಬಗ್ಗೆ ಸುದ್ದಿಯಾಗಿದ್ದಾಗ ಅದನ್ನು ಹಲವು ಬಿಜೆಪಿ ನಾಯಕರು, ಸಚಿವರೇ ಒಪ್ಪಿಕೊಂಡಿದ್ದರು. ಕೋಟ ಶ್ರೀನಿವಾಸ ಪೂಜಾರಿ ಅವರಂತೂ ನಾರಾಯಣ ಗೌಡ ಅವರು ದುಡುಕುತ್ತಿದ್ದಾರೆ ಅನ್ನಿಸುತ್ತದೆ ಎಂದೇ ಹೇಳಿದ್ದರು. ಕೆಲವರು ಅವರು ಎಲ್ಲೂ ಹೋಗದಂತೆ ನೋಡಿಕೊಳ್ಳುತ್ತೇವೆ ಎಂಬ ಧೈರ್ಯದ ಮಾತು ಆಡಿದ್ದರು.
ಕಳೆದ ಕೆಲವು ದಿನಗಳಿಂದ ನಾರಾಯಣ ಗೌಡ ಅವರ ಕಾಂಗ್ರೆಸ್ ಸೇರ್ಪಡೆ ಸುದ್ದಿಗಳು ವಿರಳವಾಗಿದ್ದವು. ಒಂದು ಕಡೆದ ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯಕ್ಕೆ ಆಗಮಿಸಿ ಹವಾ ಎಬ್ಬಿಸಿರುವುದು, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರಿರುವುದು ಪಕ್ಷದಲ್ಲಿ ಹೊಸ ಹುಮ್ಮಸ್ಸು ಮೂಡಿದೆ. ಇದನ್ನು ಗಮನಿಸಿ ಕೆ.ಸಿ. ನಾರಾಯಣ ಗೌಡ ಅವರು ಕಾಂಗ್ರೆಸ್ ಸೇರ್ಪಡೆಗೆ ಇಟ್ಟಿರುವ ಕಾಲನ್ನು ಹಿಂದಿಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: 13 ವರ್ಷಗಳ ಬಳಿಕ ಬಿಜೆಪಿಗೆ ಒಲಿದ ಕಲಬುರಗಿ ಪಾಲಿಕೆ ಗದ್ದುಗೆ; ಖರ್ಗೆಗೆ ತವರಲ್ಲಿ ಹಿನ್ನಡೆ, ಫಲ ನೀಡಿದ ರೇವೂರ ಪ್ರಯತ್ನ
ಕೆ.ಸಿ ನಾರಾಯಣ ಗೌಡ ಅವರು ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲಿಗರು. ಅದಕ್ಕಿಂತಲೂ ಹೆಚ್ಚಾಗಿ ಬಿ.ವೈ. ವಿಜಯೇಂದ್ರ ಅವರ ಮೇಲೆ ನಂಬಿಕೆ ಇಟ್ಟವರು. ಕೆ.ಆರ್. ಪೇಟೆಯಲ್ಲಿ ಪಡೆದ ಉಪಚುನಾವಣಾ ಗೆಲುವಿನ ಹಿಂದೆ ವಿಜಯೇಂದ್ರರ ಪಾಲು ದೊಡ್ಡದಿದೆ ಎಂದೇ ಹೇಳುತ್ತಿದ್ದರು. ಈ ನಡುವೆ ವಿಜಯೇಂದ್ರ ಅವರ ಸಮ್ಮುಖದಲ್ಲೇ ಬಿಎಸ್‌ವೈ ಅವರನ್ನು ಭೇಟಿಯಾಗಿರುವುದು ಪಕ್ಷದಲ್ಲೇ ಉಳಿಯುವ ಸೂಚನೆ ಎಂದು ಹೇಳಲಾಗುತ್ತಿದೆ.