Site icon Vistara News

KCC | ಕಂಗಾಲ ಕಾಂಗ್ರೆಸ್‌ ಕಂಪನಿ; ಬಿಜೆಪಿಯಿಂದ ಕೌಂಟರ್‌ ಅಟ್ಯಾಕ್‌

KCC Poster

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್‌ ಆರೋಪವನ್ನು ಮಾಡಿರುವ ಕಾಂಗ್ರೆಸ್‌ ಪೇಸಿಎಂ ಅಭಿಯಾನವನ್ನು ನಡೆಸುತ್ತಿರುವ ಬೆನ್ನಲ್ಲೇ, ಬಿಜೆಪಿ ಕೌಂಟರ್‌ ಅಟ್ಯಾಕ್‌ ಮಾಡಲು ಆರಂಭಿಸಿದೆ. ಅದೇ ಪೇಟಿಎಂ ಫಾರ್ಮ್ಯಾಟ್‌ ಅನ್ನು ಇಟ್ಟುಕೊಂಡು “ಕಂಗಾಲ ಕಾಂಗ್ರೆಸ್‌ ಕಂಪನಿ” (KCC) ಪೋಸ್ಟರ್‌ ಅನ್ನು ಹರಿಬಿಟ್ಟಿದೆ.

ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಾಯಕರು 40% ಕಮಿಷನ್‌ ಆರೋಪವನ್ನು ಮಾಡುತ್ತಲೇ ಬಂದಿದ್ದರು. ಅಲ್ಲದೆ, ಪೇಸಿಎಂ ಎಂಬ ಪೋಸ್ಟರ್‌ ಸಿದ್ಧಪಡಿಸಿ ಮೊದಲಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಇದಕ್ಕೆ ವ್ಯಾಪಕ ಪ್ರತಿಕ್ರಿಯೆ ಸಿಗುತ್ತಿದ್ದಂತೆ ಪೋಸ್ಟರ್‌ ಅನ್ನು ಮುದ್ರಿಸಿ ಬೆಂಗಳೂರಿನ ಹಲವು ಕಡೆ ಅಂಟಿಸಲಾಗಿತ್ತು. ಇದು ಬಿಜೆಪಿಯನ್ನು ತೀವ್ರ ಮುಜಗರಕ್ಕೀಡು ಮಾಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರವು ತನಿಖೆಗೆ ಆದೇಶ ನೀಡಿದ್ದರಿಂದ ಕೆಪಿಸಿಸಿ ಮಾಧ್ಯಮ ಸಂವಹನದ ಕೆಲವರನ್ನು ಸೇರಿದಂತೆ ಪೋಸ್ಟರ್‌ ಅಂಟಿಸಿದ್ದ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದ್ದರು. ವಿಚಾರಣೆ ಬಳಿಕ ಹಲವರನ್ನು ಬಂಧಿಸಲಾಗಿತ್ತು.

ಕಾಂಗ್ರೆಸ್‌ ಕಾರ್ಯಕರ್ತರ ಬಂಧನ ಪ್ರಕರಣವು ರಾಜ್ಯ ಕಾಂಗ್ರೆಸ್‌ ನಾಯಕರನ್ನು ಕೆರಳಿಸಿದ್ದು, ತಾವೇ ಖುದ್ದು ಪೋಸ್ಟರ್‌ ಅಂಟಿಸುವ ಅಭಿಯಾನಕ್ಕೆ ಚಾಲನೆ ನೀಡುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ಮತ್ತಷ್ಟು ಜಟಿಲಗೊಳ್ಳುವ ಸೂಚನೆಯನ್ನು ನೀಡಿದ್ದರು. ಈಗ ಈ ಎಲ್ಲ ಬೆಳವಣಿಗೆಗಳ ಮಧ್ಯೆ ಬಿಜೆಪಿಯಿಂದಲೂ ಕೌಂಟರ್‌ ಅಟ್ಯಾಕ್‌ ನಡೆದಿದ್ದು, “ಕಂಗಾಲ ಕಾಂಗ್ರೆಸ್‌ ಕಂಪನಿ” ಎಂಬ ಶೀರ್ಷಿಕೆ ಅಡಿ ಹಲವು ಪೋಸ್ಟರ್‌ಗಳನ್ನು ಹರಿಬಿಟ್ಟಿದೆ.

ಪೋಸ್ಟರ್‌ನಲ್ಲಿ ಯಾರು ಯಾರಿದ್ದಾರೆ?
ಬರ್ನಾಲ್‌ ಬ್ರದರ್ಸ್‌ ಸಹಯೋಗದಲ್ಲಿ “ಕಂಗಾಲ ಕಾಂಗ್ರೆಸ್‌ ಕಂಪನಿ” ಎಂಬ ಪೋಸ್ಟರ್‌ ಅನ್ನು ಸಿದ್ಧಪಡಿಸಿದ್ದು, ಕ್ಯೂಆರ್‌ ಕೋಡ್‌ನಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಫೋಟೊವನ್ನು ಹಾಕಲಾಗಿದೆ. ಅಲ್ಲದೆ, “ಪೇ ಟು ಕಾಂಗ್ರೆಸ್‌ ಮೇಡಮ್‌” (PAY2 Congress Madam – KCC) ಎಂದು ಬರೆಯಲಾಗಿದೆ. ಇದಕ್ಕೆ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್‌ ಮುಖಂಡರಾದ ಕೆ.ಜೆ.ಜಾರ್ಜ್‌, ರಾಮಲಿಂಗಾ ರೆಡ್ಡಿ ಫೋಟೊಗಳನ್ನು ಅಳವಡಿಸಲಾಗಿದೆ.

ಇದನ್ನೂ ಓದಿ | PayCM | ಪೇಸಿಎಂ ಅಭಿಯಾನ ರಾಜ್ಯ ಮಟ್ಟಕ್ಕೆ ವಿಸ್ತರಣೆ; ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ನೇತೃತ್ವದಲ್ಲಿ ಚಾಲನೆ?

Exit mobile version