ಬೆಂಗಳೂರು: ಇದುವರೆಗೆ ಬೇರೆ ಬೇರೆ ವೇದಿಕೆಗಳಲ್ಲಿ ನಿಂತು ಮಾತಿಗೆ ಮಾತು ಬೆಳೆಸುತ್ತಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಮತ್ತು ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ (Dr. CN Ashwathanarayana) ಅವರು ಮಂಗಳವಾರ ಒಂದೇ ವೇದಿಕೆಯಲ್ಲಿ ಕುಳಿತು ಸ್ವಾಮೀಜಿಗಳ ಸಮ್ಮುಖದಲ್ಲೇ ನೀನಾ-ನಾನಾ ಎಂಬ ರೀತಿಯಲ್ಲಿ ವಾಗ್ಯುದ್ಧ ನಡೆಸಿದರು. ಕೊನೆಗೆ ಆದಿಚುಂಚನಗಿರಿ ಮಠ ಸಂಸ್ಥಾನದ ಶ್ರೀ ನಿರ್ಮನಾಲನಂದನಾಥ ಸ್ವಾಮೀಜಿಗಳೇ (Sri Nirmalanandanatha swameeji) ಮಧ್ಯ ಪ್ರವೇಶ ಮಾಡಿ ಒಕ್ಕಲಿಗ ಸಮುದಾಯದ ನಾಯಕರಾದ ನೀವು ಈ ರೀತಿ ಜಗಳ ಆಡಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಸದಾಶಿವನಗರದ ರಮಣಮಹರ್ಷಿ ಉದ್ಯಾನವನದಲ್ಲಿ ನಡೆದ ಕೆಂಪೇಗೌಡ ಜಯಂತಿ (Kempegowda Jayanthi) ಕಾರ್ಯಕ್ರಮದಲ್ಲಿ ಈ ಮಾತಿನ ಕಾಳಗ ನಡೆಯಿತು. ಡಿ.ಕೆ. ಶಿವಕುಮಾರ್ ಮತ್ತು ಅಶ್ವತ್ಥನಾರಾಯಣ ಅವರು ಚುನಾವಣೆಗೆ ಮೊದಲು ಬೇರೆ ಬೇರೆ ವೇದಿಕೆಗಳಲ್ಲಿ ನಿಂತು ಪರಸ್ಪರ ಬೈದಾಡುತ್ತಿದ್ದರು. ಡಿ.ಕೆ. ಶಿವಕುಮಾರ್ ಅವರು ಅಶ್ವತ್ಥನಾರಾಯಣ ಅವರನ್ನು ಕುರಿತು ನಿಮಗೂ ರಾಮನಗರಕ್ಕೂ ಏನು ಸಂಬಂಧ ಎಂದು ಕೇಳಿದ್ದರು. ಅದಕ್ಕೆ ಪ್ರತಿಯಾಗಿ ಅಶ್ವತ್ಥನಾರಾಯಣ ಅವರು ಡಿ.ಕೆ. ಶಿವಕುಮಾರ್‌ಗೂ ಬೆಂಗಳೂರಿಗೂ ಏನು ಸಂಬಂಧ ಎಂದು ಕೇಳಿದ್ದರು. ಅದರಲ್ಲೂ ಉಸ್ತುವಾರಿ ಸಚಿವರಾದ ಬಳಿಕವೂ ಈ ಮಾತು ಮುಂದುವರಿದಿತ್ತು.
ಮಂಗಳವಾರ ಈ ಇಬ್ಬರೂ ನಾಯಕರು ಬೆಂಗಳೂರಿನಲ್ಲಿ ನಡೆದ ಕೆಂಪೇಗೌಡ ದಿನಾಚರಣೆ ದಿನಾಚರಣೆಯಲ್ಲಿ ಮುಖಾಮುಖಿಯಾದರು. ತನ್ನ ವಿರುದ್ಧ ಆಡಿದ ಮಾತಿಗೆ ಪ್ರತಿಕ್ರಿಯೆ ನೀಡಲು ಕಾಯುತ್ತಿದ್ದ ಡಿ.ಕೆ. ಶಿವಕುಮಾರ್ ಕೆಂಪೇಗೌಡ ದಿನಾಚರಣೆ ವೇದಿಕೆಯನ್ನು ಬಳಸಿಕೊಂಡರು.
ಡಿ.ಕೆ ಶಿವಕುಮಾರ್ ಅವರು ಹೇಳಿದ್ದೇನು?
ʻʻಅಶ್ವಥ್ ನಾರಾಯಣ ಅವರಿಗೆ ಒಂದು ವಿಷಯ ಹೇಳೋಕೆ ಇಷ್ಟಪಡ್ತೀನಿ. ತಾವು ಇತಿಹಾಸ ಓದಬೇಕು. ನಾನು ರಾಜಾಜಿ ನಗರದಲ್ಲಿ 6ನೇ ತರಗತಿಗೆ ಬಂದು ಎನ್‌ಪಿಎಸ್‌ನಲ್ಲಿ ಓದಿದವನು. ಬೆಂಗಳೂರಿಗೆ ನನಗೂ ನಂಟಿದೆ. ನೀವು ರಾಜಕೀಯವಾಗಿ ಮಾತನಾಡಿದ್ದೀರಿ. ಆದರೂ ನಿಮಗೆ ನನ್ನ ಇತಿಹಾಸ ಗೊತ್ತಿಲ್ಲʼʼ ಎಂದು ಹೇಳಿದರು ಡಿ.ಕೆ. ಶಿವಕುಮಾರ್.
ʻʻನಾನು ಇದೇ ಪಾರ್ಕ್‌ನಲ್ಲಿ ನಾನು ಹಲಸಿನ ಮರ ನೆಟ್ಟಿದ್ದೀನಿ. ಈಗ ಎಲ್ಲವೂ ಬೆಳೆದು ನಿಂತಿದೆʼʼ ಎಂದು ಸದಾಶಿವ ನಗರ ಪಾರ್ಕ್‌ಗೂ ನನಗೂ ಸಂಬಂಧ ಸಂಬಂಧವಿದೆ ಎಂದು ಸಾಬೀತುಮಾಡಿದರು.
ನನ್ನ ಫ್ರೆಂಡ್‌ಗಲ್ಲದೆ ಇನ್ಯಾರಿಗೆ ಹೇಳೋಕೆ ಸಾಧ್ಯ?
ʻʻಇದನ್ನೆಲ್ಲ ನನ್ನ ಫ್ರೆಂಡ್‌ಗೆ ಅಲ್ಲದೆ ಇನ್ಯಾರಿಗೆ ಹೇಳೋಕೆ ಸಾಧ್ಯ? ಚರಿತ್ರೆ ಗೊತ್ತಿಲ್ಲ ಅಂದ್ರೆ ಚರಿತ್ರೆ ಸೃಷ್ಟಿ ಮಾಡೋಕೆ ಸಾಧ್ಯವಿಲ್ಲ. ಇತಿಹಾಸ ಗೊತ್ತಾಗಬೇಕಲ್ಲ. ನಾನು 6ನೇ ಕ್ಲಾಸ್‌ಗೆ ಬಂದು ಎನ್‌ಪಿಎಸ್‌ನಲ್ಲಿ ಓದಿದ್ದೇನೆ. ಸುಮ್ಮನೇ ಬಂದಿದ್ದೀನಾ? ಕೆಲವೊಂದು ಸಂದರ್ಭಗಳಲ್ಲಿ ಗೊತ್ತಿಲ್ಲದೆ ಇರೋದನ್ನ ನೆನಪಿಸಬೇಕಾಗುತ್ತದೆʼʼ ಎಂದು ಡಿ.ಕೆ.ಶಿವಕುಮಾರ್ ಅಶ್ವತ್ಥನಾರಾಯಣ ಅವರನ್ನೇ ಉದ್ದೇಶಿಸಿ ಹೇಳಿದರು.
ʻʻಬೆಂಗಳೂರಿನಲ್ಲಿ ಕೆಂಪೇಗೌಡರು ಯಾಕೆ ಹುಟ್ಟಿದರು? ಕೆಂಗಲ್ ಹನುಮಂತಪ್ಪನವರು, ಬಾಲಗಂಗಾಧರನಾಥ ಸ್ವಾಮೀಜಿ ಯಾಕೆ ಹುಟ್ಟಿದ್ರು ಅಂತೆಲ್ಲ ಚರ್ಚೆ ಮಾಡೋಕೆ ಆಗಲ್ಲ. ಈ ಪುಣ್ಯಭೂಮಿಯಲ್ಲಿ ಹುಟ್ಟಿದ್ದಾರೆ. ಅವರವರ ಧರ್ಮಕಾರ್ಯ ನಡೆಸಿದ್ದಾರೆʼʼ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಕೆಂಪೇಗೌಡರ ಕುರಿತ ಸಭೆಗೆ ಒಕ್ಕಲಿಗರೇ ಯಾಕೆ?
ʻʻಮೊನ್ನೆ ನಡೆದ ಕೆಂಪೇಗೌಡರ ಜಯಂತಿ ಆಚರಣೆ ಕುರಿತ ಸಭೆಯನ್ನು ನೋಡಿ ನನಗೆ ನಾಚಿಕೆಯಾಯಿತು. ಸಭೆಯಲ್ಲಿದ್ದವರಲ್ಲಿ 75% ಒಕ್ಕಲಿಗರು. ಕೆಂಪೇಗೌಡ್ರು ಒಕ್ಕಲಿಗರಿಗೆ ಮಾತ್ರ ಸೇರಿದವರಲ್ಲ. ಕೆಂಪೇಗೌಡರು ಜಾತಿ, ಧರ್ಮ ಮೀರಿದವರು. ಬೆಂಗಳೂರು ಅಭಿವೃದ್ಧಿ ಮಾಡಿದರು. ಪೇಟೆಗಳನ್ನು ಕಟ್ಟಿದರು. ಜಾತಿ ನೋಡಿ ಪೇಟೆ ನಿರ್ಮಾಣ ಮಾಡಿದ್ರಾ?ʼʼ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ನಾನೂ ಕೆಂಪೇಗೌಡ, ರಾಮನಗರದವನೆ ಎಂದ ಅಶ್ವತ್ಥನಾರಾಯಣ
ಡಿ.ಕೆ. ಶಿವಕುಮಾರ್ ಅವರ ಬಳಿಕ ಮಾತನಾಡಿದ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು, ʻʻನಾನು ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಲು ಒಂದು ಕಾರಣವಿದೆ. ಅವರು ನನಗೂ ರಾಮನಗರಕ್ಕೂ ಏನು ಸಂಬಂಧ ಅಂತ ಪ್ರಶ್ನೆ ಮಾಡಿದ್ರು. ಯಾವ ಸರ್ಕಾರ ಕೂಡ ಕೊಡದಷ್ಟು ಯೋಜನೆಗಳನ್ನು ನಾವು ರಾಮನಗರಕ್ಕೆ ಕೊಟ್ಟಿದ್ದೇವೆ. ರಾಮನಗರ ಅಭಿವೃದ್ಧಿ ಮಾಡಿದ್ದೇವೆ. ಕೆಂಪಾಂಬುದಿಯಲ್ಲಿ ಇವರು ಘೋಷಣೆ ಮಾತ್ರ ಮಾಡಿದರು. ಆದರೆ ನಾವು ಅಭಿವೃದ್ಧಿ ಮಾಡಿದ್ದೇವೆʼʼ ಎಂದರು.
ʻʻರಾಮನಗರ ನನ್ನ ಪೂರ್ವಿಕರ ಕರ್ಮಭೂಮಿ. ನನ್ನ ಹುಟ್ಟು ಹೆಸರು ಕೆಂಪೇಗೌಡ. ಮುಂದಿನ ದಿನಗಳಲ್ಲಿ ಎಲ್ಲಾ ಇತಿಹಾಸ ಗೊತ್ತಾಗಲಿದೆ. ನನ್ನ ಕೊಡುಗೆ ಏನು ಅಂತ ಕೆಲಸ ಮಾತನಾಡುತ್ತದೆʼʼ ಎಂದರು ಅಶ್ವತ್ಥ ನಾರಾಯಣ.
ʻʻನಾನು ಯಾವುದೇ ವಿಚಾರನ್ನೂ ವ್ಯಕ್ತಿಗತವಾಗಿ ಮಾತನಾಡಿಲ್ಲ. ನಾನು ದ್ವೇಷ ಮಾತನಾಡೋಕೆ ಬಂದಿಲ್ಲ. ನಾಡಿಗೆ ಒಳಿತು ಮಾಡಬೇಕು ಎಂದು ರಾಜಕೀಯಕ್ಕೆ ಬಂದಿದ್ದೇವೆ. ಅವ್ರು ಹೇಳಿದ್ದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದೇನೆ ಅಷ್ಟೇ. ಸುಮ್ಮನೇ ರಾಜಕೀಯದಲ್ಲಿ ಇದ್ದರೆ ಆಗುತ್ತಾ? ಏನು ಹೇಳಬೇಕೊ ಅದನ್ನು ಹೇಳಿದ್ದೇನೆ. ಯಾವುದೇ ವೈಮನಸ್ಸು ಇಲ್ಲʼʼ ಎಂದು ಅಶ್ವತ್ಥನಾರಾಯಣ ಹೇಳಿದರು.
ಇದನ್ನೂ ಓದಿ: Anti drugs Day: ಮುಂದೊಂದು ದಿನ ನೀವೂ ಡಿ.ಕೆ. ಶಿವಕುಮಾರ್ ಆಗಬಹುದು: ವಿದ್ಯಾರ್ಥಿಗಳಿಗೆ ಕರೆ ನೀಡಿದ ಡಿಸಿಎಂ
ʻʻಎಲ್ಲೃೂ ಅಭಿವೃದ್ಧಿಯನ್ನು ಮಾಡಿ ಮಾತನಾಡಲಿ. ನಾಡಪ್ರಭು ಕೆಂಪೇಗೌಡರು ಮಾಡಿದ 5% ಅಭಿವೃದ್ಧಿಯನ್ನು ಈ ಸರ್ಕಾರ ಮಾಡಲಿ. ನೋಡೊಣ ಇವರ 5 ವರ್ಷ ಸರ್ಕಾರ ಇರುತ್ತದಲ್ವಾ?ʼʼ ಎಂದರು.
ʻʻದ್ವೇಷ ಬೆಳೆಸಿಕೊಳ್ಳಬೇಡಿ ಎಂದು ಗುರುಹಿರಿಯರು ಯಾವಾಗಲೂ ಹೇಳ್ತಾರೆ. ನಾನು ಡಿಕೆಶಿವಕುಮಾರ್ ಅವ್ರಿಗೆ ಶುಭ ಕೋರುತ್ತೇನೆ. ನೀವು ಸಾಧನೆ ಮಾಡಿ. ಕೆಂಪೇಗೌಡರ ಪ್ರೇರಣೆ ತೆಗೆದುಕೊಳ್ಳಿ. ಅಭಿವೃದ್ಧಿ ಮಾಡಿ, ಒಳ್ಳೇದಾಗುತ್ತದೆʼʼ ಎಂದರು.
ನಾಯಕರ ಜಗಳಕ್ಕೆ ಶ್ರೀಗಳ ಸಂಧಾನ
ಈ ನಡುವೆ ಒಕ್ಕಲಿಗ ನಾಯಕರಿಬ್ಬರು ವೇದಿಕೆಯಲ್ಲೇ ಪರಸ್ಪರ ಮಾತಿನ ವರಸೆ ತೋರಿಸಿದ ಬಳಿಕ ಆದಿಚುಂಚನಗಿರಿ ಮಠ ಸಂಸ್ಥಾನದ ನಿರ್ಮಲಾನಂದನಾಥ ಶ್ರೀಗಳು ದ್ಚೇಷ ಬೆಳೆಸಿಕೊಳ್ಳದಂತೆ ಸಂದೇಶ ನೀಡಿದರು.
ʻʻಪರಸ್ಪರ ದ್ವೇಷ ಬೇಡ, ಜಟಾಪಟಿ ಬೇಡ. ಅಭಿವೃದ್ಧಿಗೆ ಪರಸ್ಪರ ಸಹಕಾರ ಇರಲಿʼʼ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಸೂಚನೆ ನೀಡಿದರು. ಇಬ್ಬರೂ ದ್ವೇಷ ಬೆಳೆಸಿಕೊಳ್ಳಬೇಡಿ ಎಂದು ಮನವಿ ಮಾಡಿದರು.