ಕರ್ನಾಟಕ
Kempegowda Jayanti: ಬೆಂಗಳೂರು ನಂದು; ಸ್ವಾಮೀಜಿ ಸಮ್ಮುಖದಲ್ಲೇ ಡಿಕೆಶಿ-ಅಶ್ವತ್ಥನಾರಾಯಣ ಫೈಟ್
Kempegowda Jayanti: ಹಾಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಅವರು ಕೆಂಪೇಗೌಡ ಜಯಂತಿ ವೇದಿಕೆಯಲ್ಲೇ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಇದಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಅವರೇ ಸಾಕ್ಷಿಯಾದರು.
ಬೆಂಗಳೂರು: ಇದುವರೆಗೆ ಬೇರೆ ಬೇರೆ ವೇದಿಕೆಗಳಲ್ಲಿ ನಿಂತು ಮಾತಿಗೆ ಮಾತು ಬೆಳೆಸುತ್ತಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಮತ್ತು ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ (Dr. CN Ashwathanarayana) ಅವರು ಮಂಗಳವಾರ ಒಂದೇ ವೇದಿಕೆಯಲ್ಲಿ ಕುಳಿತು ಸ್ವಾಮೀಜಿಗಳ ಸಮ್ಮುಖದಲ್ಲೇ ನೀನಾ-ನಾನಾ ಎಂಬ ರೀತಿಯಲ್ಲಿ ವಾಗ್ಯುದ್ಧ ನಡೆಸಿದರು. ಕೊನೆಗೆ ಆದಿಚುಂಚನಗಿರಿ ಮಠ ಸಂಸ್ಥಾನದ ಶ್ರೀ ನಿರ್ಮನಾಲನಂದನಾಥ ಸ್ವಾಮೀಜಿಗಳೇ (Sri Nirmalanandanatha swameeji) ಮಧ್ಯ ಪ್ರವೇಶ ಮಾಡಿ ಒಕ್ಕಲಿಗ ಸಮುದಾಯದ ನಾಯಕರಾದ ನೀವು ಈ ರೀತಿ ಜಗಳ ಆಡಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಸದಾಶಿವನಗರದ ರಮಣಮಹರ್ಷಿ ಉದ್ಯಾನವನದಲ್ಲಿ ನಡೆದ ಕೆಂಪೇಗೌಡ ಜಯಂತಿ (Kempegowda Jayanthi) ಕಾರ್ಯಕ್ರಮದಲ್ಲಿ ಈ ಮಾತಿನ ಕಾಳಗ ನಡೆಯಿತು. ಡಿ.ಕೆ. ಶಿವಕುಮಾರ್ ಮತ್ತು ಅಶ್ವತ್ಥನಾರಾಯಣ ಅವರು ಚುನಾವಣೆಗೆ ಮೊದಲು ಬೇರೆ ಬೇರೆ ವೇದಿಕೆಗಳಲ್ಲಿ ನಿಂತು ಪರಸ್ಪರ ಬೈದಾಡುತ್ತಿದ್ದರು. ಡಿ.ಕೆ. ಶಿವಕುಮಾರ್ ಅವರು ಅಶ್ವತ್ಥನಾರಾಯಣ ಅವರನ್ನು ಕುರಿತು ನಿಮಗೂ ರಾಮನಗರಕ್ಕೂ ಏನು ಸಂಬಂಧ ಎಂದು ಕೇಳಿದ್ದರು. ಅದಕ್ಕೆ ಪ್ರತಿಯಾಗಿ ಅಶ್ವತ್ಥನಾರಾಯಣ ಅವರು ಡಿ.ಕೆ. ಶಿವಕುಮಾರ್‌ಗೂ ಬೆಂಗಳೂರಿಗೂ ಏನು ಸಂಬಂಧ ಎಂದು ಕೇಳಿದ್ದರು. ಅದರಲ್ಲೂ ಉಸ್ತುವಾರಿ ಸಚಿವರಾದ ಬಳಿಕವೂ ಈ ಮಾತು ಮುಂದುವರಿದಿತ್ತು.
ಮಂಗಳವಾರ ಈ ಇಬ್ಬರೂ ನಾಯಕರು ಬೆಂಗಳೂರಿನಲ್ಲಿ ನಡೆದ ಕೆಂಪೇಗೌಡ ದಿನಾಚರಣೆ ದಿನಾಚರಣೆಯಲ್ಲಿ ಮುಖಾಮುಖಿಯಾದರು. ತನ್ನ ವಿರುದ್ಧ ಆಡಿದ ಮಾತಿಗೆ ಪ್ರತಿಕ್ರಿಯೆ ನೀಡಲು ಕಾಯುತ್ತಿದ್ದ ಡಿ.ಕೆ. ಶಿವಕುಮಾರ್ ಕೆಂಪೇಗೌಡ ದಿನಾಚರಣೆ ವೇದಿಕೆಯನ್ನು ಬಳಸಿಕೊಂಡರು.
ಡಿ.ಕೆ ಶಿವಕುಮಾರ್ ಅವರು ಹೇಳಿದ್ದೇನು?
ʻʻಅಶ್ವಥ್ ನಾರಾಯಣ ಅವರಿಗೆ ಒಂದು ವಿಷಯ ಹೇಳೋಕೆ ಇಷ್ಟಪಡ್ತೀನಿ. ತಾವು ಇತಿಹಾಸ ಓದಬೇಕು. ನಾನು ರಾಜಾಜಿ ನಗರದಲ್ಲಿ 6ನೇ ತರಗತಿಗೆ ಬಂದು ಎನ್‌ಪಿಎಸ್‌ನಲ್ಲಿ ಓದಿದವನು. ಬೆಂಗಳೂರಿಗೆ ನನಗೂ ನಂಟಿದೆ. ನೀವು ರಾಜಕೀಯವಾಗಿ ಮಾತನಾಡಿದ್ದೀರಿ. ಆದರೂ ನಿಮಗೆ ನನ್ನ ಇತಿಹಾಸ ಗೊತ್ತಿಲ್ಲʼʼ ಎಂದು ಹೇಳಿದರು ಡಿ.ಕೆ. ಶಿವಕುಮಾರ್.
ʻʻನಾನು ಇದೇ ಪಾರ್ಕ್‌ನಲ್ಲಿ ನಾನು ಹಲಸಿನ ಮರ ನೆಟ್ಟಿದ್ದೀನಿ. ಈಗ ಎಲ್ಲವೂ ಬೆಳೆದು ನಿಂತಿದೆʼʼ ಎಂದು ಸದಾಶಿವ ನಗರ ಪಾರ್ಕ್‌ಗೂ ನನಗೂ ಸಂಬಂಧ ಸಂಬಂಧವಿದೆ ಎಂದು ಸಾಬೀತುಮಾಡಿದರು.
ನನ್ನ ಫ್ರೆಂಡ್‌ಗಲ್ಲದೆ ಇನ್ಯಾರಿಗೆ ಹೇಳೋಕೆ ಸಾಧ್ಯ?
ʻʻಇದನ್ನೆಲ್ಲ ನನ್ನ ಫ್ರೆಂಡ್‌ಗೆ ಅಲ್ಲದೆ ಇನ್ಯಾರಿಗೆ ಹೇಳೋಕೆ ಸಾಧ್ಯ? ಚರಿತ್ರೆ ಗೊತ್ತಿಲ್ಲ ಅಂದ್ರೆ ಚರಿತ್ರೆ ಸೃಷ್ಟಿ ಮಾಡೋಕೆ ಸಾಧ್ಯವಿಲ್ಲ. ಇತಿಹಾಸ ಗೊತ್ತಾಗಬೇಕಲ್ಲ. ನಾನು 6ನೇ ಕ್ಲಾಸ್‌ಗೆ ಬಂದು ಎನ್‌ಪಿಎಸ್‌ನಲ್ಲಿ ಓದಿದ್ದೇನೆ. ಸುಮ್ಮನೇ ಬಂದಿದ್ದೀನಾ? ಕೆಲವೊಂದು ಸಂದರ್ಭಗಳಲ್ಲಿ ಗೊತ್ತಿಲ್ಲದೆ ಇರೋದನ್ನ ನೆನಪಿಸಬೇಕಾಗುತ್ತದೆʼʼ ಎಂದು ಡಿ.ಕೆ.ಶಿವಕುಮಾರ್ ಅಶ್ವತ್ಥನಾರಾಯಣ ಅವರನ್ನೇ ಉದ್ದೇಶಿಸಿ ಹೇಳಿದರು.
ʻʻಬೆಂಗಳೂರಿನಲ್ಲಿ ಕೆಂಪೇಗೌಡರು ಯಾಕೆ ಹುಟ್ಟಿದರು? ಕೆಂಗಲ್ ಹನುಮಂತಪ್ಪನವರು, ಬಾಲಗಂಗಾಧರನಾಥ ಸ್ವಾಮೀಜಿ ಯಾಕೆ ಹುಟ್ಟಿದ್ರು ಅಂತೆಲ್ಲ ಚರ್ಚೆ ಮಾಡೋಕೆ ಆಗಲ್ಲ. ಈ ಪುಣ್ಯಭೂಮಿಯಲ್ಲಿ ಹುಟ್ಟಿದ್ದಾರೆ. ಅವರವರ ಧರ್ಮಕಾರ್ಯ ನಡೆಸಿದ್ದಾರೆʼʼ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಕೆಂಪೇಗೌಡರ ಕುರಿತ ಸಭೆಗೆ ಒಕ್ಕಲಿಗರೇ ಯಾಕೆ?
ʻʻಮೊನ್ನೆ ನಡೆದ ಕೆಂಪೇಗೌಡರ ಜಯಂತಿ ಆಚರಣೆ ಕುರಿತ ಸಭೆಯನ್ನು ನೋಡಿ ನನಗೆ ನಾಚಿಕೆಯಾಯಿತು. ಸಭೆಯಲ್ಲಿದ್ದವರಲ್ಲಿ 75% ಒಕ್ಕಲಿಗರು. ಕೆಂಪೇಗೌಡ್ರು ಒಕ್ಕಲಿಗರಿಗೆ ಮಾತ್ರ ಸೇರಿದವರಲ್ಲ. ಕೆಂಪೇಗೌಡರು ಜಾತಿ, ಧರ್ಮ ಮೀರಿದವರು. ಬೆಂಗಳೂರು ಅಭಿವೃದ್ಧಿ ಮಾಡಿದರು. ಪೇಟೆಗಳನ್ನು ಕಟ್ಟಿದರು. ಜಾತಿ ನೋಡಿ ಪೇಟೆ ನಿರ್ಮಾಣ ಮಾಡಿದ್ರಾ?ʼʼ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ನಾನೂ ಕೆಂಪೇಗೌಡ, ರಾಮನಗರದವನೆ ಎಂದ ಅಶ್ವತ್ಥನಾರಾಯಣ
ಡಿ.ಕೆ. ಶಿವಕುಮಾರ್ ಅವರ ಬಳಿಕ ಮಾತನಾಡಿದ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು, ʻʻನಾನು ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಲು ಒಂದು ಕಾರಣವಿದೆ. ಅವರು ನನಗೂ ರಾಮನಗರಕ್ಕೂ ಏನು ಸಂಬಂಧ ಅಂತ ಪ್ರಶ್ನೆ ಮಾಡಿದ್ರು. ಯಾವ ಸರ್ಕಾರ ಕೂಡ ಕೊಡದಷ್ಟು ಯೋಜನೆಗಳನ್ನು ನಾವು ರಾಮನಗರಕ್ಕೆ ಕೊಟ್ಟಿದ್ದೇವೆ. ರಾಮನಗರ ಅಭಿವೃದ್ಧಿ ಮಾಡಿದ್ದೇವೆ. ಕೆಂಪಾಂಬುದಿಯಲ್ಲಿ ಇವರು ಘೋಷಣೆ ಮಾತ್ರ ಮಾಡಿದರು. ಆದರೆ ನಾವು ಅಭಿವೃದ್ಧಿ ಮಾಡಿದ್ದೇವೆʼʼ ಎಂದರು.
ʻʻರಾಮನಗರ ನನ್ನ ಪೂರ್ವಿಕರ ಕರ್ಮಭೂಮಿ. ನನ್ನ ಹುಟ್ಟು ಹೆಸರು ಕೆಂಪೇಗೌಡ. ಮುಂದಿನ ದಿನಗಳಲ್ಲಿ ಎಲ್ಲಾ ಇತಿಹಾಸ ಗೊತ್ತಾಗಲಿದೆ. ನನ್ನ ಕೊಡುಗೆ ಏನು ಅಂತ ಕೆಲಸ ಮಾತನಾಡುತ್ತದೆʼʼ ಎಂದರು ಅಶ್ವತ್ಥ ನಾರಾಯಣ.
ʻʻನಾನು ಯಾವುದೇ ವಿಚಾರನ್ನೂ ವ್ಯಕ್ತಿಗತವಾಗಿ ಮಾತನಾಡಿಲ್ಲ. ನಾನು ದ್ವೇಷ ಮಾತನಾಡೋಕೆ ಬಂದಿಲ್ಲ. ನಾಡಿಗೆ ಒಳಿತು ಮಾಡಬೇಕು ಎಂದು ರಾಜಕೀಯಕ್ಕೆ ಬಂದಿದ್ದೇವೆ. ಅವ್ರು ಹೇಳಿದ್ದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದೇನೆ ಅಷ್ಟೇ. ಸುಮ್ಮನೇ ರಾಜಕೀಯದಲ್ಲಿ ಇದ್ದರೆ ಆಗುತ್ತಾ? ಏನು ಹೇಳಬೇಕೊ ಅದನ್ನು ಹೇಳಿದ್ದೇನೆ. ಯಾವುದೇ ವೈಮನಸ್ಸು ಇಲ್ಲʼʼ ಎಂದು ಅಶ್ವತ್ಥನಾರಾಯಣ ಹೇಳಿದರು.
ಇದನ್ನೂ ಓದಿ: Anti drugs Day: ಮುಂದೊಂದು ದಿನ ನೀವೂ ಡಿ.ಕೆ. ಶಿವಕುಮಾರ್ ಆಗಬಹುದು: ವಿದ್ಯಾರ್ಥಿಗಳಿಗೆ ಕರೆ ನೀಡಿದ ಡಿಸಿಎಂ
ʻʻಎಲ್ಲೃೂ ಅಭಿವೃದ್ಧಿಯನ್ನು ಮಾಡಿ ಮಾತನಾಡಲಿ. ನಾಡಪ್ರಭು ಕೆಂಪೇಗೌಡರು ಮಾಡಿದ 5% ಅಭಿವೃದ್ಧಿಯನ್ನು ಈ ಸರ್ಕಾರ ಮಾಡಲಿ. ನೋಡೊಣ ಇವರ 5 ವರ್ಷ ಸರ್ಕಾರ ಇರುತ್ತದಲ್ವಾ?ʼʼ ಎಂದರು.
ʻʻದ್ವೇಷ ಬೆಳೆಸಿಕೊಳ್ಳಬೇಡಿ ಎಂದು ಗುರುಹಿರಿಯರು ಯಾವಾಗಲೂ ಹೇಳ್ತಾರೆ. ನಾನು ಡಿಕೆಶಿವಕುಮಾರ್ ಅವ್ರಿಗೆ ಶುಭ ಕೋರುತ್ತೇನೆ. ನೀವು ಸಾಧನೆ ಮಾಡಿ. ಕೆಂಪೇಗೌಡರ ಪ್ರೇರಣೆ ತೆಗೆದುಕೊಳ್ಳಿ. ಅಭಿವೃದ್ಧಿ ಮಾಡಿ, ಒಳ್ಳೇದಾಗುತ್ತದೆʼʼ ಎಂದರು.
ನಾಯಕರ ಜಗಳಕ್ಕೆ ಶ್ರೀಗಳ ಸಂಧಾನ
ಈ ನಡುವೆ ಒಕ್ಕಲಿಗ ನಾಯಕರಿಬ್ಬರು ವೇದಿಕೆಯಲ್ಲೇ ಪರಸ್ಪರ ಮಾತಿನ ವರಸೆ ತೋರಿಸಿದ ಬಳಿಕ ಆದಿಚುಂಚನಗಿರಿ ಮಠ ಸಂಸ್ಥಾನದ ನಿರ್ಮಲಾನಂದನಾಥ ಶ್ರೀಗಳು ದ್ಚೇಷ ಬೆಳೆಸಿಕೊಳ್ಳದಂತೆ ಸಂದೇಶ ನೀಡಿದರು.
ʻʻಪರಸ್ಪರ ದ್ವೇಷ ಬೇಡ, ಜಟಾಪಟಿ ಬೇಡ. ಅಭಿವೃದ್ಧಿಗೆ ಪರಸ್ಪರ ಸಹಕಾರ ಇರಲಿʼʼ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಸೂಚನೆ ನೀಡಿದರು. ಇಬ್ಬರೂ ದ್ವೇಷ ಬೆಳೆಸಿಕೊಳ್ಳಬೇಡಿ ಎಂದು ಮನವಿ ಮಾಡಿದರು.
ಕರ್ನಾಟಕ
Rowdism in Ramanagara : ರೋಡಲ್ಲೇ ರೌಡಿಸಂ; ಚುನಾವಣಾಧಿಕಾರಿಗಳ ಮೇಲೆ ಕಾರು ಹಾಯಿಸಿ ಬ್ಯಾಲೆಟ್ ಪೇಪರ್ ಲೂಟಿ
Rowdism in Ramanagara : ರಾಮನಗರದ ಒಂದು ಹಾಲು ಉತ್ಪಾದಕರ ಸಂಘಕ್ಕೆ ಚುನಾವಣೆ ನಡೆಸಬಾರದು ಎಂದು ಆಗ್ರಹಿಸಿದ ರೌಡಿಗಳ ಗ್ಯಾಂಗ್ ಚುನಾವಣಾ ಅಧಿಕಾರಿಗಳ ಮೇಲೆಯೇ ದಾಳಿ ನಡೆಸಿ ಬ್ಯಾಲೆಟ್ ಪೇಪರ್ ಎತ್ತಿಕೊಂಡು ಹೋಗಿದೆ. ಆರೋಪಿಗಳನ್ನು ಗುರುತಿಸಲಾಗಿದೆ.
ಬೆಂಗಳೂರು: ಹಾಲು ಉತ್ಪಾದಕರ ಸಂಘದ (Milk Producers Union) ನಿರ್ದೇಶಕರ ಆಯ್ಕೆಗಾಗಿ (Election of directors) ಬಂದ ಚುನಾವಣಾಧಿಕಾರಿಗಳ ಮೇಲೆ ಕಾರು ಹಾಯಿಸಿ (Attack on Election officers) ಅವರ ಕೈಯಲ್ಲಿದ್ದ ಬ್ಯಾಲೆಟ್ ಪ್ಯಾಪರ್ (Ballet Paper), ಲ್ಯಾಪ್‌ಟಾಪ್, ಮೊಬೈಲ್ ಮತ್ತು ಇತರ ಸಾಮಗ್ರಿ ದರೋಡೆ ಮಾಡಿದ ಭಯಾನಕ ಘಟನೆಯೊಂದು ರಾಮನಗರ ಜಿಲ್ಲೆಯ (Ramanagara News) ಮಾಗಡಿ ತಾಲೂಕಿನ ಹೊಸಪಾಳ್ಯ ಬಳಿ ನಡೆದಿದೆ.
ಇಲ್ಲಿನ ಹುಳ್ಳೇನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ನಿರ್ದೇಶಕ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯುವುದಿತ್ತು. ಚುನಾವಣಾಧಿಕಾರಿ ಉಮೇಶ್ ಮತ್ತು ಉಷಾ ಅವರು ಹಾಲು ಉತ್ಪಾದಕರ ಸಂಘದತ್ತ ಹೋಗುವಾಗ ಅವರ ಮೇಲೆ ದಾಳಿ ಮಾಡಲಾಗಿದೆ. ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಬಲರಾಮ್ ಹಾಗೂ ಸಹಚರರು ಈ ಕೃತ್ಯ ಮಾಡಿದ್ದು ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮಾಗಡಿ-ಕುಣಿಗಲ್ ರಸ್ತೆಯಲ್ಲಿ ಈ ದಾಳಿ ನಡೆದಿದೆ.
ಹಾಡುಹಗಲೇ ಭಯಾನಕ ಕೃತ್ಯ
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹುಳ್ಳೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಾಲು ಉತ್ಪಾದಕರ ಸಂಘದ ಚುನಾವಣೆಗೆ ಎಲ್ಲವೂ ಸಿದ್ಧತೆ ನಡೆದಿತ್ತು. ಆದರೆ, ಪಂಚಾಯಿತಿ ಅಧ್ಯಕ್ಷ ಬಲರಾಮ್ ಮತ್ತು ಇತರ ಚುನಾವಣೆ ನಡೆಸಬಾರದು ಎಂದು ಪಟ್ಟು ಹಿಡಿದಿದ್ದರು. ಆದರೆ, ದಿನಾಂಕ ನಿಗದಿಯಾಗಿ ಎಲ್ಲ ವ್ಯವಸ್ಥೆಗಳೂ ನಡೆದಿದ್ದವು.
ಉಮೇಶ್ ಮತ್ತು ಉಷಾ ಎಂಬ ಇಬ್ಬರು ಚುನಾವಣಾ ಅಧಿಕಾರಿಗಳಾಗಿ ನಿಯುಕ್ತರಾಗಿದ್ದರು. ಬುಧವಾರ ಅವರು ಕಾರಿನಲ್ಲಿ ಹಾಲು ಉತ್ಪಾದಕರ ಸಂಘದತ್ತ ಸಾಗುತ್ತಿದ್ದಂತೆಯೇ ಪುಂಡರ ತಂಡವೊಂದು ಅವರ ಕಾರನ್ನು ಅಡ್ಡಗಟ್ಟಿತ್ತು. ಮಾರಕಾಸ್ತ್ರಗಳನ್ನು ತೋರಿಸಿ ಕಾರಿನಿಂದ ಇಳಿಸಿತು.
ಚುನಾವಣಾಧಿಕಾರಿಗಳ ಕಾರನ್ನು ಅಡ್ಡಗಟ್ಟಿ ಅವರನ್ನು ಕೆಳಗೆ ಇಳಿಸಿದ ದುಷ್ಟರು ಕಾರಿನಲ್ಲಿದ್ದ ಬ್ಯಾಲೆಟ್ ಪೇಪರ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಕಿತ್ತುಕೊಂಡಿತು. ಉಮೇಶ್ ಅವರು ತಮ್ಮ ಕೈಯಿಂದ ಕಿತ್ತುಕೊಂಡ ಪೇಪರ್‌ಗಳನ್ನು ಕಸಿದುಕೊಳ್ಳಲು ಅವರನ್ನು ಬೆನ್ನಟ್ಟಿದರು. ಆದರೆ ದುಷ್ಕರ್ಮಿಗಳು ತಾವು ಬಂದಿದ್ದ ಸ್ಯಾಂಟ್ರೋ ಕಾರಿನಲ್ಲಿ ಕುಳಿತು ಪರಾರಿಯಾದರು. ಈ ಹಂತದಲ್ಲಿ ಕೆಲವರು ಕಾರನ್ನು ನಿಲ್ಲಿಸಲು ಯತ್ನಿಸಿದರು. ಆದರೆ, ದುಷ್ಕರ್ಮಿಗಳು ಅವರನ್ನು ತಳ್ಳಿ ಮುಂದಕ್ಕೆ ಸಾಗಿದರು. ಈ ಹಂತದಲ್ಲಿ ಕಾರಿನ ಮುಂಭಾಗದಲ್ಲಿದ್ದ ಉಷಾ ಅವರ ಮೇಲೆಯೇ ಕಾರು ನುಗ್ಗಿತ್ತು. ಕಾರು ಡಿಕ್ಕಿಯಾಗಿ ಮುಗ್ಗರಿಸಿ ಬಿದ್ದ ಅವರು ರಸ್ತೆಗೆ ಉರುಳಿದರು.
ಮಾಜಿ ಅಧ್ಯಕ್ಷ ಬಲರಾಮ್ ಮತ್ತು ಟೀಮ್, ಕಾರಿಗಾಗಿ ಶೋಧ
ಇದು ಮಾಜಿ ಅಧ್ಯಕ್ಷ ಬಲರಾಂ ಮತ್ತು ಅವನ ಸಹಚರರ ಕೃತ್ಯ ಎಂದು ಪೊಲೀಸರಿಗೆ ತಿಳಿದುಬಂದಿದೆ. ಸ್ಥಳೀಯರು ಕೂಡಾ ಇದನ್ನು ದೃಢೀಕರಿಸಿದ್ದಾರೆ.
ಹುಲ್ಲೇನಹಳ್ಳಿ ನಾಲ್ಕು ವ್ಯಕ್ತಿಗಳಿಂದ ಕೃತ್ಯ ನಡೆಸಿದೆ. ಗ್ರಾಪಂ ಮಾಜಿ ಅಧ್ಯಕ್ಷ ಬಲರಾಮ ಬಳಗದಲ್ಲಿ ಗುರುತಿಸಿಕೊಂಡಿದ್ದ ಹೇಮಂತ್, ಸೀನು, ದಾಸೇಗೌಡ, ಮತ್ತೊಬ್ಬನಿಂದ ಈ ಕೃತ್ಯ ನಡೆದಿದೆ ಎಂದು ಎಸ್‌ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ. ಆರೋಪಿಗಳು ಮತ್ತು ಸ್ಯಾಂಟ್ರೋ ಕಾರು ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು.
ಮಾಜಿ ಶಾಸಕ ಮಂಜು ಕುಮ್ಮಕ್ಕು ಆರೋಪ
ಈ ನಡುವೆ, ದರೋಡೆಗೆ ಜೆಡಿಎಸ್ ಮಾಜಿ ಶಾಸಕ ಎ ಮಂಜು ಕುಮ್ಮಕ್ಕು ನೀಡಿದ್ದಾರೆ. ಮಾಜಿ ಅಧ್ಯಕ್ಷ ಬಲರಾಮ್ ತನ್ನ ಸಹಚರರ ಮೂಲಕ ಈ ಕೃತ್ಯ ನಡೆಸಿದ್ದಾನೆ ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶ್ರೀನಿವಾಸ ಮೂರ್ತಿ ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಪ್ರವೀಣ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
23 ವರ್ಷದ ಬಳಿಕ ಚುನಾವಣೆ ನಡೆಯುತ್ತಿತ್ತು!
ಹುಲ್ಲೇನಹಳ್ಳಿ ಹಾಲು ಉತ್ಪಾದಕರ ಸಹಾಕಾರ ಸಂಘದ ನಿರ್ದೇಶಕರ ಚುನಾವಣೆ 23 ವರ್ಷಗಳ ಬಳಿಕ ನಡೆಯುತ್ತಿದೆ. ಇಲ್ಲಿ ಚುನಾವಣೆ ನಡೆಯಬೇಕು ಎನ್ನುವುದು ಬಹು ವರ್ಷಗಳ ಬೇಡಿಕೆಯಾಗಿತ್ತು. ಆದರೆ, ಹುಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಲರಾಮ್ ಹಾಗೂ ಬೆಂಬಲಿಗರ ತಂಡವು ಹಾಲು ಉತ್ಪಾದಕರ ಸಂಘದ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಈ ಕೃತ್ಯವನ್ನು ಎಸಗಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ
MP Muniswamy : ಸಚಿವ ಬೈರತಿ, ಶಾಸಕ ನಾರಾಯಣಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟ ಸಂಸದ ಮುನಿಸ್ವಾಮಿ
MP Muniswamy : ಎರಡು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ತಮ್ಮ ಮೇಲೆ ಅಸಾಂವಿಧಾನಿಕವಾಗಿ ನಡೆದುಕೊಂಡಿದ್ದಲ್ಲದೆ, ಹಲ್ಲೆಗೆ ಮುಂದಾಗಲಾಗಿದೆ ಎಂದು ಕೋಲಾರ ಸಂಸದ ಮುನಿಸ್ವಾಮಿ ಅವರು ಕೋಲಾರ ಶಾಸಕ ನಾರಾಯಣಸ್ವಾಮಿ, ಉಸ್ತುವಾರಿ ಸಚಿವ ಬೈರತಿ ಸುರೇಶ್, ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಬೆಂಗಳೂರು: ಕೋಲಾರ ಶಾಸಕ ನಾರಾಯಣಸ್ವಾಮಿ (Kolar MLA Narayanaswamy) ಈಚೆಗೆ ಕಾರ್ಯಕ್ರಮವೊಂದರಲ್ಲಿ ತಮ್ಮ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆಗೆ ಮುಂದಾಗಿದ್ದಾರೆ. ಜತೆಗೆ ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್ (Kolar Incharge Minister Byrathi Suresh), ಕೋಲಾರ ಎಸ್‌ಪಿ ಅಸಾಂವಿಧಾನಿಕವಾಗಿ ನಡೆದುಕೊಂಡಿದ್ದಾರೆ ಎಂದು ಕೋಲಾರ ಸಂಸದ ಮುನಿಸ್ವಾಮಿ (Kolar MP Muniswamy) ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಕೋಲಾರ ಸಂಸದ ಮುನಿಸ್ವಾಮಿ ಮೇಲೆ ಹಲ್ಲೆ ಆರೋಪ ಪ್ರಕರಣ ಈಗ ರಾಜ್ಯಪಾಲರ ಅಂಗಳ ತಲುಪಿದೆ. ಉಸ್ತುವಾರಿ ಸಚಿವ ಬೈರತಿ ಸುರೇಶ್, ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧವೂ ಸಂಸದ ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ (MLC Chalavadi Narayanaswamy), ಕೇಶವ್ ಪ್ರಸಾದ್ ಸೇರಿದಂತೆ 30 ಮಂದಿ ನಿಯೋಗ ತೆರಳಿ ದೂರು ನೀಡಿದೆ.
ಜನಪ್ರತಿನಿಧಿ ಮೇಲೆ ಅಸಂವಿಧಾನಿಕವಾಗಿ ನಡೆದುಕೊಂಡಿದ್ದಾರೆ. ಹಾಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ.
ನನ್ನನ್ನೂ ಸೇರಿದಂತೆ, ಎಲ್ಲರ ವಿರುದ್ಧ ತನಿಖೆ ಆಗಲಿ: ಕೋಲಾರ ಸಂಸದ ಮುನಿಸ್ವಾಮಿ
ಸಂವಿಧಾನದಲ್ಲಿ ಆಡಳಿತ ಪಕ್ಷಕ್ಕೆ ಎಷ್ಟು ಅಧಿಕಾರ ಇದೆಯೋ, ವಿಪಕ್ಷಗಳಿಗೂ ಅಷ್ಟೇ ಹಕ್ಕು ಇದೆ. ಇಡೀ ಕೋಲಾರ ಜಿಲ್ಲೆಯಲ್ಲಿ ಇರುವ ಸಮಸ್ಯೆಯನ್ನು ಬಗೆಹರಿಸಿದ್ದೇವೆ ಅಂತ ಹೇಳಿದ್ದರು. ರೈತರ ಜಮೀನನ್ನು ಕಬಳಿಸುವ ಕೆಲಸ ಮಾಡಿದ್ದಾರೆ. ರೈತರ ವಿರುದ್ಧ ಒಕ್ಕಲೆಬ್ಬಿಸುವ ಕೆಲಸವನ್ನು ಮಾಡಿದ್ದೀರಿ. ರಾಜಕೀಯ ವೇದಿಕೆ ಮೇಲೂ ಭೂ ಕಳ್ಳರಿದ್ದಾರೆ ಎಂದು ನಾನು ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ ಎಂದು ಕೋಲಾರ ಸಂಸದ ಮುನಿಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ನನ್ನನ್ನು ಹೊರಗೆ ದಬ್ಬಿಸುವ ಕೆಲಸ ಮಾಡಿದ್ದಾರೆ
ಎಸ್‌ಎನ್ ಸಿಟಿ ಅಂತ ಲೇಔಟ್ ಮಾಡಿದ್ದಾರೆ. ನನ್ನನ್ನೂ ಸೇರಿದಂತೆ, ಎಲ್ಲರ ವಿರುದ್ಧ ತನಿಖೆ ಆಗಲಿ ಅಂತ ಹೇಳಿದೆ. ಆಗ ಕೋಲಾರ ಶಾಸಕ ನಾರಾಯಣಸ್ವಾಮಿ ಹಾಗೂ ಉಸ್ತುವಾರಿ ಸಚಿವರು ನನ್ನನ್ನು ಹೊರಗೆ ದಬ್ಬಿಸುವ ಕೆಲಸ ಮಾಡಿದರು. ಹಾಗಾಗಿ ಉಸ್ತುವಾರಿ ಸಚಿವ ಬೈರತಿ ಸುರೇಶ್, ಶಾಸಕ ನಾರಾಯಣಸ್ವಾಮಿ ಹಾಗೂ ಕೋಲಾರ ಎಸ್‌ಪಿ ವಿರುದ್ಧ ದೂರು ನೀಡಿದ್ದೇನೆ ಎಂದು ಸಂಸದ ಮುನಿಸ್ವಾಮಿ ಹೇಳಿದರು.
ಇದನ್ನೂ ಓದಿ: BJP JDS alliance : ಸೆಕ್ಯುಲರಿಸಂ ಅನ್ನು ನಾಶ ಮಾಡಿದ್ದೇ ಕಾಂಗ್ರೆಸ್: ಎಚ್.ಡಿ. ಕುಮಾರಸ್ವಾಮಿ ಕಿಡಿ
ರೈತರ ಪರವಾಗಿ ಹೋರಾಟ ಮುಂದುವರಿಯಲಿದೆ
ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡುವಂತೆ ಮನವಿ ಮಾಡಲಿದ್ದೇವೆ. ದೆಹಲಿಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರಿಗೂ ದೂರು ನೀಡುತ್ತೇನೆ. ಎಷ್ಟೇ ಗದಾ ಪ್ರಹಾರ ಮಾಡಿದರೂ ನಮ್ಮ ರೈತರ ಪರವಾಗಿ ನನ್ನ ಹೋರಾಟ ನಡೆಯಲಿದೆ ಎಂದು ಸಂಸದ ಮುನಿಸ್ವಾಮಿ ಇದೇ ವೇಳೆ ಹೇಳಿದರು.
ಕರ್ನಾಟಕ
BJP JDS alliance : ಸೆಕ್ಯುಲರಿಸಂ ಅನ್ನು ನಾಶ ಮಾಡಿದ್ದೇ ಕಾಂಗ್ರೆಸ್: ಎಚ್.ಡಿ. ಕುಮಾರಸ್ವಾಮಿ ಕಿಡಿ
BJP JDS alliance : ಕೋಮುವಾದಿ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿದೆ ಎಂದು ಆರೋಪ ಮಾಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮುಗಿಬಿದ್ದಿದ್ದಾರೆ. ಅಲ್ಲದೆ, ಜಾತ್ಯತೀತತೆಯನ್ನು ನಾಶ ಮಾಡಿದ್ದೇ ಕಾಂಗ್ರೆಸ್ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು: ಎಲ್ಲೆಲ್ಲಿ ಸೆಕ್ಯುಲರಿಸಂ ಇತ್ತೋ ಅದನ್ನು ಕಾಂಗ್ರೆಸ್‌ನವರೇ ನಾಶ ಮಾಡಿದರು. ಅಧಿಕಾರಕ್ಕಾಗಿ ಏನನ್ನೆಲ್ಲ ಮಾಡಿದರು? ಫಾರೂಕ್ ಅಬ್ದುಲ್ಲ (Farooq Abdullah) ಅವರನ್ನು ಯಾವ ಸಿದ್ಧಾಂತ ಉಳಿಸುವುದಕ್ಕೆ ಅವರು ಸೋಲಿಸಿದರು? ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು (Former Prime Minister HD DeveGowda) ಇದನ್ನೆಲ್ಲ ನೋಡಿ, ನೋವು ಅನುಭವಿಸಿದ್ದಾರೆ. ಒಂದು ಸಮಾಜಕ್ಕೆ ಸಹಾಯ ಮಾಡಬೇಕು ಅಂತ ದೇವೇಗೌಡರು ಮಾಡಿದ ಹಾಗೆ ಯಾರೂ ಮಾಡಿಲ್ಲ. ಈಗಾಗಲೇ ಇಬ್ರಾಹಿಂ ಅವರಿಗೆ ಎಲ್ಲ ಮಾಹಿತಿ ಕೊಟ್ಟಿದ್ದೇವೆ. ಮುಸ್ಲಿಮರಿಗೆ ನಾನು ಗೌರವ ಕೊಟ್ಟಿದ್ದೇನೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದರು. ಈ ಮೂಲಕ ಬಿಜೆಪಿ – ಜೆಡಿಎಸ್ ಮೈತ್ರಿ (BJP JDS alliance) ಬಗ್ಗೆ ಪ್ರಸ್ತಾಪ ಮಾಡಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಾಢ್ಯವಾಗಿದ್ದರೆ, ನನಗೆ ವೋಟ್ ಹಾಕುತ್ತಿರಲಿಲ್ಲ. ನಾನು ಯಾರಿಗೂ ಅಗೌರವಯುತವಾಗಿ ನಡೆದುಕೊಂಡಿಲ್ಲ. ಇಬ್ರಾಹಿಂ ಜೊತೆ ಹಲವು ವಿಷಯ ಚರ್ಚೆ ಮಾಡಿದ್ದೇನೆ. ಇವತ್ತು ದೇಶಕ್ಕೆ ಅವಶ್ಯಕತೆ ಇರುವ ಬಗ್ಗೆ ಲೆಕ್ಕ ಹಾಕಿದ್ದೇವೆ. ಹಾಗಾಗಿ ಈ ಮೈತ್ರಿಯನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಸಿಎಂ ಮಾಡಿ ಎಂದು ನಾವು ಕೇಳಿದ್ದೆವಾ?
ಈಗ ಬಿಜೆಪಿ ಬಿ ಟೀಂ ಅನ್ನೋದನ್ನು ದೇವೇಗೌಡರು ಪ್ರೂವ್ ಮಾಡಿದ್ದರು ಅಂತಿದ್ದಾರಲ್ಲ ಅವತ್ತು ದೇವೇಗೌಡರು ನಮ್ಮ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಬೇಡ ಅಂದಿದ್ದರು. ಆಗ ನಾವು ಅಧಿಕಾರಕ್ಕಾಗಿ ಕಾಂಗ್ರೆಸ್ ಜತೆ ಸೇರಿರಲಿಲ್ಲ. ಆದರೆ, ನನ್ನನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಮುಂದೆ ಬಂದಿದ್ದು ಯಾರು? ಅಂದು ನನಗೆ ಬಿಜೆಪಿಯಿಂದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ, ನಡ್ಡಾ ಅವರಿಂದ ಫೋನ್ ಬಂದಿತ್ತು. ಆಗ ನಾನು ಬಿಜೆಪಿ ಜತೆ ಸೇರಿದ್ದರೆ 5 ವರ್ಷದ ಆಡಳಿತ ನಮ್ಮದಾಗಿರುತ್ತಿತ್ತು ಎಂದು ಎಚ್.ಡಿ. ಕುಮಾರಸ್ವಾಮಿ ಗುಡುಗಿದರು.
ಹಾಸನದಲ್ಲಿ ರಾಹುಲ್ ಗಾಂಧಿ ಕರೆದುಕೊಂಡು ಬಂದು ಭಾಷಣ ಮಾಡಿಸಿದ್ದರು. ಸಿದ್ದರಾಮಯ್ಯ ಅವರು ಜಾತ್ಯತೀತತೆಯನ್ನು ಉಳಿಸುತ್ತೇನೆ ಎಂದು ಹೇಳುತ್ತಾರೆ. ಆದರೆ, ಅಂದು ನನ್ನ ಸರ್ಕಾರವನ್ನು ಬೀಳಿಸುವಾಗ 5 ಶಾಸಕರನ್ನು ಕರೆತಂದರೆ, ಅತ್ತ ಕಡೆಯಿಂದ ಮತ್ತೆ ಐವರನ್ನು ಕಳುಹಿಸಿಕೊಡುತ್ತೇನೆ ಎಂದು ಹೇಳಿದ್ದವರು ಯಾರು? ಜಾತ್ಯತೀತತೆ ಉಳಿಸುವ ಕಾಂಗ್ರೆಸ್ ಸರ್ಕಾರವನ್ನು ಇದೀಗ ನೋಡುತ್ತಿದ್ದೀರಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಕಾವೇರಿ ತಟದಲ್ಲಿ ರೈತರ ಉಳಿವಿಗೆ ದೇವೇಗೌಡರೇ ಕಾರಣ
ನೀರಾವರಿ ಸಮಸ್ಯೆ ಬಗೆಹರಿಸಲು ದೇವೇಗೌಡರು ಹಳ್ಳಿ ಹಳ್ಳಿ ಸುತ್ತಿದ್ದಾರೆ. ನೀರಾವರಿಗೆ ದೇವೇಗೌಡರು ಮಾಡಿರುವುದನ್ನು ಯಾರೊಬ್ಬರೂ ಮಾಡಿಲ್ಲ. ಚರ್ಚೆ ಮಾಡುವ ಸಂಘಟನೆಗಳಿಗೆ ಒಂದು ಮಾತು ಹೇಳುತ್ತೇನೆ. ಕಾವೇರಿ ತಟದಲ್ಲಿ ರೈತರು ಉಳಿದಿರುವುದಕ್ಕೆ ದೇವೇಗೌಡರೇ ಕಾರಣ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಪ್ರಿಯಾಂಕ್ ಖರ್ಗೆ ಮಾತಿಗೆ ತಿರುಗೇಟು
ನಮ್ಮ ಪಕ್ಷ ಉಳಿಸಿಕೊಳ್ಳಲು ಕಾಲು ಹಿಡಿದುಕೊಂಡರು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಜನತಾದಳಕ್ಕೆ ಇನ್ನು ಆ ದುರ್ಗತಿ ಬಂದಿಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಯಾಕೆ ಕಾವೇರಿ ಬಗ್ಗೆ ಧ್ವನಿ ಎತ್ತಲಿಲ್ಲ? ಕಾವೇರಿ ವಿಚಾರವಾಗಿ ಯಾಕೆ ಕಾಂಗ್ರೆಸ್ ಧ್ವನಿ ಎತ್ತುತ್ತಿಲ್ಲ? ಕೆಆರ್‌ಎಸ್ ನೀರಿನ ಬಗ್ಗೆ ನಾನು ಮಾಹಿತಿ ಪಡೆದಿದ್ದೇನೆ. ಈ ಸರ್ಕಾರ ಇಷ್ಟು ಕೇವಲವಾಗಿ ನಡೆದುಕೊಳ್ಳುತ್ತಿದೆ. ವಿಷಯವನ್ನು ಡೈವರ್ಟ್ ಮಾಡುತ್ತಿದೆ. ಪಕ್ಷದ ಬಗ್ಗೆ ಹೆಸರು ಕೆಡಿಸಲು ಹೊರಟಿದ್ದಾರೆ. ನನಗೇನೂ ಶಾಕ್ ಕೊಡುವ ವಿಷಯವಲ್ಲ ಇದು. ಈಗಾಗಲೇ ನನಗೆ ಸಾಕಷ್ಟು ಶಾಕ್ ಕೊಟ್ಟಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಗುಡುಗಿದರು.
ಮೈನಾರಿಟಿಗೆ ತೊಂದರೆ ಮಾಡಲ್ಲ: ಎಚ್.ಡಿ. ದೇವೇಗೌಡ
ನಾನು ಇವತ್ತು ನೀರಾವರಿ ಮಂತ್ರಿಗಳ ಯಾವ ಮಾತಿಗೂ ಗಮನ ಕೊಡಲ್ಲ. ಬಾಂಗ್ಲಾದೇಶದ ನೀರಿನ ಸಮಸ್ಯೆ ಬಗೆಹರಿಸಿದ್ದೆ. ನಮ್ಮ ಮುಂದೆ ಇರೋದು ಮೈನಾರಿಟಿ ಮಾತು ಅಷ್ಟೇ. ನಾವು ಮೈನಾರಿಟಿ ಎಲ್ಲೇ ಇದ್ದರೂ ತೊಂದರೆ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದರು. ಆಗ ಮಧ್ಯ ಪ್ರವೇಶಿಸಿದ ಎಚ್.ಡಿ. ಕುಮಾರಸ್ವಾಮಿ, ಮೈನಾರಿಟಿ ಮಾತ್ರ ಅಲ್ಲ ಇಡೀ ಕರ್ನಾಟಕದ ರಕ್ಷಣೆ ನಮ್ಮ ಗುರಿಯಾಗಿದೆ. ನಾಟ್ ಓನ್ಲಿ ಮೈನಾರಿಟಿ ಬ್ರದರ್, ಎಂಟೈರ್ ಕರ್ನಾಟಕ ರಕ್ಷಣೆ ಮಾಡುತ್ತೇವೆ ಎಂದು ಗುಡುಗಿದರು.
ಇದನ್ನೂ ಓದಿ: BJP JDS alliance : ವಿಜಯದಶಮಿ ನಂತರ ಜೆಡಿಎಸ್ ಸೀಟು ಹಂಚಿಕೆ ಅಂತಿಮ ಮಾತುಕತೆ!
ಕಾವೇರಿ ನೀರಿನ ವಿಷಯದಲ್ಲಿ ಈಗ ಬಂದಿರುವ ಆದೇಶವು ನನ್ನ ರಾಜ್ಯದ ಜನತೆಯ ಮರಣ ಶಾಸನವಾಗಿದೆ ಎಂದು ಎಚ್.ಡಿ. ದೇವೇಗೌಡ ಬೇಸರವನ್ನು ಹೊರಹಾಕಿದರು.
ಕರ್ನಾಟಕ
CM Siddaramaiah: CWRC ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ಧಾರ ಎಂದ ಸಿದ್ದರಾಮಯ್ಯ
CM Siddaramaiah: ಮತ್ತೆ 18 ದಿನ 3000 ಕ್ಯುಸೆಕ್ ನೀರು ಬಿಡಬೇಕು ಎಂಬ ಆದೇಶವನ್ನು ಪ್ರಶ್ನೆ ಮಾಡಲಾಗುವುದು ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.
ಚಾಮರಾಜನಗರ (ಹನೂರು): ಕಾವೇರಿ ನೀರು ನಿಯಂತ್ರಣ ಸಮಿತಿಯು (Cauvery water regulation Committee) ತಮಿಳುನಾಡಿಗೆ ಪ್ರತಿದಿನ 3000 ಕ್ಯೂಸೆಕ್ ನೀರನ್ನು (3000 Cusec water) ಹರಿಸಲು ಆದೇಶಿಸಿದೆ. ಈ ಬಗ್ಗೆ ಕಾನೂನು ತಂಡದೊಂದಿಗೆ ಚರ್ಚಿಸಿದ್ದು ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಕಾನೂನು ತಂಡ ಸಲಹೆ ನೀಡಿದೆ. ನೀರು ಬಿಡಲು ನಮ್ಮ ಬಳಿ ನೀರಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಅವರು ಶ್ರೀ ಮಲೈ ಮಹದೇಶ್ವರ ಬೆಟ್ಟದ (Male mahadeshwara betta) ಬಳಿ ಮಾಧ್ಯಮದವರಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು.
ಕಾವೇರಿ ನೀರು ನಿಯಂತ್ರಣ ಸಮಿತಿಯು ಮಂಗಳವಾರ ನೀಡಿದ ಆದೇಶದಲ್ಲಿ ಸೆ. 28ರಿಂದ ಅಕ್ಟೋಬರ್ 15ರವರೆಗೆ ಪ್ರತಿದಿನವೂ 3000 ಕ್ಯೂಸೆಕ್ ನೀರು ಬಿಡಲು ಆದೇಶ ನೀಡಿತ್ತು. ಇದನ್ನು ಪ್ರಾಧಿಕಾರದ ಮುಂದೆ ಪ್ರಶ್ನಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.
ಸಿಎಂ ಮತ್ತು ಡಿಸಿಎಂ ಇಬ್ಬರೂ ನಮ್ಮಲ್ಲಿ ನೀರು ಇಲ್ಲ ಎಂದು ಹೇಳುತ್ತಲೇ ಪ್ರಾಧಿಕಾರ ಹೇಳಿದಷ್ಟು ನೀರು ಬಿಡುಗಡೆ ಮಾಡಿದ್ದೇ ಸಮಿತಿಗೆ ಸರಾಗ ಆದೇಶ ನೀಡಲು ಕಾರಣವಾಗಿದೆ ಎಂದು ಆರೋಪಿಸಲಾಗಿದೆ. ಇದೀಗ ಸೆ. 29ರಂದು ಇದರ ವಿರುದ್ಧ ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಮಳೆಗಾಗಿ ಮಹದೇಶ್ವರನಲ್ಲಿ ಪ್ರಾರ್ಥನೆ
ಮಳೆ ಕೈಕೊಟ್ಟು 195 ತಾಲ್ಲೂಕು ಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಮಹದೇಶ್ವರನಲ್ಲಿ ಮಳೆಗಾಗಿ, ರಾಜ್ಯದ ಜನರಿಗೆ, ರೈತರಿಗೆ ಸೌಖ್ಯವಾಗಲಿ ಎಂದು ಪ್ರಾರ್ಥಿಸಿರುವುದಾಗಿ ಸಿದ್ದರಾಮಯ್ಯ ತಿಳಿಸಿದರು.
ಮೂಢನಂಬಿಕೆ, ಮೌಢ್ಯ, ಕಂದಾಚಾರದಲ್ಲಿ ನಂಬಿಕೆ ಇಲ್ಲ
ಮೂಢನಂಬಿಕೆ, ಮೌಢ್ಯ, ಕಂದಾಚಾರದಲ್ಲಿ ನಂಬಿಕೆ ಇಲ್ಲ. ಅದಕ್ಕಾಗಿಯೇ ಹಿಂದೆ ಮುಖ್ಯಮಂತ್ರಿ ಯಾದ ಕೂಡಲೇ ಚಾಮರಾಜನಗರಕ್ಕೆ ಭೇಟಿ ನೀಡಿದೆ. ಸುಮಾರು 12 ಬಾರಿ ಭೇಟಿ ನೀಡಿದ್ದು, 5 ವರ್ಷ ಗಟ್ಟಿಯಾಗಿ ಇದ್ದೆ. ಚಾಮರಾಜನಗರ ಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಢ್ಯ ಈಗ ಹೋಗಿದೆ ಎಂದರು.
ಬಂದ್‌ನಿಂದ ಯಾರಿಗೂ ತೊಂದರೆಯಾಗಬಾರದು
ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್ ಗೆ ಕರೆನೀಡಿರುವ ಬಗ್ಗೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಗೆ ಅವಕಾಶವಿದೆ. ಆದರೆ ಇತರರಿಗೆ ತೊಂದರೆಯಾಗಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ನಾವು ಈ ಆದೇಶ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತೇವೆ ಎಂದರು.
ಇದನ್ನೂ ಓದಿ: CM Siddaramaiah: ಕೃಷಿಗೆ ಸಾಲ ಮಾಡಿ ಮದುವೆ ಛಮಾಡುವುದನ್ನು ನಿಲ್ಲಿಸಿ: ಸಿಎಂ ಸಿದ್ದರಾಮಯ್ಯ ಮನವಿ
-
ದೇಶ15 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
ವಿದೇಶ22 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ಸುವಚನ10 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ15 hours ago
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
-
ದೇಶ16 hours ago
GST Evasion: ಜಿಎಸ್ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
-
ಆಟೋಮೊಬೈಲ್21 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ22 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್19 hours ago
Ruturaj Gaikwad : ಚೀನಾಗೆ ಹೊರಡುವ ಮೊದಲು ಪುಣೆಯ ಗಣೇಶ ಮಂದಿರಕ್ಕೆ ಭೇಟಿ ನೀಡಿದ ಋತುರಾಜ್