ಬಾಗಲಕೋಟೆ: ಇಲ್ಲಿನ ಕೆರೂರಿನಲ್ಲಿ ಜುಲೈ 4ರಂದು ನಡೆದ ಗುಂಪು ಘರ್ಷಣೆ ಪೂರ್ವ ನಿಯೋಜಿತ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಗುಂಪು ಘರ್ಷಣೆ ವೇಳೆ ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರುಣ್ ಕಟ್ಟಿಮನಿ, ಲಕ್ಷ್ಮಣ್ ಕಟ್ಟಿಮನಿ, ಯಮನೂರ ಹಾಗೂ ಗೋಪಾಲ ದಾಸ್ಮನಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಸಚಿವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದೆ. ಹಿಂದು ಸಂಘಟನೆ ಮುಖಂಡರ ಮೇಲೆ ಏಕಾಏಕಿ ಹಲ್ಲೆ ನಡೆದಿದ್ದು, ಅದೃಷ್ಟವಶಾತ್ ಗಾಯಾಳುಗಳು ಸಾವಿನಿಂದ ಪಾರಾಗಿದ್ದಾರೆ. ಇಡೀ ಹಿಂದು ಸಮಾಜ ಗಾಯಾಳುಗಳ ಜತೆಗಿದೆ ಎಂದರು.
ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಪೊಲೀಸರಿಂದ ಬಂದ ಮಾಹಿತಿಯನ್ನು ಆಧಾರವಾಗಿ ಇಟ್ಟುಕೊಂಡು ವೈಯಕ್ತಿಕ ದ್ವೇಷ ಎಂದಿದ್ದಾರೆ. ಆದರೆ, ಈ ಬಗ್ಗೆ ಸಿಎಂಗೆ ಪೂರ್ಣ ಮಾಹಿತಿ ನೀಡಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಈಗಾಗಲೇ ಕೆಲವರನ್ನು ಬಂಧಿಸಲಾಗಿದ್ದು, ಪೊಲೀಸರ ಕೈವಾಡದ ಶಂಕೆಯ ಕುರಿತು ತನಿಖೆ ನಡೆಸಲು ಸೂಚಿಸಲಾಗುವುದು ಎಂದರು.
ಇದನ್ನೂ ಓದಿ | ಕೆರೂರು ಗಲಭೆ ಪ್ರಕರಣ ಖಂಡಿಸಿ ಜುಲೈ 11ರಂದು ಬೃಹತ್ ಪ್ರತಿಭಟನೆಗೆ ಕರೆ
ಬಾದಾಮಿ ಸ್ತಬ್ಧ
ಕೆರೂರು ಗುಂಪು ಘರ್ಷಣೆಗೆ ಸಂಬಂಧಪಟ್ಟಂತೆ ಗಲಭೆಕೋರರನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಹಿಂದು ಜಾಗರಣ ವೇದಿಕೆಯಿಂದ ಬಾದಾಮಿ ಪಟ್ಟಣದಲ್ಲಿ ಕರೆ ನೀಡಲಾಗಿದ್ದ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಬಂದ್ ಮುಂದಾಳತ್ವ ವಹಿಸಿದ್ದರು. ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು. ಬಳಿಕ ಬಾದಾಮಿ ತಹಸೀಲ್ದಾರ್‌ಗೆ ಮನವಿ ಪತ್ರ ನೀಡಿ, ಇದು ವೈಯಕ್ತಿಕ ಕಾರಣದಿಂದ ನಡೆದ ಕೃತ್ಯವಲ್ಲ. ಹಿಂದುಗಳ ಮೇಲೆ ನಡೆದ ಪೂರ್ವನಿಯೋಜಿತ ಕೃತ್ಯ, ಕೊಲೆ ಮಾಡುವ ಉದ್ದೇಶದಿಂದಲೇ ಈ ಗಲಭೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿ ಆಕ್ರೋಶವನ್ನು ಹೊರಹಾಕಿದರು.
ಮುಂಜಾನೆಯಿಂದ ಬಾದಾಮಿ ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು. ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಸಾಥ್ ನೀಡಿದರು. ಯಾವುದೇ ಅಹಿತಕರ ಪ್ರಕರಣ ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿತ್ತು.
ಇದನ್ನೂ ಓದಿ | ಕೆರೂರು ಗಲಾಟೆ | ಪಟ್ಟಣದಲ್ಲಿ ಗುಂಪು ಘರ್ಷಣೆಗೆ ಹುಡುಗಿಯನ್ನು ಚುಡಾಯಿಸಿದ್ದು ಮೂಲಕಾರಣವೇ?