Site icon Vistara News

KFD vaccine | ಮಂಗನ ಕಾಯಿಲೆ ತಡೆ ಲಸಿಕೆಗೆ ಅನುಮತಿಯೇ ಇಲ್ಲ; ಆದರೂ ಜನರಿಗೆ ನೀಡುತ್ತಿದೆ ಸರ್ಕಾರ!

Ineffective KFD Vaccine Being Used for Decades

ಬೆಂಗಳೂರು: ಕಳೆದ ಏಳು ದಶಕಗಳಿಂದ ಮಲೆನಾಡಿನ ಜನರನ್ನು ಕಾಡುತ್ತಿರುವ “ಮಂಗನ ಕಾಯಿಲೆʼʼ ಎಂದೇ ಪ್ರಸಿದ್ಧಿಯಾಗಿರುವ “ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌ʼʼ ಬಾರದಂತೆ ತಡೆಯಲು ನೀಡಲಾಗುತ್ತಿರುವ ಲಸಿಕೆಗೆ (KFD vaccine) ಔಷಧ ಗುಣಮಟ್ಟ ನಿಯಂತ್ರಕರ ಕೇಂದ್ರೀಯ ಸಂಘಟನೆ (Central Drugs Standard Control Organisation-CDSCO) ಅನುಮತಿಯನ್ನೇ ನೀಡಿಲ್ಲ ಎಂಬುದು ಬೆಳಕಿಗೆ ಬಂದಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.

ಈ ಲಸಿಕೆಗೆ CDSCO ನೀಡಿದ್ದ ಅನುಮತಿಯು 2001 ಕ್ಕೇ ಅಂತ್ಯಗೊಂಡಿದ್ದು, ಕಳೆದ ಎರಡು ದಶಕಗಳಿಂದ ಅನುಮತಿ ಪಡೆದುಕೊಳ್ಳದೇ ಈ ಲಸಿಕೆಯನ್ನು ರಾಜ್ಯದಲ್ಲಿ ನೀಡಲಾಗುತ್ತಿದೆ ಎಂದು ನವದೆಹಲಿಯ “ಮಿಂಟ್‌ʼʼ ಪತ್ರಿಕೆ ತನಿಖಾ ವರದಿ ಪ್ರಕಟಿಸಿದೆ. ಅನುಮತಿ ಪಡೆಯದೇ ಇರುವುದಕ್ಕೆ ಇದರ ಗುಣಮಟ್ಟವೇ ಕಾರಣ ಎಂಬುದೂ ಬಹಿರಂಗಗೊಂಡಿದೆ. ಔಷಧ ಮತ್ತು ಕಾಂತಿವರ್ಧಕ ಕಾಯ್ದೆ ಪ್ರಕಾರ ನಮ್ಮ ದೇಶದಲ್ಲಿ ಯಾವುದೇ ಔಷಧ, ಲಸಿಕೆ ಬಳಕೆಯಾಗಬೇಕಾದರೂ ಕೇಂದ್ರ ಆರೋಗ್ಯ ಇಲಾಖೆಯ ಅಡಿ ಕಾರ್ಯನಿರ್ವಹಿಸುವ CDSCOನ ಅನುಮತಿ ಪಡೆಯುವುದು ಕಡ್ಡಾಯ. ಆದರೆ ಇದರ ಅನುಮತಿಯನ್ನೇ ಪಡೆಯದ ಲಸಿಕೆಯನ್ನು ಸರ್ಕಾರವೇ ಜನರಿಗೆ ನೀಡಿರುವುದು ಆಶ್ಚರ್ಯ ಮತ್ತು ಅಘಾತ ಮೂಡಿಸಿದೆ.

ಮಂಗನ ಕಾಯಿಲೆಯು ಬಹುತೇಕವಾಗಿ ಬೇಸಿಗೆಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದು ಬಾರದಂತೆ ತಡೆಯಲು ಈಗ ಲಸಿಕೆ ನೀಡಲಾಗುತ್ತಿದೆ. ಕಾಯಿಲೆ ಬಂದ ನಂತರ ನಿಯಂತ್ರಣಕ್ಕೆ ಇನ್ನೂ ಯಾವುದೇ ಔಷಧಿಯನ್ನು ನಿರ್ಧಿಷ್ಟವಾಗಿ ಅಭಿವೃದ್ಧಿಪಡಿಸಲಾಗಿಲ್ಲ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆಯೇ ಈ ಲಸಿಕೆಯನ್ನು ನೀಡುತ್ತಾ ಬಂದಿದೆ.

ಅನುಮತಿ ನಿರಾಕರಣೆಗೆ ಗುಣಮಟ್ಟವೇ ಕಾರಣ
ಮಂಗನ ಕಾಯಿಲೆ ಮೊದಲು ಕಾಣಿಸಿಕೊಂಡಿದ್ದು ೧೯೫೭ರಲ್ಲಿ. ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕ್ಯಾಸನೂರು ರಕ್ಷಿತಾರಣ್ಯ ಮತ್ತು ಸುತ್ತಮುತ್ತಲಿನ ಕಾಡುಗಳಲ್ಲಿ ಮಂಗಗಳಿಂದ ಉಣ್ಣೆಗಳ ಮೂಲಕ ಈ ಕಾಯಿಲೆ ಹರಡಲಾರಂಭಿಸಿತು. ನೂರಾರು ಜನರ ಸಾವಿಗೆ ಕಾರಣವಾದ ಈ ರೋಗದ ನಿಯಂತ್ರಣಕ್ಕೆ 1984ರಲ್ಲಿ ಪುಣೆಯ ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ವೈರಾಲಜಿಯು ಲಸಿಕೆಯನ್ನು ಅಭಿವೃದ್ಧಿ ಪಡಿಸಿದ್ದು, ಇದನ್ನು ಮೊದಲಿಗೆ (1989 ರಿಂದ) ಶಿವಮೊಗ್ಗದಲ್ಲಿಯೇ ತಯಾರಿಸಿ, ಜನರಿಗೆ ನೀಡಲಾಗುತ್ತಿತ್ತು.

2000ರ ವೇಳೆಗೆ ಕಾಯಿಲೆಯ ತೀವ್ರತೆ ಕಡಿಮೆಯಾಗಿದ್ದರಿಂದ ಈ ಲಸಿಕಾ ಕೇಂದ್ರವೂ ಮುಚ್ಚಿದ್ದು, ಈಗ ಬೆಂಗಳೂರಿನ ಹೆಬ್ಬಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ (Institute of Animal Health and Veterinary Biologicals) ಯಲ್ಲಿ ತಯಾರಿಸಿ, ಬಳಕೆಗೆ ನೀಡಲಾಗುತ್ತಿದೆ. ಆದರೆ ಈ ಲಸಿಕೆಗೆ ಔಷಧ ಗುಣಮಟ್ಟ ನಿಯಂತ್ರಕರ ಕೇಂದ್ರೀಯ ಸಂಘಟನೆ (CDSCO) ನೀಡಿದ್ದ ಅನುಮತಿಯು 2001ಕ್ಕೇ ಅಂತ್ಯವಾಗಿದೆ. ಆದರೂ ಪ್ರಾಣಿಗಳಿಗೆ ಲಸಿಕೆ ಉತ್ಪಾದಿಸುವ ಘಟಕದಲ್ಲಿ ಈ ಲಸಿಕೆಯನ್ನು ತಯಾರಿಸಿ ಜನರಿಗೆ ನೀಡಲಾಗುತ್ತಿದೆ.

ನಮ್ಮ ಆರೋಗ್ಯ ಇಲಾಖೆ 2013-14 ರಲ್ಲಿ ಒಮ್ಮೆ ಇದರ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಿಕೊಂಡು, ಜನರಿಗೆ ನೀಡುವ ಕಾರ್ಯ ಮುಂದುವರಿಸಿದೆ. ಇತ್ತೀಚೆಗೆ ಈ ಲಸಿಕೆಯ ಗುಣಮಟ್ಟದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿತ್ತು. ಲಸಿಕೆ ಪಡೆದವರಿಗೂ ಮಂಗನ ಕಾಯಿಲೆ ಬರುತ್ತಿದ್ದು, ಲಸಿಕೆ ಪವರ್‌ ಕಳೆದುಕೊಂಡಿದೇ ಎಂದೇ ಜನಸಾಮಾನ್ಯರು ದೂರುತ್ತಿದ್ದರು. ಆದರೂ ಸರ್ಕಾರ ಈ ಲಸಿಕೆ ತಯಾರಿಕೆ, ವಿತರಣೆಯ ವ್ಯವಸ್ಥೆಯ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.

ಪ್ರಾಣಿಗಳಿಗೆ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಮಾನವನ ಲಸಿಕೆ ತಯಾರಿ!
CDSCO ಲಸಿಕೆಗೆ ಅನುಮತಿ ನೀಡದೇ ಇರುವುದಕ್ಕೆ ಕಾರಣಗಳು ಇಂತಿವೆ;
೧. ಈಗ ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಈ ಲಸಿಕೆಯನ್ನು ತಯಾರಿಸಲಾಗುತ್ತಿದೆ. ಇದು ಪಶುಗಳಿಗೆ ಸಂಬಂಧಿಸಿದ ಪ್ರಯೋಗಾಲಯವನ್ನು ಹೊಂದಿದ್ದು, ಇಲ್ಲಿ ಪಶುಗಳ ಲಸಿಕೆ, ಔಷಧಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇಲ್ಲಿ ಮಾನವನಿಗೆ ನೀಡಲಾಗುವ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

೨. ಲಸಿಕೆಯ ಗುಣಮಟ್ಟದ ಕುರಿತು ಚೆನ್ನೈನಲ್ಲಿರುವ ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದ ರಾಷ್ಟ್ರೀಯ ಸಂಸ್ಥೆ (National Institute of Epidemiology) ನಡೆಸಿದ ಅಧ್ಯಯನ ಸೇರಿದಂತೆ ಹಲವು ಅಧ್ಯಯನಗಳು ಲಸಿಕೆಯು ಪರಿಣಾಮಕಾರಿಯಾಗಿಲ್ಲ ಎಂದು ವರದಿ ನೀಡಿವೆ.

ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯ ಆವರಣದಲ್ಲಿದ್ದ ಲಸಿಕೆ ತಯಾರಿಸುವ ಘಟಕವನ್ನು ಸ್ಥಗಿತಗೊಳಿಸಿದ ನಂತರ ರಾಜ್ಯ ಸರ್ಕಾರವೇ ಪ್ರಾಣಿಗಳಿಗೆ ಲಸಿಕೆ ತಯಾರಿಸುವಲ್ಲಿ (ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ) ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಲು ಆರಂಭಿಸಿತು. ಆದರೆ ಇದಕ್ಕೆ ಬೇಕಾದ ಔಷಧಿ ಪ್ರಾಧಿಕಾರದ ಅನುಮತಿಯನ್ನು ಪಡೆದುಕೊಂಡಿರಲಿಲ್ಲ!

ಅಲ್ಲದೆ, ಲಸಿಕೆಯ ಗುಣಮಟ್ಟದ ಬಗ್ಗೆ ಬಳಸುವ ಜನರೇ ಕಳೆದ ಐದು ವರ್ಷಗಳಿಂದ ದೂರುತ್ತಿದ್ದರೂ, ಕೇಂದ್ರ ಸರ್ಕಾರದ ಸಂಸ್ಥೆಗಳೇ ಈ ಲಸಿಕೆಯ ಗುಣಮಟ್ಟದ ಕುರಿತು ನೀಡಿದ್ದ ವರದಿಗಳನ್ನು ಮುಚ್ಚಿಟ್ಟು, ಮತ್ತದೇ ಲಸಿಕೆಯನ್ನು ಉತ್ಪಾದಿಸಿ ಜನರಿಗೆ ನೀಡಲಾಗುತ್ತಿತ್ತು. ಇದೀಗ ಸರ್ಕಾರದ, ಆರೋಗ್ಯ ಇಲಾಖೆಯ ಈ ಬೇಜವಾಬ್ದಾರಿತನ ಬೆಳಕಿಗೆ ಬಂದಿದ್ದು, ಮಲೆನಾಡಿನ ಜನರು ಆತಂಕಗೊಂಡಿದ್ದಾರೆ. ಹೀಗೆ ಗುಣಮಟ್ಟವಿಲ್ಲದ ಲಸಿಕೆಯನ್ನು ಪಡೆದುಕೊಂಡಿರುವುದರಿಂದ ಏನಾದರೂ ಅಡ್ಡಪರಿಣಾಮಗಳಾಗಬಹುದೇ ಎಂಬ ಆಂತಕ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ 21 ವರ್ಷಗಳಿಂದ ಅನುಮತಿಯಿಲ್ಲದ ಈ ಲಸಿಕೆಯನ್ನು ಜನರಿಗೆ ನೀಡಲಾಗುತ್ತಿದ್ದು, ಒಂದು ಅಂದಾಜಿನ ಪ್ರಕಾರ ಸುಮಾರು 50 ಲಕ್ಷ ಜನರಿಗೆ ಈ ಲಸಿಕೆಯನ್ನು ನೀಡಲಾಗಿದೆ. ಮಂಗನ ಕಾಯಿಲೆ ಕಾಣಿಸಿಕೊಂಡ ತಕ್ಷಣ ಆ ಪ್ರದೇಶದಲ್ಲಿ ವಾಸಿಸುವ ಜನರಿಗೆ ಮುಂಜಾಗ್ರತೆಯಾಗಿ ಈ ಲಸಿಕೆಯನ್ನು ನೀಡಲಾಗುತ್ತದೆ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಪೋಲಿಯೋಗೆ ಲಸಿಕೆ ಕಂಡುಹಿಡಿದ ಜೋನಾಸ್‌ ಸಾಲ್ಕ್‌ ಅದನ್ನು ಮಾರಾಟ ಮಾಡಲೇ ಇಲ್ಲ, ಯಾಕೆ?

Exit mobile version