ಆರೋಗ್ಯ
KFD vaccine | ಮಂಗನ ಕಾಯಿಲೆ ತಡೆ ಲಸಿಕೆಗೆ ಅನುಮತಿಯೇ ಇಲ್ಲ; ಆದರೂ ಜನರಿಗೆ ನೀಡುತ್ತಿದೆ ಸರ್ಕಾರ!
ಮಲೆನಾಡಿನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುವ ಮಂಗನ ಕಾಯಿಲೆ ತಡೆಗೆ ನೀಡಲಾಗುತ್ತಿರುವ ಲಸಿಕೆಗೆ (KFD vaccine) ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ ಅನುಮತಿಯನ್ನೇ ನೀಡಿಲ್ಲ ಎಂಬುದು ಈಗ ಬಹಿರಂಗಗೊಂಡಿದೆ.
ಬೆಂಗಳೂರು: ಕಳೆದ ಏಳು ದಶಕಗಳಿಂದ ಮಲೆನಾಡಿನ ಜನರನ್ನು ಕಾಡುತ್ತಿರುವ “ಮಂಗನ ಕಾಯಿಲೆʼʼ ಎಂದೇ ಪ್ರಸಿದ್ಧಿಯಾಗಿರುವ “ಕ್ಯಾಸನೂರು ಫಾರೆಸ್ಟ್ ಡಿಸೀಸ್ʼʼ ಬಾರದಂತೆ ತಡೆಯಲು ನೀಡಲಾಗುತ್ತಿರುವ ಲಸಿಕೆಗೆ (KFD vaccine) ಔಷಧ ಗುಣಮಟ್ಟ ನಿಯಂತ್ರಕರ ಕೇಂದ್ರೀಯ ಸಂಘಟನೆ (Central Drugs Standard Control Organisation-CDSCO) ಅನುಮತಿಯನ್ನೇ ನೀಡಿಲ್ಲ ಎಂಬುದು ಬೆಳಕಿಗೆ ಬಂದಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.
ಈ ಲಸಿಕೆಗೆ CDSCO ನೀಡಿದ್ದ ಅನುಮತಿಯು 2001 ಕ್ಕೇ ಅಂತ್ಯಗೊಂಡಿದ್ದು, ಕಳೆದ ಎರಡು ದಶಕಗಳಿಂದ ಅನುಮತಿ ಪಡೆದುಕೊಳ್ಳದೇ ಈ ಲಸಿಕೆಯನ್ನು ರಾಜ್ಯದಲ್ಲಿ ನೀಡಲಾಗುತ್ತಿದೆ ಎಂದು ನವದೆಹಲಿಯ “ಮಿಂಟ್ʼʼ ಪತ್ರಿಕೆ ತನಿಖಾ ವರದಿ ಪ್ರಕಟಿಸಿದೆ. ಅನುಮತಿ ಪಡೆಯದೇ ಇರುವುದಕ್ಕೆ ಇದರ ಗುಣಮಟ್ಟವೇ ಕಾರಣ ಎಂಬುದೂ ಬಹಿರಂಗಗೊಂಡಿದೆ. ಔಷಧ ಮತ್ತು ಕಾಂತಿವರ್ಧಕ ಕಾಯ್ದೆ ಪ್ರಕಾರ ನಮ್ಮ ದೇಶದಲ್ಲಿ ಯಾವುದೇ ಔಷಧ, ಲಸಿಕೆ ಬಳಕೆಯಾಗಬೇಕಾದರೂ ಕೇಂದ್ರ ಆರೋಗ್ಯ ಇಲಾಖೆಯ ಅಡಿ ಕಾರ್ಯನಿರ್ವಹಿಸುವ CDSCOನ ಅನುಮತಿ ಪಡೆಯುವುದು ಕಡ್ಡಾಯ. ಆದರೆ ಇದರ ಅನುಮತಿಯನ್ನೇ ಪಡೆಯದ ಲಸಿಕೆಯನ್ನು ಸರ್ಕಾರವೇ ಜನರಿಗೆ ನೀಡಿರುವುದು ಆಶ್ಚರ್ಯ ಮತ್ತು ಅಘಾತ ಮೂಡಿಸಿದೆ.
ಮಂಗನ ಕಾಯಿಲೆಯು ಬಹುತೇಕವಾಗಿ ಬೇಸಿಗೆಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದು ಬಾರದಂತೆ ತಡೆಯಲು ಈಗ ಲಸಿಕೆ ನೀಡಲಾಗುತ್ತಿದೆ. ಕಾಯಿಲೆ ಬಂದ ನಂತರ ನಿಯಂತ್ರಣಕ್ಕೆ ಇನ್ನೂ ಯಾವುದೇ ಔಷಧಿಯನ್ನು ನಿರ್ಧಿಷ್ಟವಾಗಿ ಅಭಿವೃದ್ಧಿಪಡಿಸಲಾಗಿಲ್ಲ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆಯೇ ಈ ಲಸಿಕೆಯನ್ನು ನೀಡುತ್ತಾ ಬಂದಿದೆ.
ಅನುಮತಿ ನಿರಾಕರಣೆಗೆ ಗುಣಮಟ್ಟವೇ ಕಾರಣ
ಮಂಗನ ಕಾಯಿಲೆ ಮೊದಲು ಕಾಣಿಸಿಕೊಂಡಿದ್ದು ೧೯೫೭ರಲ್ಲಿ. ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕ್ಯಾಸನೂರು ರಕ್ಷಿತಾರಣ್ಯ ಮತ್ತು ಸುತ್ತಮುತ್ತಲಿನ ಕಾಡುಗಳಲ್ಲಿ ಮಂಗಗಳಿಂದ ಉಣ್ಣೆಗಳ ಮೂಲಕ ಈ ಕಾಯಿಲೆ ಹರಡಲಾರಂಭಿಸಿತು. ನೂರಾರು ಜನರ ಸಾವಿಗೆ ಕಾರಣವಾದ ಈ ರೋಗದ ನಿಯಂತ್ರಣಕ್ಕೆ 1984ರಲ್ಲಿ ಪುಣೆಯ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ವೈರಾಲಜಿಯು ಲಸಿಕೆಯನ್ನು ಅಭಿವೃದ್ಧಿ ಪಡಿಸಿದ್ದು, ಇದನ್ನು ಮೊದಲಿಗೆ (1989 ರಿಂದ) ಶಿವಮೊಗ್ಗದಲ್ಲಿಯೇ ತಯಾರಿಸಿ, ಜನರಿಗೆ ನೀಡಲಾಗುತ್ತಿತ್ತು.
2000ರ ವೇಳೆಗೆ ಕಾಯಿಲೆಯ ತೀವ್ರತೆ ಕಡಿಮೆಯಾಗಿದ್ದರಿಂದ ಈ ಲಸಿಕಾ ಕೇಂದ್ರವೂ ಮುಚ್ಚಿದ್ದು, ಈಗ ಬೆಂಗಳೂರಿನ ಹೆಬ್ಬಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ (Institute of Animal Health and Veterinary Biologicals) ಯಲ್ಲಿ ತಯಾರಿಸಿ, ಬಳಕೆಗೆ ನೀಡಲಾಗುತ್ತಿದೆ. ಆದರೆ ಈ ಲಸಿಕೆಗೆ ಔಷಧ ಗುಣಮಟ್ಟ ನಿಯಂತ್ರಕರ ಕೇಂದ್ರೀಯ ಸಂಘಟನೆ (CDSCO) ನೀಡಿದ್ದ ಅನುಮತಿಯು 2001ಕ್ಕೇ ಅಂತ್ಯವಾಗಿದೆ. ಆದರೂ ಪ್ರಾಣಿಗಳಿಗೆ ಲಸಿಕೆ ಉತ್ಪಾದಿಸುವ ಘಟಕದಲ್ಲಿ ಈ ಲಸಿಕೆಯನ್ನು ತಯಾರಿಸಿ ಜನರಿಗೆ ನೀಡಲಾಗುತ್ತಿದೆ.
ನಮ್ಮ ಆರೋಗ್ಯ ಇಲಾಖೆ 2013-14 ರಲ್ಲಿ ಒಮ್ಮೆ ಇದರ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಿಕೊಂಡು, ಜನರಿಗೆ ನೀಡುವ ಕಾರ್ಯ ಮುಂದುವರಿಸಿದೆ. ಇತ್ತೀಚೆಗೆ ಈ ಲಸಿಕೆಯ ಗುಣಮಟ್ಟದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿತ್ತು. ಲಸಿಕೆ ಪಡೆದವರಿಗೂ ಮಂಗನ ಕಾಯಿಲೆ ಬರುತ್ತಿದ್ದು, ಲಸಿಕೆ ಪವರ್ ಕಳೆದುಕೊಂಡಿದೇ ಎಂದೇ ಜನಸಾಮಾನ್ಯರು ದೂರುತ್ತಿದ್ದರು. ಆದರೂ ಸರ್ಕಾರ ಈ ಲಸಿಕೆ ತಯಾರಿಕೆ, ವಿತರಣೆಯ ವ್ಯವಸ್ಥೆಯ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.
ಪ್ರಾಣಿಗಳಿಗೆ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಮಾನವನ ಲಸಿಕೆ ತಯಾರಿ!
CDSCO ಲಸಿಕೆಗೆ ಅನುಮತಿ ನೀಡದೇ ಇರುವುದಕ್ಕೆ ಕಾರಣಗಳು ಇಂತಿವೆ;
೧. ಈಗ ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಈ ಲಸಿಕೆಯನ್ನು ತಯಾರಿಸಲಾಗುತ್ತಿದೆ. ಇದು ಪಶುಗಳಿಗೆ ಸಂಬಂಧಿಸಿದ ಪ್ರಯೋಗಾಲಯವನ್ನು ಹೊಂದಿದ್ದು, ಇಲ್ಲಿ ಪಶುಗಳ ಲಸಿಕೆ, ಔಷಧಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇಲ್ಲಿ ಮಾನವನಿಗೆ ನೀಡಲಾಗುವ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
೨. ಲಸಿಕೆಯ ಗುಣಮಟ್ಟದ ಕುರಿತು ಚೆನ್ನೈನಲ್ಲಿರುವ ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದ ರಾಷ್ಟ್ರೀಯ ಸಂಸ್ಥೆ (National Institute of Epidemiology) ನಡೆಸಿದ ಅಧ್ಯಯನ ಸೇರಿದಂತೆ ಹಲವು ಅಧ್ಯಯನಗಳು ಲಸಿಕೆಯು ಪರಿಣಾಮಕಾರಿಯಾಗಿಲ್ಲ ಎಂದು ವರದಿ ನೀಡಿವೆ.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿದ್ದ ಲಸಿಕೆ ತಯಾರಿಸುವ ಘಟಕವನ್ನು ಸ್ಥಗಿತಗೊಳಿಸಿದ ನಂತರ ರಾಜ್ಯ ಸರ್ಕಾರವೇ ಪ್ರಾಣಿಗಳಿಗೆ ಲಸಿಕೆ ತಯಾರಿಸುವಲ್ಲಿ (ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ) ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಲು ಆರಂಭಿಸಿತು. ಆದರೆ ಇದಕ್ಕೆ ಬೇಕಾದ ಔಷಧಿ ಪ್ರಾಧಿಕಾರದ ಅನುಮತಿಯನ್ನು ಪಡೆದುಕೊಂಡಿರಲಿಲ್ಲ!
ಅಲ್ಲದೆ, ಲಸಿಕೆಯ ಗುಣಮಟ್ಟದ ಬಗ್ಗೆ ಬಳಸುವ ಜನರೇ ಕಳೆದ ಐದು ವರ್ಷಗಳಿಂದ ದೂರುತ್ತಿದ್ದರೂ, ಕೇಂದ್ರ ಸರ್ಕಾರದ ಸಂಸ್ಥೆಗಳೇ ಈ ಲಸಿಕೆಯ ಗುಣಮಟ್ಟದ ಕುರಿತು ನೀಡಿದ್ದ ವರದಿಗಳನ್ನು ಮುಚ್ಚಿಟ್ಟು, ಮತ್ತದೇ ಲಸಿಕೆಯನ್ನು ಉತ್ಪಾದಿಸಿ ಜನರಿಗೆ ನೀಡಲಾಗುತ್ತಿತ್ತು. ಇದೀಗ ಸರ್ಕಾರದ, ಆರೋಗ್ಯ ಇಲಾಖೆಯ ಈ ಬೇಜವಾಬ್ದಾರಿತನ ಬೆಳಕಿಗೆ ಬಂದಿದ್ದು, ಮಲೆನಾಡಿನ ಜನರು ಆತಂಕಗೊಂಡಿದ್ದಾರೆ. ಹೀಗೆ ಗುಣಮಟ್ಟವಿಲ್ಲದ ಲಸಿಕೆಯನ್ನು ಪಡೆದುಕೊಂಡಿರುವುದರಿಂದ ಏನಾದರೂ ಅಡ್ಡಪರಿಣಾಮಗಳಾಗಬಹುದೇ ಎಂಬ ಆಂತಕ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ 21 ವರ್ಷಗಳಿಂದ ಅನುಮತಿಯಿಲ್ಲದ ಈ ಲಸಿಕೆಯನ್ನು ಜನರಿಗೆ ನೀಡಲಾಗುತ್ತಿದ್ದು, ಒಂದು ಅಂದಾಜಿನ ಪ್ರಕಾರ ಸುಮಾರು 50 ಲಕ್ಷ ಜನರಿಗೆ ಈ ಲಸಿಕೆಯನ್ನು ನೀಡಲಾಗಿದೆ. ಮಂಗನ ಕಾಯಿಲೆ ಕಾಣಿಸಿಕೊಂಡ ತಕ್ಷಣ ಆ ಪ್ರದೇಶದಲ್ಲಿ ವಾಸಿಸುವ ಜನರಿಗೆ ಮುಂಜಾಗ್ರತೆಯಾಗಿ ಈ ಲಸಿಕೆಯನ್ನು ನೀಡಲಾಗುತ್ತದೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಪೋಲಿಯೋಗೆ ಲಸಿಕೆ ಕಂಡುಹಿಡಿದ ಜೋನಾಸ್ ಸಾಲ್ಕ್ ಅದನ್ನು ಮಾರಾಟ ಮಾಡಲೇ ಇಲ್ಲ, ಯಾಕೆ?
ಆರೋಗ್ಯ
Ripponpet News: ಗ್ರಾಮೀಣ ಜನರ ಆರೋಗ್ಯದ ತಪಾಸಣೆ ಮುಖ್ಯ: ಉಜ್ಜಯನಿ ಪೀಠದ ಜಗದ್ಗುರು
Ripponpet News: ರಿಪ್ಪನ್‌ಪೇಟೆಯಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ಆರಂಭಿಸಿರುವುದು ಪ್ರಶಂಸನೀಯ ಎಂದು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ಹೇಳಿದ್ದಾರೆ.
ರಿಪ್ಪನ್‌ಪೇಟೆ: “ಹಳ್ಳಿಯಲ್ಲಿನ ಸಾಮಾನ್ಯ ಜನರು ಇಂದಿನ ದುಬಾರಿ ಖರ್ಚು ಮಾಡಿಕೊಂಡು ದೂರದ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಕಷ್ಟವಾಗಿದೆ. ಈ ನಿಟ್ಟಿನಲ್ಲಿ ತಮ್ಮ ಮನೆಯ ಬಾಗಿಲಿನಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ಪಡೆಯುವಂತಾಗಲು ನಂದಿ ಆಸ್ಪತ್ರೆ ಸಹಕಾರಿಯಾಗಲಿ” ಎಂದು ಉಜ್ಜಯನಿ ಪೀಠದ ಜಗದ್ಗುರುಗಳು ಹೇಳಿದರು.
ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿನಂದಿ ಆಸ್ಪತ್ರೆ ‘’ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಉಜ್ಜಯನಿ ಪೀಠದ ಜಗದ್ಗುರುಗಳು, ಆಸ್ಪತ್ರೆಯ ಸದುಪಯೋಗವನ್ನು ಸ್ಥಳೀಯ ಜನತೆ ಪಡೆದುಕೊಳ್ಳಬೇಕು. ಗ್ರಾಮೀಣ ಭಾಗದ ಜನರ ಆರೋಗ್ಯ ತಪಾಸಣೆ ಬಹಳ ಮುಖ್ಯವಾಗುತ್ತದೆ ಎಂದು ಕರೆ ನೀಡಿದರು.
ಆನಂದಪುರದ ಮುರುಘಾರಾಜೇಂದ್ರ ಸಂಸ್ಥಾನ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿ, “ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾರಕ ರೋಗಗಳಿಂದ ಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ದೂರದ ಆಸ್ಪತ್ರೆಗಳಿಗೆ ಹೋಗಿ ಬರುವುದೇ ಕಷ್ಟವಾಗಿರುವಾಗ ರಿಪ್ಪನ್‌ಪೇಟೆಯಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ಆರಂಭಿಸುವುದರೊಂದಿಗೆ ಸಾಕಷ್ಟು ವೈದ್ಯರಿಗೆ ಮತ್ತು ಆರೋಗ್ಯ ಶೂಶ್ರೂಷಿಕಿಯರಿಗೆ, ಔಷಧ ಅಂಗಡಿಯವರಿಗೆ ಸ್ವಾವಲಂಬಿ ಬದುಕಿಗೆ ಮಾರ್ಗದರ್ಶಿಯಾಗಿರುವುದು ಪ್ರಶಂಸನೀಯ” ಎಂದರು.
ಇದನ್ನೂ ಓದಿ: Kannada New Movie: ʻದಿಲ್ ದಾರ್’ ಎಂದ ಕೆ.ಮಂಜು ಪುತ್ರ: ಶ್ರೇಯಸ್ ಹೊಸ ಸಿನಿಮಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ಸಾಥ್!
ಇದೇ ಕಟ್ಟಡದಲ್ಲಿರುವ ಐಶ್ವರ್ಯ ಕೃಷಿ ಉಪಕರಣಗಳ ಅಂಗಡಿಗೂ ಭೇಟಿ ನೀಡಿ ಗುರು ವಿರಕ್ತ ಪೂಜ್ಯರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಮ.ನಿ.ಪ್ರ. ಅಭಿನವ ಚನ್ನಬಸವ ಮಹಾಸ್ವಾಮೀಜಿ, ನಾರಾಯಣ ಗುರು ಪೀಠದ ರೇಣುಕಾನಂದ ಮಹಾಸ್ವಾಮೀಜಿ, ಶಾಸಕ ಹರತಾಳು ಹಾಲಪ್ಪ ಮಾಲೀಕರಾದ ಸಚ್ಚಿನ ಗೌಡ, ಜೆ.ಎ.ಶಾಂತ ಕುಮಾರ್, ಹುಗುಡಿ ರಾಜು, ಬೆಳಕೋಡು ಹಾಲಸ್ವಾಮಿಗೌಡ ಇನ್ನಿತರರು ಹಾಜರಿದ್ದರು.
ಇದನ್ನೂ ಓದಿ: Kasapa: ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ವಿರುದ್ಧ ಪ್ರಕಾಶಮೂರ್ತಿ ಗರಂ; ನಡೆ-ನುಡಿ ಬದಲಿಸಿಕೊಳ್ಳಲು ಬಹಿರಂಗ ಪತ್ರ
ಆರೋಗ್ಯ
Grapes Benefits: ದ್ರಾಕ್ಷಿ ಸೇವಿಸಿದ್ರೆ ಸನಿಹಕ್ಕೂ ಬರಲ್ಲ ಕ್ಯಾನ್ಸರ್! ಅಬ್ಬಾ ಎಷ್ಟೊಂದು ಲಾಭಗಳು?
ದ್ರಾಕ್ಷಿ (Grapes benefits) ತಿನ್ನುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಉಪಯುಕ್ತ ಮಾಹಿತಿ.
ನರಿಯೊಂದು ದ್ರಾಕ್ಷಿ (Grapes benefits) ಹಣ್ಣಿಗೆ ಆಸೆಪಟ್ಟು, ಎಷ್ಟು ಪ್ರಯತ್ನಿಸಿದರೂ ದೊರೆಯದೆ, ʻಸಾಯಲತ್ಲಾಗೆ, ಹುಳಿ ದ್ರಾಕ್ಷಿಯಿದುʼ ಎಂದು ಹೊರಟುಹೋದ ಕಥೆಯನ್ನು ಸಾಮಾನ್ಯವಾಗಿ ಎಲ್ಲರೂ ಬಾಲ್ಯದಲ್ಲಿ ಕೇಳಿಯೇ ಇರುತ್ತೇವೆ. ಅದು ನರಿಯ ಕಥೆಯಾಯಿತು, ಈಗ ನಮಗೆ ದ್ರಾಕ್ಷಿ ಹಣ್ಣು ಬೇಕೆಂದರೆ ದ್ರಾಕ್ಷಿಯ ತೋಟಕ್ಕೆ ಹೋಗಿ ಹಾರಾಡಬೇಕೆಂದಿಲ್ಲ, ಅಂಗಡಿಗೆ ಹೋಗಿ ಬೇಕಾದಷ್ಟನ್ನು ಖರೀದಿಸಿ ತಂದರಾಯಿತು. ಗೊಂಚಲಲ್ಲಿ ತೂಗುವ ಈ ರಸಭರಿತ ಹಣ್ಣುಗಳು ಕಣ್ಣಿಗೆ ಮಾತ್ರ ತಂಪಲ್ಲ, ಬಾಯಿ, ಹೊಟ್ಟೆಗೂ ಹಿತ. ಒಂದಿಷ್ಟು ಹುಳಿ, ಕೆಲವೊಮ್ಮೆ ಚಿಟಿಕೆಯಷ್ಟು ಒಗರು, ಬಹಳಷ್ಟು ಸಿಹಿ ರುಚಿಯ ಮಿಶ್ರಣದ ಹಣ್ಣುಗಳಿವು.
ಇದರ ಬಣ್ಣಗಳೇ ಕೆಲವೊಮ್ಮೆ ಬಾಯಲ್ಲಿ ನೀರೂರಿಸಿಬಿಡುತ್ತವೆ. ತಿಳಿ ಹಸಿರು, ಅಚ್ಚ ಹಸಿರು, ನಸುಗೆಂಪು, ತುಸು ಹೆಚ್ಚೇ ಕೆಂಪು, ಕಪ್ಪು, ನಸು ನೀಲಿ, ನೇರಳೆ- ಹೀಗೆ ಹಲವಾರು ಬಣ್ಣಗಳಲ್ಲಿ ದ್ರಾಕ್ಷಿಯನ್ನು ಕಾಣಬಹುದು. ಹೊರಮೈ ಮಾಟಗಳೂ ಅಷ್ಟೇ, ಸಣ್ಣದು, ದೊಡ್ಡದು, ಉರುಟಾದ್ದು, ಮೊಟ್ಟೆಯಾಕಾರದ್ದು, ಉದ್ದ ಮಾಟದ್ದು- ಎಷ್ಟೊಂದು ಬಗೆಗಳಿವೆ. ಹಾಗೆಂದು ಈ ಯಾವ ಬಣ್ಣ, ಮಾಟಗಳ ದ್ರಾಕ್ಷಿ ತಿಂದರೂ, ರುಚಿ ಮತ್ತು ಪೋಷಕತತ್ವಗಳಿಗೆ ಏನೂ ಮೋಸವಿಲ್ಲ. ಹಾಗಾದರೆ ಏನೆಲ್ಲ ಲಾಭಗಳಿವೆ ದ್ರಾಕ್ಷಿ ತಿನ್ನುವುದರಲ್ಲಿ?
ಕ್ಯಾನ್ಸರ್ ದೂರ
ಪಾಲಿಫೆನಾಲ್ ಮತ್ತು ರೆಸ್ವೆರಾಟ್ರೋಲ್‌ನಂಥ ಪ್ರಮುಖ ಆಂಟಿ ಆಕ್ಸಿಡೆಂಟ್‌ಗಳು ದ್ರಾಕ್ಷಿಯಲ್ಲಿವೆ. ಕ್ಯಾನ್ಸರ್ ಅಥವಾ ಯಾವುದೇ ರೀತಿಯ ಗಡ್ಡೆಗಳು ಬೆಳೆಯದಂತೆ ತಡೆಯುವ ಸಾಮರ್ಥ್ಯ ಇವುಗಳಿಗಿರುವುದಾಗಿ ಅಧ್ಯಯನಗಳು ಹೇಳುತ್ತವೆ. ಯಕೃತ್, ಕರುಳು, ಸ್ತನ, ಜಠರ, ಚರ್ಮ ಮುಂತಾದ ಕಡೆಗಳಲ್ಲಿ ಕ್ಯಾನ್ಸರ್ ಗಡ್ಡೆಗಳು ಬಾರದಂತೆ ಕಾಪಾಡುತ್ತದೆ, ಇದರಲ್ಲಿನ ಕ್ವಾರ್ಸೆಂಟೀನ್ ಎಂಬ ಫ್ಲವನಾಯ್ಡ್‌ನಿಂದ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಕುಂಠಿತಗೊಳ್ಳುವುದು ಪತ್ತೆಯಾಗಿದೆ.
ಹೃದಯಾರೋಗ್ಯ ವೃದ್ಧಿ
ಇದರ ಪಾಲಿಫೆನಾಲ್‌ಗಳು ದೇಹದಲ್ಲಿನ ಉರಿಯೂತ ತಗ್ಗಿಸಿ, ಹೃದಯದ ಆಯಸ್ಸು ಹೆಚ್ಚಿಸುತ್ತವೆ. ರಕ್ತದ ಪರಿಚಲನೆಯನ್ನು ವೃದ್ಧಿಸಿ, ಹೃದಯಕ್ಕೆ ಬಾಧೆಯಾಗದಂತೆ ನೋಡಿಕೊಳ್ಳುತ್ತವೆ. ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುವಂತೆ ಮಾಡುವ ಬಗ್ಗೆಯೂ ಅಧ್ಯಯನಗಳು ಹೇಳುತ್ತವೆ.
ದೃಷ್ಟಿ ಚುರುಕು
ನಿಯಮಿತವಾಗಿ ದ್ರಾಕ್ಷಿ ಹಣ್ಣು ತಿನ್ನುವುದರಿಂದ ಕಣ್ಣಿನ ದೃಷ್ಟಿ ಮಂದವಾಗುವ ಸಾಧ್ಯತೆಯನ್ನು ಶೇ. ೩೬ರಷ್ಟು ತಗ್ಗಿಸಬಹುದು ಎನ್ನುತ್ತವೆ ಅಧ್ಯಯನಗಳು. ಅದರಲ್ಲೂ ಕೆಂಪು ದ್ರಾಕ್ಷಿಯನ್ನು ಪ್ರತಿದಿನ ಸೇವಿಸುವುದರಿಂದ ವೃದ್ಧಾಪ್ಯದಲ್ಲಿ ಕಾಡುವ ದೃಷ್ಟಿದೋಷದ ಸಾಧ್ಯತೆ ಕ್ಷೀಣವಾಗುತ್ತದೆ.
ಪ್ರತಿರೋಧಕ ಶಕ್ತಿ ವೃದ್ಧಿ
ಹಲವು ಫ್ಲವನಾಯ್ಡ್‌ಗಳು, ವಿಟಮಿನ್ ಎ, ಸಿ ಮತ್ತು ಕೆ ಜೀವಸತ್ವಗಳು, ಕಬ್ಬಿಣ ಮತ್ತು ಮೆಗ್ನೀಶಿಯಂನಂಥ ಖನಿಜಗಳಿಂದ ಸಮೃದ್ಧವಾಗಿರುವ ದ್ರಾಕ್ಷಿ ಹಣ್ಣುಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲವು. ಅದರಲ್ಲೂ ದೈನಂದಿನ ಆಹಾರದಲ್ಲಿ ಬೊಗಸೆ ದ್ರಾಕ್ಷಿಗೆ ಸ್ಥಾನ ನೀಡಿದರೆ ಋತು ಬದಲಾವಣೆಯ ಹೊತ್ತಿಗೆ ಬರುವಂಥ ನೆಗಡಿ, ಜ್ವರದಂಥ ಕಿರಕಿರಿಗಳನ್ನು ತಡೆಯಬಹುದು
ಮೂಳೆಗಳ ಬಲವರ್ಧನೆ
ತಾಮ್ರ, ಕಬ್ಬಿಣ, ಮ್ಯಾಂಗನೀಸ್‌ನಂಥ ಅಗತ್ಯ ಖನಿಜಗಳನ್ನು ಹೊಂದಿರುವ ದ್ರಾಕ್ಷಿಯ ಸೇವನೆಯಿಂದ ಮೂಳೆಗಳ ಶಕ್ತಿಯನ್ನು ಹೆಚ್ಚಿಸಬಹುದು. ಆಸ್ಟಿಯೊ ಆರ್ಥರೈಟಿಸ್‌ನಿಂದ ಉಂಟಾಗುವ ಮಂಡಿ ನೋವಿನ ಉಪಟಳವನ್ನು ದ್ರಾಕ್ಷಿಗಳು ಶಮನ ಮಾಡಬಲ್ಲವು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಕೀಲುಗಳಲ್ಲಿ ಶಕ್ತಿ ಸಂಚಯಿಸಿ, ಅವುಗಳ ಕ್ಷಮತೆಯನ್ನು ಹೆಚ್ಚಿಸುತ್ತವೆ.
ಮಧುಮೇಹಿಗಳಿಗೂ ಕ್ಷೇಮ
ಹೌದು, ಸಿಹಿ ರುಚಿಯ ಹಣ್ಣುಗಳನ್ನು ತಿನ್ನುವಾಗ ಇದು ಮಧುಮೇಹಿಗಳಿಗೆ ಸುರಕ್ಷಿತವೇ ಎಂಬ ಸಂಶಯ ಕಾಡುವುದು ಸಹಜ. ಇದರ ಗ್ಲೈಸೆಮಿಕ್ ಇಂಡೆಕ್ಸ್ ಮಧ್ಯಮ ಪ್ರಮಾಣದಲ್ಲಿದ್ದು, ಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಮಧುಮೇಹಿಗಳಿಗೂ ಅಪಥ್ಯವಾಗುವುದಿಲ್ಲ.
ಇದನ್ನೂ ಓದಿ: Bone Health: ಮೂಳೆಗಳ ಬಲವರ್ಧನೆಗೆ ಏನು ಮಾಡಬೇಕು?
ಆರೋಗ್ಯ
New Virus: ಕೊರೊನಾ ಬೆನ್ನಲ್ಲೇ ಪತ್ತೆಯಾಯ್ತು ಮತ್ತೊಂಡು ಡೆಡ್ಲಿ ವೈರಸ್! ಭಾರತದಲ್ಲೇ ಮೊದಲ ಕೇಸ್!
ಕೊರೊನಾ ಸೋಂಕಿನ ಬೆನ್ನಲ್ಲೇ ಮತ್ತೊಂದು ಸೋಂಕಿನ (New Virus) ಸುದ್ದಿ ಎಲ್ಲೆಡೆ ಹರಿದಾಡಿದೆ. ಸಿಲ್ವರ್ ಲೀಫ್ ಡಿಸೀಸ್ ಹೆಸರಿನ ಕಾಯಿಲೆ ಭಾರತದಲ್ಲಿ ಮೊದಲನೆಯದಾಗಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ನವದೆಹಲಿ: ಕೊರೊನಾ ಸೋಂಕು ವಿಶ್ವಾದ್ಯಂತ ಭಾರೀ ತಲ್ಲಣವನ್ನೇ ಉಂಟುಮಾಡಿತ್ತು. ಲಕ್ಷಾಂತರ ಜೀವಗಳು ಈ ಸೋಂಕಿನಿಂದಾಗಿ ಸಾವನ್ನಪ್ಪಿವೆ. ಅದರ ಬೆನ್ನಲ್ಲೇ ಇದೀಗ ಮತ್ತೊಂದು ವೈರಸ್ (New Virus) ಬಂದಿರುವ ಬಗ್ಗೆ ಸುದ್ದಿ ಹರಿದಾಡಲಾರಂಭಿಸಿದೆ. ಅದರಲ್ಲೂ ಭಾರತದಲ್ಲಿಯೇ ಮೊದಲನೆಯದಾಗಿ ಸೋಂಕು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Covid-19 Cases: ಕೊರೊನಾ ಸೋಂಕಿನ ಕೇಸ್ನಲ್ಲಿ 24ಗಂಟೆಯಲ್ಲಿ ಶೇ.40 ಏರಿಕೆ; ಇಂದು 3ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು
ಹೌದು. ಭಾರತದಲ್ಲಿ ಸಸ್ಯಗಳಿಗೆ ಹೆಚ್ಚಾಗಿ ಕಾಡುವ ರೋಗವೆಂದರೆ ಅದು ಸಿಲ್ವರ್ ಲೀಫ್ ರೋಗ. ಈ ರೋಗದ ವೈರಸ್ ಇದೀಗ ಮಾನವನ ದೇಹಕ್ಕೂ ಹೊಗ್ಗಿರುವುದಾಗಿ ವರದಿಯಾಗಿದೆ. ಭಾರತದ ರೈತನೊಬ್ಬನಿಗೆ ಈ ಸೋಂಕು ತಗುಲಿದ್ದು, ಆತನಲ್ಲಿ ಜ್ವರ, ಕೆಮ್ಮುವಿನಂತಹ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ. ಇದುವರೆಗೆ ಈ ಸೋಂಕು ಯಾವುದೇ ದೇಶದಲ್ಲಿಯೂ ಮನುಷ್ಯರಿಗೆ ಹಬ್ಬಿರಲಿಲ್ಲ. ಇದೇ ಮೊದಲನೇ ಬಾರಿಗೆ ಇಂತದ್ದೊಂದು ಪ್ರಕರಣ ವರದಿಯಾಗಿದೆ.
ಅಂದ ಹಾಗೆ ಈ ಸೋಂಕು ಯಾವಾಗ ರೈತನಿಗೆ ತಗುಲಿದ್ದು ಎನ್ನುವ ವಿಚಾರದಲ್ಲಿ ಸ್ಪಷ್ಟ ಮಾಹಿತಿಯಿಲ್ಲ. ಆದರೆ ಈ ಕುರಿತಾದ ವರದಿಯೊಂದು ʼಮೆಡಿಕಲ್ ಮೈಕೋಲಜಿ ಕೇಸ್ ರಿಪೋರ್ಟ್ಸ್ʼ ಜರ್ನಲ್‌ನಲ್ಲಿ ದಾಖಲಾಗಿದೆ.
ಇದನ್ನೂ ಓದಿ: Coronavirus: ಇಂದು 1800ಕ್ಕೂ ಅಧಿಕ ಕೊರೊನಾ ಕೇಸ್ಗಳು ಪತ್ತೆ; ಏಪ್ರಿಲ್ನಲ್ಲಿ 2 ದಿನ ಆಸ್ಪತ್ರೆಗಳಲ್ಲಿ ಅಣುಕು ಕಾರ್ಯಾಚರಣೆ
ಇತ್ತೀಚೆಗೆ ಅಮೆರಿಕದ ಆರೋಗ್ಯ ಅಧಿಕಾರಿಗಳು ವೈರಸ್ ಒಂದರ ಬಗ್ಗೆ ಎಚ್ಚರಿಕೆ ಕೊಟ್ಟಿದ್ದರು. ಕ್ಯಾಂಡಿಡಾ ಔರಿಸ್ ಫಂಗಸ್ ಹೆಸರಿನ ಸೋಂಕು ಇತ್ತೀಚಿನ ದಿನಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದರು. ಹಾಗೆಯೇ ಈ ಸೋಂಕಿಗೆ ತುತ್ತಾಗುವವರಲ್ಲಿ ಶೇ.60 ಮಂದಿ ಸಾವನ್ನಪ್ಪುವ ಸಾಧ್ಯತೆಯಿದೆ ಎಂದೂ ಅವರು ತಿಳಿಸಿದ್ದರು. ಅದರ ಬೆನ್ನಲ್ಲೇ ಇದೀಗ ಭಾರತದಲ್ಲಿ ಮತ್ತೊಂದು ಸೋಂಕಿನ ವಿಚಾರ ಸುದ್ದಿಯಾಗಿದೆ. ಇದರ ಬಗ್ಗೆ ಭಾರತೀಯ ಆರೋಗ್ಯ ಇಲಾಖೆಯಿಂದ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ.
ಆರೋಗ್ಯ
Shivamogga News: ವಿನ್‌ಲೈಫ್ ಟ್ರಸ್ಟ್ ವತಿಯಿಂದ ಏ. 2ರಂದು ಆರೋಗ್ಯ ಉತ್ಸವ ಜನ ಜಾಗೃತಿ ಸಮಾವೇಶ
Shivamogga News: ಆರೋಗ್ಯ ಉತ್ಸವ ಜನಜಾಗೃತಿ ಸಮಾವೇಶದಲ್ಲಿ ಜೀವ ರಕ್ಷಕ ತರಬೇತಿ, ಕಿರು ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ವಿನ್‌ಲೈಫ್ ಟ್ರಸ್ಟಿ ಡಾ.ಪೃಥ್ವಿ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ: ವಿನ್‌ಲೈಫ್ ಟ್ರಸ್ಟ್ (WinLife Trust) ವತಿಯಿಂದ ಕುವೆಂಪು ರಂಗ ಮಂದಿರದಲ್ಲಿ ಏ.2 ರಂದು ಆರೋಗ್ಯ ಉತ್ಸವ ಜನ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿನ್‌ಲೈಫ್ ಟ್ರಸ್ಟಿ ಡಾ.ಪೃಥ್ವಿ, “ಈ ಸಮಾವೇಶದಲ್ಲಿ ತುರ್ತು ಜೀವ ರಕ್ಷಕ ತರಬೇತಿ ಮತ್ತು ಕಾರ್ಯಾಗಾರ ನಡೆಯಲಿದ್ದು, ದೈನಂದಿನ ಬದುಕಿನಲ್ಲಿ ಒತ್ತಡ ನಿರ್ವಹಣೆ, ಮಧುಮೇಹ @360 ಈ ವಿಷಯ ಕುರಿತು ಅರಿವು ಮೂಡಿಸಲಾಗುವುದು. ಆರೋಗ್ಯ ಕುರಿತು ಪ್ರಾಯೋಗಿಕ ತರಬೇತಿ, ಕಾರ್ಯಾಗಾರ, ಯೋಗ, ವಸ್ತು ಪ್ರದರ್ಶನ, ಕಿರು ನಾಟಕ ಪ್ರದರ್ಶನ, ಸಮಾಲೋಚನೆ ಹಾಗೂ ಉಪನ್ಯಾಸವನ್ನು ಏರ್ಪಡಿಸಲಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: Ananya Panday: ತನ್ನನ್ನು ಎಸಿಪಿ ಎಂದು ಕರೆಯದಂತೆ ಮಾಧ್ಯಮಗಳಿಗೆ ವಿನಂತಿಸಿದ ಅನನ್ಯಾ ಪಾಂಡೆ
ಸುದ್ದಿಗೋಷ್ಠಿಯಲ್ಲಿ ವಿನ್‌ಲೈಫ್ ನಿರ್ದೇಶಕರಾದ ಡಾ.ಶಂಕರ್, ಡಾ.ವಿಜಯ ಕುಮಾರ್, ರೆಹಮತ್ ಹಾಗೂ ಬದ್ರಿನಾಥ್ ಉಪಸ್ಥಿತರಿದ್ದರು.
-
ದೇಶ20 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ21 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಗ್ಯಾಜೆಟ್ಸ್10 hours ago
Aadhaar Update: ಆನ್‌ಲೈನ್‌ನಲ್ಲಿ ಆಧಾರ್ ಅಪ್ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
-
ಅಂಕಣ21 hours ago
ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!
-
ಅಂಕಣ21 hours ago
Brand story : ಚೀನಾದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾ, 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದೇಕೆ?
-
ಕರ್ನಾಟಕ11 hours ago
B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ
-
ದೇಶ12 hours ago
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್ಗೆ 25 ಸಾವಿರ ರೂ. ದಂಡ!
-
ಕರ್ನಾಟಕ14 hours ago
SSLC Exam 2023: ಕಲಬುರಗಿಯಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ; ವಾಟ್ಸಾಪ್ನಲ್ಲಿ ಹರಿದಾಡಿದ ಕನ್ನಡ ಪೇಪರ್