ಚಿಕ್ಕಬಳ್ಳಾಪುರ: ಏಳು ಬಾರಿ ಲೋಕಸಭಾ ಚುನಾವಣೆಯಲ್ಲಿ (Loka sabha Election) ಗೆದ್ದು ಕೇಂದ್ರದ ಮಂತ್ರಿಯೂ ಆಗಿ ಮೆರೆದವರು ಕೆ.ಎಚ್. ಮುನಿಯಪ್ಪ (KH Muniyappa). ಇದೀಗ ರಾಜಕೀಯ ಬದುಕಿನಲ್ಲಿ ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ (Karnataka Election 2023) ಸ್ಪರ್ಧಿಸಿ ಗೆದ್ದಿರುವ ಅವರು ರಾಜ್ಯದಲ್ಲೂ ಮಂತ್ರಿಪಟ್ಟವನ್ನು ಏರಿದ್ದಾರೆ. ರಾಜ್ಯದ ಅತಿ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಕೆ.ಎಚ್. ಮುನಿಯಪ್ಪ ಅವರಿಗೆ ಈಗ 75 ವರ್ಷ.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಗೆದ್ದಿರುವ ಅವರು ದಲಿತ ಎಡಗೈ ಪಂಗಡಕ್ಕೆ ಸೇರಿದವರು. 1948ರ ಮಾರ್ಚ್ 7ರಂದು ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ ತಾಲೂಕಿನ ಕಂಬದಹಳ್ಳಿಯಲ್ಲಿ ಜನಿಸಿದ ಅವರ ತಂದೆ ಹನುಮಪ್ಪ ಮತ್ತು ತಾಯಿ ವೆಂಕಟಮ್ಮ.
ಇವರ ಪತ್ನಿ ನಾಗರತ್ನಮ್ಮ. ಇವರಿಗೆ ಒಬ್ಬ ಪುತ್ರ ಮತ್ತು ಮೂವರು ಹೆಣ್ಣು ಮಕ್ಕಳು. ಇವರ ಒಬ್ಬ ಪುತ್ರಿ ರೂಪಕಲಾ ಕೆಜಿಎಫ್‌ನ ಶಾಸಕಿಯಾಗಿದ್ದಾರೆ.
ಆಗಲೇ ವಕೀಲಿಕೆ ಪದವಿ ಪಡೆದಿದ್ದರು
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲಿ ಮುಗಿಸಿದ ಕೆ.ಎಚ್. ಮುನಿಯಪ್ಪ ಅವರು, ಕೋಲಾರ ಹಾಗೂ ಬೆಂಗಳೂರಿನಲ್ಲಿ ತಮ್ಮ ಉನ್ನತ ವ್ಯಾಸಂಗ ಮಾಡಿದ್ದಾರೆ. ಅವರು ಎಲ್.ಎಲ್.ಬಿ ಪದವೀಧರ.
ರಾಜಕೀಯ ಪ್ರವೇಶ
1978-83ರಲ್ಲಿ ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿದರು ಕೆ.ಎಚ್. ಮುನಿಯಪ್ಪ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ತಾಲೂಕು ವ್ಯವಸಾಯ ಸೇವಾ ಸಹಕಾರಿ ಬೋರ್ಡ್‌ನ ಉಪಾಧ್ಯಕ್ಷರಾಗಿ ಅವರ ರಾಜಕೀಯ ಬದುಕು ಆರಂಭಗೊಂಡಿತು.
1991ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿ ಕಣಕ್ಕಿಳಿದ ಅವರು ಗೆಲುವು ಸಾಧಿಸಿದರು. ಅಲ್ಲಿಂದ ಬಳಿಕ ಸತತ ಏಳು ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲಿಲ್ಲದ ಸರದಾರನಾಗಿರುವ ಕೆ.ಎಚ್. ಮುನಿಯಪ್ಪ ಅವರ ಹೆಗ್ಗಳಿಕೆ. ಆದರೆ, 2019ರ ಚುನಾವಣೆಯಲ್ಲಿ ಅವರು ಮೊದಲ ಬಾರಿ ಸೋಲು ಕಂಡರು.
ಕೇಂದ್ರ ಸಚಿವರಾಗಿ ಸೇವೆ
2004ರ ಲೋಕಸಭಾ ಚುನಾವಣೆಯಲ್ಲಿ 5ನೇ ಬಾರಿಗೆ ಕೋಲಾರದಿಂದ ಗೆಲುವನ್ನು ಸಾಧಿಸಿದ ಅವರಿಗೆ ಮೊದಲ ಬಾರಿ ಕೇಂದ್ರ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕಿತು. ಯುಪಿಎ ಸರ್ಕಾರದಲ್ಲಿ ಅವರು ರಸ್ತೆ ಹಾಗೂ ಹೆದ್ದಾರಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. 6ನೇ ಬಾರಿ ಗೆಲುವು ದಾಖಲಿಸಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ರೈಲ್ವೇ ಖಾತೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ಬಳಿಕ ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ಸಚಿವರಾಗಿ ಕೂಡಾ ಕೆಲಸ ಮಾಡಿದರು.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲು ಕಂಡ ಅವರು ಈ ಬಾರಿ ರಾಜ್ಯ ರಾಜಕಾರಣದ ಕಡೆಗೆ ಒಲವು ತೋರಿದರು. ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯ ರಾಜಕಾರಣ ಪ್ರವೇಶ ಮಾಡಿ ದೇವನಹಳ್ಳಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯ ಗಳಿಸಿದ್ದಾರೆ. ಇದೀಗ ಅವರಿಗೆ ಸಚಿವ ಸ್ಥಾನವೂ ಸಿಕ್ಕಿದೆ.
ಇದನ್ನೂ ಓದಿ : Devanahalli Election Results : ದೇವನಹಳ್ಳಿಯಲ್ಲಿ ಕೇಂದ್ರದ ಮಾಜಿ ಸಚಿವ ಮುನಿಯಪ್ಪಗೆ ಜಯ