Site icon Vistara News

Kidnap Case | ಟ್ಯೂಷನ್‌ಗೆ ಹೋಗಿದ್ದ ಬಾಲಕನ ಕಿಡ್ನ್ಯಾಪ್ ಮಾಡಿದ್ದ ಗ್ಯಾಂಗ್‌ 2 ಗಂಟೇಲಿ ಅರೆಸ್ಟ್‌!

Kidnap Case

ಚಿಕ್ಕೋಡಿ: ಅದೊಂದು ಆರು ಜನರ ಕಿರಾತಕರ ಗ್ಯಾಂಗ್‌. ಹಲವು ದಿನಗಳಿಂದ ಕಿಡ್ನ್ಯಾಪ್‌ಗಾಗಿ (Kidnap Case) ಸಂಚು ರೂಪಿಸಿದ್ದರು. ಅದರಂತೆ ಆಗಸ್ಟ್‌ ೨ರಂದು ಟ್ಯೂಷನ್‌ಗೆ ಹೋಗಿದ್ದ ೧೪ ವರ್ಷದ ಬಾಲಕನನ್ನು ಅಪಹರಣ ಮಾಡಿದ್ದರು. ಬಳಿಕ ಆನ್‌ಲೈನ್‌ ಪೋರ್ಟಲ್‌ ಮೂಲಕ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಬಳಿಕ ನಡೆದಿದ್ದೆಲ್ಲ ಸಿನಿಮೀಯ ಕತೆ.

ಇದು ಕರ್ನಾಟಕ ಪೊಲೀಸರ ಕಾರ್ಯಕ್ಷಮತೆಯನ್ನು ಮತ್ತೊಮ್ಮೆ ಪ್ರಶಂಸಿಸುವಂತಹ ರೋಚಕ ಪ್ರಕರಣ. ಪ್ರಕರಣವನ್ನು ದಾಖಲಿಸಿಕೊಳ್ಳುವ ಮೊದಲೇ ಅಪಹರಣಕಾರರನ್ನು ಬಂಧಿಸಿ, ಜೈಲಿಗಟ್ಟುವ ಮೂಲಕ ಕುಟುಂಬದವರಿಗೆ ಮಗ ಸೇರುವಂತೆ ಮಾಡಲಾಗಿದೆ. ಚಿಕ್ಕೋಡಿಯಲ್ಲಿ ಈ ಪ್ರಕರಣ ನಡೆದಿದ್ದು, ಆರೋಪಿಗಳೆಲ್ಲರೂ ಈಗ ಬಂಧನದಲ್ಲಿದ್ದಾರೆ.

ಏನಿದು ಪ್ರಕರಣ?

ಎಂದಿನಂತೆ ಆಗಸ್ಟ್‌ ೨ರಂದೂ ಬಾಲಕ ಸಂಜೆ ವೇಳೆಗೆ ಟ್ಯೂಷನ್‌ ಕ್ಲಾಸ್‌ಗೆಂದು ಹೋಗಿದ್ದಾನೆ. ಆದರೆ, ಈತನನ್ನು ಅಪಹರಣ ಮಾಡಬೇಕೆಂದು ಬಹಳ ದಿನದಿಂದ ಹೊಂಚುಹಾಕಿದ್ದ ದುಷ್ಕರ್ಮಿಗಳ ತಂಡವು, ಬಾಲಕ ಟ್ಯೂಷನ್‌ ಮುಗಿಸಿ ೬ ಗಂಟೆ ವೇಳೆಗೆ ವಾಪಸ್‌ ಬರುವ ವೇಳೆ ಯಾರಿಗೂ ತಿಳಿಯದಂತೆ ಅಪಹರಣ ಮಾಡಿದ್ದಾರೆ. ಬಳಿಕ ತಮ್ಮ ಕಾರಿನಲ್ಲಿ ಊರೂರು ಸುತ್ತಿಸುತ್ತಾ ಆತನ ಮನೆಯವರಿಗೆ ಕರೆ ಮಾಡಿ ಕಿಡ್ನ್ಯಾಪ್‌ ಮಾಡಲಾಗಿರುವ ಬಗ್ಗೆಯಷ್ಟೇ ಮಾಹಿತಿ ನೀಡಿ ಕಾಲ್‌ ಕಟ್‌ ಮಾಡಿದ್ದಾರೆ.

ಇದನ್ನೂ ಓದಿ | ಆರತಕ್ಷತೆ ಸಿದ್ಧತೆಯಲ್ಲಿದ್ದ ಯುವತಿ ಕಿಡ್ನಾಪ್, ಹುಬ್ಬಳ್ಳಿಯ ರೌಡಿ ಕಾರ್ಪೊರೇಟರ್ ಮೇಲೆ ಬಿತ್ತು ಕೇಸ್

ವಿಷಯ ತಿಳಿದ ಪೋಷಕರಿಗೆ ತೀವ್ರ ಆತಂಕವಾಗಿದೆ. ಹೀಗಾಗಿ ಅವರು ಸಂಕೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ತಕ್ಷಣ ಅಲರ್ಟ್‌ ಆದ ಪೊಲೀಸರು ಇಡೀ ಪೊಲೀಸ್‌ ತಂಡವನ್ನು ಸಜ್ಜುಗೊಳಿಸಿದ್ದಾರೆ. ಅಲ್ಲದೆ, ಠಾಣಾ ವ್ಯಾಪ್ತಿಯ ಎಲ್ಲ ಕಡೆ ನಾಕಾಬಂಧಿ ಹಾಕಿ ಆರೋಪಿಗಳಿಗೆ ತೀವ್ರ ಶೋಧವನ್ನು ಪ್ರಾರಂಭಿಸಿದ್ದರು. ಅನುಮಾನಗೊಂಡ ಎಲ್ಲ ವಾಹನಗಳ ತಪಾಸಣೆಯನ್ನು ಪೊಲೀಸರು ಮಾಡುತ್ತಿರುವ ವಿಷಯ ಅಪಹರಣಕಾರರಿಗೂ ತಿಳಿಯಿತು. ಈ ಹಿನ್ನೆಲೆಯಲ್ಲಿ ತಾವು ಇನ್ನು ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂಬ ಕಾರಣಕ್ಕೆ ಬಾಲಕನನ್ನು ನಿಪ್ಪಾಣಿ ಬಳಿಯ ಘಾಟ್ ಒಂದರ ಬಳಿ ನಡು ದಾರಿಯಲ್ಲಿ ಬಿಟ್ಟು ಹೋಗಿದ್ದಾರೆ.

ನಿರ್ಜನ ಪ್ರದೇಶದಲ್ಲೇ ಬಿಟ್ಟುಹೋದ ದುರುಳರು

ಯಾರೂ ಇಲ್ಲದ ಒಂದು ದಾರಿಯಲ್ಲಿ ಅದೂ ರಾತ್ರಿ ವೇಳೆ ಒಬ್ಬನನ್ನೇ ಬಿಟ್ಟುಹೋಗಿದ್ದರಿಂದ ಆ ಬಾಲಕ ತೀವ್ರವಾಗಿ ಭಯಗೊಂಡಿದ್ದ. ಆತನಿಗೆ ಎಲ್ಲಿ ಹೋಗಬೇಕು? ಹೇಗೆ ಹೋಗುಬೇಕು? ತಾನೀಗ ಎಲ್ಲಿದ್ದೇನೆ ಈ ಯಾವ ಮಾಹಿತಿಯೂ ಇರಲಿಲ್ಲ. ರಸ್ತೆ ಪಕ್ಕದಲ್ಲೇ ಭಯದಲ್ಲಿ ನಡುಗುತ್ತಾ ಅತ್ತು ಅತ್ತು ಸುಸ್ತಾಗಿದ್ದ. ಆದರೆ, ಇದೇ ವೇಳೆ ಪೊಲೀಸರು ಎಲ್ಲೆಡೆ ಗಸ್ತು ತಿರುಗುತ್ತಿದ್ದ ವೇಳೆ ಬಾಲಕನೊಬ್ಬ ಅಳುತ್ತಾ ಒಬ್ಬನೇ ನಿಂತಿರುವುದು ಕಣ್ಣಿಗೆ ಬಿದ್ದು ವಿಚಾರಿಸಿದಾಗ ಅಪಹರಣಕ್ಕೊಳಗಾಗಿದ್ದು ಈತನೇ ಎಂಬುದು ತಿಳಿಯುತ್ತದೆ. ಹೀಗಾಗಿ ಅವನನ್ನು ಠಾಣೆಗೆ ಕರೆದೊಯ್ಯುವ ಪೊಲೀಸರು ಸಮಾಧಾನಪಡಿಸಿದರು.

ಪೊಲೀಸ್‌ ಠಾಣೆಯಲ್ಲಿ ಬಾಲಕನ ಬಳಿ ಆರೋಪಿಗಳ ಬಗ್ಗೆ ವಿಚಾರಣೆ ನಡೆಸಿದಾಗ ವಿವರಗಳೇನೂ ಲಭ್ಯವಾಗಿಲ್ಲ. ಆ ಬಾಲಕ ಈ ತಂಡದ ಯಾವೊಬ್ಬನನ್ನೂ ಈ ಮೊದಲು ನೋಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಾಲಕನನ್ನು ಮೊದಲು ಪೋಷಕರಿಗೆ ಒಪ್ಪಿಸಿ ಅವರಿಗೆ ಆನ್‌ಲೈನ್‌ ಪೋರ್ಟಲ್‌ ಮೂಲಕ ಕರೆ ಮಾಡಿ ವಿಷಯ ತಿಳಿಸಿದ್ದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳ ಜಾಡು ಹಿಡಿದು ಕೇವಲ ಒಂದು ಗಂಟೆಯೊಳಗೆ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಾರೆಯಾಗಿ ಇಡೀ ಅಪಹರಣ ವೃತ್ತಾಂತವು ೨ ಗಂಟೆ ಅವಧಿಯೊಳಗೆ ಮುಗಿದಂತಾಗಿದೆ. ‌

ಇದನ್ನೂ ಓದಿ | ಎಂಜಿನಿಯರಿಂಗ್‌ ವಿದ್ಯಾರ್ಥಿಯ ಅಪಹರಣಕಾರರ ಸೆರೆ, ಆನ್‌ಲೈನ್‌ ಗೇಮಲ್ಲಿ ಗೆದ್ದ ಹಣಕ್ಕಾಗಿ ಸ್ಕೆಚ್‌!

ಹಣಕ್ಕೆ ಬೇಡಿಕೆ ಇಡುವವರಿದ್ದರು

ಸೌರಭ್, ದೀಪಕ್, ರಮೇಶ್, ಸುಲ್ತಾನ, ಪ್ರಸಾದ, ವಿನಾಯಕ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಕಿಡ್ನ್ಯಾಪ್‌ ಮಾಡಿ ಮನೆಯವರಿಗೆ ಮಾಹಿತಿ ನೀಡಿದ್ದರು. ಸ್ವಲ್ಪ ಸಮಯದ ಬಳಿಕ ಹಣಕ್ಕೆ ಬೇಡಿಕೆ ಇಡುವ ಇರಾದೆಯನ್ನು ಹೊಂದಿದ್ದರು. ಆದರೆ, ಅಷ್ಟರೊಳಗೆ ಪೊಲೀಸರು ಕಟ್ಟೆಚ್ಚರ ವಹಿಸಿ ಇಡೀ ನಗರವನ್ನು ಸುತ್ತುವರಿದಿದ್ದರಿಂದ ಇವರೆಲ್ಲರ ಪ್ಲ್ಯಾನ್‌ ಉಲ್ಟಾ ಆಗಿದೆ. ಈ ಹಿನ್ನೆಲೆಯಲ್ಲಿ ಬಾಲಕನನ್ನು ಬಿಟ್ಟು ಕಳಿಸಿದ್ದರು. ಅಲ್ಲದೆ, ಪೊಲೀಸರ ಕೈಗೂ ಸಿಕ್ಕಿಬಿದ್ದಿದ್ದರು.

ಮೊದಲು ಬಾಲಕನನ್ನು ಪೋಷಕರಿಗೆ ಒಪ್ಪಿಸಿ ಬಳಿಕ ಆತನ ಪೋಷಕರಿಂದ ಪೊಲೀಸರು ದೂರು ಪಡೆದಿದ್ದಾರೆ. ದೂರು ಪಡೆದ ನಂತರ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಮೂರು ಬೈಕ್‌, ಆರು ಮೊಬೈಲ್‌ ಫೋನ್‌ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ ಎಂದು ಗುರುವಾರ (ಆ.೧೮) ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸ್ಥಳೀಯವಾಗಿ ವ್ಯಾಪಕ ಪ್ರಶಂಸೆ ಕೇಳಿಬಂದಿದೆ.

ಇದನ್ನೂ ಓದಿ | Bilkis Bano Case | ಅತ್ಯಾಚಾರ ಆರೋಪಿಗಳೆಲ್ಲ ಬ್ರಾಹ್ಮಣರು, ಒಳ್ಳೇ ಸಂಸ್ಕಾರವಿದೆ ಎಂದ ಬಿಜೆಪಿ ಶಾಸಕ !

Exit mobile version