ಬೆಂಗಳೂರು: ಇಲ್ಲಿನ ಬಾಣಸವಾಡಿ ಪೊಲೀಸ್ ಠಾಣೆಗೆ ಬಂದ ಅದೊಂದು ಫೋನ್ ಕಾಲ್ ಪೊಲೀಸರ ನಿದ್ದೆಗೆಡಿಸುವಂತೆ ಮಾಡಿತ್ತು. ಯಾರೋ ಒಬ್ಬ ಯುವತಿಯೊಬ್ಬಳನ್ನು ಅನಾಮತ್ತಾಗಿ ಎತ್ತಿ ಕಾರಿನಲ್ಲಿ ಹಾಕಿಕೊಂಡು ಅಪಹರಣ ಮಾಡಿದ್ದಾನೆ ಎಂದು ಬಂದ ದೂರಿನ ಹಿನ್ನೆಲೆಯಲ್ಲಿ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದರು. ಈ ರೋಚಕ ಕಿಡ್ಯ್ನಾಪ್ ಪ್ರಕರಣಕ್ಕೆ (Kidnap Mystery) ಇತಿಶ್ರೀ ಸಿಕ್ಕಿದ್ದು, ಅಸಲಿ ವಿಷಯ ಏನೆಂಬುದು ಬಳಿಕವಷ್ಟೇ ತಿಳಿದಿದೆ.
ಶುಕ್ರವಾರ (ನ.4) ಬೆಳಗಿನ ಜಾವ 4 ಗಂಟೆ ಸುಮಾರಿಗೆ ಯುವತಿಯೊಬ್ಬಳು ಕಿಡ್ಯ್ನಾಪ್ ಆಗಿದ್ದಾಳೆಂದು 112 ಕ್ಕೆ ಕರೆ ಬಂದಿತ್ತು. ಯುವತಿಯನ್ನು ಕಿಡ್ಯ್ನಾಪ್ ಮಾಡಿ ಕಾರಿನಲ್ಲಿ ಬಲವಂತವಾಗಿ ಕರೆದೊಯ್ಯಲಾಗಿದೆ ಎಂದು ದೂರು ದಾಖಲಾಗಿತ್ತು. ಯುವತಿ ಯಾರು, ಹಿನ್ನೆಲೆ ಏನು ಎಂಬ ಯಾವುದೇ ಮಾಹಿತಿ ಇರಲಿಲ್ಲ. ದೂರು ಬಂದ ಕೂಡಲೇ ಅಲರ್ಟ್ ಆದ ಬಾಣಸವಾಡಿ ಇನ್ಸ್‌ಪೆಕ್ಟರ್ ಸಂತೋಷ್ ಅವರು, ನಾಲ್ಕು ವಿಶೇಷ ತಂಡಗಳನ್ನು ರಚಿಸಿಕೊಂಡರು. ತಕ್ಷಣವೇ ಕಾರ್ಯಪ್ರವೃತ್ತರಾಗಿ ಕಾರಿನ ಮಾರ್ಗದ ಪರಿಶೀಲನೆ ನಡೆಸಲಾಯಿತು.
ನೂರಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ
ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಶೇಖರ್ ಎಂಬಾತ 112 ಕ್ಕೆ ಕರೆ ಮಾಡಿ ದೂರು ನೀಡಿದ್ದರು. ಇವರಿಂದ ಮಾಹಿತಿ ಪಡೆದ ಪೊಲೀಸರು ಬರೋಬ್ಬರಿ ನೂರಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲಿಸಿದ್ದರು. ಕಾರಿನ ನಂಬರ್‌ವೊಂದನ್ನು ಟ್ರ್ಯಾಕ್ ಮಾಡಿಕೊಂಡು ಸಿಸಿಟಿವಿ ಪರಿಶೀಲನೆ ಮಾಡಿದಾಗ ಯುವತಿ ಪತ್ತೆಯಾಗಿದ್ದಳು. ಆಕೆ ಸುರಕ್ಷಿತವಾಗಿ ಇದ್ದಳು ಎಂಬ ವಿಷಯವೂ ತಿಳಿಯಿತು. ದೆಹಲಿಯಲ್ಲಿ ಮಾಡೆಲಿಂಗ್ ಮಾಡುತ್ತಿದ್ದ ಯುವತಿ ಅಮೃತ ಎಂಬುವವರೇ ಅಪಹರಣ ಆಗಿದ್ದರು ಎಂದು ಭಾವಿಸಲಾಗಿತ್ತು.
ಲೋ ಬಿಪಿಯಾಗಿ ರಸ್ತೆಯಲ್ಲಿ ಸುಸ್ತಾಗಿ ನಿಂತಿದ್ದ ಅಮೃತಾ
ಕಿಡ್ನ್ಯಾಪ್ ಆಗಿದ್ದಳು ಎಂದು ತಿಳಿದುಕೊಂಡಿದ್ದ ಅಮೃತ ಸಿಕ್ಕ ಬಳಿಕ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆಗ ಅಸಲಿ ಸಂಗತಿ ಬೆಳಕಿಗೆ ಬಂದಿದೆ. ಅಸಲಿಗೆ ಅಮೃತ ಕಿಡ್ನ್ಯಾಪ್ ಆಗಿರಲಿಲ್ಲ, ಬದಲಿಗೆ ಆಕೆಗೆ Low Bp ಆಗಿತ್ತು. ರಸ್ತೆಯಲ್ಲಿ ಸುಸ್ತಾಗಿ ನಿಂತಿದ್ದ ಅಮೃತಾಳನ್ನು ಆಕೆಯ ಸ್ನೇಹಿತ ಎತ್ತಿಕೊಂಡು ಕಾರಲ್ಲಿ ಕರೆದೊಯ್ದಿದ್ದ. ಅದೇ ರಸ್ತೆಯಲ್ಲಿ ಬರುತ್ತಿದ್ದ ಶೇಖರ್ ಎಂಬ ವ್ಯಕ್ತಿಯೊಬ್ಬರು ಇದನ್ನೆಲ್ಲ ಕಂಡು ಕಿಡ್ನ್ಯಾಪ್ ಎಂದು ಭಾವಿಸಿ, 112ಗೆ ಕರೆ ಮಾಡಿ ದೂರು ಕೊಟ್ಟಿದ್ದರು.
ದೂರು ಬಂದಕೂಡಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಒಂದೇ ದಿನದಲ್ಲಿ ಪ್ರಕರಣಕ್ಕೆ ಸುಖ್ಯಾಂತ ಹಾಡಿದ್ದಾರೆ. ಬಾಣಸವಾಡಿ ಇನ್ಸ್‌ಪೆಕ್ಟರ್ ಕಾರ್ಯವೈಖರಿ ಬಗ್ಗೆ ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Fake Marks Card | ಪದವಿಗೆ ದಾಖಲಾಗಲು ಅಡ್ಡ ದಾರಿ; ಬೆಂಗಳೂರು ಉತ್ತರ ವಿವಿಯಲ್ಲಿ ನಕಲಿ ವಿದ್ಯಾರ್ಥಿಗಳು