Site icon Vistara News

ಮನೆಯಲ್ಲಿ ಮಲಗಿದ್ದ ಬಾಲಕನನ್ನು ಅವನಪ್ಪನ ಕಾರಿನಲ್ಲೇ ಕಿಡ್ನ್ಯಾಪ್‌ ಮಾಡಿ 15 ಲಕ್ಷ ರೂ. ವಸೂಲಿ ಮಾಡಿದ್ದ ದುಷ್ಕರ್ಮಿಗಳ ಸೆರೆ

Kidnappers arrest

ಬೆಂಗಳೂರು: ಐಷಾರಾಮಿ ಜೀವನ ಕಣ್ಣು ಕುಕ್ಕಿ ಬಿಡುತ್ತದೆ. ಹಣದ ಅವಶ್ಯಕತೆ ಎಂಥವರನ್ನೂ ಕೂಡ ದಾರಿ ತಪ್ಪಿಸುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಬೆಂಗಳೂರಿನ ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿರುವ ಮಾನ್ಯತಾ ರೆಸಿಡೆನ್ಸಿ ಎಂಬ ಮನೆಯಲ್ಲಿ ಮಲಗಿದ್ದ ಒಬ್ಬ ಬಾಲಕನನ್ನು ಅವನ ಅಪ್ಪನ ಕಾರಿನಲ್ಲೇ ದುಷ್ಕರ್ಮಿಗಳು ಅಪಹರಿಸಿದ್ದಾರೆ. ೧೫ ಲಕ್ಷ ರೂ.ಗೆ ಬೇಡಿಕೆ ಇಟ್ಟ ಅವರು ಅದನ್ನೂ ವಸೂಲಿ ಮಾಡಿದ್ದಾರೆ. ಅಂತಿಮವಾಗಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಏನಿದು ಅಪಹರಣ, ಬಂಧನದ ಕಥೆ?
ಎಂಟು ತಿಂಗಳ ಹಿಂದೆ ಲಾನ್ ರಿಪೇರಿ ಮಾಡಲೆಂದು ಸುನೀಲ್ ಹಾಗು ನಾಗೇಶ್ ಎಂಬವರು ಮಾನ್ಯತಾ ರೆಸಿಡೆನ್ಸಿಗೆ ಬಂದಿದ್ದರು. ಸುಮಾರು ಎರಡು ವಾರ ಕಾಲ ಕೆಲಸ ಮಾಡಿಕೊಂಡಿದ್ದರು. ಅಲ್ಲಿನ ಐಷಾರಾಮಿ ಜೀವನ ಇವರ ಕಣ್ಣು ಕುಕ್ಕಿತ್ತು ಅನಿಸುತ್ತದೆ.

ಇದರ ಜತೆಗೆ ಪ್ರವೇಶ ಎಲ್ಲಿದೆ, ಯಾರ್ಯಾರ ಮನೆಯಲ್ಲಿ ಯಾರೆಲ್ಲ ಇರ್ತಾರೆ, ಎಷ್ಟೊತ್ತಿಗೆ ಮನೆ ಬಿಡ್ತಾರೆ ಎಂಬೆಲ್ಲಾ ವಿಚಾರವನ್ನ ತಿಳಿದುಕೊಂಡಿದ್ದರು. ಈ ನಡುವೆ ಅವರಿಗೆ ಹಣದ ಅವಶ್ಯಕತೆ ಜೋರಾಗಿತ್ತು. ಹಣ ಹೊಂದಿಸುವುದು ಹೇಗೆ ಎಂಬುದಾಗಿ ಯೋಚಿಸಿದಾಗ ಅವರಿಗೆ ಹೊಳೆದದ್ದು ಕಿಡ್ನ್ಯಾಪ್ ಮಾಡುವ ಪ್ಲ್ಯಾನ್‌.

ಇಪ್ಪತ್ತು ದಿನಗಳ ಹಿಂದೆ ಒಂದು ದಿನ ಅವರು ಅಪಹರಣದ ಪ್ಲ್ಯಾನ್‌ಗೆ ಚಾಲನೆ ನೀಡಿದರು. ಮಾನ್ಯತಾ ರೆಸಿಡೆನ್ಸಿಯಲ್ಲಿರುವ ಕುಟುಂಬದ ಮೇಲೆ ಕಣ್ಣು ಹಾಕಿದರು. ಅಲ್ಲಿ ಮಧ್ಯಾಹ್ನದ ಹೊತ್ತು ೧೪ ವರ್ಷದ ಬಾಲಕನೊಬ್ಬನೇ ಇರುತ್ತಾನೆ ಎನ್ನುವುದು ಅವರಿಗೆ ಗೊತ್ತಿತ್ತು.
ಆವತ್ತು ಅವರು ಅವನನ್ನು ಅಪಹರಣ ಮಾಡಲು ಮುಂದಾದರು. ಅವರು ಮುಖ್ಯ ಬಾಗಿಲಿನಿಂದ ಹೋಗದೆ ಬೇಸ್ ಮೆಂಟ್ ನಿಂದ ಒಳ ನುಗ್ಗಿದರು. ನಂತರ ಸೀದಾ ಬೆಡ್ ರೂಮ್ ಗೆ ತೆರಳಿ ಬೆಡ್ ಮೇಲೆ ಮಲಗಿದ್ದ 14 ವರ್ಷದ ಬಾಲಕನಿಗೆ ಚಾಕು ತೋರಿಸಿ ಕಿರುಚಾಡದಂತೆ ಬೆದರಿಕೆ ಹಾಕಿದರು.

ನಂತರ ಆತನ ಬಾಯಿಗೆ ಬಟ್ಟೆ ಕಟ್ಟಿ ಆ ಬಾಲಕನ ತಂದೆಯ ಕ್ರೇಟಾ ಕಾರಿನ ಕೀ ತೆಗೆದುಕೊಂಡು ಹುಡುಗನನ್ನು ಕಾರಿನಲ್ಲಿ ಕೂರಿಸಿ ಕಿಡ್ನ್ಹಾಪ್​ ಮಾಡಿದರು. ಅಲ್ಲಿಂದ ನೇರವಾಗಿ ತುಮಕೂರು ಕಡೆ ಹೋಗಿ ಅಲ್ಲಿ ಹುಡುಗನ ತಂದೆಗೆ ಕರೆ ಮಾಡಿ 15 ಲಕ್ಷ ಕೊಡಬೇಕು ಎಂದು ಬೆದರಿಸಿದರು. ಪೊಲೀಸರಿಗೆ ವಿಚಾರ ಗೊತ್ತಾದರೆ ಬಾಲಕನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು.

ಇದಕ್ಕೆ ಹೆದರಿದ ಬಾಲಕನ ತಂದೆ 15 ಲಕ್ಷ ಹಣದೊಂದಿಗೆ ಅಪಹರಣಕಾರರು​ ಇರುವ ಕಡೆಗೆ ಹೋಗಿ, ಹಣ ನೀಡಿ ಮಗನನ್ನು ಬಿಡಿಸಿಕೊಂಡು ಬಂದಿದ್ದರು. ಹಣವನ್ನು ಪಡೆದ ಆರೋಪಿಗಳು ಕಾರಿನ ಸಮೇತ ಪರಾರಿಯಾಗಿದ್ದರು.

ಈ ನಡುವೆ ಬಾಲಕನ ತಂದೆ ಪೊಲೀಸರಿಗೆ ವಿಚಾರ ಮುಟ್ಟಿಸಿದಾಗ ತನಿಖೆ ಆರಂಭವಾಯಿತು. ಸತತ 20 ದಿನಗಳವರೆಗೂ ಹುಡುಕಾಡಿದಾಗ ಕೊನೆಗೂ ಆರೋಪಿಗಳು ಸಿಕ್ಕಿದ್ದಾರೆ. ಇನ್ನು ಇವರಿಂದ 9 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಹಣದಲ್ಲಿ ಆರೋಪಿಗಳು ಬೈಕು ಹಾಗು ಕ್ಯಾಮೆರಾ ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

Exit mobile version