ಹುಬ್ಬಳ್ಳಿ: ಕಳೆದ ಆಗಸ್ಟ್ ಆರರಂದು ಹುಬ್ಬಳ್ಳಿಯ ಎಂಜಿನಿಯರ್ ಕಾಲೇಜು ವಿದ್ಯಾರ್ಥಿಯನ್ನು ಅಪಹರಣ ಮಾಡಿದ್ದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿ ಆನ್‌ಲೈನ್ ಗೇಮ್‌ನಲ್ಲಿ ಗೆದ್ದಿದ್ದ ಹಣಕ್ಕಾಗಿ ಈ ಅಪಹರಣ ನಡೆದಿತ್ತು ಎನ್ನುವುದು ಬಯಲಾಗಿದೆ.
ಹುಬ್ಬಳ್ಳಿಯ ಮಂಟೂರು ರಸ್ತೆಯ ನಿವಾಸಿ ಗರೀಬ್‌ನವಜಾ ಮುಲ್ಲಾ ಅಪಹರಣವಾಗಿದ್ದ ಯುವಕ. ಕಳೆದ ಆಗಸ್ಟ್ ಅರರಂದು ಈತನನ್ನು ಹುಬ್ಬಳ್ಳಿಯ ಗೋಕುಲ ರಸ್ತೆಯ ಡೆಕಥ್ಲಾನ್ ಬಳಿಯಿಂದ ಕಾರಿನಲ್ಲಿ ಬಂದು ಅಪಹರಿಸಲಾಗಿತ್ತು. ಈ ಬಗ್ಗೆ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮುಲ್ಲಾನನ್ನು ಅಪಹರಣ ಮಾಡಿ ನಿಗೂಢ ಸ್ಥಳದಲ್ಲಿ ಇಟ್ಟಿದ್ದ ದುಷ್ಕರ್ಮಿಗಳು ಬಳಿಕ ಆತನ ತಂದೆಗೆ ಕರೆ ಮಾಡಿ ಒಂದು ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ತಂದೆ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಆರೋಪಿಗಳ ಫೋನ್ ಕರೆಗಳ ಜಾಡು ಹಿಡಿದು ಇದೀಗ ಬಂಧಿಸಿದ್ದಾರೆ.
ಆರೋಪಿಗಳು ಬೆಳಗಾವಿ ಜಿಲ್ಲೆಯ ಕಿತ್ತೂರು ಬಳಿ ಇರುವುದನ್ನು ಲೋಕೇಶನ್ ಮೂಲಕ ಪತ್ತೆ ಹಚ್ಚಿದ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಮಹ್ಮದ್ ಆರಿಫ್, ಇಮ್ರಾನ್, ಅಬ್ದುಲ್ ಕರೀಮ್, ಹುಸೇನ್ ಸಾಬ್, ಇಮ್ರಾನ್ ಮದರಲಿ, ತೌಸಿಫ್ ಮತ್ತು ಮಹಮ್ಮದ್ ರಜಾಕ್ ಬಂಧಿತ ಆರೋಪಿಗಳು.
ಗೆಳೆಯರೇ ಮುಳುವಾದರು!
ನಿಜವೆಂದರೆ, ಮುಲ್ಲಾನನ್ನು ಅಪಹರಿಸಿದ್ದು ಆತನ ಗೆಳೆಯರೇ ಎನ್ನುವುದು ಈಗ ಬಯಲಾಗಿದೆ. ಇದಕ್ಕೆ ಕಾರಣ ಆನ್‌ಲೈನ್ ಗೇಮ್‌ನಲ್ಲಿ ಅವರು ಗೆದ್ದ ಹಣ. ಮುಲ್ಲಾ ಆನ್ಲೈನ್ ಕ್ಯಾಸಿನೊ ಗೇಮ್ ಆಡಿ ಸುಮಾರು ಏಳು ಕೋಟಿ ರೂಪಾಯಿ ಗೆದ್ದಿದ್ದ ಎಂದು ಹೇಳಲಾಗಿದೆ. ಗೆದ್ದಿದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ, ತಾನು ಅಷ್ಟು ಹಣವನ್ನು ಗೆದ್ದಿರುವುದಾಗಿ ಆತ ಗೆಳೆಯರಲ್ಲಿ ಹೇಳಿಕೊಂಡಿದ್ದ. ಗೆಳೆಯರು ಈತನನ್ನು ಅಪಹರಿಸಿದರೆ ಹಣ ಸಿಗಬಹುದು ಎಂದು ಆತನನ್ನು ಕಾರಲ್ಲಿ ಹೊತ್ತೊಯ್ದು ಒತ್ತೆ ಸೆರೆಯಲ್ಲಿ ಇಟ್ಟಿದ್ದಾರೆ. ಆದರೆ, ಅಂತಿಮವಾಗಿ ದುಡ್ಡೂ ಸಿಕ್ಕಿಲ್ಲ, ವಿಶ್ವಾಸವೂ ಉಳಿದಿಲ್ಲ ಎನ್ನುವ ಹಾಗಾಯಿತು.
ಪೊಲೀಸ್ ಕಮಿಷನರ್ ಲಾಭೂರಾಮ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮುಲ್ಲಾನನ್ನು ಬಂಧಮುಕ್ತಗೊಳಿಸಲಾಗಿದೆ.
ಇದನ್ನೂ ಓದಿ | ಮಗುವಿನ ಅಪಹರಣ, ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಪೊಲೀಸರು