ಚಿಕ್ಕೋಡಿ: ತಾಯಿ ಗರ್ಭದಿಂದ ಹೊರಬಂದಿದ್ದ ಆ ಹಸುಗೂಸು ಬೆಚ್ಚಗೆ ತಾಯಿಯ ಮಡಿಲು ಸೇರಿತ್ತು. ಆದರೆ, ಹುಟ್ಟಿದ ೧೧ ಗಂಟೆಯಲ್ಲಿಯೇ ತಾಯಿ ಮಡಿಲಿನಿಂದ ನಕಲಿ ದಾದಿಯೊಬ್ಬಳ ಕೈಸೇರಿ ಆತಂಕ ಹಸುಗೂಸನ್ನು ಕದ್ದು ಪರಾರಿಯಾಗಿದ್ದಳು. ಪ್ರಕರಣ ದಾಖಲಿಸಿಕೊಂಡ ಖಾಕಿ ಪಡೆ ಕೇವಲ ಮೂರೇ ಗಂಟೆಯಲ್ಲಿ ಕಳ್ಳಿಯನ್ನು (Kidnapping case) ಬಂಧಿಸಿದ್ದಾರೆ.
ಇಲ್ಲಿನ ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಂಬಿಕಾ ಹಾಗೂ ಅಮಿತ್ ಭೋವಿ ದಂಪತಿಗೆ ಸೇರಿದ ಶಿಶುವನ್ನು ಬುಧವಾರ ಬೆಳಗ್ಗೆ 10.30ರ ಸುಮಾರಿಗೆ ಕಣ್ಣೆದುರೇ ಅಪಹರಣ ಮಾಡಲಾಗಿತ್ತು. ಆಸ್ಪತ್ರೆ ನರ್ಸ್ ಸೋಗಿನಲ್ಲಿ ಬಂದಿದ್ದ ನೀಲಾಬಾಯಿ ಕಾಂಬ್ಳೆ ಎಂಬಾಕೆ ಮಗು ಕೊಡಿ ತೂಕ ಮಾಡಿಕೊಂಡು ಬರಬೇಕು ಎಂದು ಹೇಳಿದ್ದಳು. ಅದನ್ನು ನಂಬಿದ ಪೋಷಕರು ಶಿಶುವನ್ನು ಆಕೆ ಕೈಗೆ ಕೊಟ್ಟಿದ್ದಾರೆ. ತೂಕ ಮಾಡಿಸಿಕೊಂಡು ಬರುವ ನೆಪದಲ್ಲಿ ಹೋದ ಆಕೆ ಅಲ್ಲಿಂದ ಶಿಶು ಜತೆ ಪರಾರಿಯಾಗಿದ್ದಳು.
ಎಷ್ಟು ಕಾದರೂ ನರ್ಸ್ ಹಾಗೂ ಶಿಶು ಪತ್ತೆ ಇರಲಿಲ್ಲ. ಅವರಿಗಾಗಿ ಕಾದು ಕಾದು ಸುಸ್ತಾದ ಪೋಷಕರಿಗೆ ಆತಂಕವಾಗಿ ಆಸ್ಪತ್ರೆಯ ಸಿಬ್ಬಂದಿಯನ್ನು ವಿಚಾರಿಸಿದಾಗಲೇ ಶಿಶು ಅಪಹರಣ (Kidnapping) ಆಗಿರುವ ವಿಷಯ ಗೊತ್ತಾಗಿದೆ. ಕೂಡಲೇ ಪೋಷಕರು ಅಥಣಿ ಪೊಲೀಸರಿಗೆ ಮಾಹಿತಿ ನೀಡಿದರು.
ಮಿಂಚಿನ ಕಾರ್ಯಾಚರಣೆ ನಡೆಸಿದ ಅಥಣಿ ಪೊಲೀಸರು
ಶಿಶು ಕಳ್ಳತನ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಕಳ್ಳತನದ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದ ಪೊಲೀಸರು ಎಲ್ಲ ಠಾಣೆಗಳಿಗೆ ಮಾಹಿತಿ ರವಾನಿಸಿದ್ದರು. ಆದರೂ ತಪ್ಪಿಸಿಕೊಂಡಿದ್ದ ನೆರೆಯ ಮಹಾರಾಷ್ಟ್ರ ಮೂಲದ ನೀಲಾಬಾಯಿ ಕಾಂಬ್ಳೆ (೨೮) ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿ ಚಲಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ತಾಯಿಯಿಂದ ದೂರವಾಗಿದ್ದ ಹಸುಗೂಸನ್ನು ತಾಯಿಯ ಮಡಿಲು ಸೇರುವಂತೆ ಮಾಡಿದ್ದಾರೆ.
ಪಕ್ಕಾ ಪ್ರೊಫೆಶನಲ್ ವೇಷ
ಸಿಸಿಟಿವಿ ಫೂಟೇಜ್ ಗಮನಿಸಿದಾಗ ನೀಲಾಬಾಯಿ ಪಕ್ಕಾ ಪ್ರೊಫೆಶನಲ್ ಆಗಿ ಶಿಶುವನ್ನು ಅಪಹರಣ ಮಾಡಿರುವುದು ಗೊತ್ತಾಗಿದೆ. ತಾನು ತೊಟ್ಟಿದ್ದ ಕೆಂಪು ಚೂಡಿಧಾರ್‌ಗೆ ನರ್ಸ್‌ಗಳು ಧರಿಸುವ ಬಿಳಿ ಬಣ್ಣದ ಎಪ್ರಾನ್ ಹಾಕಿದ್ದಳು. ಮುಖದ ಚಹರೆ ತಿಳಿಯಬಾರದೆಂದು ಮಾಸ್ಕ್ ಧರಿಸಿ ಆಸ್ಪತ್ರೆಯ ವಾರ್ಡ್‌ಗೆ ಆಗಮಿಸಿದ್ದಳು. ಯಾರಿಗೂ ಅನುಮಾನ ಬಾರದಂತೆ ನಡೆನುಡಿ ಇದ್ದಿದ್ದರಿಂದ ನಿಜವಾದ ನರ್ಸ್ ಆಗಿರಬೇಕೆಂದು ಪೋಷಕರು ನಂಬಿದ್ದೇ ಎಡವಟ್ಟಿಗೆ ಕಾರಣವಾಗಿದೆ.
ಇದನ್ನೂ ಓದಿ | ಕಿಮ್ಸ್ ಮಗು ಕಳ್ಳತನ ಪ್ರಕರಣ, ತಾಯಿಯೇ ವಿಲನ್!