Site icon Vistara News

ಹುಬ್ಬಳ್ಳಿಯಲ್ಲಿ ನವ ವಿವಾಹಿತೆ ಅಪಹರಣಕ್ಕೆ ಟ್ವಿಸ್ಟ್‌: ಮಹಾನಗರ ಪಾಲಿಕೆ ಸದಸ್ಯ ಅರೆಸ್ಟ್

ನವ ವಿವಾಹಿತೆ ಅಪಹರಣ ಪ್ರಕರಣ

ಹುಬ್ಬಳ್ಳಿ : ನವ ವಿವಾಹಿತೆ ಸಹನಾಳನ್ನು ಅಪಹರಣ ಪ್ರಕರಣ ಟ್ವಿಸ್ಟ್‌ ಪಡೆದುಕೊಂಡಿದ್ದು, ಅಪಹರಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಪಕ್ಷೇತರ ಸದಸ್ಯ ಚೇತನ್ ಹಿರೇಕೆರೂರ್‌ನನ್ನು ಪೊಲೀಸರು ಶನಿವಾರ (ಜು.೨) ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಅಪಹರಣ ಪ್ರಕರಣದಲ್ಲಿ ಚೇತನ್ ಹಿರೇಕೆರೂರ್‌ ಹಲವು ದಿನಗಳಿಂದ ಕಣ್ಮರೆಯಾಗಿದ್ದ. ಆತನನ್ನು ಪತ್ತೆ ಹಚ್ಚಲು ಗೋಕುಲ್‌ ರಸ್ತೆ ಠಾಣೆಯ ಇನ್ಸ್‌ಪೆಕ್ಟರ್ ಜೆ.ಎಮ್. ಕಾಲಿಮಿರ್ಚಿ ನೇತೃತ್ವದ ತಂಡವನ್ನು ರಚಿಸಲಾಗಿತ್ತು. ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ಸಹ ಚೇತನ್ ಹಿರೇಕೆರೂರ್‌ ಗೈರಾಗಿದ್ದ. ಕೊನೆಗೂ ಈತನನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೇ ವೇಳೆ ನವ ವಿವಾಹಿತೆ ಸಹನಾಳ ತಂದೆ ಶಿವು ಹಿರೇಕೆರೂರ್‌ ಹಾಗೂ ತಾಯಿ ಜಯಲಕ್ಷ್ಮೀಯನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ನಿಖಿಲ್‌ ದಾಂಡೇಲಿ ಹಾಗೂ ಸಹನಾ ದಂಪತಿ

ಇದನ್ನೂ ಓದಿ | ಮಗುವಿನ ಅಪಹರಣ, ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಪೊಲೀಸರು

ಏನಿದು ಪ್ರಕರಣ?

ನಿಖಿಲ್‌ ದಾಂಡೇಲಿ ಹಾಗೂ ಸಹನಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇದಕ್ಕೆ ಮನೆಯವರ ವಿರೋಧ ಇತ್ತು ಎನ್ನಲಾಗಿದ್ದು, ನಾಲ್ಕು ತಿಂಗಳ ಹಿಂದಷ್ಟೇ ಇವರಿಬ್ಬರು ವಿವಾಹವಾಗಿದ್ದರು ಎನ್ನಲಾಗಿದೆ. ಜೂನ್‌ 26ರಂದು ಆರತಕ್ಷತೆ ಕಾರ್ಯಕ್ರಮವನ್ನು ಈ ನವಜೋಡಿ ಹಮ್ಮಿಕೊಂಡಿತ್ತು. ಈ ಸಂಬಂಧ ಪೋಷಕರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲು ಸಹನಾ ಹುಬ್ಬಳ್ಳಿಗೆ ತೆರಳಿದ್ದಳು. ಈ ವೇಳೆ ಹುಬ್ಬಳ್ಳಿಯ ಅಕ್ಷಯ್ ಪಾರ್ಕ್ ಬಳಿ ಕಾರ್ಪೋರೇಟರ್ ಚೇತನ್‌ ಸೇರಿದಂತೆ ಮೂವರು ಆರೋಪಿಗಳು ಈಕೆಯನ್ನು ಅಪಹರಿಸಿದ್ದರು ಎಂದು ದೂರು ನೀಡಲಾಗಿದೆ.

ಕಾರ್ಪೊರೇಟರ್ ಚೇತನ್ ಹಿರೇಕೆರೂರು, ಯುವತಿಯ ತಂದೆ ಶಿವು ಹಿರೆಕೇರೂರ ವಿರುದ್ಧ‌ ನಿಖಿಲ್‌ ದಾಂಡೇಲಿ ಪ್ರಕರಣ ದಾಖಲಿಸಿದ್ದರು. ಸಹನಾಳನ್ನು ಕಿಡ್ನಾಪ್‌ ಮಾಡಿದ್ದಲ್ಲದೇ ನಿಖಿಲ್‌ಗೆ ಸಹ ಚೇತನ್ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ. ಗೋವಾದಲ್ಲಿ ಸಹನಾ ಪತ್ತೆಯಾಗಿದ್ದಳು ಎನ್ನಲಾಗಿದೆ. ಆದರೆ, ಪೊಲೀಸರು ಅಪಹರಣಕಾರರ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದನ್ನು ಪ್ರಶ್ನಿಸಿ ನಿಖಿಲ್‌ ದಾಂಡೇಲಿ ನ್ಯಾಯಾಲಯದ ಮೊರೆ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಇದೀಗ ಚೇತನ್‌ ಹಿರೇಕೆರೂರ್‌ ಹಾಗೂ ಸಹನಾ ತಂದೆ – ತಾಯಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | ದೇವಸ್ಥಾನದಲ್ಲಿ ಮರ್ಡರ್‌ ಮಾಡಿ ಪರಾರಿಯಾಗುವಾಗ ಸೀಜರ್‌ಗಳ ಕೈಗೆ ಸಿಕ್ಕಿಬಿದ್ದರು!

Exit mobile version