ಚಿಕ್ಕಮಗಳೂರು: ರಾಷ್ಟ್ರೀಯ ಧರ್ಮ ಜಾಗರಣದ ಜಿಲ್ಲಾ ಸಂಯೋಜಕರ ಕಾರಿನ ಚಕ್ರದ ಗಾಳಿ ತೆಗೆದು ಬೆದರಿಕೆ ಬರಹಗಳ ಮೂಲಕ ಎಚ್ಚರಿಕೆ ನೀಡಲಾಗಿದೆ. ಕಾರಿನ ಮೇಲೆ ʻಕಿಲ್ ಯೂʼ ಸೇರಿದಂತೆ ಹಲವು ಬರಹಗಳನ್ನು ಬರೆಯಲಾಗಿದೆ.
ಧರ್ಮ ಜಾಗರಣದ ಜಿಲ್ಲಾ ಸಹಸಂಯೋಜಕರಾದ ಡಾ. ಶಶಿಧರ್ ಚಿಂದಿಗೆರೆ ಜಯಣ್ಣ ಅವರ ಕಾರಿನಲ್ಲಿ ಈ ಬರಹ ಕಂಡುಬಂದಿದೆ. ಅವರು ಭಾನುವಾರ ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಬೆಳಗಾಗುವ ಹೊತ್ತಿಗೆ ಹಲವು ಬರಹಗಳು ಮೂಡಿವೆ. ಜತೆ ಕಾರಿನ ಚಕ್ರಗಳ ಗಾಳಿಯನ್ನೂ ತೆಗೆಯಲಾಗಿದೆ.
ಕಡೂರಿನ ಲಕ್ಷ್ಮೀಶನಗರದ ಮನೆಯ ಹತ್ತಿರ ನಿಲ್ಲಿಸಿದ್ದ ನೀಲಿ ಬಣ್ಣದ ಕಾರು ಇದಾಗಿದ್ದು, ಕಿಲ್ ಯೂ ಮಾತ್ರವಲ್ಲದೆ, ಜಿಹಾದಿ ಪದವನ್ನು ಕೂಡಾ ಬಳಸಲಾಗಿದೆ. ಜತೆಗೆ ಕೆಲವೊಂದು ಅಶ್ಲೀಲ ಪದಗಳನ್ನು ಕೂಡಾ ಬರೆಯಲಾಗಿದೆ. ಜಯಣ್ಣ ಅವರು ಈ ಬಗ್ಗೆ ಕಡೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಜನರ ಆಕ್ರೋಶ
ಜಯಣ್ಣ ಅವರಿಗೆ ಬೆದರಿಕೆ ಹಾಕಿರುವ ಘಟನೆಯನ್ನು ಸಂಘಟನೆಯ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದ್ದಾರೆ. ಇದು ಆರೆಸ್ಸೆಸ್ ಕಾರ್ಯಕರ್ತರಿಗೆ ಹಾಕಿರುವ ಬೆದರಿಕೆ ಎಂದಿದ್ದಾರೆ.
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳು ಎರಡು ಸಂಘಟನೆಗಳ ನಡುವೆ ವೈಷಮ್ಯಕ್ಕೆ ಕಾರಣವಾಗಿರುವುದಕ್ಕೂ ʻಕಿಲ್ ಯೂʼ ಬರಹಕ್ಕೂ ಏನಾದರೂ ಸಂಬಂಧವಿದೆಯೇ ಎನ್ನುವ ಬಗ್ಗೆ ಚರ್ಚೆ ನಡೆದಿದೆ.