ಬೆಂಗಳೂರು: ಜಿಎಸ್ಟಿ ದರ ಪರಿಷ್ಕರಣೆ ನಂತರ ಹಾಲಿನ ಉತ್ಪನ್ನಗಳನ್ನು ದರ ಏರಿಕೆ ಮಾಡಿದ್ದ ಕೆಎಂಎಫ್ 24 ಗಂಟೆಗೂ ಮೊದಲೆ ಮತ್ತೆ ದರ ಕಡಿತ ಮಾಡಿದೆ. ಹಾಲು, ಮೊಸರು, ಲಸ್ಸಿಯ ವಿವಿಧ ಪ್ಯಾಕೆಟ್ಗಳ ಮೇಲೆ ಒಂದೂವರೆ ರೂ.ವರೆಗೆ ಕಡಿತ ಮಾಡಿ ಆದೇಶ ಹೊರಡಿಸಿದೆ.
ನಂದಿನ ಹಾಲಿನ ಉತ್ಪನ್ನಗಳ ಮೇಲೆ ಸೋಮವಾರದಿಂದ ಜಾರಿಯಾಗುವಂತೆ ದರ ಹೆಚ್ಚಳ ಮಾಡಲಾಗಿತ್ತು. ಈ ಕುರಿತು ಜನಾಕ್ರೋಶ ಹೆಚ್ಚಾಗುತ್ತಿದ್ದಂತೆ, ದರ ಕಡಿಮೆ ಮಾಡಲು ಅವಕಾಶವಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದರು. ಸರ್ಕಾರದ ವಿರುದ್ಧ ಜನಾಂದೋಳನಕ್ಕೆ ಪ್ರತಿಪಕ್ಷಗಳು ಸಿದ್ಧತೆ ನಡೆಸಿದ್ದವು. ಇದೀಗ ಸಿಎಂ ಸೂಚನೆಯ ಮೇರೆಗೆ ಕೆಎಂಎಫ್ ದರ ಕಡಿತ ಮಾಡಿದೆ. ಲಸ್ಸಿಯ ಕೆಲ ಉತ್ಪನ್ನ ಹೊರತುಪಡಿಸಿ ಉಳಿದೆಲ್ಲ ಉತ್ಪನ್ನಗಳ ದರವನ್ನು ಕಡಿತ ಮಾಡಲಾಗಿದೆ.
ಪ್ಯಾಕ್ ಮಾಡಿದ ಆಹಾರ ಉತ್ಪನ್ನಗಳಿಗೆ 5% ಜಿಎಸ್ಟಿ ವಿಧಿಸಿದ್ದರಿಂದ ಅದರ ಹೊರೆಯನ್ನು ಕೆಎಂಎಫ್ ಸಂಸ್ಥೆ ಗ್ರಾಹಕರಿಗೆ ವರ್ಗಾವಣೆ ಮಾಡಿತ್ತಿ. ನಂದಿನಿ ಉತ್ಪನ್ನಗಳಾದ ಮೊಸರು, ಮಸಾಲಾ ಮಜ್ಜಿಗೆ ಹಾಗೂ ಲಸ್ಸಿ ದರವನ್ನು ಸೋಮವಾರದಿಂದಲೇ ಹೆಚ್ಚಳ ಮಾಡಿತ್ತು.
ಈ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೇಂದ್ರ ಸರ್ಕಾರ ಜನರ ಹಣವನ್ನು ಪಿಕ್ ಪಾಕೆಟ್ ಮಾಡುತ್ತಿದೆ. ತೆರಿಗೆ ಹೊರೆ ಮೂಲಕ ಎಂಟು ವರ್ಷ ಆಡಳಿತದ ಗಿಫ್ಟ್ ನೀಡಿದೆ. ಈ ಕುರಿತು ಚರ್ಚೆ ನಡೆಸಲು ಸಂಜೆ ಪಕ್ಷದ ಸಭೆ ಕರೆಯಲಾಗಿದೆ. ಅಲ್ಲಿ ಚರ್ಚೆಯ ನಂತರ ತೀರ್ಮಾನ ಮಾಡಲಾಗುತ್ತದೆ ಎಂದಿದ್ದರು.
ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ ‘ಮೊಸರು, ಮಜ್ಜಿಗೆ, ಲಸ್ಸಿ ಮೇಲೆ ಜಿಎಸ್ಟಿ ವಿಧಿಸಿದ್ದಾರೆ. ಜೇನುತುಪ್ಪ, ಪನ್ನೀರ್ ಮೇಲೆ ತೆರಿಗೆ ಹೆಚ್ಚಿಸಿದ್ದಾರೆ. ಸೋಲಾರ್ ವಾಟರ್ ಹೀಟರ್, ಎಲ್ಇಡಿ ಮೇಲೆಯೂ ಜಿಎಸ್ಟಿ ಹೆಚ್ಚಿಸಿದ್ದಾರೆ. ಮಧ್ಯಮ ವರ್ಗದ ಜನರು ಬಳಸುವ ವಸ್ತುಗಳ ಮೇಲೆ ತೆರಿಗೆ ಹೇರಿರುವುದು ಸರಿಯಲ್ಲ. ಮೋದಿ ಸರ್ಕಾರ ಎಂಟು ವರ್ಷದಲ್ಲಿ ಸಾಧನೆ ಮಾಡಿದೆ ಎಂದು ಹೇಳುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಲೆ ಏರಿಕೆ ಕುರಿತು ಮಾತನಾಡುತ್ತಿಲ್ಲ. ಬಿಜೆಪಿಯವರು ಜನಜೀವನ ಅಸ್ತವ್ಯಸ್ತ ಮಾಡುತ್ತಿದ್ದಾರೆ. ಜನರ ರಕ್ತ ಹೀರುತ್ತಿದ್ದಾರೆ. ದೇಶವನ್ನು ಬಿಜೆಪಿಯವರು ಹಾಳುಮಾಡುತ್ತಿದ್ದಾರೆʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಹಾಲಿನ ಉತ್ಪನ್ನಗಳ ದರ ಹೆಚ್ಚಳ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಬ್ರಾಂಡೆಡ್ ಹಾಗೂ ಪ್ಯಾಕೇಜ್ಡ್ ಹಾಲು, ಮೊಸರು ಮಾರುವವವರಿಗೆ ಮಾತ್ರ 5% ಜಿಎಸ್ಟಿ ಹಾಕಲಾಗಿದೆ. ಈ ತೆರಿಗೆಯನ್ನು ನಂತರ ಹಿಂಪಡೆಯಬಹುದು. ಮರುಪಾವತಿ ಇರುವುದರಿಂದ ಈ ತೆರಿಗೆಯನ್ನು ಗ್ರಾಹಕರಿಗೆ ವರ್ಗಾವಣೆ ಮಾಡುವ ಅಗತ್ಯವಿಲ್ಲ. ಈಗಿನ ದರ ಏರಿಸಬೇಕಿಲ್ಲ. ಈ ಬಗ್ಗೆ ಗಮನಹರಿಸಲಾಗುವುದು. ಗ್ರಾಹಕರಿಗೆ ತೆರಿಗೆ ಹೊರೆ ದಾಟಿಸಬಾರದು. ಇದನ್ನು ಜಿಎಸ್ಟಿ ಮಂಡಳಿಯಲ್ಲಿ ಚರ್ಚಿಸಿ, ಸೂಚನೆ ನೀಡಲಾಗುವುದುʼ ಎಂದಿದ್ದರು.
ಪರಿಷ್ಕರಣೆಯಾದ ನಂದಿನಿ ಪದಾರ್ಥಗಳ ದರಗಳ ವಿವರ
ಪದಾರ್ಥ | ತೂಕ | ಹಿಂದಿನ ದರ (ರೂ.) | ಪರಿಷ್ಕೃತ ದರ | ಮರುಪರಿಷ್ಕೃತ ದರ |
ಮೊಸರು ಸ್ಯಾಚೆ | 200 ಗ್ರಾಂ | 10 | 12 | 10.50 |
ಮೊಸರು ಸ್ಯಾಚೆ | 500 ಗ್ರಾಂ | 22 | 24 | 23 |
ಮೊಸರು ಸ್ಯಾಚೆ | 1000 ಗ್ರಾಂ | 43 | 46 | 45 |
ಮಜ್ಜಿಗೆ ಸ್ಯಾಚೆ | 200 ಮಿಲಿ | 7 | 8 | 7.50 |
ಮಜ್ಜಿಗೆ ಟೆಟ್ರಾ ಪ್ಯಾಕ್ | 200 ಮಿಲಿ | 10 | 11 | 10.50 |
ಮಜ್ಜಿಗೆ ಪೆಟ್ ಬಾಟಲ್ | 200 ಮಿಲಿ | 12 | 13 | 12.50 |
ಲಸ್ಸಿ ಸ್ಯಾಚೆ | 200 ಮಿಲಿ | 10 | 11 | 10.50 |
ಲಸ್ಸಿ ಟೆಟ್ರಾ ಪ್ಯಾಕ್ ಸಾದ | 200 ಮಿಲಿ | 20 | 21 | 21 |
ಲಸ್ಸಿ ಟೆಟ್ರಾ ಪ್ಯಾಕ್ ಮ್ಯಾಂಗೋ | 200 ಮಿಲಿ | 25 | 27 | 26.50 |
ಲಸ್ಸಿ ಪೆಟ್ ಬಾಟಲ್ ಸಾದ | 200 ಮಿಲಿ | 15 | 16 | 16 |
ಲಸ್ಸಿ ಪೆಟ್ ಬಾಟಲ್ ಮ್ಯಾಂಗೋ | 200 ಮಿಲಿ | 20 | 21 | 21 |