Site icon Vistara News

KN Rajanna: ಯಾವ ಬ್ರಾಹ್ಮಣರೂ ಒಂದು ರೂಪಾಯಿ ಕೊಟ್ಟು ಊದಿನಕಡ್ಡಿನೂ ತರೋಲ್ಲ ಅಂದ್ರು ರಾಜಣ್ಣ

KN Rajanna

KN Rajanna

ದಾವಣಗೆರೆ: ʻʻಯಾವ ಬ್ರಾಹ್ಮಣರು ಕೂಡ ಒಂದು ರೂಪಾಯಿ ಕೊಟ್ಟು ಊದಿನಕಡ್ಡಿ ತರೋದಿಲ್ಲ, ಹಚ್ಚೋದಿಲ್ಲʼʼ- ಹೀಗೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಸಹಕಾರ ಸಚಿವ (Co-operative Minister) ಕೆ.ಎನ್‌. ರಾಜಣ್ಣ (KN Rajanna).

ದಾವಣಗೆರೆ ಜಿಲ್ಲೆ, ಹರಿಹರ ತಾಲೂಕಿನ ರಾಜನಹಳ್ಳಿ‌ ವಾಲ್ಮೀಕಿ ಪೀಠದಲ್ಲಿ (Valmeeki peeta) ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಯಾರನ್ನೂ ಮೇಲ್ವರ್ಗದವರೆಂದು ಕರೆಯಬಾರದು, ಹಾಗೆ ಕರೆದರೆ ನಾವು ಕೆಳವರ್ಗದವರು ಎಂದಾಗುತ್ತದೆ. ನಾವೇನು ಕೆಳವರ್ಗದವರಾ ಎಂಬಿತ್ಯಾದಿ ವ್ಯಾಖ್ಯಾನಗಳನ್ನು ಮಾಡಿದ ಅವರು ಈಗಿನ ಸಾಮಾಜಿಕ ಸ್ಥಿತಿಗತಿಗಳನ್ನು ವಿವರಿಸುತ್ತಾ ಮೇಲಿನ ಮಾತನ್ನು ಹೇಳಿದರು.

ʻʻಬ್ರಾಹ್ಮಣರು ಈಗ ಹೋಮ ಹವನ ಕಡಿಮೆ ಮಾಡಿದ್ದಾರೆ. ಆದರೆ ನಾವೇ ಶೂದ್ರರೇ ಹೆಚ್ಚು ಹೋಮ, ಹವನ ಮಾಡುತ್ತಿದ್ದೇವೆ. ನಿಜ ಅಂದ್ರೆಯಾವ ಬ್ರಾಹ್ಮಣರು ಕೂಡ ಒಂದು ರೂಪಾಯಿ ಕೊಟ್ಟು ಊದಿನಕಡ್ಡಿ ತರೋದಿಲ್ಲ, ಹಚ್ಚೋದಿಲ್ಲʼʼ ಎಂದು ಹೇಳಿದರು.

ಹೀಗೆ ಹೇಳಿದೆ ಅಂತ ನಾನು ಬ್ರಾಹ್ಮಣ ವಿರೋಧಿ ಅಂತ ಅಲ್ಲ. ಇದು ನಾನು ಹೇಳಿದ್ದೂ ಅಲ್ಲ. ನನ್ನ ಸ್ನೇಹಿತ ಹೇಳಿದ್ದು ಎಂದು ಹೇಳಿದ ಕೆ.ಎನ್‌. ರಾಜಣ್ಣ, ಮಾಧ್ಯಮಗಳು ನನ್ನ ಹೇಳಿಕೆಯನ್ನು ಬ್ರೇಕಿಂಗ್‌ ನ್ಯೂಸ್‌ ಮಾಡಬೇಡಿ ಅಂದರು.

ʻʻನಾನು ಸಾಮಾನ್ಯ ಕ್ಷೇತ್ರದಿಂದ‌ ಸ್ಪರ್ಧೆ ಮಾಡಿದ್ದು. ನನ್ನ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯ 100ರಷ್ಟು 100 ಮತ ಹಾಕಿದೆʼʼ ಎಂದು ಹೇಳಿದ ಅವರು, ಕೆಲವರು ಎಸ್‌ಟಿ ಸಮುದಾಯದ ನಕಲಿ ಜಾತಿ ಪ್ರಮಾಣಪತ್ರ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ನಾವೇನು ಕೆಳವರ್ಗದವರೇ?

ಯಾರನ್ನೂ ಕೂಡಾ ಮೇಲ್ವರ್ಗ ಎಂದು ಕರೆಯಬಾರದು ಎಂದು ಕೆ.ಎನ್‌. ರಾಜಣ್ಣ ಹೇಳಿದರು. ಅದಕ್ಕೆ ಅವರು ಕೊಟ್ಟ ಕಾರಣ ಕುತೂಹಲಕಾರಿಯಾಗಿತ್ತು. ʻʻಯಾರನ್ನೂ ಮೇಲ್ವರ್ಗ ಅಂತ ಯಾರೂ ಕರೆಯಬೇಡಿ. ಅವರನ್ನು ಮುಂದುವರಿದ ವರ್ಗ ಅಂತ ಬಳಸಿ. ಯಾಕೆಂದರೆ, ಅವರನ್ನು ಮೇಲ್ವರ್ಗ ಅಂತ ಕರೆದರೆ, ನಾವೇ‌ನು ಕೆಳವರ್ಗದವರಾ? ನಾವು ಯಾವುದರಲ್ಲಿ ಕಡಿಮೆ‌ ಇದ್ದೇವೆ, ನಾವು ಯಾವತ್ತೂ ಕೆಳವರ್ಗದವರಲ್ಲ. ಅವರೇನು ಮೇಲಿಂದ ಬಂದಿಲ್ಲ, ಅವ್ರು ನಮ್ಮಂಗೆ ಬಂದವರು. ಇನ್ಮುಂದೆ ಮುಂದುವರಿದವರು, ಹಿಂದುಳಿದವರು ಅಂತ ಮಾತ್ರ ಕರೀಬೇಕು. ಮೇಲ್ವರ್ಗದಿಂದ ಅನ್ಯಾಯ ಎನ್ನಬಾರದು. ಮುಂದುವರಿದ ವರ್ಗದಿಂದ ಅನ್ಯಾಯ ಎನ್ನಬೇಕುʼʼ ಎಂದು ಸಲಹೆ ನೀಡಿದರು.

ನಾಯಕರು ಡಿಸಿಎಂ, ಸಿಎಂ ಆಗಲಿ ಎಂದ ರಾಜಣ್ಣ

ಇದೇ ವೇಳೆ, ನಾಯಕ ಡಿಸಿಎಂ, ನಾಯಕ ಸಿಎಂ ದಾಳವನ್ನೂ ಅವರು ಉರುಳಿಸಿದರು. ʻʻನಾಯಕ ಸಮುದಾಯವರು ಈಗ ಡಿಸಿಎಂ ಆಗಬೇಕು ಮುಂದೆ ಸಿಎಂ ಆಗಬೇಕು. ನಾಯಕ ಸಮುದಾಯದಲ್ಲಿ ಸಿಎಂ ಆಗೋ ಅರ್ಹತೆ ಇರೋದು ಸತೀಶ್ ಜಾರಕಿಹೊಳಿಗೆ ಇದೆ. ಮುಂದಿನ ದಿನಗಳಲ್ಲಿ ನಮ್ಮ ಸಮುದಾಯ ವ್ಯಕ್ತಿ ಸಿಎಂ ಆಗಬೇಕುʼʼ ಎಂದರು ರಾಜಣ್ಣ.

ʻʻನಾನು ಮುಂದೆ ಯಾವುದೇ ಚುನಾವಣೆಯಲ್ಲಿ‌ ನಿಲ್ಲೋದಿಲ್ಲ. ಆದರೆ ನಮ್ಮ‌ ಗುರಿ ಇರೋದು ಒಂದೇ. ನಮ್ಮ ಸಮುದಾಯದ ವ್ಯಕ್ತಿ ಮುಂದಿನ ಮುಖ್ಯಮಂತ್ರಿ ಆಗೋದು. ಅದಕ್ಕೆ ನಮ್ಮ ಸತೀಶ್ ಜಾರಕಿಹೊಳಿಗೆ ಎಲ್ಲ ಅರ್ಹತೆ ಇದೆ. ಆಗ ನಮ್ಮ ಸಮಾಜಕ್ಕೆ ಇನ್ನು ಉತ್ತಮವಾಗುತ್ತದೆʼʼ ಎಂದರು.

ʻʻನಾವು ಈಗ ಡಿಸಿಎಂ ಸ್ಥಾನ ಕೇಳಲು ಹೊರಟಿದ್ದೇವೆ. ಆದರೆ, ರಾಜಕೀಯ ಸಂಘರ್ಷಗಳಲ್ಲಿ ಅದು ಆಗಲಿಲ್ಲ‌. ಡಿಸಿಎಂ ಬಗ್ಗೆ ಒತ್ತಾಯವನ್ನು ಕೂಡ ಮುಂದೆ ಮಾಡುತ್ತೇವೆʼʼ ಎಂದು ಹೇಳಿದರು.

ನಟ ಕಿಚ್ಚ ಸುದೀಪ್ ವಿರುದ್ಧ ರಾಜಣ್ಣ ಕಿಡಿ

ಅಭಿನಂದನಾ ಸಮಾರಂಭದಲ್ಲಿ ರಾಜಣ್ಣ ಅವರು ಚಿತ್ರ ನಟ ಕಿಚ್ಚ ಸುದೀಪ್‌ ವಿರುದ್ಧ ಆಕ್ರೋಶ ಹೊರಗೆಡವಿದರು. ʻʻಕಿಚ್ಚ ಸುದೀಪ್ ಸಮುದಾಯದ ವಿರುದ್ಧವೇ ಪ್ರಚಾರ ಮಾಡಿದ್ದಾರೆ. ಸಾಮಾನ್ಯ ಕ್ಷೇತ್ರದಲ್ಲಿ ಬಂದು ಪ್ರಚಾರ ಮಾಡಿದ್ದರೆ ಏನೂ ಅನ್ನಿಸುತ್ತಾ ಇರ್ಲಿಲ್ಲ. ಎಸ್ಟಿ ಮೀಸಲು ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದು ನೋವಾಯಿತು. ಎಸ್ಟಿ ಮೀಸಲು ಕ್ಷೇತ್ರದಲ್ಲಿ ಚುನಾವಣೆಗೆ ನಿಂತವರೆಲ್ಲ ನಾಯಕ ಸಮುದಾಯದವರೇ. ಸಮುದಾಯದ ವಿರುದ್ಧವೇ ಪ್ರಚಾರಕ್ಕೆ ಇಳಿದಿದ್ದು ವಿಪರ್ಯಾಸ. ಇದು ಪ್ರತಿಭಾನ್ವಿತ ನಟನ ಭವಿಷ್ಯಕ್ಕೆ ಕುತ್ತು ತರಲಿದೆʼʼ ಎಂದು ರಾಜಣ್ಣ ಬೇಸರ ವ್ಯಕ್ತಪಡಿಸಿದರು.

ʻʻಆತನಿಗೆ ಅನುಭವ ಕಡಿಮೆ ಇದೆ, ಶ್ರೇಷ್ಠ ನಟನಾಗಲು ಅವಕಾಶ ಇದೆ. ಇದನ್ನು ಅರಿತುಕೊಂಡು ಮುಂದುವರೆಯಲಿʼʼ ಎಂದರು ರಾಜಣ್ಣ.

ಇದನ್ನೂ ಓದಿ : MB Patil: ನನ್ನ-ಡಿಕೆಶಿ ಸಂಬಂಧ ಚೆನ್ನಾಗಿದೆ, ಪ್ರತಾಪ್‌ ಸಿಂಹಗೆ ತಲೆ ಕೆಟ್ಟಿದೆ ಎಂದ ಎಂ.ಬಿ ಪಾಟೀಲ್‌

Exit mobile version