ತುಮಕೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಟೀಕಿಸುವ ಭರದಲ್ಲಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ತಮ್ಮ ನಾಲಗೆಯನ್ನು ಹರಿಯಬಿಟ್ಟಿದ್ದಾರೆ. ದೇವೇಗೌಡರ ಸಾವಿನ ಕುರಿತು ರಾಜಣ್ಣ ಆಡಿರುವ ಅಪದ್ಧ ಮಾತುಗಳು ರಾಜಕೀಯ ಜಿದ್ದಾಜಿದ್ದನ್ನು ಧ್ವೇಷದ ಹಂತಕ್ಕೆ ಕೊಂಡೊಯ್ದಿವೆ.
ಮಧುಗಿರಿ ತಾಲೂಕಿನ ಕಾವಣದಾಲ ಎಂಬಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜಣ್ಣ ಮಾತನಾಡಿದ್ದಾರೆ. ಇದು ನನ್ನ ಕೊನೆಯ ಚುನಾವಣೆ. ಶೋಕಿಗೆ, ಮುಖಸ್ಥುತಿಗೆ ರಾಜಕಾರಣ ಮಾಡುವುದ ಬೇಡ. ನಾನು ಎಂಎಲ್ಎ ಆದರೆ ನೀವೆಲ್ಲರೂ ಎಂಎಲ್‌ಎ ಆದಂತೆ. ನೀವು ಹೋರಾಟ ಮಾಡಿ, ನಾನು ಎಂಎಲ್ಎ ಆಗಿ ಸುಮ್ಮನೆ ಇರುತ್ತೇನೆ. ಏನಾದರೂ ಕೆಲಸ ಆಗಬೇಕಾದರೆ ಅಧಿಕಾರಿಗಳನ್ನು ಕೇಳುವ ಶಕ್ತಿ ನಿಮಗೇ ಬರುತ್ತದೆ.
ಮುಂದಿನ ದಿನಗಳಲ್ಲಿ ಪ್ರತಿ ಮನೆ ಬಾಗಿಲಿಗೂ ಬಂದು ಓಟ್ ಕೇಳುತ್ತೇನೆ. ಇದು ನನ್ನ ಕೊನೆಯ ಎಲೆಕ್ಷನ್. ಮುಂದೆ ಸ್ಪರ್ಧಿಸಿ ಎಂದು ಹೇಳಿದರೂ ನಾನು ಸ್ಪರ್ಧಿಸುವುದಿಲ್ಲ ಎಂದು ತಮ್ಮ ರಾಜಕೀಯ ಜೀವನದ ಕುರಿತು ಮಾತನಾಡಿದ್ದಾರೆ.
ನಂತರ ವಯಸ್ಸಿನ ಬಗ್ಗೆ ಮಾತು ಆರಂಭಿಸಿದ ರಾಜಣ್ಣ, ನನಗೆ ಆಗಲೇ 72 ವರ್ಷ. ಈ ಬಾರಿ ಚುನಾವಣೆ ಗೆದ್ದ ಅವಧಿ ಮುಗಿಯುವ ವೇಳೆಗೆ 77 ವರ್ಷ ಆಗಿ, ಕೈಕಾಲು ಅಲ್ಲಾಡುತ್ತಿರುತ್ತವೆ. ಈ ಬಾರಿ ಸರ್ಕಾರ ಬಂದರೆ ನೂರಕ್ಕೆ ನೂರರಷ್ಟು ಮಂತ್ರಿ ಆಗುತ್ತೇನೆ ಎಂದಿದ್ದಾರೆ.
ಈ ಸಮಯದಲ್ಲಿ ಹತ್ತಿರ ಇದ್ದ ಕಾರ್ಯಕರ್ತರು, ದೇವೇಗೌಡರು ಇನ್ನೂ ರಾಜಕಾರಣ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಾಜಣ್ಣ, ದೇವೇಗೌಡರು ಈಗಲೇ ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗುತ್ತಿದ್ದಾರೆ. ಸದ್ಯದಲ್ಲೆ ನಾಲ್ವರ ಮೇಲೆ ಹೋಗುತ್ತಾರೆ ಎಂದು ಮಾತನಾಡಿದ್ದಾರೆ. ದೇವೇಗೌಡರು ಯಾವ ರೀತಿ ಪಕ್ಕದಲ್ಲಿದ್ದವರ ಹೆಗಲ ಮೇಲೆ ಕೈ ಇಟ್ಟು ನಡೆಯುತ್ತಾರೆ ಎನ್ನುವುದನ್ನು ಕೈಸನ್ನೆ ಮಾಡಿ ತೋರಿಸಿದ್ದಾರೆ. ರಾಜಕೀಯ, ತತ್ವ ಸಿದ್ಧಾಂತ ಭಿನ್ನತೆ ಏನೇ ಇದ್ದರೂ ಪರಸ್ಪರರ ವಿರುದ್ಧ ಗೌರವಯುತವಾಗಿ ನಡೆದುಕೊಳ್ಳುವ ಬದಲು ಈ ರೀತಿ ಮಾತನಾಡುವುದು ಎಷ್ಟು ಸರಿ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ದೇವೇಗೌಡರಿಗೆ ಪಠ್ಯ ಪರಿಷ್ಕರಣೆ ಬಗ್ಗೆ ಮನವರಿಕೆ ಮಾಡಿದ್ದೇವೆ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್