Site icon Vistara News

Kochimul Scam: ಕೋಚಿಮುಲ್ ನೇಮಕಾತಿ ಅಕ್ರಮ ಸಾಬೀತಾದ್ರೆ ರಾಜೀನಾಮೆ: ಕೆ.ವೈ. ನಂಜೇಗೌಡ

kochimul scam

ಕೋಲಾರ: ಕೋಚಿಮುಲ್ ನೇಮಕಾತಿ (Kochimul Scam) ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಒಂದು ವೇಳೆ ಅಕ್ರಮ ಸಾಬೀತಾಗಿ, ಪಟ್ಟಿಯಲ್ಲಿರುವ ಎಲ್ಲರೂ ಆಯ್ಕೆಯಾದರೆ ಅವ್ಯವಹಾರ ನಡೆದಿದೆ ಎಂದು ಒಪ್ಪಿಕೊಳ್ಳುತ್ತೇವೆ. ನಾನು ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರೆಲ್ಲರೂ ಸಾಮೂಹಿಕ ರಾಜೀನಾಮೆ ಕೊಡುತ್ತೇವೆ. ಜತೆಗೆ ರಾಜಕೀಯದಿಂದಲೇ ದೂರ ಉಳಿಯುತ್ತೇವೆ. ಯಾರಾದರೂ ಒಬ್ಬರು ನಾವು ಹಣ ಕೊಟ್ಟಿದ್ದೇವೆ ಎಂದು ಸಾಬೀತು ಪಡಿಸಲಿ ಎಂದು ಕೋಚಿಮುಲ್ ಅಧ್ಯಕ್ಷ ಮತ್ತು ಮಾಲೂರು ಶಾಸಕ ಕೆ.ವೈ. ನಂಜೇಗೌಡ ಸವಾಲು ಹಾಕಿದ್ದಾರೆ.

ಕೋಚಿಮುಲ್ 81 ವಿವಿಧ ಹುದ್ದೆಗಳ ನೇಮಕಾತಿಯ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ (Komul Recruitment Scam) ಸಾಮಾಜಿಕ ಜಾಲತಾಣಗಳಲ್ಲಿ ಪಟ್ಟಿ ವೈರಲ್ ಆಗುತ್ತಿರುವ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಫಾರಸು ಮೇರೆಗೆ ಆಗುತ್ತಿದೆ. ಆದರೆ, ಕೋಲಾರ – ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಡೈರಿಯಲ್ಲಿ ಯಾವುದೇ ಅಭಿವೃದ್ಧಿ ಇರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಹೆಚ್ಚಾಗುತ್ತಿದೆ. ಎರಡೂ ಜಿಲ್ಲೆಯ ಡೇರಿಗಳಿಂದ ಒಂದು ತಿಂಗಳಿಗೆ ಎರಡು ಕೋಟಿ ಕರೆಂಟ್ ಬಿಲ್ ಕಟ್ಟುತ್ತಿದ್ದೇವೆ. ಇನ್ನು 6 ತಿಂಗಳಲ್ಲಿ ಸೋಲಾರ್ ಪ್ಲಾಂಟ್ ಕಂಪ್ಲೀಟ್ ಆಗುತ್ತದೆ ಎಂದು ತಿಳಿಸಿದರು.

273 ಹುದ್ದೆಗಳನ್ನು ನೇಮಕಾತಿ ಮಾಡಲು ಮುಂದಾಗಿದ್ದೆವು. 192 ಹುದ್ದೆಗಳಿಗೆ ಹೈಕೋರ್ಟ್‌ನಿಂದ ಸ್ಟೇ ತಂದಿದ್ದಾರೆ. ಉಳಿದ 81 ಹುದ್ದೆಗಳಿಗೆ ಪರೀಕ್ಷೆ ನಡೆಸಿದ್ದೆವು. 6 ಹುದ್ದೆಗಳಿಗೆ ಅರ್ಜಿಗಳು ಬರಲಿಲ್ಲ. 1:5 ಆಧಾರದ ಮೇಲೆ ಸಂದರ್ಶನ ಮಾಡಿದ್ದೇವೆ. ಆಡಳಿತ ಮಂಡಳಿಯ 5 ಮಂದಿ ಕಮಿಟಿಯಿಂದ ಸಂದರ್ಶನ ನಡೆಸಲಾಗಿದೆ. ಆದರೆ, ವೈರಲ್‌ ಆಗಿರುವ ಪಟ್ಟಿಯಲ್ಲಿ ಉಪಮುಖ್ಯಮಂತ್ರಿ ಹೆಸರು, ಬಂಗಾರಪೇಟೆ ಶಾಸಕರ ಹೆಸರನ್ನು ಉಲ್ಲೇಖಿಸಿದ್ದಾರೆ. ಪಟ್ಟಿಯನ್ನು ತೆಗೆದುಕೊಂಡು ಷಡ್ಯಂತ್ರ ಮಾಡಿ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. 1:5 ನಲ್ಲಿ ಅತಿ ಹೆಚ್ಚು ಅಂಕ ಪಡೆದವರ ಹೆಸರು ಫೈನಲ್ ಆಗುತ್ತದೆ. ನಮ್ಮ ನಾಯಕರು ಎಲ್ಲಿಯೂ ಇಂತಹವರಿಗೆ ಕೊಡಿ ಅಂತ ಪ್ರಸ್ತಾಪ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ | Assault Case : ಹೆಂಡತಿ ಕಣ್ಣಿನ ಗುಡ್ಡೆಯನ್ನೇ ಕಚ್ಚಿ ಕಿತ್ತೊಗೆದ ಕ್ರೂರಿ!

ಪಟ್ಟಿ ಹೊರಗಡೆ ಹೇಗೆ ಬಂತು ಎಂದು ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಪಟ್ಟಿ ವೈರಲ್ ಆದ ಬಗ್ಗೆ ತನಿಖೆ ಮಾಡುತ್ತೇವೆ. ಶಿಫಾರಸ್ಸು ಮಾಡಿರುವ ಪಟ್ಟಿ ಸುಳ್ಳು, ಆ ಪಟ್ಟಿಯಲ್ಲಿರುವ ಎಲ್ಲರೂ ನೇಮಕಾತಿಯಾದರೆ ಅಕ್ರಮ ಎಂದು ಒಪ್ಪಿಕೊಳ್ಳುತ್ತೇವೆ. ನಾನು ಸೇರಿದಂತೆ ಆಡಳಿತ ಮಂಡಳಿಯ ನಾವೆಲ್ಲರೂ ಸಾಮೂಹಿಕ ರಾಜೀನಾಮೆ ಕೊಡುತ್ತೇವೆ. ಜತೆಗೆ ರಾಜಕೀಯದಿಂದಲೇ ದೂರು ಉಳಿಯುತ್ತೇವೆ. ಯಾರಾದರೂ ನಾವು ಹಣ ಕೊಟ್ಟಿದ್ದೇವೆ ಎಂದು ಸಾಬೀತು ಪಡಿಸಲಿ. ನಾವು ಯಾರ ಬಳಿಯೂ ಹಣ ಪಡೆದಿಲ್ಲ. ಇಂದೇ ನಮ್ಮ ಪೊಲೀಸರಿಗೆ ತನಿಖೆ ವಹಿಸುತ್ತೇವೆ ಎಂದು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version