ಕೊಡಗು: ಮಡಿಕೇರಿ ಸಮೀಪ ಎರಡು ಶಿಫ್ಟ್ ಕಾರುಗಳ ನಡುವೆ ಅಪಘಾತ (Road Accident) ಸಂಭವಿಸಿತ್ತು. ಈ ವೇಳೆ ಜಿಟಿ ಸರ್ಕಲ್‌ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಸಂಜು ಅವರು ಸ್ಥಳಕಾಗಮಿಸಿ ಪರಿಶೀಲನೆ ನಡೆಸಲು ಮುಂದಾಗಿದ್ದರು. ಈ ವೇಳೆ ಮತ್ತೊಂದು ಶಿಫ್ಟ್ ಕಾರನ್ನು ಬದಿಗೆ ಸರಿಸುವಂತೆ ಸೂಚಿಸುವ ಸಂದರ್ಭದಲ್ಲಿ ಕಾರು ಚಾಲಕ ವಾಹನವನ್ನು ನಿಲ್ಲಿಸದೆ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್‌ಸ್ಟೇಬಲ್ ಮೇಲೆ ವಾಹನ ಹರಿಸಿ (Assault case) ತಪ್ಪಿಸಿಕೊಂಡಿದ್ದ.
ಸಂಚಾರಿ ಪೊಲೀಸ್ ಸಿಬ್ಬಂದಿ ಸಂಜು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸ್ ಮೇಲೆ ಕಾರು ಹರಿಸಲು ಮುಂದಾದ ದೃಶ್ಯ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇನ್ನು ಆತನ ಬೆನ್ನಟ್ಟಿದಾಗ ಪೊಲೀಸರ ಕಣ್ಣು ತಪ್ಪಿಸಿ ಕಾರು ಚಾಲಕ ಪರಾರಿ ಆಗಿದ್ದ.
ಪೊಲೀಸ್ ಸಿಬ್ಬಂದಿ ಮೇಲೆ ಕಾರು ಹರಿಸಿದ ಪ್ರಕರಣ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿ, ಪರಾರಿಯಾಗಿದ್ದ ಕಾರು ಚಾಲಕ ಬಂಟ್ವಾಳ ಮೂಲದ ನಜೀರ್ ಎಂಬಾತನನ್ನು ಬಂಧಿಸಿ, ಜೈಲಿಗೆ ಅಟ್ಟಿದ್ದಾರೆ. ಕೊಡಗು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ನಿರ್ದೇಶನದ ಮೇರೆಗೆ, ಸಂಚಾರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀಧರ್ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರ ಈ ಮಿಂಚಿನ ಕಾರ್ಯಾಚರಣೆಗೆ ಕೊಡಗು ಎಸ್ಪಿ ಕೂಡ ಶ್ಲಾಘನೆಗೆ ವ್ಯಕ್ತಪಡಿಸಿದ್ದಾರೆ.