ಬೆಂಗಳೂರು: ಅತಿವೃಷ್ಟಿ ಪ್ರದೇಶ ವೀಕ್ಷಣೆಗೆ ತೆರಳಿದ್ದಾಗ ತಮ್ಮ ಕಾರಿನ ಮೇಲೆ ಕೊಡಗಿನಲ್ಲಿ ಮೊಟ್ಟೆ ಎಸೆದದ್ದನ್ನು ವಿರೋಧಿಸಿ ಕಾಂಗ್ರೆಸ್ ವತಿಯಿಂದ ಕರೆ ನೀಡಿದ್ದ ಕೊಡಗು ಚಲೋ ಕಾರ್ಯಕ್ರಮವನ್ನು ಸದ್ಯಕ್ಕೆ ರದ್ದುಪಡಿಸಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೊಡಗು ಚಲೋ ಯಾತ್ರೆಗೆ ಪ್ರತಿಯಾಗಿ ಬಿಜೆಪಿಯಿಂದ ಜನಜಾಗೃತಿ ಯಾತ್ರೆಯನ್ನೂ ಹಮ್ಮಿಕೊಳ್ಳಲಾಗಿದೆ. ಅಹಿತಕರ ಘಟನೆ ನಡೆಯಬಾರದು ಎಂಬ ಕಾರಣಕ್ಕೆ ಆಗಸ್ಟ್ 24ರಿಂದ 26ರವರೆಗೆ ಸೆಕ್ಷನ್ 144ಅಡಿಯಲ್ಲಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಪ್ರತಿಕ್ರಿಯಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಮ್ಮ ಯಾತ್ರೆಯನ್ನು ತಡೆಯಲು ನಿಷೇಧಾಜ್ಞೆ ವಿಧಿಸಲಾಗಿದೆ. ಸರ್ಕಾರ ನಮ್ಮನ್ನು ಯಾವಾಗಲೂ ಕಾಮಾಲೆ ಕಣ್ಣಿನಿಂದಲೇ ನೋಡುತ್ತಿದೆ. ಈ ಕುರಿತು ವಿರೋಧಪಕ್ಷದ ನಾಯಕರ ಜತೆಗೆ ಮಾತನಾಡುತ್ತೇನೆ. ನಂತರ ನಿರ್ಧಾರ ಮಾಡುತ್ತೇವೆ ಎಂದಿದ್ದರು.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಸಿದ್ದರಾಮಯ್ಯ ತುರ್ತು ಸುದ್ದಿಗೋಷ್ಠಿ ನಡೆಸಿದರು. ಆಗಸ್ಟ್ ೧೮ರಂದು ನಾನು ಅತಿವೃಷ್ಠಿ ವಿಚಾರವಾಗಿ ಹಾನಿ ನೋಡಲಿಕ್ಕೆ ಕೊಡಗಿಗೆ ಹೋಗಿದ್ದೆ. ಈ ಸಲ ವಾಡಿಕೆಗಿಂತ ಹೆಚ್ಚು ಮಳೆಯಾಗಿತ್ತು. ಕೊಡಗಿನಲ್ಲಿ ಅನೇಕ ಕಡೆ ಮಣ್ಣು ಕುಸಿದಿದೆ. ಹೀಗಾಗಿ ಮಡಿಕೇರಿಗೆ ಹೋದಾಗ ಕೆಲವರು ಕಪ್ಪು ಬಾವುಟ ಪ್ರದರ್ಶಿಸಿದರು. ಪೋಲಿಸರು ನಿಷ್ಕ್ರಿಯರಾಗಿದ್ದರು. ಯಾರೋ ಒಬ್ಬ ಬಂದು ಒಂದು ಲೆಟರ್ ಕೂಡ ಹಾಕಿದ. ಅವನನ್ನು ಹಿಡಿದುಕೊಳ್ಳುವುದಾಗಲಿ, ಅರೆಸ್ಟ್ ಮಾಡುವುದಾಗಲಿ ಏನನ್ನೂ ಪೋಲಿಸರು ಮಾಡಿಲ್ಲ.
ಇದನ್ನೂ ಓದಿ | ಸಾವರ್ಕರ್ ರಥಯಾತ್ರೆ: ಇಂದಿರಾ ಗಾಂಧಿ ಮಾತಿನ ಮೂಲಕವೇ ಸಿದ್ದರಾಮಯ್ಯಗೆ ತಿವಿದ ಯಡಿಯೂರಪ್ಪ
ಕೊಡಗಿನಲ್ಲಿ ಮಿನಿ ವಿಧಾನಸೌಧ ಹಾನಿಯಾಗಿದೆ. ಅಲ್ಲಿಗೆ ಹೋಗುವಾಗ ಒಬ್ಬ ಕೋಳಿಮೊಟ್ಟೆ ಎಸೆದ. ಈ ವೇಳೆಯಲ್ಲಿಯೂ ಪೋಲಿಸರು ಮೌನವಾಗಿ ನಿಂತಿದ್ದರು. ಆದರೆ ನಮ್ಮ ಕಾರ್ಯಕರ್ತರ ಮೇಲೆ ಮಾತ್ರ ಲಾಠಿಚಾರ್ಜ್ ಮಾಡಿದ್ದಾರೆ. ಅಲ್ಲಿದ್ದ ಬಜರಂಗದಳ,ಆರ್‌ಎಸ್‌ಎಸ್ ಕಾರ್ಯಕರ್ತರನ್ನು ತಡೆಯುವ, ಬಂಧಿಸುವ ಕೆಲಸವನ್ನು ಸರ್ಕಾರ ಮಾಡಲಿಲ್ಲ ಎಂದರು.
ಕಪ್ಪು ಬಾವುಟ ತೋರಿದಾಗಲೇ ಪೊಲೀಸರು ಎಚ್ಚೆತ್ತುಕೊಳ್ಳಬೇಕಿತ್ತು ಎಂದ ಸಿದ್ದರಾಮಯ್ಯ, ಪೊಲೀಸರಿಗೆ ಇಂಟೆಲಿಜೆನ್ಸ್ ವರದಿ ಇರಲಿಲ್ಲವೇ? ಎಂದು ಪ್ರಶ್ನಿಸಿದರು. ಇದು ಉದ್ದೇಶಪೂರ್ವಕವಾದ, ಪೂರ್ವ ನಿಯೋಜಿತ, ಸರ್ಕಾರಿ ಪ್ರಾಯೋಜಿತ ಕಾರ್ಯಕಮ. ಕೊಡಗಿಗೆ ಬರಲಿ ನಾವು ನೋಡಿಕೊಳ್ಳುತ್ತೇವೆ ಎಂದು ಶಾಸಕ ಭೋಪಯ್ಯ ಸವಾಲು ಹಾಕಿದ್ದರು. ಅದರ ಪ್ರತಿಫಲವಾಗಿಯೇ ಪ್ರತಿಭಟನೆ ನಡೆದಿದೆ.
ಈ ಹಿಂದೆ ಗಣಿ ಬ್ರದರ್ಸ್‌ಗೆ ಸವಾಲು ಹಾಕಿ ಬಳ್ಳಾರಿಗೆ ಭೇಟಿ ನೀಡಿದ್ದೆ. ಆದರೆ ಇದೀಗ ಕೊಡಗಿಗೆ ಭೇಟಿ ನೀಡದಂತೆ ಡಿಸಿ ಆದೇಶ ಮಾಡಿದ್ದಾರೆ. ಡಿಸಿ ಆದೇಶ ಎಂದರೆ ಸರ್ಕಾರದ ಆದೇಶ ಇದ್ದ ಹಾಗೆ. ಹಾಗಾಗಿ ನಾವು ಎಲ್ಲರೂ ಚರ್ಚೆ ಮಾಡಿ, ಮಡಿಕೇರಿ ಚಲೋ ಕಾರ್ಯಕ್ರಮವನ್ನು ಮುಂದೂಡಿದ್ದೇವೆ. ಡಿಸಿ, ಎಸ್‌ಪಿ ಎಲ್ಲ ಸೇರಿ 144 ಸೆಕ್ಷನ್ ಹಾಕಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ನಾನು ಇದನ್ನು ಉಲ್ಲಂಘನೆ ಮಾಡಬಾರದು ಎಂದು ಯಾತ್ರೆಯನ್ನು ಮುಂದೂಡಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ | Savarkar Issue | ಸಿದ್ದರಾಮಯ್ಯ ಕಾರಿಗೆ ಮಡಿಕೇರಿಯಲ್ಲಿ ಮೊಟ್ಟೆ ಎಸೆತ, ಕಪ್ಪು ಪಟ್ಟಿ ಪ್ರದರ್ಶನ!