Site icon Vistara News

Love‌ Torture : ಪ್ರೀತ್ಸೆ ಅಂತ ಪ್ರಾಣ ತಿಂದ; ಒಪ್ಪದೇ ಇದ್ದಾಗ ಯುವತಿಯ ಖಾಸಗಿ ಫೋಟೋ ಹರಿಬಿಟ್ಟ ಪಾಗಲ್‌ ಪ್ರೇಮಿ

love Torture Man uploads private photo of young woman on social media

ಕೊಡಗು: ಅನ್ಯಕೋಮಿನ ಯುವತಿಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪ್ರೀತಿಸುವಂತೆ (Love‌ Torture) ಒತ್ತಾಯಿಸಿದ್ದ ಪಾಗಲ್‌ ಪ್ರೇಮಿಯನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಡಗಿನ ನೆಲ್ಯಹುದಿಕೇರಿ ನಿವಾಸಿ ಅಶ್ರಪ್ ಎಂಬುವವರ ಪುತ್ರ ಅಫ್ರೀದ್ (21) ಎಂಬಾತ ಅದೇ ಗ್ರಾಮದ ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಯುವತಿ ಅಫ್ರೀದ್‌ ಪ್ರೀತಿಯನ್ನು ನಿರಾಕರಿಸಿದ್ದಳು ಎನ್ನಲಾಗಿದೆ. ತನ್ನನ್ನು ಪ್ರೀತಿಸುವಂತೆ ಯುವತಿಯನ್ನು ಪೀಡಿಸುತ್ತಾ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.

ಈ ನಡುವೆ ಅಫ್ರೀದ್‌ ಕಳೆದ ಆರು ತಿಂಗಳ ಹಿಂದೆ ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಿದ್ದ. ವಿದೇಶದಿಂದಲೇ ತಾನು ಪ್ರೀತಿಸುತ್ತಿದ್ದ ಯುವತಿಯ ಖಾಸಗಿ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಯುವತಿಯನ್ನು ಬೆದರಿಸಿದ್ದಾನೆ. ಆದರೆ ಆಫ್ರೀದ್‌ ಬೆದರಿಕೆಗೆ ಯುವತಿ ಬಗ್ಗದೇ ಇದ್ದಾಗ ಯುವತಿಯ ಖಾಸಗಿ ಚಿತ್ರಗಳನ್ನು‌ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.

ಇದನ್ನೂ ಓದಿ: Niveditha Gowda: ಚಂದನ್‌-ನಿವೇದಿತಾ ಡಿವೋರ್ಸ್‌ಗೆ ಸೃಜನ್ ಲೋಕೇಶ್ ಕಾರಣ? ಯಾಕೆ ಈ ಗಾಸಿಪ್‌?

ಈ ವಿಷಯ ತಿಳಿಯುತ್ತಿದ್ದಂತೆ ಈ ಕುರಿತು ಯುವತಿ ಕಳೆದ 2023ರ ಡಿಸೆಂಬರ್‌ನಲ್ಲೇ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಯುವತಿ ನೀಡಿದ ದೂರಿನ‌‌ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ವಿದೇಶದಲ್ಲಿದ್ದು ಕೃತ್ಯವೆಸಗಿದ ಆರೋಪಿ ಅಫ್ರೀದಿಯನ್ನು ಆರು ತಿಂಗಳ ನಂತರ ಸಿದ್ದಾಪುರ ಪೊಲೀಸರು ಮುಂಬೈ ವಿಮಾನ‌ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಆರೋಪಿಯ ವಿರುದ್ಧ ವಿವಿಧ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ತಲೆಮರೆಸಿಕೊಳ್ಳುವ ಯತ್ನದಲ್ಲಿದ್ದ. ಆರೋಪಿಯು ವಿದೇಶದಿಂದ ಬರುತ್ತಿರುವ ಖಚಿತ ಮಾಹಿತಿ ಮೇರೆಗೆ ತೆರಳಿದ ಸಿದ್ದಾಪುರ ಪೊಲೀಸರು ಆರೋಪಿಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಮಾನ‌ ನಿಲ್ದಾಣದಲ್ಲೇ ಆತ್ಮ‌ಹತ್ಯೆಗೆ ಯತ್ನಿಸಿ ಹೈಡ್ರಾಮಾ

ವಿಮಾನ ನಿಲ್ದಾಣದಲ್ಲಿ ಪೊಲೀಸರು ಅರೆಸ್ಟ್‌ ಮಾಡಲು ಬಂದರೆ ಆಫ್ರೀದಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಯುವತಿಯ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪದಲ್ಲಿ ಮುಂಬೈನಲ್ಲಿ ಬಂಧಿತನಾದ ಆರೋಪಿ ಅಫ್ರೀದಿ, ಪೊಲೀಸರ ಎದುರೇ ಚೂಪಾದ ವಸ್ತುವಿನಿಂದ ತನ್ನ ಕೈಗೆ ಗಾಯ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಈ ಸಂಧರ್ಭದಲ್ಲಿ ಎಚ್ಚೆತ್ತುಕೊಂಡ ಮುಂಬಯಿ ಪೊಲೀಸರು ಹಾಗೂ ಸಿದ್ದಾಪುರ ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಿ ಕರೆತಂದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮಾರ್ಗದರ್ಶನದೊಂದಿಗೆ ಮಡಿಕೇರಿ‌ ವೃತ್ತ ನಿರೀಕ್ಷ ರಾಜು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿ ಬಸವರಾಜ್, ಕಿರಣ್ ಭಾಗಿಯಾಗಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version