ಕೊಡಗು: ಮಡಿಕೇರಿ ಸಮೀಪ ರಾಷ್ಟ್ರೀಯ ಹೆದ್ದಾರಿ 275ರ ಬೋಯಿಕೇರಿಯಲ್ಲಿ ಅಪಘಾತ (Road Accident) ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು ನಡುವೆ ಡಿಕ್ಕಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ತಾಯಿ ಮಗುವಿಗೆ ಗಾಯವಾಗಿದ್ದು, ಸ್ಥಳೀಯರು ಅವರನ್ನು ರಕ್ಷಿಸಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್‌ವೊಂದು ಪ್ರಯಾಣಿಕರನ್ನು ಹೊತ್ತು ಮೈಸೂರಿನಿಂದ ಮಡಿಕೇರಿಗೆ ಬರುತ್ತಿತ್ತು. ಇತ್ತ ಕಾರಿನಲ್ಲಿ ಒಟ್ಟು ಆರು ಮಂದಿ ಕೇರಳದಿಂದ ಊಟಿಗೆ ತೆರಳುತ್ತಿದ್ದರು. ಮಳೆಯಿಂದಾಗಿ ಚಾಲಕರ ನಿಯಂತ್ರಣ ತಪ್ಪಿದ್ದು, ಕಾರು ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಬಸ್‌ಗೆ ಕಾರು ಗುದ್ದಿದ ರಭಸಕ್ಕೆ ಮುಂಭಾಗ ಸಂಪೂರ್ಣ ಜಖಂಗೊಂಡಿತ್ತು. ಇನ್ನೂ ಈ ಅಪಘಾತದಿಂದ ಒಂದು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕಾಗಮಿಸಿದ ಸಂಚಾರಿ ಪೊಲೀಸರು ಕಾರನ್ನು ತೆರವುಗೊಳಿಸಿದರು. ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಚಿಕ್ಕೋಡಿಯಲ್ಲಿ ವ್ಯಕ್ತಿ ಕಾಲಿನ ಮೇಲೆ ಹರಿದ ಬಸ್
ವೇಗವಾಗಿ ಬಂದ ಬಸ್‌ವೊಂದು ವ್ಯಕ್ತಿಗೆ ಹೊಡೆದು ಕಾಲಿನ ಮೇಲೆ ಹರಿದಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಬೆಳಗಾವಿ ತಾಲ್ಲೂಕಿನ ಕಗಬರಗಿ ಗ್ರಾಮದ 40 ವರ್ಷದ ಸದಾಶಿವ ಯಡವಳ್ಳಿ ಎಂಬುವವರ ಮೇಲೆ ಬಸ್ ಹರಿದಿದೆ. ಬಸ್‌ಗಾಗಿ ಕಾಯುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಗಾಯಾಳು ಸದಾಶಿವ ಅವರನ್ನು ಕೂಡಲೇ ಚಿಕ್ಕೋಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿಕ್ಕೋಡಿಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಸುಟ್ಟುಕರಕಲಾದ ವ್ಯಾನ್
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಜೋಡಕುರಳಿ ರಸ್ತೆ ಬಳಿ ಆಕಸ್ಮಿಕ ಬೆಂಕಿ ತಗುಲಿ ವ್ಯಾನ್ ಸುಟ್ಟು ಕರಕಲಾಗಿದೆ.
ಮಹಾರಾಷ್ಟ್ರದ ದ್ಯಾನಸಿಂಗ್ ಚಿತ್ತೋಡಿಯಾ ಎಂಬುವವರಿಗೆ ಸೇರಿದ್ದ ವಿಂಟೇಜ್ ವ್ಯಾನ್‌ನಲ್ಲಿದ್ದ ಸಿಲಿಂಡರ್ ಸೋರಿಕೆ ಆಗಿ ಬೆಂಕಿ ತಗುಲಿದೆ. ದ್ಯಾನಸಿಂಗ್ ರೋಡ್ ಸೈಡ್ ಟೆಂಟ್ ಹಾಕಿ ಆಯುರ್ವೇದ ಔಷದಿ ಮಾರಾಟ ಮಾಡುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಕೂಡಲೇ ಸ್ಥಳೀಯರಿಂದ ಚಿಕ್ಕೋಡಿ ಅಗ್ನಿ ಶಾಮಕ ದಳದವರಿಗೆ ಮಾಹಿತಿ ರವಾನೆ ಮಾಡಲಾಗಿದೆ. ಸ್ಥಳಕ್ಕಾಗಮಿಸಿದ ಚಿಕ್ಕೋಡಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: Accident Case:ಕೇತೇನಹಳ್ಳಿ ಫಾಲ್ಸ್‌ನಿಂದ ಬರುವಾಗ ಕಾಲು ಜಾರಿ ಬಿದ್ದ ಮಹಿಳಾ ಟೆಕ್ಕಿ; 2 ಕಿಮೀ ಹೊತ್ತು ತಂದ ಯುವಕರು
ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ; 16 ಕಾರ್ಮಿಕರಿಗೆ ಗಂಭೀರ ಗಾಯ
ಕಲಬುರಗಿ: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿ 16 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ (Lorry Accident) ಜಿಲ್ಲೆಯ ಚಿಂಚೊಳ್ಳಿ ತಾಲೂಕಿನ ಮಿರಿಯಾಣದ ಸರ್ಕಾರಿ ಆಸ್ಪತ್ರೆ ಸಮೀಪ ನಡೆದಿದೆ. ಮಿರಿಯಾಣದಿಂದ ತಾಂಡೂರ್ ಕಡೆ ಹೊರಟಿದ್ದ ಲಾರಿ ಅಪಘಾತಕ್ಕೀಡಾಗಿದ್ದು, ಸ್ಥಳಕ್ಕೆ ಮಿರಿಯಾಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಾಲಕ ಕೃಷ್ಣ ಪಾನಮತ್ತನಾಗಿ ಲಾರಿ ಚಲಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಕಲಬುರಗಿ ಹಾಗೂ ಬೀದರ್ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಅತ್ತೆ ಮನೆಗೆ ಬಂದ ಅಳಿಯನ ಅಟ್ಟಾಡಿಸಿದ ಕಾಡಾನೆ! ಮುಂದೇನಾಯ್ತು
ಹಾಸನ: ಅತ್ತೆ ಮನೆಗೆ ಬಂದ ಅಳಿಯನನ್ನು ಕಾಡಾನೆಯೊಂದು (Wild Animals Attack) ಅಟ್ಟಾಡಿಸಿಕೊಂಡು ಬಂದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಉದೇವಾರ ಗ್ರಾಮದಲ್ಲಿ ಘಟನೆ ನಡೆದಿದೆ.
ಕೋಲಾರ ಮೂಲದ ನಾಗೇಶ್ (35) ಎಂಬುವವರು ಉದೇವಾರ ಗ್ರಾಮದಲ್ಲಿದ್ದ ತಮ್ಮ ಅತ್ತೆ ಮನೆಗೆ ಬಂದಿದ್ದರು. ಊಟಕ್ಕೆ ಮೊಸರು ತರಲೆಂದು ಅಂಗಡಿಗೆ ತೆರಳುತ್ತಿದ್ದರು. ಅದ್ಯಾವ ಕಡೆಯಿಂದಲೋ ಓಡಿ ಬಂದ ಕಾಡಾನೆಯೊಂದು ನಾಗೇಶ್‌ರನ್ನು ಅಡ್ಡಗಟ್ಟಿತ್ತು.
ಕಾಡಾನೆಯಿಂದ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದ ನಾಗೇಶ್ ಗಾಬರಿಯಲ್ಲಿ ಮುಗ್ಗರಿಸಿ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಗಾಯಗೊಂಡ ನಾಗೇಶ್ ಸಕಲೇಶಪುರ ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಗಾಯಾಳು ಆರೋಗ್ಯ ವಿಚಾರಣೆಗೆ ಅರಣ್ಯಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ