ವಿಧಾನಸಭೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಕೊಡಗು ಜಿಲ್ಲೆಗೆ ಭೇಟಿ ನೀಡಿದಾಗ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ವಿಧಾನಸಭೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು. ಕೊಡಗು ಜಿಲ್ಲೆಯ ಶಾಸಕರಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಭೋಪ್ಪಯ್ಯ ಅವರ ವಿರುದ್ಧ ಒಂದು ಹಂತದಲ್ಲಿ ವ್ಯಘ್ರರಾದ ಸಿದ್ದರಾಮಯ್ಯ, ನಾವೂ ಕಪ್ಪು ಬಾವುಟ ತೋರಿಸಿಕೊಂಡೇ, ಮೊಟ್ಟೆ ಹೊಡೆದೇ ಬಂದಿದ್ದೇವೆ. ನಾವು ಮನಸ್ಸು ಮಾಡಿದರೆ ರಾಜ್ಯಾದ್ಯಂತ ಮೊಟ್ಟೆ ಹೊಡೆಸುತ್ತೇವೆ ಎಂದರು.
ಮಳೆ ಕುರಿತು ಮಂಗಳವಾರ ಬೆಳಗ್ಗೆಯಿಂದ ಆರಂಭವಾದ ಚರ್ಚೆಯನ್ನು ಮದ್ಯಾಹ್ನ ಊಟದ ನಂತರ ಸಿದ್ದರಾಮಯ್ಯ ಮುಂದುವರಿಸಿದರು. ಮಳೆ ಹಾನಿ ಕುರಿತು ಕೊಡಗು ಜಿಲ್ಲೆಗೆ ಭೇಟಿ ನೀಡಿದಾಗ ನಡೆದ ಘಟನೆ ಕುರಿತು ವಿವರಿಸಲು ಮುಂದಾದರು. ಈ ವೇಳೆ ಕೆಲವರು ಕಪ್ಪು ಬಟ್ಟೆ ಪ್ರದರ್ಶನ ಮಾಡಿದರು ಎಂದು ಉಲ್ಲೇಖಿಸಿದರು.
ಈ ಮಾತನ್ನು ಹೇಳಿದ ಕೂಡಲೆ ಕೊಡಗು ಜಿಲ್ಲೆಯ ಇಬ್ಬರು ಬಿಜೆಪಿ ಶಾಸಕರೂ ಎದ್ದುನಿಂತರು. ಅದೇನೊ ಕೊಡಗು ಜಿಲ್ಲೆಯ ಜನರಿಗೆ ನಿಮ್ಮನ್ನು ಕಂಡರೆ ಆಗುವುದಿಲ್ಲ, ಅದಕ್ಕೇ ಜನರು ಈ ರೀತಿ ಮಾಡಿದ್ದಾರೆ ಎಂದರು. ಈ ಮಾತನ್ನು ಹೇಳುತ್ತಿದ್ದಂತೆಯೇ ಕೋಪಗೊಂಡ ಸಿದ್ದರಾಮಯ್ಯ, ಕಪ್ಪು ಬಾವುಟ ಪ್ರದರ್ಶಿಸಿದ್ದು, ಮೊಟ್ಟೆಯಿಂದ ಹೊಡೆದಿದ್ದು ನಿಮ್ಮವರು. ನೀವೇ ಕುತಂತ್ರ ಮಾಡಿ ಈ ರೀತಿ ಮಾಡಿಸಿದ್ದೀರ. ಇಲ್ಲ ಎಂದರೆ ಅವರನ್ನು ಜೈಲಿನಿಂದ ಬಿಡಿಸಿಕೊಂಡುಬಂದಿದ್ದು ಏಕೆ? ಎಂದರು.
ಇದನ್ನೂ ಓದಿ | ಸಿದ್ದರಾಮಯ್ಯ ಬೋಟ್‌ನಲ್ಲಿ ಹೋದಾಗ ಎಷ್ಟು ನೀರಿತ್ತು?: ಮೊಣಕಾಲುದ್ದ ನೀರಿಗೆ ಇದು ಬೇಕಿತ್ತ ಎಂದ ಸಿಎಂ
ಮೊಟ್ಟೆ ಹೊಡೆದದ್ದು ಕಾಂಗ್ರೆಸ್ ಕಾರ್ಯಕರ್ತ ಎಂದ ಕೂಡಲೆ ಮತ್ತಷ್ಟು ಕೋಪಗೊಂಡ ಸಿದ್ದರಾಮಯ್ಯ, ನನಗೆ ಇದರ ಹತ್ತರಷ್ಟು ಮಾಡಲು ಬರುತ್ತದೆ. ನೀವೇನು ಪಾಳೇಗಾರರ? ಕೊಡಗು ಏನು ಪ್ರತ್ಯೇಕ ಸಂಸ್ಥಾನವ? ಅದೂ ಕರ್ನಾಕಕ್ಕೇ ಸೇರಿದೆ. ಮೊಟ್ಟೆಯಿಂದ ಹೊಡೆದ ಕೂಡಲೆ ಅವರು ವೀರರೂ ಅಲ್ಲ, ಶೂರರೂ ಅಲ್ಲ. ಇದಕ್ಕೆಲ್ಲ ಹೆದರೋ ಮಕ್ಕಳು ನಾವಲ್ಲ. ನಾಊ ಇದನ್ನೆಲ್ಲ ಮಾಡಿಕೊಂಡೇ ಬಂದಿದ್ದೇವೆ. ನಾವು ಮನಸ್ಸು ಮಾಡಿದರೆ ರಾಜ್ಯದಲ್ಲೆಲ್ಲ ಗಲಾಟೆ ಮಾಡಿಸಬಹುದು, ಆದರೆ ನಾವು ಅದಕ್ಕೆ ಹೋಗವುದಿಲ್ಲ ಎಂದರು.
ಮತ್ತೆ ಮಾತು ಮುಂದುವರಿಸಿದ ಅಪ್ಪಚ್ಚು ರಂಜನ್, ಟಿಪ್ಪು ಸುಲ್ತಾನ್ ವಿಚಾರಕ್ಕೆ ನಿಮ್ಮ ಮೇಲೆ ಜನರಿಗೆ ಕೋಪ ಎಂದರು. ಟಿಪ್ಪು ಸುಲ್ತಾನ್‌ರನ್ನು ಹೊಗಳಿ ಪುಸ್ತಕ ಬರೆದಿದ್ದು ಬಿಜೆಪಿ ಸರ್ಕಾರ. ನಿಮ್ಮದೇ ನಾಯಕರು ಖಡ್ಗ ಹಿಡಿದು ಪೇಟ ತೊಟ್ಟು ಫೋಟೊಗೆ ಪೋಸ್ ಕೊಟ್ಟಿದ್ದರು ಎಂದು ಈ ಹಿಂದೆ ಬಿಜೆಪಿ ಸರ್ಕಾರದಿಂದ ಪುಸ್ತಕ ಪ್ರಕಟ ಮಾಡಿದ್ದು ಹಾಗೂ ಬಿಜೆಪಿ ನಾಯಕರು ಟಿಪ್ಪು ಜಯಂತಿಯಲ್ಲಿ ಭಾಗವಹಿಸಿದ್ದನ್ನು ನೆನಪಿಸಿದರು. ಕೊಡಗಿನ ಜನರು ಒಳ್ಳೆಯವರು. ಅವರನ್ನು ಪ್ರಚೋದಿಸಿ ಹೀಗೆ ಮಾಡಿಸಲಾಗುತ್ತಿದೆ ಎಂದರು.
ಸೇತುವೆ ಕುರಿತು ತನಿಖೆ ಮಾಡಿಸಿ
ಕೊಡಗಿನ ಜಿಲ್ಲಾಧಿಕಾರಿ ಕಚೇರಿಗೆ ರಸ್ತೆ ಸಲುವಾಗಿ, ನಿಯಮ ಉಲ್ಲಂಘನೆ ಮಾಡಿದ್ದರಿಂದಲೇ ಅಲ್ಲಿ ಭೂಕುಸಿತ ಉಂಟಾಗಿದೆ ಎಂಬ ಚರ್ಚೆ ನಡೆಯಿತು. ಈ ಸಮಯದಲ್ಲಿ ಮಧ್ಯಪ್ರವೇಶಿಸಿದ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್, ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕೆ.ಜೆ. ಜಾರ್ಜ್ ಅವರು ಲೋಕೋಪಯೋಗಿ ಸಚಿವರಾಗಿದ್ದರು.
ಇಲ್ಲಿ ಸೇತುವೆ ನಿರ್ಮಾಣ ಮಾಡುವುದು ಬೇಡ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ, ಇದಕ್ಕೆ ಅನುಮತಿ ನೀಡದೇ ಇದ್ದರೆ ನಿಮ್ಮನ್ನು ಅಮಾನತು ಮಾಡುತ್ತೇನೆ ಎಂದು ಜಾರ್ಜ್ ಅವರು ಟಿಪ್ಪಣಿ ಬರೆದಿದ್ದಾರೆ. ಇದೇ ಕಾರಣಕ್ಕೆ ಅಲ್ಲಿ ಕಾಮಗಾರಿ ನಡೆದಿದೆ, ಇದೀಗ ಅನಾಹುತಕ್ಕೆ ಕಾರಣವಾಗಿದೆ ಎಂದರು. ಇದಕ್ಕೆ ಉತ್ತರಿಸಿದ ಕೆ.ಜೆ. ಜಾರ್ಜ್, ಕೊಡಗಿನಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಜಾಗ ಗುರುತಿಸಿದ ಬಿಜೆಪಿಯವರು ಅದಕ್ಕೆ ರಸ್ತೆಯನ್ನೇ ಕಲ್ಪಿಸಿರಲಿಲ್ಲ. ಅಲ್ಲಿನ ಚರ್ಚ್ ಮನವೊಲಿಸಿ ಜಾಗ ಮಾಡಿಸಿದೆವು ಎಂದರು.
ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ಈ ಕುರಿತು ಸರ್ಕಾರ ತನಿಖೆ ನಡೆಸಲಿ. ತನಿಖೆ ನಡೆಸಲು ಆದೇಶಿಸುವುದಾಗಿ ಉತ್ತರ ನೀಡುವ ವೇಳೆ ಘೋಷಣೆ ಮಾಡಲಿ ಎಂದರು.
ಇದನ್ನೂ ಓದಿ | Basangouda Patil Yatnal : ಮೊಟ್ಟೆ ಹೊಡೆದವನಿಗೆ ಅಭಿನಂದಿಸ್ತೀನಿ