Site icon Vistara News

ಎಲ್ಲ ಕಡೆ ಬಿಸಿಲು, ಆ ಮರದ ಕೆಳಗೆ ಮಾತ್ರ ಮಳೆ ಹನಿ: ಮಡಿಕೇರಿಯಲ್ಲಿ ಏನೀ ವಿಸ್ಮಯ?

ಆ ಮರದಲ್ಲಿ ಅಷ್ಟೊಂದು ಪ್ರಮಾಣದ ನೀರು

ಮಡಿಕೇರಿ: ಸುತ್ತಮುತ್ತಲೆಲ್ಲ ಕಡುಬಿಸಿಲು ಸುಡುತ್ತಿದೆ. ಆದರೆ ಆ ಮರದ ಕೆಳಗಿನ ಹತ್ತು ಅಡಿ ವಿಸ್ತೀರ್ಣದಲ್ಲಿ ಮಾತ್ರ ನಿರಂತರ ಮಳೆ ಹನಿ ಬೀಳುತ್ತಲೇ ಇದೆ. ಒಂದಲ್ಲ, ಎರಡಲ್ಲ. ಬರೊಬ್ಬರಿ ಹದಿನೈದು ದಿನದಿಂದ ಎಡೆಬಿಡದೆ ಮಳೆ ಹನಿಯುತ್ತಿದೆ. ಇದು ಮರದಿಂದ ಬೀಳುತ್ತಿರುವ ಹನಿಯೋ ಅಥವಾ ಆಕಾಶದಿಂದಲೇ ಈ ವಿಸ್ಮಯ ನಡೆಯುತ್ತಿದೆಯೋ ತಿಳಿಯದೆ ಮಡಿಕೇರಿಯ ಈ ಗ್ರಾಮದ ನಿವಾಸಿಗಳು ಅಚ್ಚರಿಗೊಳಗಾಗಿದ್ದಾರೆ.

ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರವನಾಡು ಗ್ರಾಮದಲ್ಲಿ, ರಸ್ತೆ ಬದಿಯಲ್ಲಿ ಮರವೊಂದರ ಬಳಿ ನಿರಂತರವಾಗಿ ಮಳೆ ಜಿನುಗುತ್ತಿದೆ. ಎಲ್ಲ ಕಡೆ ಬಿರು ಬಿಸಿಲಿದ್ದರೂ ಈ ಸ್ಥಳದ 10 ಅಡಿ ವ್ಯಾಪ್ತಿಯಲ್ಲಿ ಹಲವು ವಾರಗಳಿಂದ ನಿರಂತರವಾಗಿ ಮಳೆ ಜಿನುಗುತ್ತಿದೆ.

ಇದನ್ನೂ ಓದಿ | ರೈಲಿನ ಬಿಸಿಬಿಸಿ ಎಂಜಿನ್‌ ಪಕ್ಕದಲ್ಲೇ ಅವಿತು ಕುಳಿತು 190 ಕಿ.ಮೀ. ಪ್ರಯಾಣಿಸಿದ ಯುವಕ!

ಇಲ್ಲಿ ಬಿಲ್ವಪತ್ರೆ ಮರವನ್ನೇ ಹೋಲುವ ಮರವೊಂದಿದ್ದು, ಕೇವಲ ಆ ಮರದ ವ್ಯಾಪ್ತಿಯಲ್ಲಿ ಮಾತ್ರ ನೀರು ಬೀಳುತ್ತಿದೆ. ಈ ನೀರು ಅದೇ ಮರದಿಂದ ಜಿನುಗುತ್ತಿದೆಯೋ ಅಥವಾ ಆಕಾಶದಿಂದಲೇ ಜಿನುಗುತ್ತಿದೆಯೋ ಎಂಬುದು ಸ್ಪಷ್ಟವಾಗುತ್ತಿಲ್ಲ.

ನಿರಂತರ ಮಳೆ ಹನಿ ಬೀಳುತ್ತಿರುವ ಸ್ಥಳ

ಸ್ಥಳೀಯ ಗ್ರಾಮ ಪಂಚಾಯಿತಿ ಈ ನೀರನ್ನು ಸಂಗ್ರಹಿಸಿ ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಿದೆ. ಒಂದು ವೇಳೆ ಈ ನೀರು ಮರದಿಂದಲೇ ಜಿನುಗುತ್ತಿರುವುದಾದರೆ, ಆ ಮರದಲ್ಲಿ ಅಷ್ಟೊಂದು ಪ್ರಮಾಣದ ನೀರು ಎಲ್ಲಿಂದ ಬರುತ್ತದೆ, ಬಂದರೂ ಕೂಡ ಆ ಮರ ಯಾಕಾಗಿ ನೀರನ್ನು ಹನಿಸುತ್ತಿದೆ ಅಂತ ಗ್ರಾಮಸ್ಥರು ತಲೆಕೆಡಿಸಿಕೊಂಡಿದ್ದಾರೆ.

ಇದೇ ಮರದಿಂದ 500 ಮೀಟರ್ ದೂರದಲ್ಲಿ ದೇವರ ಕಾಡಿದೆ. ಅಲ್ಲಿ ಭದ್ರಕಾಳಿ ದೇವರ ನೆಲೆ ಇದೆ. ಬಹುಶಃ ಇದು ದೇವರ ಪವಾಡ ಇರಬಹುದೇನೋ ಎಂದು ಸ್ಥಳೀಯ ಗ್ರಾಮಸ್ಥರು​ ಅಭಿಪ್ರಾಯ ಪಟ್ಟಿದ್ದಾರೆ. ಇದೇ ವೇಳೆ ಗ್ರಾಮಸ್ಥರು ದೇವಸ್ಥಾನದ ಅರ್ಚಕರೊಬ್ಬರನ್ನು ಕರೆತರಂದು ಅಭಿಪ್ರಾಯ ಕೇಳಿದ್ದಾರೆ.

ಅವರು ಹೇಳಿದ ಮಾತನ್ನು ಕೇಳಿ ಜನರು ಮತ್ತಷ್ಟು ದಿಗಿಲುಗೊಂಡಿದ್ದಾರೆ. ಈ ಮರ ಬಿಲ್ವಪತ್ರೆಯನ್ನು ಹೋಲುತ್ತಿದ್ದು, ಬಹುಷಃ ನೀರು ಬೀಳುತ್ತಿರುವ ಸ್ಥಳದಲ್ಲಿ ಶಿವಲಿಂಗ ಇದ್ದರೂ ಇರಬಹುದು ಅಥವಾ ನಿಧಿಯಂತಹ ವಸ್ತುಗಳೂ ಇರಬಹುದು ಎಂದು ಅರ್ಚಕರು ಹೇಳಿದ್ದಾರಂತೆ.

ವಿಪತ್ತು ನಿರ್ವಹಣಾ ಪ್ರಾಧಿಕಾರ, ಪರಿಸರ ತಜ್ಞರು ಮತ್ತು ಹವಾಮಾನ ಇಲಾಖೆ ತಜ್ಙರ ಗಮನಕ್ಕೆ ವಿಷಯವನ್ನು ತಂದಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಭರವಸೆ ನೀಡಿದ್ದಾರೆ. ಕೆಲವೊಂದು ಜಾತಿಯ ಮರಗಳು ಈ ರೀತಿ ನೀರು ಸುರಿಸುವ ಗುಣಗಳನ್ನು ಹೊಂದಿದ್ದು, ಇದೂ ಕೂಡ ಅದೇ ರೀತಿಯದ್ದಾಗಿರಬಹುದು ಎಂದು ಹೇಳಿದ್ದಾರೆ. ಈ ವಿಚಿತ್ರವನ್ನು ನೋಡಲು ಸುತ್ತಮುತ್ತಲ ಹಳ್ಳಿಗಳಿಂದ ಜನರು ಬರುತ್ತಿದ್ದಾರೆ.

ಬೆಟಗೇರಿ ಗ್ರಾಮ ಪಂಚಾಯತ್‌ ಅಧ್ಯಕ್ಷ ರ‍್ಯಾರಿ ಗಣಪತಿ

ಈ ಕುರಿತು ಮಾತನಾಡಿರುವ ಸ್ಥಳೀಯ ಗಿರೀಶ್‌, ಅನೇಕ ವರ್ಷಗಳಿಂದ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದೇವೆ. ಹದಿನೈದು ದಿನದಿಂದ ಇಲ್ಲಿ ಮಳೆ ರೀತಿ ಹನಿಯುತ್ತಿರುವುದನ್ನು ನೋಡಿ ಅಚ್ಚರಿಯಾಗುತ್ತಿದೆ. ಇದನ್ನು ವಿಜ್ಞಾನಿಗಳು ನೋಡಿ ದೃಢೀಕರಿಸಬೇಕು ಎಂದಿದ್ದಾರೆ.

ಬೆಟಗೇರಿ ಗ್ರಾಮ ಪಂಚಾಯತ್‌ ಅಧ್ಯಕ್ಷ ರ‍್ಯಾರಿ ಗಣಪತಿ ಮಾತನಾಡಿ, ಬೆಟಗೇರಿಯಿಂದ ಸುಮಾರು ಎರಡು ಕಿಲೋಮೀಟರ್‌ ದೂರದಲ್ಲಿ ಅಚ್ಚರಿ ಘಟನೆ ನಡೆಯುತ್ತಿದೆ. ನಿನ್ನೆ ಗಮನಕ್ಕೆ ಬಂದಿದ್ದು, ಇಂದು ಸ್ಥಳ ವೀಕ್ಷಣೆ ಮಾಡುತ್ತಿದ್ದೇವೆ. ಸುಮಾರು ಹತ್ತು ಅಡಿ ವಿಸ್ತೀರ್ಣದಲ್ಲಿ ಮಳೆ ಹನಿಯುತ್ತಿದೆ. ಮಳೆ ಇದ್ದದ್ದರಿಂದ ಇಲ್ಲಿವರೆಗೆ ಗಮನಕ್ಕೆ ಬಂದಿರಲಿಲ್ಲ. ಇದು ಮರದಿಂದ ಬೀಳುತ್ತಿರುವುದೋ ಅಥವಾ ಪ್ರಕೃತಿಯ ವಿಸ್ಮಯವೋ ಎಂದು ವಿಜ್ಞಾನಿಗಳು ತಿಳಿಸಿದರೆ ಗ್ರಾಮಸ್ಥರ ಗೊಂದಲಕ್ಕೆ ತೆರೆ ಬೀಳುತ್ತದೆ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕಾಸರಕೋಡು ಕಡಲಲ್ಲಿ ಕಂಡು ಬಂದ ವಿಸ್ಮಯ!

Exit mobile version