Site icon Vistara News

ವಿ. ಸೋಮಣ್ಣ ಫೋಟೊ ಇಟ್ಕೊಂಡು ಪೂಜೆ ಮಾಡ್ತೀನಿ ಎಂದರು ಕಪಾಳಕ್ಕೆ ಏಟು ತಿಂದ ಮಹಿಳೆ!

somanna 1

ಚಾಮರಾಜನಗರ: ನಿವೇಶನ ಕೇಳಲು ಹೋದಾಗ ಗದ್ದಲದಲ್ಲಿ ವಿ. ಸೋಮಣ್ಣ ಅವರಿಂದ ಕಪಾಳಕ್ಕೆ ಏಟು ತಿಂದಿದ್ದ ಮಹಿಳೆ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಸಚಿವರ ತಂಡದ ವತಿಯಿಂದ ವಿಡಿಯೋ ರೆಕಾರ್ಡ್‌ ಮಾಡಿ ಬಿಡುಗಡೆ ಮಾಡಲಾಗಿದೆ. ತಮ್ಮ ಕಪಾಳಕ್ಕೆ ಸಚಿವರು ಹೊಡೆದಿಲ್ಲ ಎಂದು ಮಹಿಳೆ ಕೆಂಪಮ್ಮ ಅದರಲ್ಲಿ ಹೇಳಿದ್ದಾರೆ.

ನನಗೂ ಸೈಟ್‌ ಕೊಡಿ ಎಂದು ಕಾಲಿಗೆ ಬಿದ್ದೆ. ಸಚಿವರು ನನ್ನನ್ನು ಎತ್ತಿ, ಕ್ಷಮೆ ಕೇಳಿ ಸಮಾಧಾನಪಡಿಸಿದರು. ಸಚಿವರು ನನಗೆ ಹೊಡೆಯಲಿಲ್ಲ. ಆದರೆ ಅವರು ನನಗೆ ಹೊಡೆದರು ಎಂದು ಅವರ ಮೇಲೆ ತಪ್ಪು ಅಪವಾದ ಹೊರಿಸಿದ್ದಾರೆ. ಅವರು ನಮಗೆ ತುಂಬಾ ಸಹಾಯ ಮಾಡಿದ್ದಾರೆ. ಸೈಟಿಗೆಂದು ಕೊಟ್ಟಿದ್ದ ನಾಲ್ಕು ಸಾವಿರ ರೂಪಾಯಿಯನ್ನು ವಾಪಸ್ ಕೊಡಿಸಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.

ಪುಣ್ಯಾತ್ಮ ನನಗೆ ಸೈಟ್ ಕೊಡಿಸಿ, ನನ್ನ ಮಕ್ಕಳಿಗೆ ದಾರಿ ತೋರಿಸಿ ಒಳ್ಳೆಯದು ಮಾಡಿದ್ದಾರೆ. ನಾನು ಅವರ ಫೋಟೋ ಹಾಗೂ ನಂಜಪ್ಪ ಅವರ ಫೋಟೊ ಇಟ್ಕೊಂಡು ಪೂಜೆ ಮಾಡುತ್ತೇನೆ ಎಂದಿದ್ದಾರೆ ಮಹಿಳೆ.

ಬಿಜೆಪಿಯ ಸಂಸ್ಕೃತಿ ಎಂದ ಎಚ್‌ಡಿಕೆ

ಮಹಿಳೆಯ ಕಪಾಳಕ್ಕೆ ಹೊಡೆದ ಕುರಿತು ಕೊಡಗಿನಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಇದು ಬಿಜೆಪಿಯವರ ಸಂಸ್ಕೃತಿಯನ್ನು ತೋರಿಸುತ್ತದೆ. ಅವರ ನಡವಳಿಕೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವರು ಎರಡು ತರಹದ ಮುಖ ಹೊಂದಿದ್ದಾರೆ. ಎದುರು ಸಿಕ್ಕಾಗ ಒಂದು ರೀತಿ ಮಾತನಾಡಿಸುತ್ತಾರೆ, ಆದರೆ ಒಳಗೆ ಇರುವ ನಡವಳಿಕೆಯೇ ಬೇರೆ ಇದೆ. ಸಾರ್ವಜನಿಕರು ಅಹವಾಲು ಕೊಡಲು ಬಂದಾಗ ಅವರು ನಡೆದುಕೊಳ್ಳುವುದೆಲ್ಲಾ ಗೊತ್ತಿದೆ ಎಂದಿದ್ದಾರೆ.

ಅವರಿಂದ ಒಳ್ಳೆಯ ನಡವಳಿಕೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಬಿಜೆಪಿಯ ಹಲವು ಸಚಿವರು ಹಿಂದೆ ಹೀಗೆ ನಡೆದುಕೊಂಡಿದ್ದು ಗೊತ್ತೇ ಇದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ | ನಿವೇಶನ ಕೇಳಲು ಬಂದ ಮಹಿಳೆಯ ಕಪಾಳಕ್ಕೆ ಹೊಡೆದ ಸಚಿವ ವಿ. ಸೋಮಣ್ಣ

Exit mobile version