Site icon Vistara News

ರೈತಸಂಘದಿಂದ ಕೋಡಿಹಳ್ಳಿ ಉಚ್ಚಾಟನೆ: ಬಸವರಾಜಪ್ಪ ನೂತನ ಅಧ್ಯಕ್ಷ

kodihalli chandrashekhar expelled from raitha sangha

ಶಿವಮೊಗ್ಗ: ಸಾರಿಗೆ ನೌಕರರ ಮುಷ್ಕರ ಸಂಬಂಧ ಡೀಲ್‌ ಕುದುರಿಸಿದ ಆರೋಪ ಎದುರಿಸುತ್ತಿರುವ ಕೋಡಿಹಳ್ಳಿ ಚಂದ್ರಶೇಖರ್‌ ಅವರನ್ನು ಕರ್ನಾಟಕ ರಾಝ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಸ್ಥಾನದಿಂದ ಮಂಗಳವಾರ ಉಚ್ಚಾಟನೆ ಮಾಡಲಾಗಿದೆ.

ಶಿವಮೊಗ್ಗದಲ್ಲಿ ಆಯೋಜಿಸಿದ್ದ ತುರ್ತು ರಾಜ್ಯ ಸಮಿತಿ ಸಭೆಯಲ್ಲಿ ಈ ಈ ನಿರ್ಣಯ ಕೈಗೊಳ್ಳಲಾಗಿದ್ದು, ನೂತನ ಅಧ್ಯಕ್ಷರಾಗಿ ಎಚ್‌.ಆರ್‌. ಬಸವರಾಜಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಾರಂಭದಲ್ಲಿ ಮಾತನಾಡಿದ ಬಸವರಾಜಪ್ಪ, ಇದೊಂದು ವಿಶೇಷ ಸಂದರ್ಭ. 1980ರಲ್ಲಿ ರೈತ ಚಳವಳಿ ಆರಂಭವಾಯಿತು. 1972ರಲ್ಲೆ ದಕ್ಷಿಣ ಭಾರತದ ಕಬ್ಬು ಬೆಳೆಗಾರರ ಚಳವಳಿಯನ್ನೂ ಮಾಡಲಾಗಿತ್ತು. ಶಿವಮೊಗ್ಗ ಜಿಲ್ಲೆಗೆ ರೈತ ಚಳವಳಿಯ ಐವತ್ತು ವರ್ಷದ ಇತಿಹಾಸ ಇದೆ.

ಇದನ್ನೂ ಓದಿ | Rakesh Tikait | ಕೋಡಿಹಳ್ಳಿ ಕುರಿತು ಸ್ಪಷ್ಟೀಕರಣಕ್ಕೆ ಬಂದಿದ್ದ ರಾಕೇಶ್‌ ಟಿಕಾಯತ್‌ ಮುಖಕ್ಕೆ ಮಸಿ

ಎಂಭತ್ತರ ದಶಕದಲ್ಲಿ ನವಲಗುಂದ-ನರಗುಂದ ಗೋಲಿಬಾರ್‌ ಘಟನೆಯ ನಂತರ ಶಿವಮೊಗ್ಗ ಜಿಲ್ಲೆಯ ಕಬ್ಬು ಬೆಳೆಗಾರರ ಸಂಘ ಹೋರಾಟ ನಡೆಸಿತು. ನಂತರ ಹೋರಾಟದ ಕಿಡಿ ರಾಜ್ಯಾದ್ಯಂತ ಹಬ್ಬಿತು. ಈ ಸಂಘಟನೆಯನ್ನು ತ್ಯಾಗ ಹಾಗೂ ಬಲಿದಾನದಿಂದ ಕಟ್ಟಲಾಗಿದೆ. ಪೊಲೀಸರ ಬೂಟಿನೇಟು, ಲಾಠಿ ಏಟು ತಿಂದಿದ್ದಾರೆ. ನೂರಾರು ಜನರು ವಿವಿಧ ಹೋರಾಟಗಳಲ್ಲಿ ಹುತಾತ್ಮರಾಗಿದ್ದಾರೆ, ಅನೇಕರು ಜೈಲುವಾಸ ಅನುಭವಿಸಿದ್ದಾರೆ. ಇಂತಹ ಪವಿತ್ರ ಸಂಘಟನೆ ಇತ್ತೀಚಿನ ದಿನಗಳಲ್ಲಿ ಹಳಿತಪ್ಪಿತು.

ಸಂಘಟನೆಯ ಸಭೆಗಳು ಮೊದಲೆಲ್ಲ ಮರದ ಕೆಳಗೆ ನಡೆಯುತ್ತಿದ್ದವು. ರಾಜ್ಯಸಮಿತಿ ಸಭೆಯೂ ಮರದ ಕೆಳಗೆ ನಡೆಯುತ್ತಿತ್ತು. ಆದರೆ ಇತ್ತೀಚೆಗೆ ರಾಜಕೀಯ ಪಕ್ಷಗಳ ಅದ್ಧೂರಿತನಕ್ಕೆ ರೈತಸಂಘ ಮಾರುಹೋಗಿದೆ. ದೊಡ್ಡ ದೊಡ್ಡ ವೇದಿಕೆಗಾಗಿ ರಾಜಕಾರಣಿಗಳ ಎದುರು ಕೈಚಾಚುವಂತೆ ಮಾಡಲಾಯಿತು. ಸಂಘಟನೆಯೇ ಕೈತಪ್ಪಿಹೋಯಿತು.

ಇದೀಗ ಕೋಡಿಹಳ್ಳಿ ಚಂದ್ರಶೇಖರ್‌ ವಿರುದ್ಧ ಆರೋಪ ಕೇಳಿಬಂದಿದೆ. ಆದರೆ ಅವರು ಇಲ್ಲಿವರೆಗೆ ಆರೋಪವನ್ನು ನಿರಾಕರಣೆ ಮಾಡಿಲ್ಲ. ಇಷ್ಟು ವೇಳೆಗಾಗಲೆ ಅವರೇ ರಾಜೀನಾಮೆ ನೀಡಿ ಸಂಘದ ಮರ್ಯಾದೆ ಉಳಿಸಬೇಕಿತ್ತು. ಈ ಪ್ರಕರಣದಿಂದ ಇಡೀ ರೈತಚಳವಳಿ ತಲೆತಗ್ಗಿಸುವಂತಾಗಿದೆ. ಚಂದ್ರಶೇಖರ್‌ ಕುರಿತು ತನಿಖೆ ನಡೆಸಲು ತೀರ್ಮಾನಿಸಲಾಗಿದೆ. ಹೀಗಾಗಿ ಕರ್ನಾಟಕ ರಾಜ್ಯ ರೈತಸಂಘದಿಂದ ಕೋಡಿಹಳ್ಳೀ ಚಂದ್ರಶೇಖರ್‌ ಅವರನ್ನು ಉಚ್ಛಾಟನೆ ಮಾಡಬೇಕಿದೆ ಎಂದರು.

ಈ ಸಂದರ್ಭದಲ್ಲಿ, ಕೋಡಿಹಳ್ಳಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ಕುರಿತು ಪ್ರಸ್ತಾವನೆ ಮಂಡಿಸಲಾಯಿತು. ಸಭೆಯಲ್ಲಿದ್ದವರೆಲ್ಲರೂ ಕೈ ಎತ್ತುವ ಮೂಲಕ ಸಮ್ಮತಿ ಸೂಚಿಸಿದರು. ಕೋಡಿಹಳ್ಳಿ ಚಂದ್ರಶೇಖರ್‌ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಹಿರಿಯ ನಾಯಕ ಕುರುವಾ ಗಣೇಶ್‌ ಅವರು ಅಧ್ಯಕ್ಷ ಸ್ಥಾನಕ್ಕೆ ಎಚ್‌.ಆರ್‌. ಬಸವರಾಜಪ್ಪ ಅವರ ಹೆಸರನ್ನು ಪ್ರಸ್ತಾಪ ಮಾಡಿದರು. ಇದಕ್ಕೆ ಸಭೆಯಲ್ಲಿದ್ದವರೆಲ್ಲರೂ ಕೈ ಎತ್ತುವ ಹಾಗೂ ಚಪ್ಪಾಳೆ ತಟ್ಟುವ ಮೂಲಕ ಸಮ್ಮತಿ ವ್ಯಕತಪಡಿಸಿದರು.

ಇದನ್ನೂ ಓದಿ | ವಿಸ್ತಾರ Details: ಡೀಲ್ ಸುಳಿಯಲ್ಲಿ ರೈತ ನಾಯಕ ಕೋಡಿಹಳ್ಳಿ; ಆಪ್‌ ಈಗ ಏನು ಮಾಡಬಹುದು?

Exit mobile version