Site icon Vistara News

Kohinoor Diamond | ಕೊಹಿನೂರ್‌ ಕರ್ನಾಟಕದ್ದು! ಯಾದಗಿರಿಯಲ್ಲಿ ಸಿಕ್ಕ ವಜ್ರ, ಹೆಮ್ಮೆ ಇಲ್ಲದ ಸರ್ಕಾರ!

kohinoor daimond

ವಿಶ್ವಕುಮಾರ್ ಭೋಗನಳ್ಳಿ, ಯಾದಗಿರಿ
ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌ ಕಿರೀಟದಲ್ಲಿರುವ ಕೊಹಿನೂರ್‌ ಡೈಮಂಡ್‌ (Kohinoor Diamond) ನಮ್ಮ ಭಾರತದ್ದು ಎಂಬುದು ಗೊತ್ತಿದೆ. ಆದರೆ, ಬಹಳಷ್ಟು ಜನರಿಗೆ ತಿಳಿಯದ ಸಂಗತಿಯೊಂದಿದೆ. ಏನೆಂದರೆ- ಕೊಹಿನೂರ್ ಕರ್ನಾಟಕದ್ದು! ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮದಲ್ಲಿಯೇ ಕೊಹಿನೂರ್‌ ವಜ್ರ ಸಿಕ್ಕಿದ್ದು, ಆ ನಂತರ ಅದು ರಾಜರಿಂದ ರಾಜರಿಗೆ ಕೈ ಬದಲಾಗುತ್ತಾ ಈಗ ಬ್ರಿಟನ್ ರಾಣಿ ಕಿರೀಟದಲ್ಲಿದೆ!

ಕೊಹಿನೂರ್ ಕರ್ನಾಟಕದ್ದು ಎಂಬ ಸಂಗತಿಯು ರಾಜ್ಯ ಸರ್ಕಾರಕ್ಕೆ ಗೊತ್ತಾಗಿ 10 ವರ್ಷಗಳೇ ಕಳೆದಿವೆ. ಆದರೂ, ವಜ್ರ ಸಿಕ್ಕ ಸ್ಥಳವನ್ನು ಪ್ರವಾಸಿ ಕೇಂದ್ರವನ್ನಾಗಿ ರೂಪಿಸುವುದಾಗಲೀ, ಕೊಹಿನೂರ್ ವಜ್ರವು ರಾಜ್ಯಕ್ಕೆ ಸೇರಿದ್ದು ಎಂಬ ಹಕ್ಕು ಸಾಧಿಸುವ ಬಗ್ಗೆ ನಮ್ಮ ಕರ್ನಾಟಕ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಯೇ ಇಲ್ಲ! ವಜ್ರವನ್ನು ಮರಳಿ ಭಾರತಕ್ಕೆ ತರಿಸಬೇಕು ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತುವುದನ್ನಾಗಲೀ ಮಾಡಿಲ್ಲ. ಇದು ಇತಿಹಾಸ ತಜ್ಞರ ಆಕ್ರೋಶಕ್ಕೂ ಗುರಿಯಾಗಿದೆ.

ಕೊಹಿನೂರ್‌ ವಜ್ರ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮದಲ್ಲಿಯೇ ಕೊಹಿನೂರ್‌ ವಜ್ರ ಸಿಕ್ಕಿದೆ ಎಂದು ಹೇಳಲಾಗಿದ್ದು, ಕೃಷ್ಣಾ ನದಿ ಹರಿದು ಹೋಗುವ ಪ್ರದೇಶದ ತೀರ ಇದಾಗಿದೆ. ರಾಜ್ಯ ಸರ್ಕಾರಕ್ಕೆ ಸಹ ಇದರ ಸಂಪೂರ್ಣ ಅರಿವಿದ್ದು, ಸರ್ಕಾರಿ ದಾಖಲೆಯಾದ ಪಹಣಿಯಲ್ಲಿ ಸಹ ವಿಶ್ವ ಪ್ರಸಿದ್ಧಿ ಕೊಹಿನೂರು ವಜ್ರ ಸಿಕ್ಕಿರುವ ಈ ಸ್ಥಳವನ್ನು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕಾಯ್ದಿರಿಸಿದೆ ಎಂದು ನಮೂದಿಸಿದೆ. ಆದರೆ, ಈ ಬಗ್ಗೆ ಎಲ್ಲಿಯೂ ಕ್ರೆಡಿಟ್‌ ತೆಗೆದುಕೊಳ್ಳುವ ಕಾರ್ಯಕ್ಕಾಗಲೀ, ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದ ಬಳಸಿಕೊಳ್ಳುವುದಕ್ಕಾಗಲೀ ಮುಂದಾಗಿಲ್ಲ. ಕೇವಲ ಕಡತದ ದಾಖಲೆಗಷ್ಟೇ ಸೀಮಿತ ಮಾಡಲಾಗಿದೆ.

ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಮಾಹಿತಿ.

ಸಂಶೋಧನಾ ಕೇಂದ್ರದಿಂದ ನಾಮಫಲಕ
ಕೃಷ್ಣಾ ನದಿ ತೀರದಲ್ಲಿ ಸುರಪುರ ಇತಿಹಾಸ ಸಂಶೋಧನಾ ಕೇಂದ್ರದಿಂದ ಈಗಾಗಲೇ ನಾಮಫಲಕ ಹಾಕಲಾಗಿದೆ. ಜಗತ್ ಪ್ರಸಿದ್ಧ ಕೊಹಿನೂರು ವಜ್ರ ಸಿಕ್ಕ ಸ್ಥಳವೆಂದು ನಾಮ ಫಲಕ ಅಳವಡಿಸಲಾಗಿದೆ. ಇದು ಬಿಟ್ಟರೆ ಅಲ್ಲಿ ಮತ್ತೆ ಯಾವುದೇ ಅಧ್ಯಯನ ಮಾಡಿದ್ದ ಬಗ್ಗೆಯಾಗಲೀ ಇಲ್ಲವೇ ಇನ್ನಿತರ ಚಟುವಟಿಕೆಯನ್ನು ಕೈಗೊಂಡಿದ್ದಾಗಲೀ ಯಾವುದನ್ನೂ ಮಾಡಲಾಗಿಲ್ಲ.

ಪಹಣಿಯಲ್ಲಿ ಉಲ್ಲೇಖವಾಗಿರುವುದು

೧೦ ವರ್ಷ ಕಳೆದರು; ಜಾಗವನ್ನೇ ಮರೆತರು
ಸರ್ವೇ ನಂ 342ರ ಸ್ಥಳ 4 ಎಕರೆ 12 ಗುಂಟೆ, ಸರ್ವೇ ನಂಬರ್ 337ರ 4 ಎಕರೆ 07 ಗುಂಟೆ ಸ್ಥಳ ವಿಶ್ವ ಪ್ರಸಿದ್ಧಿ ಕೊಹಿನೂರು ವಜ್ರ ಸಿಕ್ಕಿದ್ದ ಸ್ಥಳವೆಂದು ನೋಂದಣಿ ಮಾಡಲಾಗಿದೆ. ಸರ್ಕಾರ 8 ಎಕರೆ 12 ಗುಂಟೆ ಡೈಮಂಡ್ ಸಿಕ್ಕಿದ್ದ ಸ್ಥಳವೆಂದು ಜಾಗ ಮೀಸಲಿಟ್ಟು 10 ವರ್ಷ ಕಳೆದಿದೆ‌. ‌ಆದರೆ, ರಾಜ್ಯ ಸರ್ಕಾರ ಮಾತ್ರ ಈ ಸ್ಥಳದಲ್ಲಿ ಮರಳು ಗಣಿಗಾರಿಕೆಯನ್ನು ನಿಷೇಧ ಮಾಡಿದ್ದು ಬಿಟ್ಟರೆ, ಇನ್ನಾವುದೇ ರೀತಿಯಲ್ಲೂ ಅಭಿವೃದ್ಧಿ ಮಾಡಿಲ್ಲ. ವಜ್ರ ದೊರೆತ ಸ್ಥಳವು ಈಗ ಹಾಳುಕೊಂಪೆಯಾಗಿದೆ. ಈ ವಿಶ್ವ ಪ್ರಸಿದ್ಧಿ ಕೊಹಿನೂರು ವಜ್ರ ಸಿಕ್ಕ ಸ್ಥಳವನ್ನು ಅಭಿವೃದ್ಧಿಪಡಿಸುವುದರ ಜತೆ ಕೊಹಿನೂರು ವಜ್ರದ ಸ್ಮಾರಕ ಮಾಡಬೇಕು ಎಂದು ಇತಿಹಾಸಕಾರ ಭಾಸ್ಕರರಾವ್ ವಿಸ್ತಾರ ನ್ಯೂಸ್‌ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಾದಗಿರಿಯಿಂದ ಬ್ರಿಟನ್ ಸೇರಿದ್ದು ಹೇಗೆ?
ಬ್ರಿಟನ್ ರಾಣಿಯ ವಜ್ರ ಕಿರೀಟದಲ್ಲಿರುವ ಕೊಹಿನೂರ್‌ ವಜ್ರವು 1656ರಲ್ಲಿ ಈಗಿನ ಕೊಳ್ಳುರು ಗ್ರಾಮದ ಹೊರವಲಯದಲ್ಲಿರುವ ಕೃಷ್ಣಾ ನದಿ ತೀರದಲ್ಲಿ ಸಿಕ್ಕಿದ್ದಾಗಿದೆ. ಆಗ ಈ ಭಾಗದಲ್ಲಿ ವಜ್ರದ ಗಣಿ ಇತ್ತು ಎಂದು ಅಧ್ಯಯನಗಳ ಮೂಲಕ ಕಂಡುಕೊಳ್ಳಲಾಗಿದೆ. ಕೃಷ್ಣಾನದಿ ತೀರದಲ್ಲಿ ಈ ವಜ್ರ ಸಿಕ್ಕಿತ್ತು ಎನ್ನಲಾಗಿದ್ದು, ಹೈದರಾಬಾದ್ ಗೋಲಕುಂಡಾದ ಮಂತ್ರಿ ಮೀರ್ ಜುಮಲಾ ಗೋಲಕುಂಡಾದ ಸುಲ್ತಾನರಿಗೆ ಈ ವಜ್ರವನ್ನು ಒಪ್ಪಿಸಿ ಬರುತ್ತಾನೆ. ಆ ಸುಲ್ತಾನ ದೆಹಲಿಯ ದೊರೆ ಶಹಾಜಾನನಿಗೆ ಕಾಣಿಕೆಯಾಗಿ ಈ ವಜ್ರವನ್ನು ಸಲ್ಲಿಸುತ್ತಾನೆ. ಶಹಾಜಾನ್ ತನ್ನ ಮಯೂರ ಸಿಂಹಾಸನದಲ್ಲಿ ವಜ್ರವನ್ನು ಅಳವಡಿಕೆ ಮಾಡುತ್ತಾನೆ. ನಂತರ ಪರ್ಸಿಯನ್ ದೊರೆ ನಾದರ್ ಷಾ ದೆಹಲಿ ಮೇಲೆ ದಾಳಿ ಮಾಡಿದಾಗ ಮೊಘಲ ರಾಜ ಮಹ್ಮದ್ ಷಾನನ್ನು ಸೋಲಿಸಿ, ನಗ-ನಾಣ್ಯಗಳನ್ನು ಲೂಟಿ ಮಾಡುತ್ತಾನೆ. ಆಗ ಅವನ ಕಣ್ಣು ಸಿಂಹಾಸನದಲ್ಲಿದ್ದ ವಜ್ರದ ಮೇಲೆ ಬಿದ್ದು ತೆಗೆದುಕೊಂಡು ಹೋಗುತ್ತಾನೆ ಎಂದು ಹೇಳಲಾಗುತ್ತದೆ.

ಇತಿಹಾಸಕಾರ ಭಾಸ್ಕರ್ ರಾವ್ ಅವರಿಂದ ಮಾಹಿತಿ

ದೋಚಿದ ಬ್ರಿಟಿಷರು!
ಪರ್ಶಿಯನ್ ದೊರೆಗಳನ್ನು ಪಂಜಾಬ್ ರಾಜ ರಣಜೀತ್ ಸಿಂಗ್‌ ರಕ್ಷಣೆ ಮಾಡುತ್ತಾನೆ. ಪಂಜಾಬ್ ದೊರೆ ಸಹಾಯ ಮಾಡಿದ ಹಿನ್ನೆಲೆಯಲ್ಲಿ ಪರ್ಶಿಯನ್ ದೊರೆಗಳು ಈ ದೊರೆಗೆ ಕೊಹಿನೂರು ವಜ್ರ ನೀಡುತ್ತಾರೆ. ಅದನ್ನು ರಣಜೀತ್ ಸಿಂಗ್ ತನ್ನ ಖಜಾನೆಯಲ್ಲಿ ಜೋಪಾನವಾಗಿ ಇಟ್ಟಿರುತ್ತಾನೆ. ಬಳಿಕ 1799ರಲ್ಲಿ ನಡೆದ ಯುದ್ಧದಲ್ಲಿ ಬ್ರಿಟಿಷ್ ಕ್ಯಾಪ್ಟನ್ ಲಾರೆನ್ಸ್ ಪಂಜಾಬ್ ವಿರುದ್ಧ ಗೆಲವು ಸಾಧಿಸುತ್ತಾನೆ. ಆಗ ಖಜಾನೆಯಲ್ಲಿದ್ದ ವಜ್ರವನ್ನೂ ದೋಚಲಾಗುತ್ತದೆ. ಬಳಿಕ ಈ ಕೊಹಿನೂರ್‌ ವಜ್ರವನ್ನು ರಾಣಿ ವಿಕ್ಟೋರಿಯಾ ಬ್ರೂಚ್‌ಗೆ ನೀಡಲಾಗುತ್ತದೆ. ಅವರು ಈ ಕೊಹಿನೂರ್‌ ವಜ್ರವನ್ನು ಕಿರೀಟದಲ್ಲಿ ಅಳವಡಿಸಿ ಧರಿಸುತ್ತಾರೆ. ಮಹಿಳೆಯರು ಮಾತ್ರ ಈ ಕಿರೀಟ ಧರಿಸಬೇಕೆಂದು ಆದೇಶವನ್ನೂ ಹೊರಡಿಸುವುದರಿಂದ ನಂತರ ಬಂದ ರಾಣಿಯರು ಈ ಕೊಹಿನೂರ್‌ ವಜ್ರಖಚಿತ ಕಿರೀಟವನ್ನು ಧರಿಸುತ್ತಾ ಬಂದಿದ್ದಾರೆ. ಈಗ ನಮ್ಮ ಸ್ಥಳೀಯ ಶಾಸಕರು, ರಾಜ್ಯ ಜನಪ್ರತಿನಿಧಿಗಳು ಕೇಂದ್ರ‌ ಸರ್ಕಾರದ ಮೇಲೆ ಒತ್ತಡ ತಂದು ಕೊಹಿನೂರು ವಜ್ರವನ್ನು ಭಾರತಕ್ಕೆ ಮರಳಿ ತರಲು ಪ್ರಯತ್ನ ಮಾಡಬೇಕು ಎಂದು ಹಿರಿಯ ಇತಿಹಾಸಕಾರ ಭಾಸ್ಕರ್ ರಾವ್ ಹೇಳುತ್ತಾರೆ.

ರಾಣಿಯ ಕಿರೀಟದಲ್ಲಿರುವ ಕೊಹಿನೂರು ವಜ್ರವು ಯಾದಗಿರಿ ಜಿಲ್ಲೆಗೆ ಸೇರಿದ್ದು ಎಂದು ಸಂಸದ ಜಿ.ಸಿ.ಚಂದ್ರಶೇಖರ ಅವರು, ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಮಾಡಿದ್ದಾರೆ. ಬ್ರಿಟನ್‌ ರಾಣಿ ನಿಧನಕ್ಕೂ ಎರಡು ದಿನದ ಮುನ್ನ ಮಾಡಿರುವ ಈ ಪೋಸ್ಟ್ ಈಗ ಮತ್ತೆ ಚರ್ಚೆಯಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಿ ನಮ್ಮ ಸ್ವತ್ತನ್ನು ನಮ್ಮ ದೇಶಕ್ಕೆ ತರುವ ಪ್ರಯತ್ನವನ್ನು ಮಾಡಬೇಕು. ಬೆಲೆ ಕಟ್ಟಲಾಗದ ಆಸ್ತಿಯನ್ನು ಯಾಕೆ ಬಿಟ್ಟು ಕೊಡಬೇಕು.
| ಶಿವಾರೆಡ್ಡಿ, ಕೊಳ್ಳುರು ಗ್ರಾಮಸ್ಥ

ಇದನ್ನೂ ಓದಿ | Queen Elizabeth’s Death | ಯಾರ ಪಾಲಾಗಲಿದೆ ಕೊಹಿನೂರು ವಜ್ರ ಇರುವ ಕ್ವೀನ್​ ಎಲಿಜಬೆತ್​​ರ ಕಿರೀಟ?

Exit mobile version