ಕೋಲಾರ: ಕೆಜಿಎಫ್‌ನ ರಾಮಸಾಗರ ಗ್ರಾಮ ಪಂಚಾಯಿತಿ (gram Panchayat) ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಯೊಬ್ಬರ ಜತೆ ಖಾಸಗಿ ಕ್ಷಣಗಳನ್ನು (romance) ಚಿತ್ರೀಕರಿಸಿಕೊಂಡು, ಅದನ್ನು ಹಂಚಿ ಬ್ಲ್ಯಾಕ್‌ಮೇಲ್ (Blackmail Case) ಎಸಗಿದ ಆರೋಪ ಎದುರಿಸುತ್ತಿರುವ ಬಿಲ್ ಕಲೆಕ್ಟರ್ ಅರ್ಜುನ್ ಹರಿಕೃಷ್ಣ ಎಂಬಾತನನ್ನು ಬೇತಮಂಗಲ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ. ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಿಲ್ ಕಲೆಕ್ಟರ್ ಅರ್ಜುನ್ ಹರಿಕೃಷ್ಣ ವಿರುದ್ಧ ಲೈಂಗಿಕ ಕಿರುಕುಳ (Physical Abuse), ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಗೆ ಮುಜುಗರ, ಖಾಸಗಿ ಕ್ಷಣಗಳ ಫೋಟೋ ಹಂಚಿಕೆ ಹಾಗೂ ಬೆದರಿಕೆ (threat) ಒಡ್ಡಿದ ಕುರಿತು ಕೋಲಾರ ಜಿಲ್ಲೆ ಬೇತಮಂಗಲ ಪೊಲೀಸ್ ಠಾಣೆಗೆ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾರೆ. ಗ್ರಾಮ ಪಂಚಾಯಿತಿಯ ಕಚೇರಿಯ ಮೊದಲ ಮಹಡಿಯ ಕೊಠಡಿಯಲ್ಲಿ ಸಿಸಿಟಿವಿ ಸಂಪರ್ಕ ಕಡಿತಗೊಳಿಸಿದ ಆರೋಪಿಯು ತಮ್ಮ ಖಾಸಗಿ ಕ್ಷಣಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ. ಸಂತ್ರಸ್ತೆ ನೀಡಿದ ದೂರಿನ ಮೇಲೆ ಅರ್ಜುನ್ ವಿಚಾರಣೆ ನಡೆಸಿದ ಬೇತಮಂಗಲ ಪೊಲೀಸರು ನಂತರ ಆತನನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಹೋದಾಗ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ ನಡೆಯಿತು. ತನ್ನ ಮಗನನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗದಂತೆ ಆರೋಪಿಯ ತಾಯಿ ಪೊಲೀಸರ ಜೀಪ್ ಮುಂದೆ ಅಡ್ಡಲಾಗಿ ಮಲಗಿ ತಡೆ ಒಡ್ಡಿದರು. ಕೊನೆಗೆ ಪೊಲೀಸರು ಅವರನ್ನು ಪಕ್ಕಕ್ಕೆ ಸರಿಸಿ ಆರೋಪಿಯನ್ನು ಕರೆದೊಯ್ದರು.
ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಮಸಾಗರ ಗ್ರಾಮ ಪಂಚಾಯಿತಿಯ 14 ಸದಸ್ಯರು ಮಂಗಳವಾರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಹರ್ತಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಆರೋಪಿ ಮತ್ತು ಸಂತ್ರಸ್ತೆಯನ್ನು ಸೇವೆಯಿಂದ ಅಮಾನತು ಮಾಡಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿರುವುದಾಗಿ ಹರ್ತಿ ತಿಳಿಸಿದ್ದಾರೆ. ಪ್ರಕರಣದ ತನಿಖೆಯನ್ನು ಸೈಬರ್ ಇನ್‌ಸ್ಪೆಕ್ಟರ್ ಲಕ್ಷ್ಮಿನಾರಾಯಣ ನಡೆಸುತ್ತಿದ್ದಾರೆ.
ಒಂದೆಡೆ ರಾಜ್ಯಾದ್ಯಂತ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದ್ದರೆ, ಇನ್ನೊಂದೆಡೆ ಈ ಬಿಲ್ ಕಲೆಕ್ಟರ್ ಗ್ರಾಮ ಪಂಚಾಯಿತಿ ಕಚೇರಿಯಲ್ಲಿಯೇ, ಕೆಲಸದ ಅವಧಿಯಲ್ಲೇ ರೊಮ್ಯಾನ್ಸ್ ನಡೆಸಿ ಅದನ್ನು ಚಿತ್ರೀಕರಿಸಿಕೊಂಡಿದ್ದ. ಅದನ್ನು ಹಂಚಿದ್ದ. ಈಗ ಮಹಿಳಾ ಉದ್ಯೋಗಿಯಿಂದ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಾಗಿದೆ.
ಪಂಚಾಯತಿ ಸಿಬ್ಬಂದಿಯ ಈ ಕಿಸ್ಸಿಂಗ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಅರ್ಜುನ್ ಹರಿಕೃಷ್ಣ ಹಾಗೂ ಮಹಿಳಾ ಉದ್ಯೋಗಿ ಜೊತೆಗಿರುವ ಖಾಸಗಿ ಫೋಟೋಗಳು ವೈರಲ್ ಆಗಿವೆ. ಆರೋಪಿ ಅರ್ಜುನ್ ಹರಿಕೃಷ್ಣ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮೊದಲ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯ ಬಳಿ ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾನೆ. ವಿರೋಧಿಸಿದಾಗ, ನಿನ್ನ ಗಂಡನಿಗೆ ಗ್ರಾಮ ಪಂಚಾಯಿತಿಯಲ್ಲಿ ಜಲಗಾರ ಕೆಲಸ ಕೊಡಿಸುತ್ತೇನೆ. ಜೊತೆಗೆ ನಿಮಗೆ ವಾಸಕ್ಕೆಂದು ಪಂಚಾಯಿತಿಯಿಂದ ಉಚಿತ ಸರ್ಕಾರಿ ಮನೆ ಕಟ್ಟಿಸಿಕೊಡುತ್ತೇನೆ ಎಂದು ಆಮಿಷ ಒಡ್ಡಿದ್ದಾನೆ. ತನಗೆ ಮುತ್ತಿಡುವುದಕ್ಕೆ ಬಲವಂತವಾಗಿ ಪ್ರೇರೇಪಿಸಿ ಅದನ್ನು ತನ್ನ ಮೊಬೈಲ್‌ನಲ್ಲಿ ಸೆಲ್ಫಿ ಫೋಟೋ ತೆಗೆದುಕೊಂಡಿದ್ದಾನೆ. ನಂತರದ ದಿನಗಳಲ್ಲಿ ಲೈಂಗಿಕವಾಗಿ ಸಹಕರಿಸುವಂತೆ, ಇಲ್ಲದಿದ್ದರೆ ಕೆಲಸದಿಂದ ತೆಗೆದುಹಾಕುತ್ತೇನೆ ಎಂದು ಬೆದರಿಸಿದ್ದಾನೆ. ಮುತ್ತು ಕೊಡುವ ಕ್ಷಣಗಳ ಫೋಟೋ ವೈರಲ್ ಮಾಡಡುತ್ತೇನೆ ಎಂದು ಬೆದರಿಸಿದ್ದಾನೆ. ಆತನ ಕಿರುಕುಳದಿಂದ ನನ್ನ ಸಂಸಾರ ಹಾಗೂ ಜೀವನಕ್ಕೆ ಮುಳುವಾಗಿದೆ. ಈಗ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಇದನ್ನೂ ಓದಿ: Prajwal Revanna Case: ಪ್ರಜ್ವಲ್ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್