ಮುಳಬಾಗಿಲು(ಕೋಲಾರ): ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿ ಪಂಚರತ್ನ ರಥಯಾತ್ರೆಯಲ್ಲಿ (JDS Pancharatna) ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಭಾಗವಹಿಸಿ ಮಾತನಾಡಿದರು.
ನವೆಂಬರ್ 1 ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಮಳೆಯಿಂದ ಸಮಾವೇಶ ನಡೆಸಲು ಸಾಧ್ಯವಾಗಿರಲಿಲ್ಲ. ಇಂದು ಯಶಸ್ವಿಯಾಗಿ ಕಾರ್ಯಕ್ರಮ ನಡೆಸುತ್ತಿರುವ ಸಮೃದ್ದಿ ಮಂಜುನಾಥ್ ಅವರಿಗೆ ಅಭಿನಂದನೆಗಳು. ಎಲ್ಲ ಜಿಲ್ಲೆಗಳ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಕುಮಾರಸ್ವಾಮಿಯವರು ರಾಜ್ಯದ್ಯಾಂತ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡುತ್ತಾರೆ.
ಜನತೆಯ ಮನಸ್ಸಿಗೆ ಕಾರ್ಯಕ್ರಮವನ್ನು ಮುಟ್ಟಿಸುತ್ತಾರೆ. ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ, ಈ ಕಾರ್ಯಕ್ರಮವನ್ನು ಪ್ರತಿ ತಾಲೂಕಿನಲ್ಲಿ ನೀವುಗಳೇ ಮನೆ ಮನೆಗೆ ಮುಟ್ಟಿಸಬೇಕು. ನಮ್ಮ ಪಕ್ಷದ ಜಿಲ್ಲಾಧ್ಯಕ್ಷರಿಂದ ಕಾರ್ಯಕರ್ತರವರೆಗೂ ಪ್ರತಿಯೊಬ್ಬರಿಗೂ ಶಕ್ತಿಯಿದೆ ಎಂದರು.
ದೇವೇಗೌಡರು ಮಾತನಾಡುತ್ತಿರುವ ಸಂದರ್ಭದಲ್ಲಿ ಸಮೀಪಕ್ಕೆ ಆಗಮಿಸಿದ ಸಂಘಟಕರು, ಬೇಗ ಭಾಷಣ ಮುಗಿಸಬಹುದ? ನಿಖಿಲ್ ಕುಮಾರಸ್ವಾಮಿಯವರು ಮಾತನಾಡುತ್ತಾರೆ ಎಂದರು. ಕೆಲ ಹೊತ್ತಿನಲ್ಲೇ ಮಾತು ಮುಗಿಸಿದ ದೇವೇಗೌಡರು, ಈಗ ನಿಖಿಲ್ ಕುಮಾರಸ್ವಾಮಿ ಮಾತನಾಡುತ್ತಾರೆ ಎಂದರು. ಈ ಸಂದರ್ಭದಲ್ಲಿ ಗೊಂದಲಕ್ಕೊಳಗಾದ ಜೆಡಿಎಸ್ ರಾಜ್ಯಧ್ಯಕ್ಷ ಸಿಎಂ ಇಬ್ರಾಹಿಂ ಮಾಥನಾಡಲು ಎದ್ದು ನಿಂತರು. ನೀವಲ್ಲ ಸಾರ್, ನಿಖಿಲ್ ಮಾತನಾಡುತ್ತಾರೆ ಎಂದು ಸಂಘಟಕರು ಮೈಕ್ ಮೂಲಕ ಸೂಚನೆ ನೀಡಿದರು. ನಂತರ ನಿಖಿಲ್ ಮಾತು ಆರಂಭಿಸಿದರು. ನಿಖಿಲ್ ಆಗಮಿಸುತ್ತಿದ್ದಂತೆಯೇ ಕಾರ್ಯಕ್ರಮದಲ್ಲಿ ಶಿಳ್ಳೆ, ಘೋಷಣೆಗಳು ಹೆಚ್ಚಾದವು.
ಕರ್ನಾಟಕದ ನೀರಾವರಿಗೆ ಮೋಸ
ಕರ್ನಾಟಕ ನೀರಾವರಿ ಯೋಜನೆಗಳಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ದೇವೇಗೌಡರು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಏನು ಮಾಡಿದರು ಎನ್ನುವುದರ ಬಗ್ಗೆ ಟೀಕೆ ಮಾಡುವುದಿಲ್ಲ. ಡಾ. ಮನಮೋಹನ್ ಸಿಂಗ್, ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ಅವರು ಕಾವೇರಿ ನೀರನ್ನು ನಮಗೆ ಬರುವ ಕುರಿತು ಅನ್ಯಾಯ ಮಾಡಿದರು.
ಇಂದಿನ ಪ್ರಧಾನ ಮಂತ್ರಿ ಮೋದಿಯವರೂ ತಮಿಳುನಾಡಿಗೆ ನಮ್ಮ ನೀರನ್ನು ಕೊಡುವ ನಿರ್ಣಯ ಮಾಡಿದ್ದಾರೆ. ನಮ್ಮ ಗಡಿಯಿಂದ ಸಮುದ್ರಕ್ಕೆ ಹೋಗುವ ನೀರನ್ನು ನೀರಾವರಿ ಮಾಡಬಾರದು ಎಂದು ಟ್ರಿಬುನಲ್ ಕೊಟ್ಟ ಆದೇಶವನ್ನು ತಿರಸ್ಕರಿಸಿದ್ದಾರೆ. ಈಗ ಸೇಲಂ ಜಿಲ್ಲೆ ಹಾಗೂ ಪಕ್ಕದ ಜಿಲ್ಲೆಯ ಮೂರು ಲಕ್ಷ ಎಕರೆಗೆ ನೀರು ಕೊಡುವ ಯೋಜನೆಯನ್ನು ವಾಜಪೇಯಿ, ಮನಮೋಹನ್ ಸಿಂಗ್ ರೀತಿಯಲ್ಲೇ ಮೋದಿಯವರೂ ಎಐಡಿಎಂಕೆ ಪರವಾಗಿ ನಮಗೆ ನೋವು ನೀಡುತ್ತಿದ್ದಾರೆ ಎಂದರು.
ರಮೇಶ್ ಕುಮಾರ್ ವಿರುದ್ಧ ಕ್ರೋಧ
ಕುಮಾರಸ್ವಾಮಿ ಹೋರಾಟಕ್ಕೆ ಆತಂಕ ತರುವ ಕೆಲಸವನ್ನು ಕಾಂಗ್ರೆಸಿಗರು ಮಾಡಿದ್ದಾರೆ ಎಂದ ದೇವೇಗೌಡರು, ಕಾಂಗ್ರೆಸಿಗರು ನಮಗೆ ದ್ರೋಹ ಮಾಡಿದ್ದಾರೆ. ರಮೇಶ್ ಕುಮಾರ್ ಅವರು ಇತ್ತೀಚೆಗೆ ಆಡಿದಂತಹ ಆಟಗಳ ಬಗ್ಗೆ ವಿವರವಾಗಿ ಮಾತನಾಡಲು ಹೋಗುವುದಿಲ್ಲ. ಅವರು ಯಾವ ರೀತಿ ಸೂತ್ರಧಾರಿಯಾಗಿದ್ದಾರೆ ಎಂದು ತಿಳಿದಿದೆ. ಅವರನ್ನು ಅಷ್ಟು ಲಘುವಾಗಿ ತೆಗೆದುಕೊಳ್ಳಬಾರದು ಎಂದರು.
ಇದನ್ನೂ ಓದಿ | JDS Pancharatna | ಬೇರೆಯವರ ಮನೆ ಮುಂದೆ ಕಾಯುವಂತೆ ಮಾಡಬೇಡಿ ಎಂದ HDK: ಸಿದ್ದರಾಮಯ್ಯ, ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ