ಮುಳಬಾಗಿಲು (ಕೋಲಾರ): ಪ್ರತಿ ಬಾರಿಯಂತೆ ಈ ಬಾರಿಯೂ 40-50 ಸ್ಥಾನ ನೀಡಿ ಬೇರೆ ಪಕ್ಷದ ಮನೆ ಬಾಗಿಲು ಕಾಯುವಂತೆ ಮಾಡಬೇಡಿ ಎಂದಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಅನೇಕ ಬಾರಿ ಮುಂದೂಡಿಕೆಯಾಗಿದ್ದ ಮಹತ್ವಾಕಾಂಕ್ಷಿ ʼಪಂಚರತ್ನʼ ರಥಯಾತ್ರೆಗೆ (JDS Pancharatna) ಅದ್ಧೂರಿ ಚಾಲನೆ ನೀಡಿದ್ದಾರೆ.
ಮುಳಬಾಗಿಲಿನಲ್ಲಿ ಸೇರಿದ್ದ ಬೃಃತ್ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಈ ಹಿಂದೆ ಸರ್ಕಾರ ನಡೆಸಲು ಕೈಜೋಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಪಂಚರತ್ನ ರಥಯಾತ್ರೆ ಕಾರ್ಯಕ್ರಮಕ್ಕೆ ಈ ನೆಲದಿಂದ ಚಾಲನೆ ಕೊಡುತ್ತಾ ಇದೀವಿ. ನವೆಂಬರ್ ೧ ರಂದು ಕುರುಡುಮಲೆ ದೇವಸ್ಥಾನ ದಲ್ಲಿ ಪೂಜೆ ಮಾಡಿ ಚಾಲನೆ ಕೊಡಬೇಕಿತ್ತು. ಆದರೆ ಮಳೆ ಕಾರಣದಿಂದ ಮುಂದೂಡಿ ಇಂದು ಚಾಲನೆ ನೀಡಲಾಗುತ್ತಿದೆ. ಈ ರಾಜ್ಯದಲ್ಲಿ ಕೋವಿಡ್, ಮಳೆ ಸಂದರ್ಭದಲ್ಲಿ ಜನರ ನೋವಿಗೆ ಸರ್ಕಾರ ಸ್ಪಂದಿಸಿದ ಬಗ್ಗೆ ಒಂದಷ್ಟು ಚಿಂತನೆಗಳನ್ನು ನಾವು ಮಾಡಿದ್ದೇವೆ.
ನಮಗೆ 40-45 ಸೀಟ್ ಕೊಟ್ಟು ಬೇರೆಯವರ ಮನೆ ಮುಂದೆ ಕಾಯುವ ಪರಿಸ್ಥಿತಿ ಕೊಡಬೇಡಿ. ನಮಗೆ ಸ್ವತಂತ್ರವಾಗಿ ಆಳ್ವಿಕೆ ಮಾಡಲು ಬಹುಮತ ನೀಡಿ. ನಿಮ್ಮ ಪ್ರೋತ್ಸಾಹ ಬೇಕು, ನಿಮ್ಮ ನಂಬಿ ಇಂದು ಹೊರಟಿದ್ದೇನೆ. ದಯವಿಟ್ಟು ಒಂದು ಬಾರಿ ಜನರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಮತ ನೀಡಿ ಎಂದರು.
ಮತ್ತೆ ಅಧಿಕಾರಕ್ಕೆ ಬರಬೇಕು, ಮುಖ್ಯಮಂತ್ರಿ ಆಗಬೇಕು ಎನ್ನುವುದು ನಮ್ಮ ಉದ್ದೇಶ ಅಲ್ಲ. ನಾಡಿನ ಜನರ ಜೀವನ ಹೇಗಿರಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಕಳೆದ ಸಲ ಕಾಂಗ್ರೆಸ್ ಆಡಳಿತ ನೋಡಿದ್ದೇವೆ. ಮೂರು ಸಾವಿರಕ್ಕೂ ಹೆಚ್ಚು ರೈತರ ಆತ್ಮಹತ್ಯೆಯ ಪ್ರಕರಣಗಳು ಸಂಭವಿಸಿವೆ. ಆಗ ಸರ್ಕಾರ ಸ್ಪಂದಿಸಲಿಲ್ಲ. ಕಬ್ಬಿನ ಗದ್ದೆಗೆ ಬೆಂಕಿ ಇಟ್ಟು ಅದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಸರ್ಕಾರ ಸ್ಪಂದಿಸಲಿಲ್ಲ. ಅಲ್ಲಿಗೆ ಮೊದಲು ಹೋಗಿದ್ದು ದೇವೇಗೌಡರು. ಆ ಸಂದರ್ಭದಲ್ಲಿ ರೈತರ ಕುಟುಂಬಗಳಿಗೆ ಕೈಲಾದ ಸಹಾಯ ಮಾಡಿ ಆಸರೆ ಆಗಿದ್ದು ಜೆಡಿಎಸ್ ಕಾರ್ಯಕರ್ತರು, ನಾಯಕರು.
ಮಂಡ್ಯ ಜಿಲ್ಲೆಯ ಬಳಿಕ ಹೆಚ್ಚು ಆತ್ಮಹತ್ಯೆಗಳಾಗಿದ್ದು ಹಾವೇರಿಯಲ್ಲಿ. ಹಾವೇರಿಯಲ್ಲಿ ನಮ್ಮ ಪಕ್ಷಕ್ಕೆ ಶಕ್ತಿ ಇರಲಿಲ್ಲ. ಆದರೂ 75 ಲಕ್ಷ ರೂ. ಪರಿಹಾರವನ್ನು ಆ ಜಿಲ್ಲೆಯ ರೈತ ಕುಟುಂಬಗಳಿಗೆ ಜನತಾದಳ ಪಕ್ಷದ ನಾಯಕರು ಕೊಟ್ಟಿದ್ದಾರೆ ಎಂದರು.
ಕೊಳಚೆ ನೀರು ಕೊಟ್ಟಿದ್ದೀರಿ
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಜಿಲ್ಲೆಗೆ ನೀರು ತಂದ ಭಗೀರಥ ಎಂದು ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಸ್ವಾಗತ ಮಾಡಿದ್ದಾರೆ. ಸಿದ್ದರಾಮಯ್ಯನವರೆ ಕೋಲಾರಕ್ಕೆ ಯಾವ ನೀರು ಕೊಟ್ಡಿದ್ದೀರಿ? ಕೋಲಾರ, ಚಿಕ್ಕಬಳ್ಳಾಪುರ ಜನಕ್ಕೆ ಎತ್ತಿನ ಹೊಳೆ ನೀರು ಕೊಡುತ್ತೀನಿ ಎಂದು ಕಾಂಗ್ರೆಸ್ ಘೋಷಿಸಿತು. ಆದರೆ ವಿಷಪೂರಿತ ಬೆಂಗಳೂರಿನ ಚರಂಡಿ ನೀರನ್ನು ಕೋಲಾರ ಜನರಿಗೆ ನೀಡಿದ್ದು ಕಾಂಗ್ರೆಸ್. ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಎತ್ತಿನಹೊಳೆ ನೀರು ಕೊಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಮಾತು ನೀಡಿದ್ದರು.
ನೀರಿಗೆ ಹೋರಾಟ ಮಾಡಲು ಚಿಕ್ಕಬಳ್ಳಾಪುರ ಜನ ಬೆಂಗಳೂರಿಗೆ ಬಂದರು. ಪೋಲಿಸರನ್ನು ಬಿಟ್ಡು ವಿಂಡ್ಸರ್ ಮ್ಯಾನರ್ ಬಳಿ ಹೊಡೆಸಿದ್ದು ಸಿದ್ದರಾಮಯ್ಯನವರು ಮಾಡಿದ್ದು ಕೆಲಸ. ಈಗ ಜಿಲ್ಲೆ ಉದ್ಧಾರ ಮಾಡೋಕೆ ಬರ್ತಾರಂತೆ. ದೇವರು, ಪ್ರಕೃತಿ ಕೋಲಾರದ ಜನತೆಯನ್ನು ಕಾಪಾಡಿದೆ. ಎತ್ತಿನ ಹೊಳೆ ಹೆಸರಲ್ಲಿ 13 ಸಾವಿರ ಕೋಟಿ ರೂ. ಖರ್ಚಾಗಿದೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಾರೆ. ಒಂದು ಹನಿ ನೀರನ್ನಾದರೂ ಕೋಲಾರ, ಚಿಕ್ಕಬಳ್ಳಾಪುರಕ್ಕೆ ತಂದಿದ್ದೀರಾ ರಮೇಶ್ ಕುಮಾರ್ ಅವರೇ? ಈಗ ಕಮಿಷನ್ ಬಗ್ಗೆ ಮಾತನಾಡುತ್ತೀರ? ಎಂದು ರಮೇಶ್ ಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
ನಾನು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ರೈತರ ಸಾಲ ಮನ್ನ ಮಾಡಬೇಕು ಎಂದು ತೀರ್ಮಾನ ಮಾಡಿದ್ದೆ. ಕಾಂಗ್ರೆಸ್‌ನವರು ರೈತರ ಸಾಲಕ್ಕೂ ನಮಗೂ ಸಂಬಂಧ ಇಲ್ಲ, ನಾನು ಕೊಟ್ಟಿರುವ ಅನುದಾನಗಳು ಮುಂದುವರೆಯಬೇಕು ಅದಕ್ಕೆ ಹಣ ನೀಡಿ ಎಂದರು. ನಿಮ್ಮ ಕಾರ್ಯಕ್ರಮ ಯಾವುದೂ ನಿಲ್ಲುವುದಿಲ್ಲ, ಆದರೂ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಸಾಲ ಮನ್ನಾ ಮಾಡಿದೆ.
ಸಿದ್ದರಾಮಯ್ಯ ಅವರೇ ಈ ಪಕ್ಷ ಉಳಿದಿರುವುದು ಬಡ ಜನರಿಂದ. ಸಿದ್ದರಾಮಯ್ಯ ಅವರೇ ನಿಮ್ಮ ಭಾಗ್ಯಗಳಿಂದ ಬಡ ಜನರ ಜೀವನ ಬದಲಾಗಿಲ್ಲ. ಪ್ರತಿದಿನ ನಾನು ಬಡವರ ಸಂಕಷ್ಟಗಳನ್ನು ನೋಡುತ್ತಿದ್ದೇನೆ. ಜೆಡಿಎಸ್ ಕೇವಲ ರೈತರ ಸಾಲ ಮನ್ನಾ ಬಗ್ಗೆ ಮಾತನಾಡುತ್ತದೆ ಎಂದು ತಿಳಿಯಬೇಡಿ. ನಾನು ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡಲು ಹೋದಾಗ ಇದೇ ಸಿದ್ದರಾಮಯ್ಯ ಮತ್ತು ಬಿಎಸ್‌ವೈ ಸೇರಿ ಸಮ್ಮಿಶ್ರ ಸರ್ಕಾರವನ್ನು ತೆಗೆದರು ಎಂದು ಕುಮಾರಸ್ವಾಮಿ ಮಾಥನಾಡಿದರು.
ಬಿಜೆಪಿ ಜತೆಗೆ ಮೈತ್ರಿ ಇಲ್ಲ
ದೇವರ ಅನುಗ್ರಹದಿಂದ ಯಾವುದೋ ರೀತಿಯಲ್ಲಿ ಮುಖ್ಯಮಂತ್ರಿ ಆಗಿದ್ದೇನೆ ಎಂದ ಕುಮಾರಸ್ವಾಮಿ, ನನ್ನ ಪಕ್ಷಕ್ಕೆ ಅಧಿಕಾರ ಕೊಡಿ. ಈ ಸಂಕಲ್ಪಕ್ಕೆ ಒಂದು ಅವಕಾಶ ಕೊಡಿ. ನಾನು ಬಿಜೆಪಿ ಜತೆ ಸರ್ಕಾರ ಮಾಡಿದ್ದೆ. ಇಲ್ಲಿನ ನಾಯಕರ ಜತೆ ಚರ್ಚಿಸಿ ಸರ್ಕಾರ ಮಾಡಿದ್ದೆ, ದೆಹಲಿಯ ನಾಯಕರ ಜತೆ ಮಾತನಾಡಿ ಸರ್ಕಾರ ಮಾಡಿಲ್ಲ. ಈಗ ಮೋದಿ ಲಕೋಟೆ ಸರ್ಕಾರ. ಬಿಜೆಪಿ ಪಕ್ಷ ಅಮಿತ್ ಶಾ, ಮೋದಿ ಪಕ್ಷ. ಈಗಿನ ಬಿಜೆಪಿ ಹೈಕಮಾಂಡ್ ಪಕ್ಷ. ಈ ಪಕ್ಷದ ಜತೆಗೆ ಮಾತುಕತೆ ಸಾಧ್ಯವಿಲ್ಲ. ಜೆಡಿಎಸ್ ಸ್ವತಂತ್ರವಾಗಿರಲಿದೆ. ಬಿಜೆಪಿ ಜತೆಗೆ ಒಪ್ಪಂದ, ಮೈತ್ರಿ ಇಲ್ಲವೆಂದು ಘೋಷಿಸಿದರು.
ಬಿಜೆಪಿ ಸರ್ಕಾರ ಬರಲು ಸಿದ್ದರಾಮಯ್ಯ ಕಾರಣ ಎಂದು ಆರೋಪಿಸಿದ ಕುಮಾರಸ್ವಾಮಿ, ಈಗ ಇರುವ ಸರ್ಕಾರ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ. ಈ ಸರ್ಕಾರ ತಂದಿದ್ದು ಸಿದ್ದರಾಮಯ್ಯ. ನಾಚಿಕೆಯಾಗಬೇಕು ನಿಮಗೆ. ಕಾಂಗ್ರೆಸ್ ನಾಯಕರಿಗೆ ಒಂದು ಪ್ರಶ್ನೆ ಕೇಳಿದ್ದೇನೆ. 2009ರಲ್ಲಿ ಆಪರೇಷನ್ ಕಮಲದಡಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾಂಗ್ರೆಸ್‌ನವರು ಒಳ ಒಪ್ಪಂದದ ಮಾಡಿಕೊಂಡು ಎಷ್ಟು ಹಣ ಪಡೆದಿದ್ದೀರಿ ಎಂದು ಯಾವ ನಾಯಕರೂ ಉತ್ತರ ಹೇಳಿಲ್ಲ. ನಾವು ಸ್ವಂತ ಬಲದಿಂದ ಗೆದ್ದಿದ್ದೇವೆ. ನಾವು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಈ ಸರ್ಕಾರ ಬರಲು ಕಾರಣ ಕಾಂಗ್ರೆಸ್ ಪಕ್ಷ.
ಲಿಂಗಾಯತ ವೀರಶೈವ ಒಲೈಸುವ ಪ್ರಯತ್ನ ಮಾಡಿದ ಕುಮಾರಸ್ವಾಮಿ, ಬಿಜೆಪಿ ಪರವಿರುವ ಲಿಂಗಾಯತ ವೀರಶೈವ ಸಮುದಾಯಕ್ಕೆ ಬಿಜೆಪಿ ಅನ್ಯಾಯ, ಅಗೌರವ ತೋರಿದೆ. ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬಿಜೆಪಿ ಹೈಕಮಾಂಡ್, ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದರು.
ಪ್ರತಾಪ್ ಸಿಂಹ ವಿರುದ್ಧ ಗುಡುಗು
ಗುಂಬಜ್ ಬಸ್ ಸ್ಟಾಪ್ ಒಡೆದು ಹಾಕುತ್ತೇನೆ ಎಂದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮಾತಿನ ಕುರಿತು ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಹಿಂಸೆ ಕೊಡುತ್ತಿದ್ದಾರೆ ಎಂದು ಶಾಸಕ ಹೇಳುತ್ತಿದ್ದಾರೆ. ಶಾಸಕರಿಗೇ ಇಷ್ಟು ಹಿಂಸೆ ನೀಡಿದರೆ, ಇನ್ನು ಜನತೆಗೆ ಇನ್ನೆಷ್ಟು ಹಿಂಸೆ ನೀಡಿರಬೇಕು? ಗುಂಬಜ್ ರೀತಿಯಾದರೂ ಇರಲಿ, ಹಿಂದೂ ಸಮುದಾಯದ ರೀತಿಯಾದರೂ ಇರಲಿ. ಒಟ್ಡಿನಲ್ಲಿ ಜನತೆಗೆ ನೆರಳು ಕೊಡುವಂತಾಗಲಿ. ಜನತೆಗೆ ನೆರಳು ಕೊಡುವ ಕೆಲಸ ಸರ್ಕಾರ ಮಾಡಬೇಕಿದೆ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಬಿಜೆಪಿ ಜನಸಂಕಲ್ಪ ಸಮಾವೇಶ ನಡೆಸುತ್ತಿದೆ. ಧಮ್, ತಾಕತ್ತು ಬಗ್ಗೆ ಮಾತನಾಡುತ್ತಾರೆ. ನಿಮಗೆ ಧಮ್, ತಾಕತ್ ಇದ್ದರೆ ಜನರ ಕಷ್ಟಕ್ಕೆ ಸ್ಪಂದಿಸಿ. ಅಕ್ರಮ ತಡೆದು, ಜನರ ಸಮಸ್ಯೆ ಸರಿ ಮಾಡಿದರೆ ಧಮ್, ತಾಕತ್ತು ಇದೆ ಎಂದು ಒಪ್ಪಿಕೊಳ್ಳುತ್ತೇನೆ ಎಂದರು.
ಮನೆಯ ಜ್ಯೋತಿಷಿ ಮಾತು ಕೇಳಲೇಬೇಕು
ಇವತ್ತು ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಬೇಕಿತ್ತಾದರೂ ಮುಂದೂಡಿದ ಕುರಿತು ಹೇಳಿದ ಕುಮಾರಸ್ವಾಮಿ, ಆದರೆ ನಮ್ಮ ಮನೆಯಲ್ಲಿ ಒಬ್ಬರು ಜ್ಯೋತಿಷಿಗಳು ಇದ್ದಾರೆ. ಅವರು ಇಂದು ದಿನ ಸರಿ ಇಲ್ಲ ಎಂದು ಹೇಳಿದರು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಕುರಿತು ಪ್ರಸ್ತಾಪಿಸಿದರು.
ಅವರ ಮಾತು ತೆಗೆದು ಹಾಕಲು ಸಾಧ್ಯವಿಲ್ಲ. ನಾನು ಘೋಷಣೆ ಮಾಡಿದರೆ ಸಮಯ ಸರಿ ಇಲ್ಲದಿದ್ದಾಗ ಘೋಷಣೆ ಮಾಡಿ ಸಂಕಷ್ಟಕ್ಕೆ ಸಿಲುಕುತ್ತೇನೆ ಎಂದು ಮತ್ತೆ ಹೇಳುತ್ತಾರೆ. ಆದ್ಧರಿಂದ ಅವರ ಮಾತಿಗೆ ಬೆಲೆ ಕೊಟ್ಟು ನಾನು ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡುವುದನ್ನು ಮುಂದೂಡಿದ್ದೇನೆ. ನಮ್ಮ ಪಕ್ಷದಲ್ಲಿ ಅಭ್ಯರ್ಥಿಗಳೆ ಇಲ್ಲ ಎಂದು ಹೇಳುತ್ತಾರೆ. ಆದರೆ ಆ ರೀತಿ ಸಮಸ್ಯೆ ನಮ‌್ಮ ಪಕ್ಷದಲ್ಲಿ ಅಭ್ಯರ್ಥಿಗಳ ಕೊರತೆಯಿಲ್ಲ ಎಂದರು.
ಇದನ್ನೂ ಓದಿ | H.D. ಕುಮಾರಸ್ವಾಮಿ ಕನಸಿನ ಯೋಜನೆಗೆ ಆರಂಭದಲ್ಲೇ ಅಡ್ಡಿ: ಪಂಚರತ್ನ ರಥಯಾತ್ರೆ ಮುಂದೂಡಿಕೆ