ಬೆಂಗಳೂರು: ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷವು ಕೋಲಾರ ಜಿಲ್ಲೆ ಮುಳಬಾಗಿಲು ಕ್ಷೇತ್ರದ (Karnataka Election 2023) ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಾಯಿಸಿದೆ. ಈಗಾಗಲೇ ಘೋಷಣೆ ಮಾಡಲಾಗಿದ್ದ ಡಾ.ಮುದ್ದುಗಂಗಾಧರ್‌ಗೆ ಬದಲಾಗಿ ಸ್ಥಳೀಯ ನಾಯಕ ಆದಿನಾರಯಣಪ್ಪಗೆ ಟಿಕೆಟ್ ನೀಡಲಾಗಿದೆ.
ಸ್ಥಳೀಯ ನಾಯಕರ ವಿರೋಧಕ್ಕೆ ಮಣಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪಕ್ಷದ ಹೈಕಮಾಂಡ್‌ನೊಂದಿಗೆ ಚರ್ಚಿಸಿ, ಅಭ್ಯರ್ಥಿಯನ್ನು ಬದಲಾಯಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ. ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧದ ಅಭ್ಯರ್ಥಿಯನ್ನು ಇದೇ ರೀತಿಯಾಗಿ ಬದಲಾಯಿಸಲಾಗಿತ್ತು.
ಈ ಹಿಂದೆ ಮುಳಬಾಗಿಲು ಕ್ಷೇತ್ರದಿಂದ ಸ್ಪರ್ಧಿಸಿ ಗೆದಿದ್ದ, ಮಾಜಿ ಶಾಸಕ ಕೊತ್ತೂರು ಜಿ. ಮಂಜುನಾಥ್ ಅವರ ಒತ್ತಡವೇ ಈ ಬದಲಾವಣೆಗೆ ಮುಖ್ಯಕಾರಣ ಎನ್ನಲಾಗುತ್ತಿದೆ. ಕೊತ್ತೂರು ಜಿ. ಮಂಜುನಾಥ್ ಮುಳಬಾಗಿಲು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರನ್ನು ಕಾಂಗ್ರೆಸ್ ಪಕ್ಷವು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಹೀಗಾಗಿ ಅವರು ತಮ್ಮ ಬೆಂಬಲಿಗರಾದ ಆದಿನಾರಾಯಣ ಅಥವಾ ಮಂಜುಶ್ರೀ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸುತ್ತಿದ್ದರು. ಆದರೆ ಪಕ್ಷವು ಐದನೇ ಪಟ್ಟಿಯಲ್ಲಿ ಡಾ ಬಿಸಿ ಮುದ್ದು ಗಂಗಾಧರ್ ಅವರ ಹೆಸರನ್ನು ಪ್ರಕಟಿಸಿತ್ತು.
ಈ ಕ್ಷೇತ್ರದ ಅಭ್ಯರ್ಥಿಯನ್ನು ಬದಲಾಯಿಸದೇ ಇದ್ದರೆ, ತಾವೂ ಸ್ಪರ್ಧಿಸುವುದಿಲ್ಲ ಎಂದು ಕೊತ್ತೂರು ಜಿ. ಮಂಜುನಾಥ್ ಪಕ್ಷಕ್ಕೆ ಎಚ್ಚರಿಕೆಯನ್ನೂ ನೀಡಿದ್ದರು ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಇಂದು ಬೆಳಗ್ಗೆ ಮುಳಬಾಗಿಲು ಕಾಂಗ್ರೆಸ್ ಮುಖಂಡರು ಡಿ ಕೆ ಶಿವಕುಮಾರ್ ಮೇಲೆ ಒತ್ತಡ ಹೇರಲು ಬೆಂಗಳೂರಿಗೆ ನಿಯೋಗದಲ್ಲಿ ಬಂದಿದ್ದರು. ಸ್ಥಳೀಯ ಅಭ್ಯರ್ಥಿ ಹಾಗೂ ಬೊವಿ ಸಮೂದಾಯದ ಮುಖಂಡ ಆದಿನಾರಾಯಣ ಗೆ ಟಿಕೇಟ್ ನೀಡಬೇಕೆಂದು ಒತ್ತಾಯಿಸಿದ್ದರು. ಆದಿನಾರಾಯಣಗೆ ಬಿ ಫಾರಂ ನೀಡುವವರೆಗೂ ಮುಳಬಾಗಿಲಿಗೆ ಹೋಗಲ್ಲ ಎಂದು ಪಟ್ಟು ಹಿಡಿದು ಕೂತಿದ್ದರು.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಕೋಲಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಿ ನಾರಾಯಣ, ಪಟ್ಟಿ ಪ್ರಕಟ ಆದಮೇಲೆ ಮುದ್ದು ಗಂಗಾಧರ್ ಅವರೇ ತಮಗೆ ಪಕ್ಷದ ಟಿಕೆಟ್ ಬೇಡ ಅಂದರು. ಹಾಗಾಗಿ ಕೊನೇ ಕ್ಷಣದಲ್ಲಿ ಆದಿನಾರಾಯಣಗೆ ಪಕ್ಷದ ಟಿಕೆಟ್ ನೀಡಲಾಗಿದೆ ಎಂದಿದ್ದಾರೆ. ಕೊತ್ತೂರು ಜಿ. ಮಂಜುನಾಥ್ ಹೇರಿದ ಒತ್ತಡದ ಬಗಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ.
ಬದಲಾವಣೆ ನನಗೆ ಗೊತ್ತಿಲ್ಲ
ಅಭ್ಯರ್ಥಿ ಬದಲಾವಣೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಈ ನಿರ್ಧಾರ ತಮ್ಮ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ. ಬಹುಶಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚಿಸಿ ಈ ತೀರ್ಮಾನ ತೆಗೆದುಕೊಂಡಿರಬಹುದು ಎಂದು ಹೇಳಿದ್ದಾರೆ.
ಕೊತ್ತೂರು ಜಿ. ಮಂಜುನಾಥ್ ನಾಮಪತ್ರ ಸಲ್ಲಿಕೆ
ತಮ್ಮ ಒತ್ತಡಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಣಿದು ಮುಳಬಾಗಿಲಿನ ಅಭ್ಯರ್ಥಿಯನ್ನು ಬದಲಾಯಿಸಿದ ಹಿನ್ನೆಲೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೊತ್ತೂರು ಜಿ. ಮಂಜುನಾಥ್ ನಾಮಪತ್ರ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಆದಿನಾರಾಯಣ್‌ಗೆ ಟಿಕೆಟ್ ನೀಡಿದ್ದು, ಖಚಿತವಾಗುತ್ತಿದ್ದಂತೆಯೇ ತಾಲೂಕು ಕಚೇರಿಗೆ ಬೆಂಬಲಿಗರೊಂದಿಗೆ ತೆರಳಿದ ಅವರು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ : Karnataka Election 2023: ಈಶ್ವರಪ್ಪ ಆಶೀರ್ವಾದ ಪಡೆದ ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ; ಗುರು ಜತೆ ತೆರಳಿ ನಾಮಪತ್ರ