ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಂತೆಯೇ ಮುಂಬರುವ ಚುನಾವಣೆಯಲ್ಲೂ (Karnataka Election 2023) ಎರಡು ಕಡೆ ಸ್ಪರ್ಧೆ ಮಾಡುವ ಮಾಜಿ ಸಿಎಂ ಸಿದ್ದರಾಮಯ್ಯ ಕನಸಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಣ್ಣೀರೆರಚಿದ್ದಾರೆ.
ಈ ಬಾರಿ ಯಾರಿಗೇ ಆದರೂ ಒಂದೇ ಕ್ಷೇತ್ರದಲ್ಲಿ ಟಿಕೆಟ್ ಎಂದು ಖಡಕ್ಕಾಗಿ ಹೇಳುವ ಮೂಲಕ ಸಿದ್ದರಾಮಯ್ಯ ಅವರಿಗೆ ಪರೋಕ್ಷ ಸಂದೇಶ ರವಾನೆ ಮಾಡಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳು ಶುಕ್ರವಾರ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಅರ್ಜಿ ಸಂಗ್ರಹಿಸುವ ವೇಳೆ ಹಣ ಕಟ್ಟಿಸಿಕೊಳ್ಳುವುದು ನಮ್ಮ ಪಕ್ಷದಲ್ಲಿ ಹೊಸತಲ್ಲ. ಈ ಹಿಂದೆಯೂ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ. ಆಗ ಹೆಚ್ಚು ಸುದ್ದಿ ಆಗಿರಲಿಲ್ಲ. ಆದರೆ ಈ ಬಾರಿ ಆಗಿದೆ.
ಚುನಾವಣಾ ತಯಾರಿ, ಜಿಲ್ಲೆ ಹಾಗೂ ಬ್ಲಾಕ್ ಮಟ್ಟದಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣ ಸೇರಿದಂತೆ ಹಲವು ವಿಚಾರವಾಗಿ ಆರ್ಥಿಕ ಶಕ್ತಿ ಅಗತ್ಯವಿದೆ. ಕಚೇರಿ ನಿರ್ಮಾಣಕ್ಕೆ ಕಾರ್ಯಕರ್ತರು ಆರ್ಥಿಕ ನೆರವು ಕೇಳಿದಾಗ ನಾವು ಹಣ ಸಹಾಯ ಮಾಡುತ್ತೇವೆ. ಕಾರ್ಯಕರ್ತರಿಗೆ ತೊಂದರೆ ಆದಾಗ ಅವರಿಗೆ ಸಹಾಯ ಮಾಡಲು ಹಣದ ಅಗತ್ಯವಿದೆ. ಹೀಗಾಗಿ ದೇಣಿಗೆಯನ್ನು ಸಂಗ್ರಹಿಸಲಾಗಿದೆ ಎಂದರು.
ಅರ್ಜಿ ಸಲ್ಲಿಕೆ ನಂತರ ಆಕಾಂಕ್ಷಿಗಳು ಸಿದ್ದರಾಮಯ್ಯ ಹಾಗೂ ನಿಮ್ಮ ಮನೆಗೆ ಭೇಟಿ ನೀಡುತ್ತಿರುವುದರ ಕುರಿತು ಪ್ರಶ್ನೆ ಉತ್ತರಿಸಿ, ಯಾರೇ ಆಗಲಿ ಒಬ್ಬರಿಗೆ ಒಂದೇ ಟಿಕೆಟ್. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ. ಪಕ್ಷ ಮೊದಲು ಅಧಿಕಾರಕ್ಕೆ ಬರಬೇಕು. ಅಧಿಕಾರಕ್ಕೆ ಬಂದಾಗ ಎಲ್ಲರಿಗೂ ಅಧಿಕಾರ ಸಿಗುತ್ತದೆ. ಎಲ್ಲರಿಗೂ ಅವರದೇ ಆದ ಶಕ್ತಿ ಇರುತ್ತದೆ. ಯಾರ ಶಕ್ತಿ ಎಷ್ಟಿದೆ ಎಂದು ಹೇಳಲು ಸಾಧ್ಯವಿಲ್ಲ. ಒಬ್ಬರಿಗೆ 100 ಬೂತ್ ನಿಭಾಯಿಸುವ ಶಕ್ತಿ ಇದ್ದರೆ, ಮತ್ತೆ ಕೆಲವರಿಗೆ 50, ಇನ್ನೂ ಕೆಲವರಿಗೆ 10 ಬೂತ್ ನಿಭಾಯಿಸುವ ಶಕ್ತಿ ಇರುತ್ತದೆ ‘ ಎಂದು ಹೇಳಿದರು.
ಸಭೆಯಲ್ಲೂ ಇದೇ ಸಂದೇಶ
ಟಿಕೆಟ್ ಆಕಾಂಕ್ಷಿಗಳೊಂದಿಗೆ ನಗರದ ಹೊರವಲಯದಲ್ಲಿ ಡಿ.ಕೆ. ಶಿವಕುಮಾರ್ ದಿನಪೂರ್ತಿ ಸಭೆ ನಡೆಸುತ್ತಿದ್ದಾರೆ. ಟಿಕೆಟ್‌ಗೆ ಅರ್ಜಿ ಸಲ್ಲಿಸಿದವರಗಷ್ಟೇ ಒಳಗೆ ಪ್ರವೇಶೀಸಲು ಅವಕಾಶ ನೀಡಲಾಗುತ್ತಿದ್ದು, ಯಾವ ಕಾರಣಕ್ಕೆ ಟಿಕೆಟ್ ನೀಡಬೇಕು ಎಂಬ ಕುರಿತು ಆಕಾಂಕ್ಷಿಗಳು ಸಮರ್ಥನೆ ನೀಡುತ್ತಿದ್ದಾರೆ.
ಈ ಸಭೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಣ ಗೈರಾಗಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಸಹ ಗೈರಾಗಿದ್ದಾರೆ. ಎಂ.ಬಿ. ಪಾಟೀಲ್ ವಿಜಯಪುರದಲ್ಲಿದ್ದರೆ, ಬೆಂಗಳೂರಿನಲ್ಲೇ ಇದ್ದರೂ ಸಿದ್ದರಾಮಯ್ಯ ಗೈರಾಗಿದ್ದಾರೆ. ಕೆಪಿಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದರೆ ಮಾತ್ರ ಸಭೆಗೆ ಆಗಮಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಈ ಸಭೆಯಲ್ಲಿ ಶಿವಕುಮಾರ್ ಅನೇಕರಿಗೆ, ಒಂದೇ ಟಿಕೆಟ್ ಬಗ್ಗೆ ಪದೇಪದೆ ಹೇಳಿದ್ದಾರೆ. ಯಾರೇ ಆದರೂ ಒಬ್ಬರಿಗೇ ಟಿಕೆಟ್. ಎಷ್ಟೇ ಜನರನ್ನು ಜತೆಗೆ ಕರೆದುಕೊಂಡುಬಂದರೂ ಒಂದೇ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಈ ಮಾತುಗಳನ್ನು ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡೇ ಹೇಳಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಇದನ್ನೂ ಓದಿ | Siddaramaiah in Kolar | ಕೋಲಾರದಲ್ಲಿ ಸಿದ್ದರಾಮಯ್ಯಗೆ ಸಮಸ್ಯೆಯೇ ಶ್ರೀನಿವಾಸ್‌ಗೌಡ: ಎಚ್‌ಡಿಕೆ